Asianet Suvarna News Asianet Suvarna News

ಗಲ್ಲು ಶಿಕ್ಷೆ ಜಾರಿ ಬಹಳ ಕಷ್ಟ ಏಕೆ? 20 ವರ್ಷದಲ್ಲಿ 4 ಜನರಿಗೆ ಮಾತ್ರ ಶಿಕ್ಷೆ ಜಾರಿ!

ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಆರೋಪಿಯು ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾದ ಬಳಿಕ ಆ ಅಪರಾಧವು ವಿರಳಾತಿವಿರಳ ಪ್ರಕರಣವಾಗಿದ್ದರೆ ಅಪರಾಧಿಗೆ ಸಾವಿನ ಶಿಕ್ಷೆ ನೀಡುವುದೇ ಮರಣದಂಡನೆ. ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮರಣದಂಡನೆಯು ಅತ್ಯುಗ್ರ ಶಿಕ್ಷೆ.

all you know about  capital punishment and reasons for delayed execution
Author
Bengaluru, First Published Dec 15, 2019, 1:07 PM IST

ಅಪರಾಧಿಗಳನ್ನು ಗಲ್ಲಿಗೇರಿಸುವ 10 ನೇಣು ಕುಣಿಕೆಗಳನ್ನು ತಯಾರಿಸುವಂತೆ ಬಿಹಾರದ ಬಕ್ಸರ್‌ ಜೈಲು ಸಿಬ್ಬಂದಿಗೆ ಸೂಚಿಸಲಾಗಿದೆ. ಇದರೊಂದಿಗೆ ನಿರ್ಭಯಾ ಮೇಲೆ ಅತ್ಯಾಚಾರ ಎಸಗಿದವರನ್ನು ಶೀಘ್ರವೇ ಗಲ್ಲಿಗೇರಿಸುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇತ್ತ ಆಂಧ್ರಪ್ರದೇಶ ಸರ್ಕಾರ ಅತ್ಯಾಚಾರಿಗಳಿಗೆ 21 ದಿನದ ಒಳಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಯಾವ ಅಪರಾಧಕ್ಕೆ ಮರಣ ದಂಡನೆ ವಿಧಿಸಬಹುದು, ಇಲ್ಲಿಯವರೆಗೆ ಎಷ್ಟುಜನರಿಗೆ ಈ ಶಿಕ್ಷೆ ನೀಡಲಾಗಿದೆ, ಕೊನೆಯ ಬಾರಿಗೆ ಗಲ್ಲಿಗೇರಿದವರು ಯಾರು, ಗಲ್ಲು ಶಿಕ್ಷೆ ಬಗ್ಗೆ ಜಗತ್ತಿನ ಅಭಿಪ್ರಾಯ ಏನು ಇತ್ಯಾದಿ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಮರಣ ದಂಡನೆ ಎಂದರೇನು?

ಕ್ರಿಮಿನಲ್‌ ಪ್ರಕರಣವೊಂದರಲ್ಲಿ ಆರೋಪಿಯು ನ್ಯಾಯಾಲಯದಲ್ಲಿ ಅಪರಾಧಿ ಎಂದು ಸಾಬೀತಾದ ಬಳಿಕ ಆ ಅಪರಾಧವು ವಿರಳಾತಿವಿರಳ ಪ್ರಕರಣವಾಗಿದ್ದರೆ ಅಪರಾಧಿಗೆ ಸಾವಿನ ಶಿಕ್ಷೆ ನೀಡುವುದೇ ಮರಣದಂಡನೆ. ಭಾರತೀಯ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮರಣದಂಡನೆಯು ಅತ್ಯುಗ್ರ ಶಿಕ್ಷೆ.

ಪೌರತ್ವ ತಿದ್ದುಪಡಿ ಮಸೂದೆ: ಅಸ್ಸಾಂ ಏಕೆ ಕೊತ ಕೊತ ಕುದಿಯುತ್ತಿದೆ?

