ವಿಜಯವಾಡ[ಜ.21]: ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ, ವಿಧಾನಸಭೆಯಲ್ಲಿ ಅಂಗೀಕರಿಸುತ್ತಿರುವ ಮಸೂದೆಗಳಿಗೆಲ್ಲಾ ತಡೆ ನೀಡುತ್ತಿರುವ ಟಿಡಿಪಿ ಬಹುಮತ ಹೊಂದಿರುವ ರಾಜ್ಯ ವಿಧಾನಪರಿಷತ್‌ನ ನಿರ್ಧಾರಗಳಿಂದ ಸಿಟ್ಟಿಗೆದ್ದಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ್‌ ರೆಡ್ಡಿ, ಇದೀಗ ವಿಧಾನ ಪರಿಷತ್‌ ಅನ್ನೇ ರದ್ದುಪಡಿಸಲು ನಿರ್ಧರಿಸಿದ್ದಾರೆ.

ಈ ಕುರಿತು ಅವರು ಈಗಾಗಲೇ ರಾಜ್ಯದ ಕಾನೂನು ಇಲಾಖೆಗೆ ಸೂಚನೆ ನೀಡಿದ್ದು, ಕಾನೂನು ಇಲಾಖೆ ಕೂಡಾ 58 ಸದಸ್ಯಬಲದ ವಿಧಾನ ಪರಿಷತ್‌ ಅನ್ನೇ ರದ್ದುಗೊಳಿಸುವ ಪ್ರಕ್ರಿಯೆಗೆ ಸಿದ್ಧತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

1 ರಾಜ್ಯ, 3 ರಾಜಧಾನಿ: ಇದು ಜಗನ್‌ ಐಡಿಯಾ

ಜಗನ್‌ ಸರ್ಕಾರ ಇತ್ತೀಚೆಗೆ ವಿಧಾನಸಭೆಯಲ್ಲಿ ಅಂಗೀಕರಿಸಿದ್ದ ಎಲ್ಲಾ ಶಾಲೆಗಳಲ್ಲಿ ಇಂಗ್ಲೀಷ್‌ ಮಾಧ್ಯಮ ಬೋಧನೆ ಕಡ್ಡಾಯ ಸೇರಿದಂತೆ ಹಲವು ಮಸೂದೆಗಳನ್ನು ವಿಧಾನ ಪರಿಷತ್‌ ತಿರಸ್ಕರಿಸಿದೆ. ಇನ್ನು ಟಿಡಿಪಿ ಕನಸಿನ ಅಮರಾವತಿ ರಾಜಧಾನಿ ಯೋಜನೆ ಕೈಬಿಟ್ಟು, 3 ಹೊಸ ರಾಜಧಾನಿ ರಚನೆಯ ಮಸೂದೆಯನ್ನು ಸೋಮವಾರ ಜಗನ್‌ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಇದಕ್ಕೂ ಕೂಡಾ ವಿಧಾನ ಪರಿಷತ್‌ನಲ್ಲಿ ವಿರೋಧ ಎದುರಾಗುವುದು ಖಚಿತ. ಹೀಗಾಗಿಯೇ ವಿಧಾನ ಪರಿಷತ್‌ ಅನ್ನೇ ರದ್ದುಪಡಿಸುವ ಮೂಲಕ ಎಲ್ಲಾ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸುವ ಇರಾದೆ ಜಗನ್‌ರದ್ದು ಎನ್ನಲಾಗಿದೆ.

2ನೇ ಬಾರಿ ರದ್ದು:

1958ರಲ್ಲಿ ಮೊದಲ ಬಾರಿಗೆ ವಿಧಾನ ಪರಿಷತ್‌ ರಚಿಸಲಾಗಿತ್ತು. ಈಗೇನಾದರೂ ವಿಧಾನ ಪರಿಷತ್‌ ರದ್ದಾದರೆ ಅದು 2ನೇ ಬಾರಿಯಾಗಲಿದೆ. ಈ ಹಿಂದೆ 1985ರಲ್ಲಿ ಟಿಡಿಪಿ ಅಧಿಕಾರಕ್ಕೆ ಬಂದಾಗ, ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಬಹುಮತ ಹೊಂದಿತ್ತು. ಹೀಗಾಗಿ ಎನ್‌.ಟಿ.ರಾಮರಾವ್‌ ಸರ್ಕಾರ ವಿಧಾನ ಪರಿಷತ್‌ ಅನ್ನೇ ರದ್ದು ಮಾಡಿತ್ತು. ಆದರೆ 2007ರಲ್ಲಿ ಜಗನ್‌ ಅವರ ತಂದೆ ವೈ.ಎಸ್‌.ರಾಜಶೇಖರ ರೆಡ್ಡಿ ಅವರು ಸಿಎಂ ಆಗಿದ್ದಾಗ ಮತ್ತೆ ವಿಧಾನ ಪರಿಷತ್‌ ಅನ್ನು ರಚಿಸಲಾಯಿತು. ಪ್ರಸಕ್ತ ಆಂಧ್ರ ವಿಧಾನ ಪರಿಷತ್‌ನಲ್ಲಿ ಟಿಡಿಪಿ 26 ಸದಸ್ಯ ಬಲ ಹೊಂದಿದೆ. ವೈಎಸ್‌ಆರ್‌ ಕಾಂಗ್ರೆಸ್‌ ಕೇವಲ 9 ಸ್ಥಾನ ಹೊಂದಿದೆ. ನಾಮ ನಿರ್ದೇಶಿತ ಸದಸ್ಯರ ಸಂಖ್ಯೆ 8 ಇದೆ. 3 ಸ್ಥಾನ ಖಾಲಿ ಇದೆ. ಇತರೆ ಪಕ್ಷಗಳು 12 ಸ್ಥಾನ ಹೊಂದಿವೆ.

ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಲು ಟಿಡಿಪಿ ನಾಯಕನ ಆಗ್ರಹ!