ಜೈಪುರ(ಅ.05): ರಾಜಸ್ಥಾನ ಬಿಜೆಪಿ ವಿಭಾಗವು ಮಹಿಳೆಯರ ಹಾಗೂ ಅಪ್ರಾಪ್ತರ ಮೇಲಿನ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ರಾಜಸ್ಥಾನ ರಾಜ್ಯ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ 'ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಹಾಗೂ ಅಪರಾಧಿಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದು ರಾಜಕೀಯವಾಗಿ ಮಾಡುತ್ತಿರುವ ಆರೋಪವಲ್ಲ, ಎನ್‌ಸಿಆರ್‌ಬಿ ನೀಡಿದ ಅಂಕಿ ಅಂಶಗಳಲ್ಲಿ ಇದು ಸ್ಪಷ್ಟವಾಗುತ್ತದೆ' ಎಂದಿದ್ದಾರೆ.

ಎನ್‌ಸಿಆರ್‌ಬಿ ವರದಿಯನ್ವಯ ಅತಿ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿರುವ ರಾಜ್ಯಗಳಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ ಎಂದೂ ಪೂನಿಯಾ ಹೇಳಿದ್ದಾರೆ. ಸದ್ಯ ಇದನ್ನು ಖಂಡಿಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. 

ಇನ್ನು ಪ್ರತಿಭಟನೆ ವೆಳೆ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲಿಸರ ನಡುವೆ ಜಟಾಪಟಿಯೂ ನಡೆದಿದೆ. ಅಲ್ಲದೇ ಬಿಜೆಪಿ ಕಾರ್ಯಕರ್ತರ ಒಂದು ಅತ್ಯಾಚಾರ ಸಂತ್ರಸ್ತೆ ಮನೆಗೂ ಭೇಟಿ ನೀಡಿದೆ. 

ಇನ್ನು ತಮ್ಮ ಮುಂದಿನ ನಡೆ ಬಗ್ಗೆ ಮಾಹಿತಿ ನೀಡಿರುವ ಸತೀಶ್ ಪೂನಿಯಾ ನಾವು ರಾಜಸ್ಥಾನ ರಾಜ್ಯಪಾಲರನ್ನು ಭೇಟಿಯಾಗಲು ಸಮಯ ಕೇಳಿದ್ದೇವೆ. ಒಂದೆರಡು ದಿನಗಳಲ್ಲಿ ನಾವು ಅವರನ್ನು ಭೇಟಿಯಾಗುತ್ತೇವೆ ಎಂದಿದ್ದಾರೆ.

ಏಕಾಏಕಿ ಪ್ರತಿಭಟನೆಗೆ ಏನು ಕಾರಣ?

ರಾಜಸ್ಥಾನದ ಬಾರಾಂ ಎಂಬ ಹಳ್ಳಿಯಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ ನಡೆದಿತ್ತು. ಇಲ್ಲಿನ ಈ ಹೆಣ್ಮಕ್ಕಳು ಸೆ. 19 ರಂದು ನಾಪತ್ತೆಯಾಗಿದ್ದು, ಸೆ. 22 ರಂದು ಕೋಟಾದಲ್ಲಿ ಪತ್ತೆಯಾಗಿದ್ದರು. ಮಾಧ್ಯಮಗಳಿಗೆ ನಡೆದ ಘಟನೆಯ ವಿವರ ನೀಡಿದ್ದ ಈ ಬಾಲಕಿಯರು ತಮ್ಮನ್ನು ಅಪಹರಿಸಿ ಅತ್ಯಾಚಾರ ನಡೆಸಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರಿಗೆ ಈ ಸಂಬಂಧ ಮಾಹಿತಿ ನೀಡಿದಾಗ ಬೆದರಿಕೆ ಹಾಕಲಾಗಿತ್ತೂ ಎಂದು ಆರೋಪಿಸಿದ್ದರು.

ಈ ವಿಚಾರ ಭಾರೀ ಕಾವು ಪಡೆದಿತ್ತು. ಅಲ್ಲದೇ ಗೆಹ್ಲೋಟ್ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.