ವಿರಳಾತಿ ವಿರಳ ಪ್ರಕರಣಗಳಲ್ಲಿ ಮಾತ್ರ ಗಲ್ಲು ಶಿಕ್ಷೆ ನೀಡಬಹುದು

ಭಾರತವು ಸ್ವಾತಂತ್ರ್ಯಾನಂತರವೂ 1861ರ ಭಾರತೀಯ ದಂಡ ಸಂಹಿತೆಯನ್ನು ಉಳಿಸಿಕೊಂಡಿದ್ದು, ಇದರನುಸಾರ ಮರಣದಂಡನೆಗೆ ಅವಕಾಶವಿದೆ. ಸಂವಿಧಾನ ರಚನೆ ವೇಳೆ ಈ ಶಿಕ್ಷೆಯನ್ನು ತೆಗೆದುಹಾಕುವ ಆಲೋಚನೆ ಇತ್ತು. ಆದರೆ ಸಂವಿಧಾನ ರಚನಾಕಾರರು ಕೊನೆಗೆ ಗಲ್ಲುಶಿಕ್ಷೆ ಉಳಿಸಿಕೊಳ್ಳಲು ನಿರ್ಧರಿಸಿದರು. ಅದಾದ 2 ದಶಕದ ಬಳಿಕವೂ ಮರಣ ದಂಡನೆ ತೆಗೆದುಹಾಕುವ ಬಗ್ಗೆ ಲೋಕಸಭೆಯಲ್ಲಿ ಖಾಸಗಿ ಮಸೂದೆ ಮಂಡಿಸಲಾಗಿತ್ತು. ಆದರೆ ಅದು ಪಾಸಾಗಲಿಲ್ಲ. 1980ರ ಬಚನ್‌ ಸಿಂಗ್‌ ಪ್ರಕರಣದಲ್ಲಿ ಮರಣದಂಡನೆಯನ್ನು ಅತ್ಯಂತ ವಿರಳಾತಿವಿರಳ ಪ್ರಕರಣಗಳಲ್ಲಿ ಮಾತ್ರ ನೀಡಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತು.

ಗಲ್ಲು ತಡೆಯುವ ಅಧಿಕಾರ ರಾಷ್ಟ್ರಪತಿಗೆ ಮಾತ್ರ

ಸಂವಿಧಾನದ 21ನೇ ಪರಿಚ್ಛೇದವು ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ ಎಂದು ಹೇಳುತ್ತದೆ. ಆದಾಗ್ಯೂ ಭಾರತದಲ್ಲಿ ಅತ್ಯಂತ ಗಂಭೀರವಾದ ಅಪರಾಧಗಳಿಗೆ ಮರಣದಂಡನೆ ನೀಡಲಾಗುತ್ತದೆ. ಆದರೆ, ರಾಷ್ಟ್ರಪತಿಗೆ ಮರಣದಂಡನೆಯನ್ನು ರದ್ದುಪಡಿಸಿ ಜೀವಾವಧಿ ಶಿಕ್ಷೆಗೆ ಇಳಿಸುವ ವಿಶೇಷ ಅಧಿಕಾರವಿದೆ. ಅಪರಾಧಿಗೆ ಸೆಷನ್ಸ್‌ ಕೋರ್ಟ್‌ ಮರಣ ದಂಡನೆ ವಿಧಿಸಿದರೆ ಬಳಿಕ ಹೈಕೋರ್ಟ್‌ನಲ್ಲಿ ಅಪೀಲು ಸಲ್ಲಿಸಬಹುದು.

ಅಲ್ಲೂ ಅದೇ ಶಿಕ್ಷೆ ಎತ್ತಿಹಿಡಿಯಲ್ಪಟ್ಟರೆ ಸುಪ್ರೀಂಕೋರ್ಟ್‌ನ ಮೊರೆ ಹೋಗಬಹುದು. ಸುಪ್ರೀಂಕೋರ್ಟ್‌ ಕೂಡ ಅದೇ ತೀರ್ಪನ್ನು ಎತ್ತಿ ಹಿಡಿದರೆ, ಸಂವಿಧಾನದ 72ನೇ ವಿಧಿಯನುಸಾರ ರಾಷ್ಟ್ರಪತಿ ಬಳಿ ಕ್ಷಮಾದಾನ ಕೋರಬಹುದು. ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಸಲಹೆ ಪಡೆದು ಕ್ಷಮಾದಾನ ನೀಡಬಹುದು ಅಥವಾ ನೀಡದಿರಬಹುದು. ಇಷ್ಟೆಲ್ಲಾ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ಮರಣದಂಡನೆ ವಿಧಿಸಲಾಗುತ್ತದೆ.

