-ಅರುಣ್‌ ಆನಂದ್‌, ಪತ್ರಕರ್ತ

ಬಹುಚರ್ಚಿತ ಹಾಗೂ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಈಶಾನ್ಯ ಭಾರತದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಅಸ್ಸಾಂ, ಮಣಿಪುರ, ತ್ರಿಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಸರ್ಕಾರ ಭದ್ರತಾ ವ್ಯವಸ್ಥೆಯನ್ನೂ ಬಿಗಿಗೊಳಿಸಿದೆ. ಆದರೆ ಈಶಾನ್ಯ ಭಾರತ ವಿನಾಕಾರಣ ಆತಂಕಪಡುತ್ತಿದೆ ಎಂದೆನಿಸುತ್ತಿದೆ. ಅವರ ಆತಂಕಕ್ಕೆ ಕಾರಣ ವಿಧೇಯಕವು ಈ ರಾಜ್ಯಗಳ ಮೂಲನಿವಾಸಿಗಳ ಹಕ್ಕನ್ನು ಕಸಿದುಕೊಳ್ಳಲಿದೆ ಎಂದು ಪಟ್ಟಬದ್ಧ ಹಿತಾಸಕ್ತಿಗಳು ಬಿಂಬಿಸಿರುವುದು.

ವಲಸಿಗರನ್ನು ಪ್ರೋತ್ಸಾಹಿಸುತ್ತಾ?

ಈಶಾನ್ಯ ಭಾರತೀಯರ ಭಯಕ್ಕೆ ಮೂಲ ಕಾರಣ, ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವುದರಿಂದ ಇನ್ನೂ ಹೆಚ್ಚಿನ ವಲಸಿಗರು ಧಾವಿಸಿ ಬಂದರೆ ತಮ್ಮ ರಾಜ್ಯಗಳ ಜನಸಂಖ್ಯಾ ಲೆಕ್ಕಾಚಾರವೇ ಬದಲಾಗಬಹುದು ಎಂಬುದು. ಮುಸ್ಲಿಂ ಪ್ರಧಾನ ರಾಷ್ಟ್ರಗಳಾದ ಅಷ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಈ ಮಸೂದೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಹಾಗೂ ತಿದ್ದುಪಡಿ ತರುವ ಉದ್ದೇಶವನ್ನು ಅವಲೋಕಿಸಿದರೆ ಅವರ ಆತಂಕದಲ್ಲಿ ಹುರುಳಿಲ್ಲ ಎಂಬುದು ಅರಿವಾಗುತ್ತದೆ.

ಅವರ ಇನ್ನೊಂದು ಭಯ ಒಮ್ಮೆ ಧಾರ್ಮಿಕ ಅಲ್ಪಸಂಖ್ಯಾತರು ಇಲ್ಲಿನ ಪೌರತ್ವ ಪಡೆದರೆ ಅದು ವಲಸಿಗರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆಗ ವಲಸಿಗರ ಸಂಖ್ಯೆ ಹೆಚ್ಚಾಗುತ್ತದೆ ಎಂಬುದು. ಆದರೆ ವಾಸ್ತವದಲ್ಲಿ ಒಮ್ಮೆ ಪೌರತ್ವ ತಿದ್ದುಪಡಿ ಮಸೂದೆಯು ಕಾಯ್ದೆಯ ಸ್ಥಾನಮಾನ ಪಡೆದು ಅದರನ್ವಯ ಪೌರತ್ವ ನೀಡುವ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ ವಲಸಿಗರ ಸಂಖ್ಯೆ ಕಡಿಮೆಯಾಗುತ್ತದೆ. ಏಕೆಂದರೆ ಪೌರತ್ವ ತಿದ್ದುಪಡಿ ವಿಧೇಯಕದ ಮೂಲ ಉದ್ದೇಶವೇ ಅಕ್ರಮ ವಲಸಿಗರನ್ನು ಪತ್ತೆಹಚ್ಚುವುದು ಮತ್ತು ಅಕ್ರಮ ವಲಸೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಪಡೆಯುವುದು. ವಲಸಿಗರ ಅನಿರ್ದಿಷ್ಟಒಳಹರಿವನ್ನು ಪರಿಶೀಲಿಸುವುದು ಇಡೀ ಪ್ರಕ್ರಿಯೆಯ ಪ್ರಮುಖ ಆದ್ಯತೆ. ಅಲ್ಲದೆ, ರಾಜ್ಯಗಳ ಮೂಲ ನಿವಾಸಿಗಳಿಗೆ ಲಭ್ಯವಿರುವ ಯಾವುದೇ ವಿಶೇಷ ಹಕ್ಕುಗಳನ್ನು ಪೌರತ್ವ ಮಸೂದೆಯು ಕಸಿದುಕೊಳ್ಳುವುದಿಲ್ಲ ಅಥವಾ ಅಂಥ ಉದ್ದೇಶವನ್ನೂ ಹೊಂದಿಲ್ಲ. ಹಾಗೆಯೇ ನಿಗದಿಪಡಿಸಿರುವ ವರ್ಷದ ಬಳಿಕ ಭಾರತಕ್ಕೆ ಬಂದ ವಲಸಿಗರಿಗೆ ಪೌರತ್ವ ಮಸೂದೆಯಡಿ ಪೌರತ್ವ ಒದಗಿಸುವುದಿಲ್ಲ. ಹಾಗಾಗಿ ಪೌರತ್ವ ಮಸೂದೆಯಿಂದ ವಲಸಿಗರ ಸಂಖ್ಯೆ ಹೆಚ್ಚುತ್ತದೆ ಎಂದು ಭಯ ಪಡಬೇಕಾದ ಅವಶ್ಯಕತೆ ಇಲ್ಲ.

