ಸಲಿಂಗ ವಿವಾಹ ಮನ್ನಣೆಗೆ ಕೇಂದ್ರ ವಿರೋಧ: ಇಂದು ಸಾಂವಿಧಾನಿಕ ಪೀಠದಿಂದ ವಿಚಾರಣೆ
ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆಗೆ ಕೇಂದ್ರ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ವಾದವು ಕೇವಲ 'ನಗರ ಗಣ್ಯರಿಗೆ' ಸೀಮಿತವಾಗಿದೆ ಎಂದು ಹೇಳಿದೆ.
ನವದೆಹಲಿ: ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಆಗಿರುವ ಅರ್ಜಿಗಳ ವಿಚಾರಣೆಗೆ ಕೇಂದ್ರ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ವಾದವು ಕೇವಲ 'ನಗರ ಗಣ್ಯರಿಗೆ' ಸೀಮಿತವಾಗಿದೆ ಎಂದು ಹೇಳಿದೆ. ಇದರ ಬೆನ್ನಲ್ಲೇ ಕೇಂದ್ರದ ಆಕ್ಷೇಪಗಳನ್ನು ಪರಿಗಣಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದ್ದು, ಇಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಸೋಮವಾರ ಕೇಂದ್ರ ಸರ್ಕಾರದ ಪರವಾಗಿ ಅಫಿಡವಿಟ್ ಸಲ್ಲಿಸಿದ ವಕೀಲರು, ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂಬ ವಾದವು ನಗರಗಳ ಚಿಂತನೆಯ ಪ್ರತೀಕವಾಗಿವೆ. ಸಮಾಜವು ಇದನ್ನು ಸ್ವೀಕರಿಸುವುದಿಲ್ಲ. ಮದುವೆಗೆ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರ. ಹೀಗಾಗಿ ಇಂಥ ವಿಷಯಗಳಿಂದ ಕೋರ್ಟು ದೂರ ಉಳಿಯಬೇಕು ಎಂದು ಕೋರಿತು.
ಇದಕ್ಕೆ ಸಮ್ಮತಿಸಿದ ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ. ಚಂದ್ರಚೂಡ (chandrachud)ನೇತೃತ್ವದ ತ್ರಿಸದಸ್ಯ ಪೀಠ, ಮಂಗಳವಾರವೇ ಇದನ್ನು ವಿಷಯ ಪಟ್ಟಿಯಲ್ಲಿ ಸೇರಿಸಲಾಗುವುದು’ ಎಂದರು. ಮಂಗಳವಾರದಿಂದ ಪಂಚಸದಸ್ಯರ ಸಾಂವಿಧಾನಿಕ ಪೀಠ (Constitutional Bench) ಇದರ ವಿಚಾರಣೆ ನಡೆಸಲಿದೆ.
ಕೇಂದ್ರದ ವಾದವೇನು?:
ಸಲಿಂಗ ವಿವಾಹವು ಈಗಾಗಲೇ ಇರುವ ವೈಯಕ್ತಿಕ ಕಾನೂನುಗಳು ಹಾಗೂ ಸಾಮಾನ್ಯವಾಗಿ ಎಲ್ಲರಿಂದಲೂ ಸ್ವೀಕೃತಿಗೆ ಒಳಗಾಗಿರುವ ಸಾಮಾಜಿಕ ಮೌಲ್ಯಗಳ ನಡುವಿನ ಸಮತೋಲನವನ್ನೇ ಅಲ್ಲಾಡಿಸಲಿದೆ ಎಂದು ಅಫಿಡವಿಟ್‌ನಲ್ಲಿ (Affidavit) ಕೇಂದ್ರ ವಾದಿಸಿದೆ.
ಸಲಿಂಗ ವಿವಾಹ ವಿರೋಧಿಸಿ ಅಲ್ಪಸಂಖ್ಯಾತ ಸಮುದಾಯದ ಪತ್ರ, ಕೇಂದ್ರದ ನಿರ್ಧಾರಕ್ಕೆ ಬೆಂಬಲ!
ಸಲಿಂಗ ವಿವಾಹಕ್ಕೆ ಅನುಮೋದನೆ ನೀಡುವುದು ನಾಗರಿಕರ ಹಿತಾಸಕ್ತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದೇ ಇರುವುದು ತಾರತಮ್ಯವಲ್ಲ. ಏಕೆಂದರೆ ಎಲ್ಲ ಧರ್ಮಗಳಲ್ಲಿ ಮದುವೆಗಳಂತಹ ಸಾಂಪ್ರದಾಯಿಕ ಮತ್ತು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಡುವ ಸಾಮಾಜಿಕ-ಕಾನೂನಾತ್ಮಕ ಸಂಬಂಧಗಳು ಆಳವಾಗಿ ಇವೆ. ಮದುವೆಯನ್ನು ಹಿಂದೂ ಕಾನೂನಿನ ಎಲ್ಲಾ ಶಾಖೆಗಳಲ್ಲಿ ಒಂದು ಸಂಸ್ಕಾರವೆಂದು ಪರಿಗಣಿಸಲಾಗಿದೆ. ಇಸ್ಲಾಂನಲ್ಲಿ(Islam) ಸಹ, ಇದು ಮಾಮೂಲಿ ಒಪ್ಪಂದವಾಗದೇ ‘ಪವಿತ್ರ ಒಪ್ಪಂದ’ವಾಗಿದೆ. ಮಾನ್ಯತೆ ಪಡೆದ ಮದುವೆಯು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ಮಾತ್ರ ನಡೆಯುತ್ತದೆ ಎಂದಿತು.
ಅರ್ಜಿಗಳು ಕೇವಲ ನಗರ ದೃಷ್ಟಿಕೋನ ಹೊಂದಿವೆ. ಸಂಸತ್ತಿಗೆ ಮಾತ್ರ ಈ ಕುರಿತು ನಿರ್ಣಯ ಕೈಗೊಳ್ಳಲು ಸಾಧ್ಯ. ಎಲ್ಲ ಗ್ರಾಮೀಣ, ಅರೆ-ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ವಿಶಾಲ ದೃಷ್ಟಿಕೋನಗಳು ಮತ್ತು ಧ್ವನಿಗಳನ್ನು ನಿರ್ಣಯಕ್ಕೂ ಮುನ್ನ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿತು.
ಸಲಿಂಗಿ ವಿವಾಹ ಕಾನೂನಿಗೆ ಅಲ್ಪಸಂಖ್ಯಾತರ ವಿರೋಧ; ರಾಷ್ಟ್ರಪತಿ, ಸಿಜೆಐಗೆ ಪತ್ರ