ಅಕ್ರಮ ವಲಸಿಗರಿಗೆಲ್ಲ ಆಶ್ರಯ ನೀಡುತ್ತಾ ಹೋಗಲು ಭಾರತವೇನು ಧರ್ಮಛತ್ರವೇ?

ಮರಣ ದಂಡನೆಯ ವಿಧಾನಗಳು

ಭಾರತದಲ್ಲಿ ಮುಖ್ಯವಾಗಿ ಎರಡು ರೀತಿಯಲ್ಲಿ ಮರಣ ದಂಡನೆ ವಿಧಿಸಲಾಗುತ್ತದೆ. ಅದರಲ್ಲಿ ಒಂದು ಗಲ್ಲು; ಸ್ವಾತಂತ್ರ್ಯ ಸಿಕ್ಕ ಬಳಿಕ ಮಹಾತ್ಮ ಗಾಂಧಿಯನ್ನು ಕೊಂದ ನಾತೂರಾಮ್‌ ಗೋಡ್ಸೆಯನ್ನು ಮೊಟ್ಟಮೊದಲಿಗೆ ಭಾರತದಲ್ಲಿ ಗಲ್ಲಿಗೇರಿಸಲಾಯಿತು. ಎರಡನೆಯದು ಶೂಟ್‌ ಮಾಡುವ ಮುಖಾಂತರ; 1950ರ ಆರ್ಮಿ ಕಾಯ್ದೆ ಪ್ರಕಾರ ಮಿಲಿಟರಿ ಕೋರ್ಟ್‌ಗಳು ಗಲ್ಲಿಗೇರಿಸಲು ಅಥವಾ ಗುಂಡು ಹೊಡೆದು ಸಾಯಿಸಲು ಆದೇಶ ನೀಡಬಹುದು. ಕೆಲ ವಿದೇಶಗಳಲ್ಲಿ ಹೊಡೆದು ಕೊಲ್ಲುವ ಅಥವಾ ವಿಷದ ಇಂಜೆಕ್ಷನ್‌ ನೀಡಿ ಕೊಲ್ಲುವ ಪದ್ಧತಿಗಳಿವೆ.

ಯಾವ ಅಪರಾಧಕ್ಕೆ ಗಲ್ಲು?

ಭಾರತದಲ್ಲಿ ಇಂಥದ್ದೇ ಅಪರಾಧಕ್ಕೆ ಗಲ್ಲು ಶಿಕ್ಷೆ ಎಂಬ ನಿಯಮವಿಲ್ಲ. ವಿರಳಾತಿವಿರಳ ಪ್ರಕರಣಗಳಲ್ಲಿ ಮಾತ್ರ ಈ ಶಿಕ್ಷೆ ವಿಧಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಹೀಗಾಗಿ ಅಪರಾಧದ ಭೀಕರತೆ ಆಧರಿಸಿ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ. ಕೊಲೆ, ಭಯೋತ್ಪಾದನೆ, ಅತ್ಯಾಚಾರ ಮತ್ತು ಕೊಲೆ, ಸಾಮೂಹಿಕ ಅತ್ಯಾಚಾರ ಮುಂತಾದ ಅಪರಾಧಗಳಿಗೆ ಗಲ್ಲು ಶಿಕ್ಷೆ ವಿಧಿಸಬಹುದು.

2018 ರಲ್ಲಿ ಕ್ರಿಮಿನಲ್‌ ಅಪರಾಧ ಕಾಯ್ದೆಗೆ ತಿದ್ದುಪಡಿ ತಂದು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದವರಿಗೆ ಗಲ್ಲು ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ. ಅಪಹರಣ, ದೇಶದ್ರೋಹ, ಮಿಲಿಟರಿ ಅಪರಾಧ ಮುಂತಾದ ಅಪರಾಧಗಳಿಗೂ ಗಲ್ಲು ಶಿಕ್ಷೆ ವಿಧಿಸಿದ ಉದಾಹರಣೆಗಳಿವೆ.

