ಅಮರಾವತಿ ( ನ. 07): ಸಂಪತ್ತಿನ ಆಸೆಗೆ 14 ವರ್ಷಗಳ ಅವಧಿಯಲ್ಲಿ ಪತಿ ಸೇರಿದಂತೆ ಕುಟುಂಬದ ಆರು ಮಂದಿಯನ್ನು ಸೈನೈಡ್‌ ಮಿಶ್ರಿತ ಆಹಾರ ನೀಡಿ ಹತ್ಯೆ ಮಾಡಿದ್ದ ಕೇರಳದ ‘ಸೈನೈಡ್‌ ಜಾಲಿ’ ಸಿಕ್ಕಿಬಿದ್ದ ಬೆನ್ನಲ್ಲೇ, ಆಂಧ್ರಪ್ರದೇಶದಲ್ಲಿ ಅದಕ್ಕಿಂತ ಕ್ರೂರ ಸೈನೈಡ್‌ ಸರಣಿ ಹಂತಕನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸೈನೈಡ್‌ ಪ್ರಸಾದ ಅಥವಾ ಔಷಧ ನೀಡಿ ಕಳೆದ 20 ತಿಂಗಳ ಅವಧಿಯಲ್ಲಿ 10 ಮಂದಿಯನ್ನು ಕೊಂದು, ಅವರಿಂದ ಹಣ-ಆಭರಣ ದೋಚಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಗೋದಾವರಿ ಜಿಲ್ಲೆಯ ವೆಂಕಟಾಪುರಂ ಗ್ರಾಮದ ವೆಲ್ಲಾಂಕಿ ಸಿಂಹಾದ್ರಿ ಅಲಿಯಾಸ್‌ ಶಿವ (38) ಎಂಬಾತನೇ ಖೆಡ್ಡಾಕ್ಕೆ ಬಿದ್ದವ. ಈತ ಸೈನೈಡ್‌ ಹತ್ಯೆಗಳಿಂದ 24.60 ಲಕ್ಷ ರು. ನಗದು ಹಾಗೂ 35.25 ತೋಲ ಬಂಗಾರವನ್ನು ಗಳಿಸಿದ್ದ. ಈ ರೀತಿ ಸಂಪಾದಿಸಿದ ಹಣದಲ್ಲಿ ನಿವೇಶನ ಖರೀದಿಸಿ, ಮನೆಯನ್ನೂ ಕಟ್ಟಿಸಿದ್ದ.

ಎರಡು ತಿಂಗಳ ಹಿಂದಷ್ಟೇ ಹೊಸ ಮನೆಗೆ ಪ್ರವೇಶಿಸಿದ್ದ ‘ಸೈನೈಡ್‌ ಶಿವ’ನಿಂದ ಪೊಲೀಸರು ಇದೀಗ 1.63 ಲಕ್ಷ ರು. ನಗದು ಹಾಗೂ ಒಂದಿಷ್ಟುಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈತನಿಗೆ ಸೈನೈಡ್‌ ಪೂರೈಕೆ ಮಾಡುತ್ತಿದ್ದ ಅಮೀನುಲ್ಲಾ ಬಾಬು (60) ಎಂಬಾತನನ್ನೂ ಬಂಧಿಸಿದ್ದಾರೆ.

ಆಪರೇಷನ್‌ ಹೇಗೆ?:

ವೃತ್ತಿಯಲ್ಲಿ ವಾಚ್‌ಮನ್‌ ಆಗಿದ್ದ ಸೈನೈಡ್‌ ಶಿವ ಬಳಿಕ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಅದರಲ್ಲಿ ನಷ್ಟಅನುಭವಿಸಿದ ಬಳಿಕ ಹಣ ಗಳಿಕೆಗಾಗಿ ಹತ್ಯೆ ಮಾಡಲು ಆರಂಭಿಸಿದ. ಈ ಕೊಲೆಗಳಿಗೆ ಆತ ಸೈನೈಡ್‌ಗಳನ್ನು ಬಳಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಹಣ ಡಬಲ್‌ ಮಾಡಿಕೊಡುವುದಾಗಿ ಅಥವಾ ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳಿಗೆ ಔಷಧ ನೀಡುವುದಾಗಿ ಜನರನ್ನು ನಂಬಿಸುತ್ತಿದ್ದ. ಬಳಿಕ ಅವರನ್ನು ಏಕಾಂಗಿಯಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯುತ್ತಿದ್ದ. ಹಣ ಡಬಲ್‌ ಆಗಬೇಕು ಎಂದು ಬಯಸುವವರಿಗೆ ಹಣ ತರುವಂತೆ ಹಾಗೂ ಆಭರಣ ಧರಿಸಿಕೊಂಡು ಬರುವಂತೆ ಮೊದಲೇ ಹೇಳುತ್ತಿದ್ದ. ಬಂದ ಕೂಡಲೇ ಪ್ರಸಾದವನ್ನು ನೀಡಿ, ಅದನ್ನು ಸೇವಿಸಲು ಹೇಳುತ್ತಿದ್ದ. ಮೊದಲೇ ಸೈನೈಡ್‌ ಬೆರೆಸಿದ್ದ ಪ್ರಸಾದ ಅದಾಗಿರುತ್ತಿತ್ತು. ತಿಂದವರು ಕೂಡಲೇ ಮರಣ ಹೊಂದುತ್ತಿದ್ದರು.

