ಮುಂಬೈ(ಮಾ.10): ತಮ್ಮ ಪತಿ ಮನ್‌ಸುಖ್‌ ಹಿರೇನ್‌ ಹತ್ಯೆ ಪ್ರಕರಣದಲ್ಲಿ ಭಯೋತ್ಪಾದನಾ ನಿಗ್ರದ ದಳದ ಎಎಸ್‌ಐ ಮತ್ತು ಬಾಂಬ್‌ ಪತ್ತೆ ಪ್ರಕರಣದ ಮೊದಲ ತನಿಖಾಧಿಕಾರಿಯಾಗಿದ್ದ ಸಚಿನ್‌ ವಾಝೆ ಅವರ ಕೈವಾಡವಿದೆ ಎಂದು ಹಿರೇನ್‌ರ ಪತ್ನಿ ವಿಮಲಾ ಪಾರೇಖ್‌ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ ಎಎಟಿಎಸ್‌ ಮುಂದೆ ಹೇಳಿಕೆ ದಾಖಲಿಸಿರುವ ವಿಮಲಾ, ‘2020ರ ನವೆಂಬರ್‌ನಿಂದಲೇ ನನ್ನ ಪತಿಯ ಕಾರನ್ನು ಸಚಿನ್‌ ಬಳಕೆ ಮಾಡುತ್ತಿದ್ದರು. ಈ ನಡುವೆ ಫೆ.17ರಂದು ನಮ್ಮ ಕಾರು ಕಳವಾದ ಬಳಿಕ ಮತ್ತು ಅದನ್ನು ಫೆ.25ರಂದು ಅಂಬಾನಿ ಮನೆ ಮುಂದೆ ಸ್ಫೋಟಕ ಇಡಲು ಬಳಸಿದ ಬಳಿಕ, ಪೊಲೀಸರು ನಮ್ಮ ಮನೆಗೆ ವಿಚಾರಣೆಗೆ ಬರಲು ಆರಂಭಿಸಿದರು’.

‘ಮಾ.2ರಂದು ಸಚಿನ್‌ ಸಲಹೆಯಂತೆ ಹಿರೇನ್‌, ಮುಂಬೈನಲ್ಲಿ ಗಿರಿ ಎಂಬ ವಕೀಲರ ಭೇಟಿಗೆ ಹೋಗಿದ್ದರು. ಪೊಲೀಸರು ಮತ್ತು ಮಾಧ್ಯಮದವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಿಎಂಗೆ ದೂರಿನ ಪತ್ರ ಬರೆಯಲು ಹೋಗುತ್ತಿರುವುದಾಗಿ ಅವರು ತಿಳಿಸಿದ್ದರು. ನಾನು ಈ ಬಗ್ಗೆ ಹಿರೇನ್‌ ಬಳಿ ವಿಚಾರಿಸಿದಾಗ, ನನಗೆ ಯಾರಿಂದಲೂ ಕಿರುಕುಳ ಆಗುತ್ತಿಲ್ಲ. ಆದರೆ ಸಚಿನ್‌ ಸಲಹೆಯಂತೆ ಹೀಗೆ ನಡೆದುಕೊಂಡಿದ್ದೇನೆ ಎಂದು ತಿಳಿಸಿದ್ದರು. ಈ ನಡುವೆ ಮಾ.3ರಂದು ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವಂತೆ ಮತ್ತು 2-3 ದಿನದಲ್ಲಿ ಜಾಮೀನು ಕೊಡಿಸುವೆ ಎಂದು ಸಚಿನ್‌ ನನ್ನ ಪತಿಗೆ ತಿಳಿಸಿದ್ದರಂತೆ. ಆದರೆ ನಾನು ಅಂಥ ಬಂಧನಕ್ಕೆ ಒಳಗಾಗುವ ಯಾವುದೇ ಅವಶ್ಯಕತೆ ಇಲ್ಲ ಎಂದಿದ್ದೆ. ಬಳಿಕ ಹಿರೇನ್‌ ನನ್ನ ಸೋದರಿಯ ಪತಿ ವಿನೋದ್‌ಗೆ ಕರೆ ಮಾಡಿ ನಿರೀಕ್ಷಣಾ ಜಾಮೀನು ಪಡೆಯಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಆದರೆ ಪ್ರಕರಣದಲ್ಲಿ ನೀನು ಆರೋಪಿಯೇ ಅಲ್ಲದಿರುವಾಗ ನ್ಯಾಯಾಲಯ ನಿರೀಕ್ಷಣಾ ಜಾಮೀನು ಕೊಡುವುದಿಲ್ಲ ಎಂದು ವಿನೋದ್‌ ತಿಳಿಸಿದ್ದರು.’

‘ಮಾ.4ರಂದು ರಾತ್ರಿ ಮುಂಬೈನ ಕಾಂಡೀವಿಲಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ತಾವ್ಡೆ ಅವರನ್ನು ಭೇಟಿಯಾಗಲೆಂದು ಹಿರೇನ್‌ ತೆರಳಿದ್ದರು. ಜೊತೆಗೆ ಏನಾದರೂ ತೊಂದರೆಯಾದಲ್ಲಿ ಸಚಿನ್‌ ಮೊಬೈಲ್‌ ಸಂಪರ್ಕಿಸುವಂತೆ ನನ್ನ ಮಗನಿಗೆ ನಂಬರ್‌ ನೀಡಿ ಹೋಗಿದ್ದರು. ಮಾರನೇ ದಿನ ಬೆಳಗ್ಗೆಯಾದರೂ ಪತಿ ಸುಳಿವು ಸಿಗದ ಹಿನ್ನೆಲೆಯಲ್ಲಿ ನಾವು ದೂರು ದಾಖಲಿಸಿದೆವು. ಅದಾದ ಕೆಲ ಗಂಟೆಯಲ್ಲೇ ಹಿರೇನ್‌ ಅವರ ಶವ ಸಿಕ್ಕಿತು. ಇದು ಆತ್ಮಹತ್ಯೆಯಲ್ಲ, ಕೊಲೆ. ಇದರಲ್ಲಿ ಸಚಿನ್‌ ಕೈವಾಡವಿದೆ’ ಎಂದು ವಿಮಲಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಧನಕ್ಕೆ ಫಡ್ನವೀಸ್‌ ಆಗ್ರಹ:

ವಿಮಲಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ಎಎಸ್‌ಐ ಸಚಿನ್‌ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ನಾಯಕ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ವಿಧಾನಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.