ನವದೆಹಲಿ(ಅ.17):ಭಾರಿ ಸಂಖ್ಯೆಯ ಕೊರೋನಾ ಸೋಂಕಿತರು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಅತ್ಯುನ್ನತ ತಂಡಗಳನ್ನು ರವಾನೆ ಮಾಡಿದೆ. ರಾಜ್ಯ ಸರ್ಕಾರಗಳು ಕೊರೋನಾ ನಿಗ್ರಹಕ್ಕೆ ಕೈಗೊಳ್ಳುತ್ತಿರುವ ನಿರ್ವಹಣಾ ಕ್ರಮಗಳಿಗೆ ಈ ತಂಡಗಳು ಇನ್ನಷ್ಟುಸಲಹೆ- ಸೂಚನೆಗಳನ್ನು ನೀಡಲಿವೆ.

ಕರ್ನಾಟಕ, ಕೇರಳ, ರಾಜಸ್ಥಾನ, ಛತ್ತೀಸ್‌ಗಢ, ಪಶ್ಚಿಮ ಬಂಗಾಳಕ್ಕೆ ಈ ತಂಡಗಳು ತೆರಳಿವೆ. ಕಂಟೇನ್ಮೆಂಟ್‌, ಸರ್ವೇಕ್ಷಣೆ, ಪರೀಕ್ಷೆ, ಸೋಂಕು ತಡೆ ಹಾಗೂ ನಿಯಂತ್ರಣ ಕ್ರಮಗಳು ಮತ್ತು ಸೋಂಕಿತರ ಪರಿಣಾಮಕಾರಿ ಚಿಕಿತ್ಸೆಗೆ ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳಿಗೆ ಈ ತಂಡಗಳು ಸಹಾಯ ಮಾಡಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಪ್ರತಿ ತಂಡದಲ್ಲೂ ಜಂಟಿ ಕಾರ್ಯದರ್ಶಿ (ಆಯಾ ರಾಜ್ಯಗಳಿಗೆ ನೋಡಲ್‌ ಅಧಿಕಾರಿ), ಓರ್ವ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪರಿಣತ ಹಾಗೂ ಒಬ್ಬ ವೈದ್ಯರು ಇರಲಿದ್ದಾರೆ. ಮೂವರೂ ತಮಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ರಾಜ್ಯಗಳಿಗೆ ಸಲಹೆ ಮಾಡಲಿದ್ದಾರೆ. ಸಕಾಲಕ್ಕೆ ರೋಗ ಪತ್ತೆ ಹಾಗೂ ನಂತರ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸೂಚನೆ ನೀಡಲಿದ್ದಾರೆ ಎಂದು ಹೇಳಿದೆ.

ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೋವಿಡ್‌ ನಿರ್ವಹಣೆಗೆ ಕೈಗೊಳ್ಳುತ್ತಿರುವ ಕ್ರಮಗಳನ್ನು ಆಧರಿಸಿ ಕಾಲಕಾಲಕ್ಕೆ ಕೇಂದ್ರ ಸರ್ಕಾರ ಕೇಂದ್ರ ತಂಡಗಳನ್ನು ರವಾನಿಸುತ್ತಲೇ ಬಂದಿದೆ. ಈ ತಂಡಗಳು ಸಂಬಂಧಿಸಿದ ರಾಜ್ಯ ಸರ್ಕಾರಗಳ ಜತೆ ಚರ್ಚಿಸಿ ವಸ್ತುಸ್ಥಿತಿ, ಸವಾಲುಗಳನ್ನು ಅರಿಯಲಿವೆ. ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಿ, ರಾಜ್ಯ ಸರ್ಕಾರಗಳು ಕೊರೋನಾ ನಿಗ್ರಹಕ್ಕೆ ಕೈಗೊಂಡಿರುವ ಚಟುವಟಿಕೆಗಳಿಗೆ ಬಲ ತುಂಬಲಿವೆ ಎಂದು ಮಾಹಿತಿ ನೀಡಿದೆ.

ಮರಣ ಪ್ರಮಾಣ ಮಾ.22ರ ನಂತರ ಮೊದಲ ಬಾರಿ ಕಡಿಮೆ

ದೇಶದಲ್ಲಿ ಕೊರೋನಾ ಅಬ್ಬರ ತಗ್ಗಿದೆ ಎಂಬ ವಿಶ್ಲೇಷಣೆಗಳಿಗೆ ಪೂರಕವಾಗಿ, ಮರಣ ಪ್ರಮಾಣ ಶೇ.1.52ಕ್ಕೆ ಇಳಿಕೆಯಾಗಿದೆ. ಇದು ಮಾ.22ರ ನಂತರ ದಾಖಲಾಗಿರುವ ಕನಿಷ್ಠ ಮಟ್ಟಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರತಿ 100 ವ್ಯಕ್ತಿಗಳಲ್ಲಿ ಮರಣಕ್ಕೀಡಾಗುವವರ ಪ್ರಮಾಣವನ್ನೇ ಮರಣ ಪ್ರಮಾಣ ಎನ್ನಲಾಗುತ್ತದೆ. ಮೇ ತಿಂಗಳಿನಲ್ಲಿ ಇದು ಶೇ.3.4ಕ್ಕೆ ಏರಿಕೆಯಾಗಿತ್ತು. ಮಾ.22ರಂದು ದೇಶದಲ್ಲಿ ಶೇ.1.33ರಷ್ಟುಮರಣ ದರ ಇತ್ತು. ಆಗ ದೇಶದಲ್ಲಿ ಕೊರೋನಾ ಅಬ್ಬರ ಇರಲಿಲ್ಲ ಎಂಬುದು ಗಮನಾರ್ಹ. ಇದೇ ವೇಳೆ, ಪ್ರತಿ 10 ಲಕ್ಷ ಜನರಿಗೆ ಮೃತಪಡುವವರ ಸಂಖ್ಯೆ 81ರಷ್ಟಿದ್ದು, ಇದು ವಿಶ್ವದಲ್ಲೇ ಕಡಿಮೆ ಎಂದೂ ಆರೋಗ್ಯ ಸಚಿವಾಲಯ ತಿಳಿಸಿದೆ.