ಸುರೇಶ್ ರೈನಾ ಸಂಬಂಧಿಕರ ತ್ರಿವಳಿ ಹತ್ಯೆ ಕೇಸ್: ಕುಖ್ಯಾತ ಕ್ರಿಮಿನಲ್ ಎನ್‌ಕೌಂಟರ್ ಮಾಡಿದ ಯುಪಿ ಪೊಲೀಸ್
ಶಾಹ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತರರಾಜ್ಯ ಗ್ಯಾಂಗ್‌ನ ಸದಸ್ಯರು ತಂಗಿದ್ದಾರೆ ಎಂಬ ಸುಳಿವಿನ ಮೇರೆಗೆ ಅವರನ್ನು ಅಡ್ಡಗಟ್ಟಿದ ಪೊಲೀಸರ ಮೇಲೆ ಬೈಕ್‌ನಲ್ಲಿ ಬಂದ ಮತ್ತೊಬ್ಬ ದುಷ್ಕರ್ಮಿಯೊಂದಿಗೆ ಗುಂಡು ಹಾರಿಸಿದ ನಂತರ ಪ್ರತೀಕಾರದ ಗುಂಡಿನ ದಾಳಿಯಲ್ಲಿ ರಶೀದ್ ಮೃತಪಟ್ಟಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಲಖನೌ (ಏಪ್ರಿಲ್ 2, 2023): ಭಾರತೀಯ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ಸಂಬಂಧಿಕರ ಮನೆಗೆ ನುಗ್ಗಿ 2020 ರಲ್ಲಿ ಹತ್ಯೆ ಹಾಗೂ ದರೋಡೆ ಮಾಡಿದ್ದ ಕೇಸ್‌ನಲ್ಲಿ ಬೇಕಾಗಿದ್ದ ಕುಖ್ಯಾತ ಕ್ರಿಮಿನಲ್ ರಶೀದ್ ಅಲಿಯಾಸ್ ಚಲ್ತಾ ಫಿರ್ತಾ ಅಲಿಯಾಸ್ ಸಿಪಾಹಿಯಾನ ಶನಿವಾರ ಸಂಜೆ ಉತ್ತರ ಪ್ರದೇಶದ ಶಾಹ್‌ಪುರ ಪ್ರದೇಶದಲ್ಲಿ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಈ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಮುಜಾಫರ್‌ನಗರದಲ್ಲಿ ಮಾಹಿತಿ ನೀಡಿದ್ದಾರೆ. ರಶೀದ್ ಅಲಿಯಾಸ್ ಚಲ್ತಾ ಫಿರ್ತಾ ಅಲಿಯಾಸ್ ಸಿಪಾಹಿಯಾನನ್ನು ಹಿಡಿದುಕೊಟ್ಟವರಿಗೆ 50,000 ರೂ. ನಗದು ಬಹುಮಾನವನ್ನು ಘೋಷಿಸಲಾಗಿತ್ತು. ಆತ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಶಾಹ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂತರರಾಜ್ಯ ಗ್ಯಾಂಗ್‌ನ ಸದಸ್ಯರು ತಂಗಿದ್ದಾರೆ ಎಂಬ ಸುಳಿವಿನ ಮೇರೆಗೆ ಅವರನ್ನು ಅಡ್ಡಗಟ್ಟಿದ ಪೊಲೀಸರ ಮೇಲೆ ಬೈಕ್‌ನಲ್ಲಿ ಬಂದ ಮತ್ತೊಬ್ಬ ದುಷ್ಕರ್ಮಿಯೊಂದಿಗೆ ಗುಂಡು ಹಾರಿಸಿದ ನಂತರ ಪ್ರತೀಕಾರದ ಗುಂಡಿನ ದಾಳಿಯಲ್ಲಿ ರಶೀದ್ ಮೃತಪಟ್ಟಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಕ್ರಿಮಿನಲ್ ರಶೀದ್ ವಶದಿಂದ 2 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ: ಯುಪಿಯಲ್ಲಿ ಮತ್ತೊಂದು ಎನ್‌ಕೌಂಟರ್: ಉಮೇಶ್ ಪಾಲ್‌ಗೆ ಮೊದಲು ಗುಂಡು ಹಾರಿಸಿದ್ದ ಆರೋಪಿ ಗುಂಡೇಟಿಗೆ ಬಲಿ
ಇನ್ನು, ಎನ್‌ಕೌಂಟರ್ ಸಮಯದಲ್ಲಿ, ಶಾಹ್‌ಪುರದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಬಬ್ಲು ಸಿಂಗ್ ಅವರಿಗೂ ಗುಂಡೇಟು ಬಿದ್ದು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ರಶೀದ್‌ನ ಸಹಚರನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದೂ ಎಸ್‌ಎಸ್‌ಪಿ ತಿಳಿಸಿದ್ದಾರೆ.