ಹೊಸಬರಿಗೆ ಪೌರತ್ವ ನೀಡಲ್ಲ

ಈಗಾಗಲೇ ನೆಲೆಸಿರುವವರನ್ನು ಹೊರತುಪಡಿಸಿ, ಈಶಾನ್ಯ ರಾಜ್ಯವು ಇತರ ಜನರ ಶಾಶ್ವತ ವಸಾಹತುವಾಗುತ್ತದೆ ಎಂಬುದಕ್ಕೆ ಕಾರಣವೇ ಇಲ್ಲ. ಪೌರತ್ವ ಮಸೂದೆಯಾಗಲಿ, ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯಾಗಲಿ ನೇತ್ಯಾತ್ಮಕವಾಗಿ ಪರಿಣಾಮ ಬೀರುವುದಿಲ್ಲ. ಎರಡೂ ಕಾನೂನುಗಳು ವಿವಿಧ ರಾಜ್ಯಗಳ ಅಕ್ರಮ ವಲಸಿಗರ ಪತ್ತೆಗಾಗಿ ಅನುಷ್ಠಾನಗೊಂಡವುಗಳು. ಒಮ್ಮೆ ಅಕ್ರಮ ವಲಸಿಗರು ಪತ್ತೆಯಾದರೆ, ರಾಜ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಲು ನೆರವಾಗುತ್ತದೆ. ಪೌರತ್ವ ಕಾಯಿದೆ ಅಥವಾ ಎನ್‌ಆರ್‌ಸಿ ಇಲ್ಲದೇ ಹೋದಲ್ಲಿ ಅಕ್ರಮ ವಲಸಿಗರು ಮೂಲನಿವಾಸಿಗಳಿಗೆ ಮಾತ್ರ ಸಿಗಬೇಕಾದ ಸೌಲಭ್ಯಗಳನ್ನು ಕಬಳಿಸುತ್ತಾರೆ.

ಪೌರತ್ವ ಮಸೂದೆಯು ಭಾರತೀಯ ನಾಗರಿಕರಿಗೆ ಕಲ್ಪಿಸಲಾಗುವ ಹಕ್ಕುಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದೆ. ಅದರರ್ಥ ಈಗಾಗಲೇ ಇರುವ ರಾಜ್ಯಗಳ ಸ್ಥಳೀಯ ಅಥವಾ ಸಾಂಪ್ರದಾಯಿಕ ನಿವಾಸಿಗಳಿಗೆ ಈ ಹಕ್ಕನ್ನು ನೀಡಲಾಗುತ್ತದೆಯೇ ವಿನಃ ನೂತನ ನಾಗರಿಕರಿಗಲ್ಲ. ಕಿರುಕುಳದಿಂದಾಗಿ ಭಾರತದಲ್ಲಿ ಆಶ್ರಯ ಪಡೆಯುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಹಕ್ಕುಗಳನ್ನು ನೀಡಿದರೆ, ಅವರು ಗಡಿ ರಾಜ್ಯಗಳು ಮತ್ತು ನಗರಗಳಲ್ಲಿಯೇ ಉಳಿಯುವ ಬದಲು ಉತ್ತಮ ಜೀವನೋಪಾಯಕ್ಕಾಗಿ ಇತರ ರಾಜ್ಯಗಳಿಗೆ ತೆರಳುತ್ತಾರೆ. ಇದರಿಂದ ಈಶಾನ್ಯ ರಾಜ್ಯಗಳ ವಲಸಿಗರ ಸಂಖ್ಯೆ ಕಡಿಮೆಯಾಗಬಹುದು.

