ಶತ್ರುವಿನ ಕಣ್ಣಿಗೆ ಬೀಳದ ನೌಕೆಯಿಂದಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ| 290 ಕಿ.ಮೀ. ದೂರ ತಲುಪುವ ಸೂಪರ್‌ಸಾನಿಕ್‌ ಕ್ಷಿಪಣಿ| ಚೀನಾ ಜತೆ ತಿಕ್ಕಾಟ ವೇಳೆಯೇ ಭಾರತದ ಬಲ ಪರೀಕ್ಷೆ

ನವದೆಹಲಿ(ಅ.19): ಗಡಿಯಲ್ಲಿ ಚೀನಾ ಜತೆಗೆ ಸಂಘರ್ಷದ ವಾತಾವರಣ ಇರುವಾಗಲೇ ಕ್ಷಿಪಣಿಗಳ ಪ್ರಯೋಗವನ್ನು ಮುಂದುವರಿಸಿರುವ ಭಾರತ, ಶತ್ರುಗಳ ಕಣ್ಣಿಗೆ ಕಾಣದ ಸ್ವದೇಶಿ ನಿರ್ಮಿತ ನೌಕೆಯೊಂದರಿಂದ ಭಾನುವಾರ ನೌಕಾ ಆವೃತ್ತಿಯ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಇದರಿಂದಾಗಿ ಹಿಂದು ಮಹಾಸಾಗರದತ್ತ ನೋಟ ಬೀರಿರುವ ಚೀನಾ ಎದುರು ಭಾರತದ ಕೈ ಮತ್ತೊಮ್ಮೆ ಮೇಲಾದಂತಾಗಿದೆ.

ಪ್ರಯೋಗ ಎಲ್ಲಿ?

ಅರಬ್ಬೀ ಸಮುದ್ರದಲ್ಲಿ ಈ ಪ್ರಯೋಗ ನಡೆದಿದ್ದು, ಐಎನ್‌ಎಸ್‌ ಚೆನ್ನೈ ನೌಕೆಯಿಂದ ಬ್ರಹ್ಮೋಸ್‌ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ. ಅದು ಅತ್ಯಂತ ಸಂಕೀರ್ಣ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕರಾರುವಾಕ್ಕಾಗಿ ತನ್ನ ಗುರಿಯನ್ನು ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕ್ಷಿಪಣಿ ಯಶಸ್ವಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಯಾವುದೀ ಕ್ಷಿಪಣಿ?

ಭಾರತ- ರಷ್ಯಾ ಜಂಟಿ ಸಹಭಾಗಿತ್ವದಲ್ಲಿ ಬ್ರಹ್ಮೋಸ್‌ ಹೆಸರಿನಲ್ಲಿ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಗಳನ್ನು ಉತ್ಪಾದಿಸುತ್ತಿವೆ. ಈಗಾಗಲೇ ಸಬ್‌ ಮರಿನ್‌, ಹಡಗು, ವಿಮಾನ ಅಥವಾ ನೆಲದಿಂದ ಉಡಾಯಿಸುವ ಕ್ಷಿಪಣಿಗಳ ಪ್ರಯೋಗ ನಡೆದಿದೆ. ಈಗಿನ ಕ್ಷಿಪಣಿಯು 290 ಕಿ.ಮೀ. ದೂರದಲ್ಲಿರುವ ಗುರಿಯನ್ನು ಹೊಡೆದುರುಳಿಸುತ್ತದೆ. ಶಬ್ದಕ್ಕಿಂತ 2.8 ಪಟ್ಟು ವೇಗವಾಗಿ ಸಾಗುತ್ತದೆ. 2016ರ ನವೆಂಬರ್‌ನಲ್ಲಿ ನೌಕಾಪಡೆಗೆ ಸೇರ್ಪಡೆಯಾಗಿರುವ ಐಎನ್‌ಎಸ್‌ ಚೆನ್ನೈ ನೌಕೆಯು 7500 ಟನ್‌ ತೂಕವಿದೆ. 16 ಬ್ರಹ್ಮೋಸ್‌ ಕ್ಷಿಪಣಿಗಳನ್ನು ಹೊಂದುವ ಸಾಮರ್ಥ್ಯ ಇದಕ್ಕಿದೆ.

ಭರ್ಜರಿ ಪ್ರಯೋಗ!

ಇತ್ತೀಚಿನ ದಿನಗಳಲ್ಲಿ ಭಾರತ ಸಾಲು ಸಾಲು ಕ್ಷಿಪಣಿಗಳನ್ನು ಪ್ರಯೋಗ ಮಾಡುತ್ತಿದೆ. 35 ದಿನಗಳಲ್ಲಿ ಶೌರ್ಯ, ರುದ್ರಂ 10 ಕ್ಷಿಪಣಿಗಳನ್ನು ಪರೀಕ್ಷೆ ಮಾಡಿ ಗಮನ ಸೆಳೆದಿತ್ತು.