ಈವರೆಗೆ ಒಟ್ಟು 52 ಜನರಿಗೆ ಗಲ್ಲು

1947ರಿಂದೀಚೆಗೆ ಭಾರತದಲ್ಲಿ 52 ಜನರನ್ನು ಗಲ್ಲಿಗೇರಿಸಲಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳುತ್ತಿವೆ. ಆದರೆ ಪೀಪಲ್ಸ್‌ ಯೂನಿಯನ ಫಾರ್‌ ಸಿವಿಲ್‌ ಲಿಬರೇಶನ್‌ ನಡೆಸಿದ ಸಂಶೋಧನೆಯಲ್ಲಿ 1953ರಿಂದ 1963ರ ವರೆಗೆ 1422 ಜನರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ ಎನ್ನಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿವಾದ ಸೃಷ್ಟಿಸಿರುವುದು ಏಕೆ?

20 ವರ್ಷದಲ್ಲಿ 4 ಜನರಿಗೆ ಮಾತ್ರ ಶಿಕ್ಷೆ ಜಾರಿ!

ಭಾರತದಲ್ಲಿ ಮರಣ ದಂಡನೆಗೆ ಅವಕಾಶವೇನೋ ಇದೆ. ಆದರೆ ಅದು ಪರಿಣಾಮಕಾರಿಯಾಗಿ ಜಾರಿಯಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಮಾತ್ರ ‘ಇಲ್ಲ’ ಎಂಬುದೇ ಆಗಿದೆ. 2018ರ ಡಿಸೆಂಬರ್‌ ಕೊನೆಯವರೆಗೆ ಒಟ್ಟು 426 ಕೈದಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಇದರಲ್ಲಿ 1991ರಲ್ಲಿ ಅಂದರೆ 28 ವರ್ಷದ ಹಿಂದೆ ಗಲ್ಲು ಶಿಕ್ಷೆ ವಿಧಿಸಲ್ಪಟ್ಟವರೂ ಇದ್ದಾರೆ. ಕಳೆದ 20 ವರ್ಷದಲ್ಲಿ ಹೀಗೆ ಮರಣ ದಂಡನೆಗೆ ಗುರಿಯಾದವರಲ್ಲಿ ಕೇವಲ ನಾಲ್ಕು ಜನ ಮಾತ್ರ ಗಲ್ಲಿಗೇರಿದ್ದಾರೆ.

ಅವರು ಧನಂಜಯ ಚಟರ್ಜಿ (2004), ಮಹಮ್ಮದ್‌ ಅಜ್ಮಲ್‌ ಅಮಿರ್‌ ಖಾನ್‌ (2012), ಅಫ್ಜಲ್‌ ಗುರು (2013), ಯಾಕೂಬ್‌ ಮೆಮನ್‌ (2015). ಇವರಲ್ಲಿ ಒಬ್ಬ ಆತ್ಯಾಚಾರಿ. ಉಳಿದ ಮೂವರು ಭಯೋತ್ಪಾದಕರು. ಅಲ್ಲದೆ ಇತ್ತೀಚೆಗೆ ನ್ಯಾಯಾಂಗವು ಮರಣ ದಂಡನೆ ವಿಧಿಸುವ ಪ್ರಮಾಣ ಇಳಿಕೆಯಾಗಿದೆ. 2015ರಲ್ಲಿ ದೇಶಾದ್ಯಂತ ಇರುವ ಸೆಷನ್ಸ್‌ ಕೋರ್ಟ್‌ಗಳು 149 ಜನರಿಗೆ ಗಲ್ಲು ಶಿಕ್ಷೆ ವಿಧಿಸಿದ್ದರೆ, 2016ರಲ್ಲಿ ಆ ಸಂಖ್ಯೆ 109ಕ್ಕೆ ಇಳಿದಿದೆ.