ಹಳೆಯ ಒಪ್ಪಂದಗಳಿಗೆ ಧಕ್ಕೆ ಇಲ್ಲ

ಈಶಾನ್ಯ ಭಾಗಗಳ ಸ್ಥಳೀಯ ನಿವಾಸಿಗಳು, ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಮತ್ತು ನಿಗದಿತ ಪ್ರದೇಶಗಳಲ್ಲಿ ವಾಸಿಸುವ ಜನರು ಇಲ್ಲಿ ಅನೇಕ ತಲೆಮಾರುಗಳಿಂದ ವಾಸಿಸುತ್ತಿದ್ದಾರೆ. ಕಾನೂನಿನ ವಿವಿಧ ನಿಬಂಧನೆಗಳ ಅಡಿಯಲ್ಲಿ, ಭಾರತದ ಇತರ ನಾಗರಿಕರಿಗೆ ಲಭ್ಯವಿಲ್ಲದ ಅನೇಕ ಸಾಂಪ್ರದಾಯಿಕ ಹಕ್ಕುಗಳನ್ನು ಅವರು ಅನುಭವಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಮಸೂದೆ ಭಾರತೀಯ ಪೌರತ್ವವನ್ನು ಮಾತ್ರ ಒದಗಿಸುವುದರಿಂದ, ಸ್ಥಳೀಯ ನಿವಾಸಿಗಳು ಮತ್ತು ಈ ಪ್ರದೇಶಗಳ ಮೂಲ ಬುಡಕಟ್ಟು ಜನಾಂಗದವರು ಇನ್ನು ಮುಂದೆಯೂ ವಿವಿಧ ಕಾನೂನುಗಳು ಮತ್ತು ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿಯೇ ಜೀವಿಸಲಿದ್ದಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಕಾಯ್ದೆಗಳು ಮತ್ತು ಅದರ ನಿಬಂಧನೆಗಳಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಈ ವಿಶೇಷ ಹಕ್ಕುಗಳನ್ನು ಅನುಭವಿಸುವ ವ್ಯಕ್ತಿಗಳ ಅರ್ಹತೆಯಲ್ಲಿ ಯಾವುದೇ ಬದಲಾವಣೆಗಳಾಗದಿದ್ದಾಗ, ಅವರ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಶ್ನೆಯೇ ಇಲ್ಲ.