ಘಟನೆಯ ವಿವರ..
2020 ರಲ್ಲಿ ಪಂಜಾಬ್‌ನಲ್ಲಿ ಸುರೇಶ್ ರೈನಾ ಅವರ ಸಂಬಂಧಿಕರ ತ್ರಿವಳಿ ಕೊಲೆ, ದರೋಡೆ ಸೇರಿದಂತೆ ಡಜನ್‌ಗಟ್ಟಲೆ ಪ್ರಕರಣಗಳಲ್ಲಿ ರಶೀದ್ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 19 ಮತ್ತು 20 ರ ಮಧ್ಯರಾತ್ರಿ ಪಠಾಣ್‌ಕೋಟ್‌ನ ಥರ್ಯಾಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿತ್ತು. ರೈನಾ ಅವರ ಚಿಕ್ಕಪ್ಪ, ಗುತ್ತಿಗೆದಾರ ಅಶೋಕ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅಶೋಕ್ ಕುಮಾರ್ ಅವರ ಮಗ ಕೌಶಲ್ ಆಗಸ್ಟ್ 31 ರಂದು ಗಾಯಗೊಂಡು ಮೃತಪಟ್ಟಿದ್ದರು. ಅಶೋಕ್ ಕುಮಾರ್ ಅವರ ಪತ್ನಿ ಆಶಾ ರಾಣಿ ಮತ್ತು ಇತರ ಇಬ್ಬರು. ಗಾಯಗೊಂಡಿದ್ದರು.
ಇದನ್ನೂ ಓದಿ: ಹತ್ರಾಸ್ ಗ್ಯಾಂಗ್‌ರೇಪ್, ಕೊಲೆ ಕೇಸ್: ಮೂವರನ್ನು ಖುಲಾಸೆಗೊಳಿಸಿದ ಕೋರ್ಟ್; ಒಬ್ಬರು ಮಾತ್ರ ದೋಷಿ
ಇನ್ನು, ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿಸಲ್ಪಟ್ಟವರಲ್ಲಿ ರಾಜಸ್ಥಾನದ ಜುಂಜುನು ಜಿಲ್ಲೆಯ ಮೂವರು ಗ್ಯಾಂಗ್‌ನ ಸದಸ್ಯರು ಸೇರಿದ್ದಾರೆ. ಅನುಮಾನ ಬಾರದಂತೆ 2 - 3 ಗುಂಪುಗಳಾಗಿ ಸಂಚರಿಸಿದ ಗ್ಯಾಂಗ್ ಅಶೋಕ್ ಕುಮಾರ್ ಅವರ ಮನೆ ಬಳಿ ಭೇಟಿಯಾಯಿತು. ರಾತ್ರಿಯಲ್ಲಿ ಅವರ ಮೊದಲ ಎರಡು ದರೋಡೆ ಪ್ರಯತ್ನಗಳು ವಿಫಲವಾದ ಬಳಿಕ ಅಶೋಕ್ ಕುಮಾರ್ ಅವರ ಮನೆ ಮೂರನೆಯದು ಎಂದು ತಿಳಿದುಬಂದಿದೆ.
ಐವರು ಆರೋಪಿಗಳು ಗೋಡೆ ಹತ್ತಲು ಏಣಿಯನ್ನು ಬಳಸಿ ಮನೆಗೆ ಪ್ರವೇಶಿಸಿದರು ಮತ್ತು ಸುರೇಶ್ ರೈನಾ ಅವರ ಕುಟುಂಬದ ಮೂವರು ಸದಸ್ಯರು ನೆಲದ ಮೇಲೆ ಚಾಪೆ ಮೇಲೆ ಮಲಗಿರುವುದನ್ನು ನೋಡಿದರು. ಬಳಿಕ, ಆರೋಪಿಗಳು ಮನೆಯೊಳಗೆ ತೆರಳುವ ಮೊದಲು ಅವರ ತಲೆಗೆ ಹೊಡೆದು, ಇತರರ ಮೇಲೆ ದಾಳಿ ಮಾಡಿ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.