ನವದೆಹಲಿ[ಡಿ.19]: ‘ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ರಚನೆಯಾಗುವ ಟ್ರಸ್ಟ್‌ನಲ್ಲಿ ಬಿಜೆಪಿಯ ಯಾವ ಸದಸ್ಯರೂ ಇರುವುದಿಲ್ಲ. ಅಲ್ಲದೆ, ಸರ್ಕಾರವು ಮಂದಿರ ಕಟ್ಟಲು ಯಾವುದೇ ಹಣ ವಿನಿಯೋಗಿಸುವುದಿಲ್ಲ’ ಎಂದು ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಟೀವಿ ಚಾನೆಲ್‌ ಒಂದರ ಜತೆ ಮಾತನಾಡಿದ ಅವರು, ‘ಒಂದು ವಿಷಯವನ್ನು ನಾನು ಸ್ಪಷ್ಟಪಡಿಸುತ್ತೇನೆ. ರಾಮಮಂದಿರ ಟ್ರಸ್ಟ್‌ನಲ್ಲಿ ಯಾವ ಬಿಜೆಪಿ ಸದಸ್ಯರೂ ಇರುವುದಿಲ್ಲ ಮತ್ತು ಸರ್ಕಾರ ಈ ಯೋಜನೆಗೆ ಯಾವುದೇ ಖರ್ಚು ಮಾಡುವುದಿಲ್ಲ. ಟ್ರಸ್ಟ್‌ನವರೇ ಸಮಾಜದಿಂದ ಹಣ ಸಂಗ್ರಹಿಸಿ ಮಂದಿರ ನಿರ್ಮಾಣ ಮಾಡಬೇಕಾಗುತ್ತದೆ’ ಎಂದು ಹೇಳಿದರು.

ನಾಲ್ಕು ತಿಂಗಳಲ್ಲಿ ರಾಮಮಂದಿರ ನಿರ್ಮಾಣ : ಅಮಿತ್ ಶಾ

‘ಇತ್ತೀಚೆಗೆ ರಾಮಮಂದಿರ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್‌, ತೀರ್ಪು ಪ್ರಕಟವಾದ 3 ತಿಂಗಳೊಳಗೆ ಟ್ರಸ್ಟ್‌ ರಚನೆಯಾಗಬೇಕು ಎಂದು ಆದೇಶಿಸಿದೆ. ಅದು ನೀಡಿರುವ ಗಡುವಿನೊಳಗೆ ಟ್ರಸ್ಟ್‌ ರಚನೆಯಾಗುವ ನಂಬಿಕೆ ನನ್ನದು’ ಎಂದ ಶಾ, ‘ಮಂದಿರ ನಿರ್ಮಾಣದಲ್ಲಿ ಪಾಲ್ಗೊಂಡವರೇ ನಿರ್ಮಾಣ ಯಾವಾಗ ಮುಗಿಯಬೇಕು ಎಂಬುದನ್ನು ನಿರ್ಧರಿಸುತ್ತಾರೆ’ ಎಂದರು. ಇತ್ತೀಚೆಗೆ ಜಾರ್ಖಂಡ್‌ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ್ದ ಶಾ, ‘ಇನ್ನು 4 ತಿಂಗಳೊಳಗೆ ರಾಮಮಂದಿರ ನಿರ್ಮಾಣ ಆರಂಭವಾಗಲಿದೆ’ ಎಂದಿದ್ದರು.

ಈ ನಡುವೆ, ವಿಶ್ವ ಹಿಂದೂ ಪರಿಷತ್ತು (ವಿಎಚ್‌ಪಿ) ಸಾರ್ವಜನಿಕರಿಂದ 100 ಕೋಟಿ ರು. ಕ್ರೋಡೀಕರಿಸಿ ಕೊಡುವ ಇರಾದೆ ಹೊಂದಿದೆ. ‘ಆದರೆ ಪರಿಷತ್ತು ಖುದ್ದಾಗಿ ಹಣ ಸಂಗ್ರಹಿಸುವುದಿಲ್ಲ. ಜನರಿಗೆ ಹಣ ನೀಡುವಂತೆ ಕರೆ ನೀಡಲಿದೆ. ಮಂದಿರ ನಿರ್ಮಾಣ ಕಾರ್ಯವನ್ನು ಹಾಗೂ ನಿರ್ಮಾಣವಾದ ನಂತರದ ಮಂದಿರದ ಕೆಲಸ-ಕಾರ್ಯಗಳನ್ನು ಟ್ರಸ್ಟೇ ನಿರ್ವಹಿಸಲಿದೆ. ಇದರಲ್ಲಿ ವಿಎಚ್‌ಪಿ ಪಾತ್ರ ಇರುವುದಿಲ್ಲ’ ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಆಲೋಕ್‌ ಕುಮಾರ್‌ ಹೇಳಿದ್ದಾರೆ.

‘ರಾಮಮಂದಿರ ನಿರ್ಮಾಣಕ್ಕೆ ಪ್ರತೀ ಕುಟುಂಬ 11 ರುಪಾಯಿ, ಒಂದು ಕಲ್ಲು ಕೊಡಿ’