ಶಾರ್ಜಾ[ನ.15]: ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ಶಾರ್ಜಾದಲ್ಲಿ ವಾಸವಾಗಿರುವ ಬೆಂಗಳೂರು ಮಹಿಳೆಯೋರ್ವಳು ತನ್ನ ಮೇಲೆ ಪತಿ ಕ್ರೂರವಾಗಿ ಹಲ್ಲೆ ನಡೆಸುತ್ತಿದ್ದು, ಸಹಾಯ ಮಾಡಿ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ಗೆ ತಕ್ಷಣವೇ ಸ್ಪಂದಿಸಿರುವ ಶಾರ್ಜಾ ಪೊಲೀಸರು, ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಜಾಸ್ಮೀನ್‌ ಸುಲ್ತಾನ್‌ ಎಂಬ ಮಹಿಳೆಯೇ ಹಲ್ಲೆಗೊಳಗಾದವಳು. ಈಗೆ ಬೆಂಗಳೂರಿನ ಶಿವಾಜಿನಗರದ ಮೂಲದವಳು. ಮದುವೆ ಬಳಿಕ ಶಾರ್ಜಾಗೆ ತೆರಳಿ ಅಲ್ಲಿಯೇ ಪತಿ ಜತೆ ತಂಗಿದ್ದಳು.

ನ.12 ರಂದು ಜಾಸ್ಮಿನ್‌ ಸುಲ್ತಾನ್‌ ಟ್ವೀಟ್‌ ಮಾಡಿ, ‘ನನ್ನ ಪತಿ ಮಹಮದ್‌ ಖಾಜಿರ್‌ ಉಲ್ಲಾ ನಿತ್ಯ ಹಲ್ಲೆ ಮಾಡುತ್ತಿದ್ದಾನೆ. ಇದನ್ನು ಸಹಿಸಲು ಕಷ್ಟವಾಗಿದೆ. ‘ಪತಿ ಮಹಮದ್‌ ತನ್ನ ಪಾಸ್‌ಪೋರ್ಟ್‌, ಹಣ, ಒಡವೆಗಳನ್ನು ನನ್ನ ವಶಕ್ಕೆ ಪಡೆದಿದ್ದಾನೆ. ಇಲ್ಲಿಯ ಸಂಬಂಧಿಕರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಭಾರತಕ್ಕೆ ತೆರಳಲು ಸಹಾಯ ಮಾಡಿ’ ಎಂದು ಕಣ್ಣಲ್ಲಿ ರಕ್ತ ಸುರಿಯುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಅಲ್ಲದೇ ‘ನನಗೆ ಸಹಾಯ ಮಾಡಿ’ ಎಂದು ಬೇಡಿಕೊಂಡಿದ್ದಳು. ಈ ಟ್ವೀಟ್‌ಗೆ 37 ಸಾವಿರ ನೆಟ್ಟಿಗರು ಪ್ರತಿಕ್ರಿಯಿಸಿದ್ದರು. ಅಲ್ಲದೇ ಯುಎಇ ಕಾನೂನು ವಿಭಾಗಕ್ಕೆ ಟ್ಯಾಗ್‌ ಮಾಡಿದ್ದರು.

ಇದೀಗ ಮಹಮದ್‌ನನ್ನು ಬಂಧಿಸಿರುವ ಪೊಲೀಸರು ಜಾಸ್ಮೀನ್‌ ಸುಲ್ತಾನ್‌ ಭಾರತಕ್ಕೆ ಮರಳಲು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಯುಎಇಯಲ್ಲಿನ ಭಾರತದ ರಾಯಭಾರ ಕಚೇರಿ ಕೂಡ ಜಾಸ್ಮೀನ್‌ ನೆರವಿಗೆ ಧಾವಿಸುವುದಾಗಿ ತಿಳಿಸಿದ್ದಾರೆ. ಬೆಂಗಳೂರು ಪೊಲೀಸರು ಕೂಡ ಟ್ವೀಟ್‌ ಮಾಡಿ, ಜಾಸ್ಮೀನ್‌ಗೆ ಬೆಂಗಳೂರಿನ ಬಂಧುಗಳ ವಿವರ ನೀಡಿ ಎಂದು ಕೋರಿ ಸಹಾಯಕ್ಕೆ ಧಾವಿಸಿದ್ದಾರೆ.