21 ಸರ್ಕಾರಿ ಶಾಲಾ ಮಕ್ಕಳ ಮೇಲೆ 8 ವರ್ಷಗಳ ಕಾಲ ಬಲತ್ಕಾರ ಮಾಡಿದ್ದ ವಾರ್ಡನ್‌ಗೆ ಗಲ್ಲು
21 ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಸರ್ಕಾರಿ ವಿದ್ಯಾರ್ಥಿನಿಲಯದ ವಾರ್ಡನ್ ಒಬ್ಬನಿಗೆ ಅರುಣಾಚಲ ಪ್ರದೇಶದ ವಿಶೇಷ ನ್ಯಾಯಾಲಯವೊಂದು ಗಲ್ಲುಶಿಕ್ಷೆ ವಿಧಿಸಿದೆ.
ಗುವಾಹಟಿ (ಸೆ.27): 21 ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಸರ್ಕಾರಿ ವಿದ್ಯಾರ್ಥಿನಿಲಯದ ವಾರ್ಡನ್ ಒಬ್ಬನಿಗೆ ಅರುಣಾಚಲ ಪ್ರದೇಶದ ವಿಶೇಷ ನ್ಯಾಯಾಲಯವೊಂದು ಗಲ್ಲುಶಿಕ್ಷೆ ವಿಧಿಸಿದೆ. ಇದು ಪೋಕ್ಸೋ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿದ ಮೊದಲ ಪ್ರಕರಣವಾಗಿದೆ ಎಂದು ಸಂತ್ರಸ್ತರ ಪರ ವಕೀಲರು ಹೇಳಿದ್ದಾರೆ.
ವಾರ್ಡನ್ ಯಮ್ಕೇನ್ ಬಾಗ್ರಾ ಎಂಬಾತನಿಗೆ ಅರುಣಾಚಲ ಪ್ರದೇಶದ ವಿಶೇಷ ನ್ಯಾಯಾಲಯದ ಜಡ್ಜ್ ಜವೇಪ್ಲು ಚಾಯ್ ಗಲ್ಲುಶಿಕ್ಷೆ ವಿಧಿಸಿದ್ದಾರೆ. ಹಾಗೆಯೇ, ಹಾಸ್ಟೆಲ್‌ಗೆ ಸಂಬಂಧಿಸಿದ ಶಾಲೆಯ ಮಾಜಿ ಹೆಡ್‌ಮಾಸ್ಟರ್ ಸಿಂಗ್‌ಟುಂಗ್ ಯೋರ್ಪೆ ಹಾಗೂ ಹಿಂದಿ ಶಿಕ್ಷಕ ಮಾರ್ಬೋ ನಗೋಮ್ದಿರ್ ಎಂಬುವರಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಇವರ ವಿರುದ್ಧ ಅತ್ಯಾಚಾರಕ್ಕೆ ಸಹಕರಿಸಿದ ಹಾಗೂ ತಮಗೆ ವಿಷಯ ತಿಳಿದಿದ್ದರೂ ವರದಿ ಮಾಡದೆ ಇದ್ದ ಆರೋಪವಿತ್ತು.]
ಅತ್ಯಾಚಾರಿಗಳಿಗೆ 10 ದಿನದಲ್ಲಿ ಗಲ್ಲು ಶಿಕ್ಷೆ, ಆ್ಯಂಟಿ ರೇಪ್ ಬಿಲ್ ಪಾಸ್ ಮಾಡಿದ ಬಂಗಾಳ ಸರ್ಕಾರ!
8 ವರ್ಷಗಳ ಕಾಲ ಅತ್ಯಾಚಾರ:
ಆರೋಪಿ ವಾರ್ಡನ್ 2014ರಿಂದ 2022ರ ವರೆಗೆ ಸರ್ಕಾರಿ ಹಾಸ್ಟೆಲ್‌ನ 21 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ್ದ. 2022ರಲ್ಲಿ ಪ್ರಕರಣ ಬೆಳಕಿಗೆ ಬಂದು, ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು. ತನ್ನ 12 ವರ್ಷದ ಅವಳಿ ಹೆಣ್ಣುಮಕ್ಕಳ ಮೇಲೆ ವಾರ್ಡನ್ ಅತ್ಯಾಚಾರ ಎಸಗಿದ್ದಾನೆಂದು ತಂದೆಯೊಬ್ಬ ನೀಡಿದ ದೂರಿನನ್ವಯ ತನಿಖೆ ನಡೆದಿತ್ತು. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಲ್ಲಿ ಆರು ಗಂಡುಮಕ್ಕಳೂ ಸೇರಿದ್ದಾರೆ. ಸಂತ್ರಸ್ತರಲ್ಲಿ ಆರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಎಸ್‌ಐಟಿ ತನ್ನ ಆರೋಪಪಟ್ಟಿಯಲ್ಲಿ ಹೇಳಿತ್ತು.
ಪೋಕ್ಸೋ ಕೇಸ್‌ನಲ್ಲಿ ಗಲ್ಲು:
‘ಆರೋಪಿ ಬಾಗ್ರಾ ವಿರುದ್ಧ ಐಪಿಸಿಯ 328, 292 ಹಾಗೂ 506 ಮತ್ತು ಪೋಕ್ಸೋ ಕಾಯ್ದೆಯ 6, 10 ಮತ್ತು 12ನೇ ಸೆಕ್ಷನ್‌ನಡಿ ಅಪರಾಧ ಸಾಬೀತಾಗಿದೆ. ಇದು ಪೋಕ್ಸೋ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿದ ದೇಶದ ಮೊದಲ ಪ್ರಕರಣವಾಗಿದೆ’ ಎಂದು ಮಕ್ಕಳ ಪರ ವಾದಿಸಿದ ವಕೀಲ ಓಯಂ ಬಿಂಗೆಪ್ ತಿಳಿಸಿದ್ದಾರೆ.
20 ವರ್ಷಗಳ ಜೈಲುಶಿಕ್ಷೆಗೆ ಒಳಗಾದ ಹೆಡ್‌ಮಾಸ್ಟರ್ ಮತ್ತು ಹಿಂದಿ ಶಿಕ್ಷಕರು ತಮ್ಮ ಶಾಲೆಯ ಹೆಸರು ಹಾಳಾಗುತ್ತದೆ ಎಂಬ ಕಾರಣಕ್ಕೆ ಸಂತ್ರಸ್ತರಿಗೆ ಸುಮ್ಮನಿರಲು ಹೇಳಿದ ಆರೋಪ ಎದುರಿಸುತ್ತಿದ್ದರು.