ಚೀನಾ ವಾಯುನೆಲೆ ವಿಸ್ತರಣೆ, ಯುದ್ಧ ವಿಮಾನ ನಿಯೋಜನೆ!
ಚೀನಾ ವಾಯುನೆಲೆ ವಿಸ್ತರಣೆ, ಯುದ್ಧ ವಿಮಾನ ನಿಯೋಜನೆ| ಲಡಾಖ್ ಸಮೀಪ ಮತ್ತಷ್ಟು ಸೇನಾ ಚಟುವಟಿಕೆ|
ನವದೆಹಲಿ(ಮೇ.27): ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ತ್ವೇಷಮಯ ಪರಿಸ್ಥಿತಿ ಸೃಷ್ಟಿಯಾಗಿರುವಾಗಲೇ, ಲಡಾಖ್ ಸಮೀಪವಿರುವ ತನ್ನ ಭೂಭಾಗದಲ್ಲಿ ವಾಯುನೆಲೆ ವಿಸ್ತರಣೆ ಕಾಮಗಾರಿಯನ್ನು ಚೀನಾ ನಡೆಸುತ್ತಿರುವುದು ಪತ್ತೆಯಾಗಿದೆ. ಅಲ್ಲದೆ ಅಲ್ಲಿ ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿರುವುದೂ ಬಯಲಾಗಿದೆ.
"
ಚೀನಾ ಅಧ್ಯಕ್ಷ ಯುದ್ಧ ಕಹಳೆ: ಸನ್ನದ್ಧರಾಗುವಂತೆ ಸೇನೆಗೆ ಜಿನ್‌ಪಿಂಗ್ ಸೂಚನೆ!
ಮೇ 5 ಹಾಗೂ 6ರಂದು ಭಾರತ- ಚೀನಾ ಯೋಧರ ನಡುವೆ ಪ್ಯಾಂಗೊಂಗ್ ಸರೋವರ ಬಳಿ ಘರ್ಷಣೆ ನಡೆದಿತ್ತು. ಆ ಪ್ರದೇಶದಿಂದ ಕೇವಲ 200 ಕಿ.ಮೀ. ದೂರದಲ್ಲಿರುವ ತನ್ನ ಅತಿ ಎತ್ತರದ ವಾಯುನೆಲೆಯಾಗಿರುವ ಟಿಬೆಟ್‌ನ ನಗಾರಿ ಗುನ್ಸಾ ವಿಮಾನ ನಿಲ್ದಾಣದಲ್ಲಿ ಚೀನಾ ಕಾಮಗಾರಿ ಆರಂಭಿಸಿದ್ದು, ಅದರ ಉಪಗ್ರಹ ಚಿತ್ರಗಳು ಲಭಿಸಿವೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಏ.6 ಹಾಗೂ ಮೇ 20ರಂದು ಸೆರೆ ಹಿಡಿದಿರುವ ಚಿತ್ರಗಳು ಇವಾಗಿವೆ. ಮೊದಲ ಚಿತ್ರದಲ್ಲಿ ವಾಯುನೆಲೆ ಕಾಣುತ್ತದೆ. ಎರಡನೇ ಚಿತ್ರದಲ್ಲಿ ನಿರ್ಮಾಣ ಕಾಮಗಾರಿ ಗೋಚರವಾಗಿದೆ. ಈಗಾಗಲೇ ಇರುವ ಯುದ್ಧ ವಿಮಾನ ನಿಲುಗಡೆ ತಾಣದ ಜತೆಗೆ ಹೆಚ್ಚುವರಿಯಾಗಿ ಹೆಲಿಕಾಪ್ಟರ್ ಅಥವಾ ಸಮರ ವಿಮಾನವನ್ನು ನಿಲ್ಲಿಸಲು 2ನೇ ತಾಣ ನಿರ್ಮಿಸುತ್ತಿರುವಂತೆ ಕಂಡುಬಂದಿದೆ.
ಗಡಿಯಲ್ಲಿ ಮತ್ತೆ ಚೀನಾ ತಂಟೆ: ಲಡಾಖ್ ಬಳಿ ಬಂಕರ್ ನಿರ್ಮಾಣ!
ಇದರ ಜತೆಗೆ ಮತ್ತೊಂದು ಚಿತ್ರದಲ್ಲಿ ನಾಲ್ಕು ಯುದ್ಧ ವಿಮಾನಗಳು ಗೋಚರಿಸಿವೆ. ಇವು ಜೆ-11 ಅಥವಾ ಜೆ-16 ಯುದ್ಧ ವಿಮಾನಗಳಂತೆ ಕಂಡುಬಂದಿವೆ. ಇವು ಚೀನಾದಲ್ಲೇ ತಯಾರಾದ ಅತ್ಯಾಧುನಿಕ ವಿಮಾನಗಳಾಗಿದ್ದು, ಭಾರತೀಯ ವಾಯುಪಡೆ ಬಳಿ ಇರುವ ಸುಖೋಯ್ 30 ಎಂಕೆಐ ವಿಮಾನಗಳಷ್ಟೇ ಸಾಮರ್ಥ್ಯ ಹೊಂದಿವೆ ಎಂದು ವರದಿ ಹೇಳಿದೆ.