ಹತ ಅಮರಾವತಿ ಔಷಧ ವ್ಯಾಪಾರಿ, ಹಂತಕ ಇಬ್ಬರೂ Whatsapp ಗೆಳೆಯರು!
* ಹತ್ಯೆಗೀಡಾದ ಕೋಲ್ಹೆ ಸಹೋದರ ಉಮೇಶ್ ಹೇಳಿಕೆ
* ಇಬ್ಬರೂ ಒಂದೇ ವಾಟ್ಸಾಪ್ ಗ್ರುಪ್ ಸದಸ್ಯರಾಗಿದ್ದರು
* ಆ ಗ್ರುಪ್‌ನಲ್ಲೇ ನೂಪುರ್ ಬೆಂಬಲಿಸಿ ಉಮೇಶ್‌ನ ಪೋಸ್ಟ್
* ಇದರಿಂದ ಕೆರಳಿ ಉಮೇಶ್ ಹತ್ಯೆಯ ಶಂಕೆ
ಅಮರಾವತಿ(ಜು.04): ಉದಯಪುರ ಮಾದರಿಯಲ್ಲೇ ಹತ್ಯೆಗೀಡಾದ ಮಹಾರಾಷ್ಟ್ರದ ಅಮರಾವತಿಯ ಔಷಧ ವರ್ತಕ ಉಮೇಶ್ ಕೋಲ್ಹೆ ಹಾಗೂ ಅವರ ಹತ್ಯೆ ರೂವಾರಿ ಯೂಸುಫ್ ಖಾನ್ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದು, ಒಂದೇ ವಾಟ್ಸಾಪ್ ಗ್ರುಪ್‌ನ ಸದಸ್ಯರೂ ಆಗಿದ್ದರು ಎಂದು ಸಹೋದರ ಮಹೇಶ್ ಕೋಲ್ಹೆ ಭಾನುವಾರ ಹೇಳಿದ್ದಾರೆ.
‘ಹತ್ಯೆಯ ಆರೋಪದ ಮೇಲೆ ಬಂಧಿತನಾದ ಯೂಸುಫ್ ಖಾನ್ ಹಾಗೂ ಉಮೇಶ್ ಒಳ್ಳೆಯ ಸ್ನೇಹಿತರಾಗಿದ್ದರು. 2006ರಿಂದಲೂ ಪರಸ್ಪರ ಪರಿಚಯವಿತ್ತು. ಆದರೆ ಈಗ ಉಮೇಶ್ ಹತ್ಯೆ ಹಿಂದೆ ಯೂಸುಫ್ ಇರುವ ವಿಷಯ ಕೇಳಿ ಅಚ್ಚರಿ ಆಗಿದೆ’ ಎಂದು ಮಹೇಶ್ ಹೇಳಿದ್ದಾರೆ.
ಈ ಹಿಂದೆ ಉಮೇಶ್ ಅವರ ಔಷಧಿ ಅಂಗಡಿಯಲ್ಲೇ ಯೂಸುಫ್ ಖಾನ್ ಕೆಲಸ ಮಾಡುತ್ತಿದ್ದ. ಇಬ್ಬರೂ ಒಂದೇ ವಾಟ್ಸಾಪ್ ಗ್ರುಪ್‌ನಲ್ಲಿ ಸದಸ್ಯರಾಗಿದ್ದರು. ಇದೇ ವಾಟ್ಸಾಪ್ ಗ್ರುಪ್‌ನಲ್ಲಿ ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಉಮೇಶ್ ಪೋಸ್ಟ್‌ನ್ನು ಶೇರ್ ಮಾಡಿದ್ದರು ಎನ್ನಲಾಗಿದೆ. ಈ ಪೋಸ್ಟ್‌ನಿಂದ ಕೆರಳಿ ಕೋಲ್ಹೆಯನ್ನು ಜೂ. 21ರಂದು ಕತ್ತು ಸೀಳಿ ಕೊಲೆ ಮಾಡಲಾಗಿತ್ತು ಎಂದು ಶಂಕಿಸಲಾಗಿದೆ.
ಈ ಪ್ರಕರಣದಲ್ಲಿ ಯುಸೂಫ್ ಖಾನ್, ಮುದಸ್ಸೀರ್ ಅಹ್ಮದ್, ಶಾರುಖ್ ಪಠಾಣ, ಅಬ್ದುಲ್ ತೌಫೀಕ್, ಶೋಯೇಬ್ ಖಾನ್, ಅತಿಬ್ ರಶೀದ್ ಹಾಗೂ ಪ್ರಮುಖ ಸಂಚುಗಾರ ಇರ್ಫಾನ್ ಸೇರಿ ಒಟ್ಟು 7 ಜನರನ್ನು ಈವರೆಗೆ ಬಂಧಿಸಲಾಗಿದೆ.
ಕೋಲ್ಹೆ ಹತ್ಯೆ ಕೇಸು ಮುಚ್ಚಿ ಹಾಕಲು ಕಮಿಶ್ನರ್ ಯತ್ನ: ನವನೀತ್
ಅಮರಾವತಿಯ ಪೊಲೀಸ್ ಕಮಿಶ್ನರ್ ಆರತಿ ಸಿಂಗ್ ಉದಯಪುರ ಮಾದರಿಯಲ್ಲಿ ಹತ್ಯೆಗೀಡಾದ ಉಮೇಶ್ ಕೋಲ್ಹೆಯವರ ಹತ್ಯೆಯ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು’ ಎಂದು ಸ್ವತಂತ್ರ ಅಭ್ಯರ್ಥಿ ನವನೀತ್ ರಾಣಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಅವರ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಅಮರಾವತಿ ಪೊಲೀಸ್ ಕಮಿಷನರ್ ಉಮೇಶ್ ಹತ್ಯೆ ದರೋಡೆಯ ಉದ್ದೇಶದಿಂದ ಮಾಡಲಾಗಿದೆ ಎಂದು ಕೇಸನ್ನು ಮುಚ್ಚಿಹಾಕಲು ಪ್ರಯತ್ನಿಸಿದರು. ಹೀಗಾಗಿ ನಾವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದೆವು. ಅದಕ್ಕೆ ಸ್ಪಂದಿಸಿ ಅವರು ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿದ್ದಾರೆ’ ಎಂದು ರಾಣಾ ಹೇಳಿದ್ದಾರೆ.
‘ಕಮಿಷನರ್ ಹತ್ಯೆ ನಡೆದ 12 ದಿನ ಬಳಿಕ ಕೋಲ್ಹೆ ಹತ್ಯೆಯೂ ನೂಪುರ್ ಬೆಂಬಲಿಸಿ ಪೋಸ್ಟ್ ಮಾಡಿದ್ದಕ್ಕೆ ನಡೆದಿರಬಹುದು ಮಾಧ್ಯಮದ ಎದುರು ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧವೂ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ.