ರೇಪ್ ಆದ್ಮೇಲೆ ಬಂದು ದೂರು ಕೊಡು: ಉನ್ನಾವ್ ಪೊಲೀಸರ ಉಡಾಫೆ
ರೇಪ್ ಆದ್ಮೇಲೆ ಬಂದು ದೂರು ಕೊಡು: ಉನ್ನಾವ್ ಪೊಲೀಸರ ಉಡಾಫೆ| ಅತ್ಯಾಚಾರ ಸಂಬಂಧ ದೂರು ನೀಡಲು ಬಂದಾಗ ಪೊಲೀಸರ ನಿರ್ಲಕ್ಷ್ಯ
ಉನ್ನಾವ್[ಡಿ.09]: ಅತ್ಯಾಚಾರ ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿ ಸುಟ್ಟು ಕೊಂದ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗುತ್ತಿರುವ ವೇಳೆಯಲ್ಲೇ, ಘಟನೆ ನಡೆದ ಅದೇ ಸ್ಥಳದಲ್ಲಿ ಮತ್ತೊಂದು ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅತ್ಯಾಚಾರ ಸಂಬಂಧ ದೂರು ನೀಡಲು ಹೋದಾಗ, ‘ರೇಪ್ ಆದ ಮೇಲೆ ಬಂದು ದೂರು ಕೊಡು’ ಎಂದು ಪೊಲೀಸರು ಹೇಳಿದ್ದಾಗಿ ಮಹಿಳೆಯೊಬ್ಬಳು ದೂರಿದ್ದಾರೆ ಕೆಲ ದಿನಗಳ ಹಿಂದೆ ಅತ್ಯಾಚಾರ ಸಂತ್ರಸ್ತೆಯ ಮೇಲೆ ಬೆಂಕಿ ಹಾಕಿದ ಹಿಂದುಪುರದಲ್ಲೇ ಈ ಆಘಾತಕಾರಿ ಘಟನೆ ನಡೆದಿದೆ.
ಔಷಧಿ ತರಲು ಹೋಗುತ್ತಿದ್ದ ವೇಳೆ ನನ್ನ ಬಟ್ಟೆಎಳೆದು ಮೂವರು ದುರುಳರು ಅತ್ಯಾಚಾರಕ್ಕೆ ಯತ್ನಿಸಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಹೋದಾಗ ರೇಪ್ ಆದ ಮೇಲೆ ಬಂದು ದೂರು ಕೊಡು ಎಂದು ಹೇಳಿ ಉಡಾಫೆಯಾಗಿ ವರ್ತಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ಮಹಿಳಾ ಸಹಾಯವಾಣಿಗೆ ದೂರು ನೀಡಿದಾಗ, ಪೊಲೀಸ್ ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಿದರು. ಪೊಲೀಸ್ ಸಹಾಯವಾಣಿಯಲ್ಲಿ ಉನ್ನಾವ್ ಠಾಣೆಗೆ ದೂರು ನೀಡಲು ಸಲಹೆ ನೀಡಿದ್ದರು. ಕಳೆದ ಮೂರು ತಿಂಗಳಿನಿಂದ ಠಾಣೆಗೆ ಹೋಗುತ್ತಿದ್ದರೂ ಪೊಲೀಸರು ಕ್ಯಾರೇ ಮಾಡಲಿಲ್ಲ. ಒಂದು ವೇಳೆ ದೂರು ಕೊಟ್ಟರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಮಹಿಳೆ ದೂರಿದ್ದಾರೆ.