2018 ರಲ್ಲಿ ಅತಿ ಹೆಚ್ಚು ಜನರಿಗೆ ಮರಣ ದಂಡನೆ

2018ರಲ್ಲಿ ಒಟ್ಟು 162 ಕೈದಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಅದರಲ್ಲಿ ಕೇವಲ 23 ಪ್ರಕರಣಗಳಲ್ಲಿ ಮಾತ್ರ ಹೈಕೋರ್ಟ್‌ ಶಿಕ್ಷೆಯನ್ನು ಖಚಿತಪಡಿಸಿದೆ. 2018ರಲ್ಲಿ ಸುಪ್ರೀಂಕೋರ್ಟ್‌ ಅಂಗಳಕ್ಕೆ 12 ಮರಣದಂಡನೆ ಪ್ರಕರಣಗಳು ತಲುಪಿವೆ. ಅದರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಮರಣ ದಂಡನೆ ಖಚಿತವಾಗಿದೆ. ಅದೇ ನಿರ್ಭಯಾ ಪ್ರಕರಣ. ಎರಡು ದಶಕಗಳಿಂದೀಚೆಗೆ ಅತಿ ಹೆಚ್ಚು ಜನರಿಗೆ ಮರಣದಂಡನೆ ವಿಧಿಸಿದ ಮೊದಲ ವರ್ಷ ಇದು. ಅದರಲ್ಲಿ 22 ಕೇಸುಗಳು ಮಧ್ಯಪ್ರದೇಶದವು, 16 ಮಹಾರಾಷ್ಟ್ರ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ತಲಾ 15 ಜನರಿಗೆ ಮರಣ ದಂಡನೆ ವಿಧಿಸಲಾಗಿತ್ತು.

ಗಲ್ಲಿಗೇರಿದ ಕೊನೆಯ ಅಪರಾಧಿ ಯಾರು?

1993ರ ಮುಂಬೈ ಸರಣಿ ಸ್ಫೋಟದ ರೂವಾರಿ ಯಾಕೂಬ್‌ ಮೆಮನ್‌. ಚಾರ್ಟರ್ಡ್‌ ಅಕೌಂಟೆಂಟ್‌ ಆಗಿದ್ದ ಯಾಕೂಬ್‌ ವಿರುದ್ಧ ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪವಿತ್ತು. ಸ್ಫೋಟದ ಬಳಿಕ ಯಾಕೂಬ್‌ ತನ್ನ ಕುಟುಂಬದೊಂದಿಗೆ ತಲೆಮರೆಸಿಕೊಂಡಿದ್ದ.

ಕೆಲ ಕಾಲ ಪಾಕಿಸ್ತಾನದಲ್ಲಿದ್ದ, ಬಳಿಕ ಮುಂಬೈಗೆ ಮರಳಿದ್ದ. ಆನಂತರ ಈತನ ಬಂಧನವಾಗಿತ್ತು. ಟಾಡಾ ನ್ಯಾಯಾಲಯ 2007ರ ಜುಲೈ 27ರಂದು ಆತನಿಗೆ ಗಲ್ಲು ಶಿಕ್ಷೆ ಘೋಷಿಸಿತ್ತು. ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರು. ಬಳಿಕ 2015ರ ಜುಲೈ 30ರಂದು ಗಲ್ಲಿಗೇರಿಸಲಾಯಿತು.

ಬಿಹಾರದ ಬಕ್ಸರ್‌ನಿಂದಲೇ ಹಗ್ಗ ತರುವುದೇಕೆ?

ಬಿಹಾರದಲ್ಲಿರುವ ಬಕ್ಸರ್‌ ಜೈಲು ನೇಣು ಕುಣಿಕೆ ತಯಾರಿಕೆಗೆ ದೇಶದಲ್ಲೇ ಹೆಸರುವಾಸಿ. ಇದೀಗ ಬಕ್ಸರ್‌ ಜೈಲು ಮತ್ತೆ ಸುದ್ದಿಯಲ್ಲಿದೆ. ಬಿಹಾರದ ಬಕ್ಸರ್‌ ಜಿಲ್ಲೆಯಲ್ಲಿರುವ ಕೇಂದ್ರೀಯ ಕಾರಾಗೃಹಕ್ಕೆ 10 ಮರಣ ದಂಡನೆಯ ಕುಣಿಕೆ ಹಗ್ಗ ಸಿದ್ಧಪಡಿಸಲು ಆದೇಶ ನೀಡಲಾಗಿದೆ. ಅಪರಾಧಿಗಳನ್ನು ಗಲ್ಲಿಗೇರಿಸುವ ಹಗ್ಗಗಳ ತಯಾರಿಕೆಯಲ್ಲಿ ಬಕ್ಸರ್‌ ಜೈಲಿನ ಸಿಬ್ಬಂದಿ ಪರಿಣತರಾಗಿದ್ದಾರೆ. ಈ ನೇಣು ಹಗ್ಗವನ್ನು ಕೈಯಿಂದಲೇ ತಯಾರಿಸಲಾಗುತ್ತದೆ. ಕಬ್ಬಿಣ ಮತ್ತು ಹಿತ್ತಾಳೆಯ ತಂತಿಗಳು ಅದರೊಳಗಿರುತ್ತವೆ.

