ನವದೆಹಲಿ(ಫೆ.18): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿಲುವನ್ನು ಕುಟುವಾಗಿ ಟೀಕಿಸುತ್ತಿದ್ದ ಬ್ರಿಟನ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ಅವರ ವೀಸಾ ಮೇಲೆ ಭಾರತ ನಿಷೇಧ ಹೇರಿದೆ.

ರಾಷ್ಟ್ರದ ಆಂತರಿಕ ವಿಷಯದಲ್ಲಿ ಮೂಗು ತೂರಿಸುತ್ತಿರುವ ಹಾಗೂ ಪಾಕಿಸ್ತಾನ ಪರ ಧೋರಣೆ ಹೊಂದಿರುವ ಡೆಬ್ಬಿ ಅಬ್ರಹಾಮ್ಸ್ ಭಾರತಕ್ಕೆ ಬರದಂತೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಸದ್ಯ ದುಬೈನಿಂದ ಭಾರತಕ್ಕೆ ಬಂದ ಡೆಬ್ಬಿ ಅಬ್ರಹಾಮ್ಸ್ ಅವರನ್ನು ವಿಮಾನ ನಿಲ್ದಾಣದಿಂದಲೇ ವಾಪಸ್ ಕಳುಹಿಸಲಾಗಿದ್ದು, ಅವರ ಭಾರತದ ವೀಸಾ ಮೇಲೆ ನಿಷೇಧ ಹೇರಲಾಗಿದೆ ಎಂದು ವಿದೇಶಾಂಗ ಇಲಾಖೆ ಖಚಿತಪಡಿಸಿದೆ.

ಇನ್ನು ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಸಿರುವ ಪ್ರತಿಪಕ್ಷ ಕಾಂಗ್ರೆಸ್, ಪಾಕಿಸ್ತಾನದ ಮುಖವಾಡ ಧರಿಸಿರುವ ಬ್ರಿಟನ್ ಸಂಸದೆ ಡೆಬ್ಬಿ ಅಬ್ರಹಾಮ್ಸ್ ವೀಸಾ ರದ್ದುಗೊಳಿಸಿರುವುದು ಸರಿಯಾದ ಕ್ರಮ ಎಂದು ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ, ಡೆಬ್ಬಿ ಅಬ್ರಹಾಮ್ಸ್ ಪಾಕ್‌ನ ISI ಜೊತೆ ನೇರ ಸಂಪರ್ಕ ಹೊಂದಿದ್ದು, ಅವರಿಗೆ ಭಾರತ ಪ್ರವೇಶ ನಿರಾಕರಿಸಿ ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ಭಾರತದ ಸಾರ್ವಭೌಮತ್ವದ ಮೇಲೆ ದಾಳಿ ನಡೆಸುವ ಯಾರೇ ಆದರೂ ಅವರನ್ನು ಇಡೀ ದೇಶ ಒಕ್ಕೊರಲಿನಿಂದ ವಿರೋಧಿಸಲಿದೆ ಎಂದು ಸಿಂಘ್ವಿ ಟ್ವೀಟ್ ಮಾಡಿದ್ದಾರೆ.