ಕೊರೋನಾ ಪಾಸಿಟಿವ್‌ ಆಗಿದ್ದ ಕನ್ನಿಕಾ ಕಪೂರ್‌ ಭಾಗವಹಿಸಿದ್ದ ಪಾರ್ಟಿಯಲ್ಲಿ ಇದ್ದ ‘ಮಹಾರಾಣಿ’ ವಸುಂಧರಾ ಮತ್ತು ಅವರ ಪುತ್ರ ದುಷ್ಯಂತ್‌ ಸಿಂಗ್‌ ಇಬ್ಬರೂ ಇನ್ನೂ ಮನೆಯೊಳಗೇ ಇದ್ದಾರೆ. ವಸುಂಧರಾ ಮತ್ತು ದುಷ್ಯಂತ್‌ ಸರೋಜಿನಿ ನಗರದಲ್ಲಿರುವ ತಮ್ಮ ಮಹಲಿನಲ್ಲಿ ಏಕಾಂತ ವಾಸದಲ್ಲಿದ್ದು, ಯಾರನ್ನೂ ಭೇಟಿ ಆಗುತ್ತಿಲ್ಲ.

"

ಲಖನೌ ಪಾರ್ಟಿ ಮುಗಿಸಿ ಬಂದ ನಂತರ ಕೊರೋನಾ ಟೆಸ್ಟ್‌ ಮಾಡಿಸಿದ್ದ ದುಷ್ಯಂತ್‌ ರಿಪೋರ್ಟ್‌ ನೆಗೆಟಿವ್‌ ಬಂದಿತ್ತು. ಈಗ ಇನ್ನೊಮ್ಮೆ ಟೆಸ್ಟ್‌ ಮಾಡಿಸಬೇಕಿದೆ. ದುಷ್ಯಂತ್‌ರ ಕೊರೋನಾ ರಿಪೋರ್ಟ್‌ ಮೇಲೆ ಬಹಳಷ್ಟುಯುವ ಸಂಸದರ ಕಣ್ಣಿದೆ. ಇದಕ್ಕೆ ಕಾರಣ ಸೆಂಟ್ರಲ್ ಹಾಲ್‌ನಲ್ಲಿ ದುಷ್ಯಂತ್‌ ಜೊತೆ ಸುಪ್ರಿಯಾ ಸುಳೆ, ವರುಣ್‌ ಗಾಂಧಿ, ದೇವಜಿ ಪಟೇಲ್ ಮುಂತಾದ ಯುವ ಸಂಸದರು ಹರಟೆ ಹೊಡೆಯುತ್ತಾ ಕಾಫಿ ಕುಡಿದದ್ದು. ಬಹುತೇಕ ಯುವ ಸಂಸದರು ಏಕಾಂತದಲ್ಲಿದ್ದು, ದುಷ್ಯಂತ್‌ ರಿಪೋರ್ಟ್‌ ನೆಗೆಟಿವ್‌ ಬರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಹೊರಗೆಲ್ಲೂ ಕಾಣಿಸಕೊಳ್ಳದ ಅಮಿತ್ ಶಾ ತೆರೆಮರೆಯಲ್ಲಿ ಏನ್ಮಾಡ್ತಿದ್ದಾರೆ?

ಉದಾಸಿ ಇನ್‌ ದೆಹಲಿ ಕ್ವಾರಂಟೈನ್‌

ಹಾವೇರಿ ಸಂಸದ ಶಿವಕುಮಾರ ಉದಾಸಿ ದೆಹಲಿಯ ಮಹದೇವ್‌ ರೋಡ್‌ನಲ್ಲಿರುವ ಸರ್ಕಾರಿ ಬಂಗ್ಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ದುಷ್ಯಂತ್‌ ಪಕ್ಕದಲ್ಲೇ ಕುಳಿತು 2 ಗಂಟೆ ಹರಟೆ ಹೊಡೆದ ತಪ್ಪಿಗೆ ಉದಾಸಿ ತಮ್ಮ ಕುಟುಂಬವನ್ನು ದೂರ ಬಿಟ್ಟು ಒಬ್ಬರೇ ದಿಲ್ಲಿಯಲ್ಲಿ ಉಳಿದುಕೊಳ್ಳುವಂತಾಗಿದೆ. ಲಾಕ್‌ಡೌನ್‌ ಆಗುವ ಮೊದಲೇ ಲಂಡನ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ಪುತ್ರಿಯರನ್ನು ಉದಾಸಿ ಬೆಂಗಳೂರಿಗೆ ಕರೆಸಿಕೊಂಡಿದ್ದರು.