ಕಬ್ಬಿಣ ಮತ್ತು ಹಿತ್ತಾಳೆಯ 152 ಎಳೆಗಳನ್ನು ಹೆಣೆದು ನಿಗದಿತ ಗಾತ್ರದ ಹಗ್ಗ ತಯಾರಿಸಲಾಗುತ್ತದೆ. ಇಂಥ ಸುಮಾರು 7000 ಎಳೆಗಳು ಒಂದು ಹಗ್ಗದಲ್ಲಿರುತ್ತವೆ. ಒಂದು ಹಗ್ಗ ತಯಾರಿಕೆಗೆ ಸುಮಾರು 5-6 ಕಾರ್ಮಿಕರು 3 ದಿನಗಳ ಕಾಲ ದುಡಿಯಬೇಕಾಗುತ್ತದೆ. ಒಂದು ಕುಣಿಕೆಗೆ ಅಂದಾಜು 1,725 ರು. ಬೆಲೆ ಇರುತ್ತದೆ. ಈ ಹಗ್ಗಗಳು ದೀರ್ಘ ಕಾಲ ಬಾಳಿಕೆ ಬರುವುದಿಲ್ಲ. ಸಂಸತ್‌ ಭವನದ ಮೇಲೆ ದಾಳಿ ನಡೆಸಿದ್ದ ಅಫ್ಜಲ್‌ ಗುರುವನ್ನು ಗಲ್ಲಿಗೇರಿಸಲು ಇಲ್ಲಿಂದಲೇ ಕುಣಿಕೆ ತರಿಸಲಾಗಿತ್ತು.

ಜಗತ್ತಿನಲ್ಲಿ ಎಲ್ಲೆಲ್ಲಿ ಮರಣ ದಂಡನೆ ಇದೆ?

ಆಮ್ನೆಸ್ಟಿಇಂಟರ್‌ನ್ಯಾಷನಲ್ ಎಂಬ ಸರ್ಕಾರೇತರ ಮಾನವ ಹಕ್ಕುಗಳ ಸಂಘಟನೆ ಪ್ರಕಾರ 2017ರಿಂದ 2018ರ ವರೆಗೆ ವಿಶ್ವದಾದ್ಯಂತ ದಾಖಲಾದ ಮರಣದಂಡನೆಗಳ ಸಂಖ್ಯೆಯಲ್ಲಿ 31% ಇಳಿಕೆ ಕಂಡುಬಂದಿದೆ. ಮತ್ತು ಕಳೆದ ವರ್ಷದ ಅಂತ್ಯದ ವೇಳೆಗೆ 106 ದೇಶಗಳು ಮರಣದಂಡನೆಯನ್ನು ರದ್ದುಗೊಳಿಸಿವೆ.

8 ದೇಶಗಳು ಸಾಮಾನ್ಯ ಅಪರಾಧಗಳಲ್ಲಿ ರದ್ದುಮಾಡಿವೆ. 58 ರಾಷ್ಟ್ರಗಳು ಇನ್ನೂ ಈ ಶಿಕ್ಷೆಯನ್ನು ಉಳಿಸಿಕೊಂಡಿವೆ. ಭಾರತದಲ್ಲಿ ಮರಣ ದಂಡನೆ ಶಿಕ್ಷೆಯು ಸಂವಿಧಾನದ ಮೂಲಭೂತ ಹಕ್ಕಾದ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ, ಹಾಗಾಗಿ ಯಾವುದೇ ಅಪರಾಧಕ್ಕೂ ಮರಣ ದಂಡನೆ ವಿಧಿಸುವುದು ಸರಿಯಲ್ಲ ಎಂದು ಆಗಾಗ ಚರ್ಚೆಯಾಗುತ್ತದೆ.

ಡಿಸೆಂಬರ್ 15ರ ಟಾಪ್ 10 ಸುದ್ದಾಗಾಗಿ ಇಲ್ಲಿ ಕ್ಲಿಕ್ ಮಾಡಿ: 

Follow Us:
Download App:
  • android
  • ios