ಭೂಮಿ ಖರೀದಿ ಸಾಧ್ಯವಿಲ್ಲ

ನಿರಾಶ್ರಿತರಾಗಿ ದೇಶವನ್ನು ಪ್ರವೇಶಿಸುವ ಜನರು ಕೆಲವೇ ಸಮಯದಲ್ಲಿ ಸ್ಥಳೀಯ ನಿವಾಸಿಗಳಾಗುತ್ತಾರೆ ಮತ್ತು ತಲೆಮಾರುಗಳಿಂದ ಆ ಪ್ರದೇಶಗಳಲ್ಲಿ ಉಳಿದುಕೊಂಡಿರುವ ಮೂಲ ಬುಡಕಟ್ಟು ಜನಾಂಗಕ್ಕೆ ಸಮಾನವಾದ ಹಕ್ಕುಗಳನ್ನು ಹೊಂದಿರುತ್ತಾರೆ ಎಂಬುದು ಕೆಲವರ ಕಲ್ಪನೆ. ಪೌರತ್ವ ತಿದ್ದುಪಡಿ ಮಸೂದೆಯು ಕೇವಲ ಪೌರತ್ವ ಮಾತ್ರ ಒದಗಿಸುತ್ತದೆ ಮತ್ತು ಸಾಂಪ್ರದಾಯಿಕ ಹಕ್ಕುಗಳನ್ನು ಕಟ್ಟುನಿಟ್ಟಾಗಿ ರಕ್ಷಿಸುತ್ತದೆ. ಈಶಾನ್ಯ ಭಾರತದ ಹಲವು ಸಮುದಾಯಗಳು ಭೂಮಿಯ ಮಾಲಿಕತ್ವ ಹೊಂದಿವೆ. ಅರುಣಾಚಲ ಪ್ರದೇಶ, ಮಿಜೋರಂ, ನಾಗಾಲ್ಯಾಂಡ್‌ ಮತ್ತು ಮೆಘಾಲಯದಲ್ಲಿ ಭೂಮಿಯ ಮಾರಾಟ ಮತ್ತು ಖರೀದಿಗೆ ನಿರ್ಬಂಧವಿದೆ. ಮಣಿಪುರ ಮತ್ತು ತ್ರಿಪುರಾದಲ್ಲಿನ ಹಲವು ಕಾನೂನುಗಳ ಪ್ರಕಾರ ಪರ್ವತ ಪ್ರದೇಶಗಳು ಮತ್ತು ಕೆಲ ನಿರ್ದಿಷ್ಟಪ್ರದೇಶಗಳನ್ನು ಕಟ್ಟುನಿಟ್ಟಾಗಿ ಸಂರಕ್ಷಿಸಲಾಗುತ್ತದೆ. ಇನ್ನು ಅಸ್ಸಾಂನಲ್ಲಿ ಕೆಲ ನಿರ್ದಿಷ್ಟಪ್ರದೇಶಗಳನ್ನು ಹೊರತುಪಡಿಸಿ, ಕೆಲ ಮಿತಿಗೊಳಪಟ್ಟು ಭೂಮಿಯನ್ನು ಖರೀದಿಸಬಹುದು. ಒಟ್ಟಾರೆಯಾಗಿ, ಭೂಮಿಯ ಮಾಲಿಕತ್ವಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ಸ್ಥಳಗಳಲ್ಲಿ ಹೊರಗಿನವರಿಗೆ ಭೂಮಿ ಖರೀದಿಸಲು ಅವಕಾಶವಿಲ್ಲ. ಹಾಗಾಗಿ ಹೊರಗಿನವರಿಗೆ ಭೂಮಿಯನ್ನು ಖರೀದಿಸಲು ಅವಕಾಶವಿರುತ್ತದೆ ಎಂಬ ಆತಂಕ ಸಂಪೂರ್ಣ ಆಧಾರರಹಿತ.

ವಿರೋಧಕ್ಕೆ ಕಾರಣ ರಾಜಕಾರಣ!

ಕೇಂದ್ರ ಸರ್ಕಾರದೊಂದಿಗೆ ಮಿಜೋರಂ, ತ್ರಿಪುರಾ, ಅಸ್ಸಾಂ ಮತ್ತು ಇತರ ಕೆಲ ಪ್ರದೇಶಗಳು ಒಪ್ಪಂದ ಮಾಡಿಕೊಂಡಿವೆ. ನೆರೆರಾಷ್ಟ್ರದ ಅಲ್ಪಸಂಖ್ಯಾತ ವಲಸಿಗರಿಗೆ ಪೌರತ್ವ ನೀಡುವ ಸಂಬಂಧ ಕೇಂದ್ರ ಸರ್ಕಾರವು ನಿರ್ದಿಷ್ಟದಿನಾಂಕವನ್ನು ನಿಗದಿಪಡಿಸುವವರೆಗೆ ಈಗಾಗಲೇ ಅಸ್ತಿತ್ವದಲ್ಲಿರುವ ಒಪ್ಪಂದಗಳಿಗೆ ವಿರುದ್ಧವಾಗಿರುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಈಶಾನ್ಯ ರಾಜ್ಯದ ಜನಸಂಖ್ಯೆಯ ಮೇಲೆ ಪ್ರಭಾವ ಬೀರುವ ಯಾವುದೇ ಅಂಶಗಳೂ ಈ ಮಸೂದೆಯಲ್ಲಿ ಇಲ್ಲ. ಅದಕ್ಕೆ ವ್ಯತಿರಿಕ್ತವಾಗಿ ಅದು ಈಶಾನ್ಯ ರಾಜ್ಯಕ್ಕೆ ವಲಸೆ ಬರುವವರನ್ನು ಕಡಿಮೆ ಮಾಡುತ್ತದೆ. ಆದರೆ ಅಲ್ಲಿನ ಜನರ ಈ ಎಲ್ಲಾ ಆತಂಕಗಳಿಗೆ ಮೂಲ ಕಾರಣ ರಾಜಕೀಯ ಹಿತಾಸಕ್ತಿ.