ಮನೆಗೆ ಹೋದರೆ 84 ವರ್ಷದ ತಂದೆ ಶಾಸಕ ಉದಾಸಿ ಅವರಿದ್ದಾರೆ. ವಿನಾಕಾರಣ ಹೋಗಿ ತಾನೇ ವಾಹಕನಾಗೋದು ಬೇಡ ಎಂದು ಶಿವಕುಮಾರ ದಿಲ್ಲಿ ಮನೆಯಲ್ಲಿ ಒಬ್ಬರೇ ಉಳಿದುಬಿಟ್ಟಿದ್ದಾರೆ. ಇವರೂ ದುಷ್ಯಂತ್‌ ಸಿಂಗ್‌ ರಿಪೋರ್ಟ್‌ನ ಪ್ರತೀಕ್ಷೆಯಲ್ಲಿದ್ದಾರೆ. ವೈರಸ್ಸಿಗೆ ರಾಜ-ಪ್ರಜಾ, ಬಡವ-ಬಲ್ಲಿದ, ಮೇಲ್ಜಾತಿ-ಕೀಳು ಜಾತಿ ಎಂಬ ಭೇದವಿಲ್ಲ ನೋಡಿ. ಹತ್ತಿರ ಹೋದರೆ ಮಾತ್ರ ಸಮಪಾಲು ತಪ್ಪಿದ್ದಲ್ಲ!

21 ದಿನದ ಲಾಕ್‌ಔಟ್‌ ನಂತರ ಮುಂದೇನು? ಮೋದಿ ಮುಂದಿನ ಅಸ್ತ್ರವೇನು?

ಮೋದಿ ಮಧ್ಯರಾತ್ರಿ ಕಾರ್ಯಾಚರಣೆ 

ಪ್ರಧಾನಿ ಮೋದಿ ಹಗಲು-ರಾತ್ರಿ ಕೆಲಸ ಮಾಡೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇತ್ತೀಚೆಗೆ ಲಾಕ್‌ಡೌನ್‌ಗಿಂತ ಮೊದಲು ರಾತ್ರಿ 1 ಗಂಟೆಗೆ ಇಬ್ಬರು ಸಚಿವರು ಮತ್ತು ಇಬ್ಬರು ಕಾರ್ಯದರ್ಶಿಗಳಿಗೆ ಸ್ವತಃ ಮೋದಿ ಫೋನ್‌ ಮಾಡಿ ಝಾಡಿಸಿದರಂತೆ. ಇದಕ್ಕೆ ಕಾರಣ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸರಿಯಾಗಿ ಥರ್ಮಲ್ ಸ್ಕ್ರೀನಿಂಗ್‌ ತಪಾಸಣೆ ನಡೆಸುತ್ತಿಲ್ಲ ಎಂದು ಯಾರೋ ನೀಡಿದ ದೂರು. ಕೂಡಲೇ ರಾತ್ರಿ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯ ತರಿಸಿಕೊಂಡು ಸ್ವತಃ ನೋಡಿ ಕೆಲವೊಂದಿಷ್ಟುನಿರ್ದೇಶನ ಕೊಟ್ಟನಂತರವೇ ಮೋದಿ ಮಲಗಲು ಹೋದರಂತೆ. ಅಲ್ಲಿವರೆಗೆ ಸಚಿವರು, ಅಧಿಕಾರಿಗಳ ಸ್ಥಿತಿ ದೇವರಿಗೇ ಪ್ರೀತಿ!

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲುಯಿಂದ ಕಂಡ ರಾಜಕಾರಣ