ಆಗ್ರಾ(ಅ.17): ಹಾಥ್ರಸ್‌ ಗ್ಯಾಂಗ್‌ ರೇಪ್‌ ಮತ್ತು ಹತ್ಯಾ ಪ್ರಕರಣದ ಆರೋಪಿಗಳ ಮನೆಗೆ ಶುಕ್ರವಾರ ಭೇಟಿ ನೀಡಿದ ಸಿಬಿಐ ತಂಡಕ್ಕೆ ‘ರಕ್ತಸಿಕ್ತ’ ಬಟ್ಟೆಪತ್ತೆಯಾಗಿದೆ. ಆದರೆ ಅವು ರಕ್ತವಲ್ಲ, ಕೆಂಪು ಬಣ್ಣವಿರುವ ಬಟ್ಟೆಗಳಷ್ಟೇ ಎಂದು ಆರೋಪಿ ಸಂಬಂಧಿಕರು ಹೇಳಿಕೊಂಡಿದ್ದಾರೆ.

ಪ್ರಕರಣ ನಡೆದು ಬಹುದಿನಗಳ ಬಳಿಕ ಶುಕ್ರವಾರ ನಾಲ್ವರು ಆರೋಪಿಗಳ ಮನೆಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಮನೆಯ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ತನಿಖೆಗೆ ಅಗತ್ಯವಿರುವ ಸಾಕಷ್ಟುಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಆರೋಪಿತರಲ್ಲೊಬ್ಬ ಲವ್‌ಕುಶ್‌ ಸಿಕರ್ವರ್‌ ಎಂಬಾತನ ಮನೆಯಲ್ಲಿ ‘ರಕ್ತಸಿಕ್ತ’ ಬಟ್ಟೆಪತ್ತೆಯಾಗಿದ್ದು, ಈ ಬಟ್ಟೆಯನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆದರೆ ರಕ್ತವಿರುವ ಬಟ್ಟೆಯಲ್ಲ. ಕೆಂಪು ಬಣ್ಣವಿರುವ ಬಟ್ಟೆಯಷ್ಟೆ. ರಕ್ತಸಿಕ್ತವಾದ ಯಾವುದೇ ಬಟ್ಟೆಪತ್ತೆಯಾಗಿಲ್ಲ ಎಂದು ಕುಟುಂಬಸ್ತರು ಹೇಳಿಕೊಂಡಿದ್ದಾರೆ. ಆರೋಪಿ ಸಹೋದರ ರವಿ ಎಂಬಾತ ಪೇಂಟ್‌ ತಯಾರಿಕಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಆತ ಬಳಸಿದ ಬಟ್ಟೆಅದಾಗಿದೆ ಎಂದು ಎನ್ನಲಾಗಿದೆ.