ಅದೇ ರೀತಿ ಕಾಯಿಲೆಗೆ ಔಷಧಿ ಬೇಕು ಎನ್ನುವವರಿಗೆ ‘ಗಿಡಮೂಲಿಕೆ ಔಷಧ’ದಲ್ಲಿ ಸೈನೈಡ್‌ ಬೆರೆಸಿ ತಿನ್ನಿಸುತ್ತಿದ್ದ. ಅವರೂ ಸಾವನ್ನಪ್ಪುತ್ತಿದ್ದರು. ಈ ರೀತಿ ಹತ್ಯೆಗೀಡಾದವರಿಂದ ಹಣ- ಆಭರಣ ದೋಚಿ ಪರಾರಿಯಾಗುತ್ತಿದ್ದ. ನಿರ್ಜನ ಪ್ರದೇಶದಲ್ಲಿ ಶವ ಪತ್ತೆಯಾಗುತ್ತಿದ್ದರಿಂದ ಕುಟುಂಬದವರು ಇದೊಂದು ಸಾಮಾನ್ಯ ಸಾವು ಇರಬೇಕು ಎಂದು ಪರಿಗಣಿಸಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಇದು ಸರಣಿ ಹತ್ಯೆ ಎಂದು ಯಾರಿಗೂ ಅನುಮಾನ ಬಾರದಿರಲಿ ಎಂದು ಎರಡು ತಿಂಗಳಿಗೊಂದು ಹತ್ಯೆಯನ್ನು ಸೈನೈಡ್‌ ಶಿವ ನಡೆಸುತ್ತಿದ್ದ.

ಸಿಕ್ಕಿಬಿದ್ದದ್ದು ಹೇಗೆ?:

ಹಣ ಡಬಲ್‌ ಮಾಡಿಕೊಡುವುದಾಗಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರೊಬ್ಬರನ್ನು ಅ.6ರಂದು ಕರೆಸಿಕೊಂಡು ಕೊಂದು ಹಣದೊಂದಿಗೆ ಸೈನೈಡ್‌ ಶಿವ ಪರಾರಿಯಾಗಿದ್ದ. ಆದರೆ ಕಾಟಿ ನಾಗರಾಜು (49) ಎಂಬ ಆ ಶಿಕ್ಷಕಕನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಮನೆಯಿಂದ ಹೊರಹೋಗುವಾಗ 2 ಲಕ್ಷ ರು. ನಗದು ಹಾಗೂ 50 ಗ್ರಾಂ ಚಿನ್ನದೊಂದಿಗೆ ನಾಗರಾಜು ತೆರಳಿದ್ದರು ಎಂದು ಕುಟುಂಬ ವರ್ಗ ಹೇಳಿತ್ತು. ಅದರ ಆಧಾರದ ಮೇಲೆ ಪೊಲೀಸರು ಸಿಸಿಟೀವಿ ಹಾಗೂ ಮೊಬೈಲ್‌ ಕರೆ ವಿವರಗಳನ್ನು ಪರಿಶೀಲಿಸಿದಾಗ ನಾಗರಾಜು ಅವರು ಸೈನೈಡ್‌ ಶಿವನನ್ನು ಭೇಟಿಯಾಗಿರುವುದು ಪತ್ತೆಯಾಯಿತು. ‘ವಿಚಾರಣೆ’ ನಡೆಸಿದಾಗ ಇದು ತನ್ನ 10ನೇ ಕೊಲೆ ಎಂಬುದನ್ನು ಸೈನೈಡ್‌ ಶಿವ ಒಪ್ಪಿಕೊಂಡಿದ್ದಾನೆ.

2018ರ ಫೆಬ್ರವರಿಯಿಂದ ಪ್ರತಿ 2 ತಿಂಗಳಿಗೊಂದು ಕೊಲೆ ಮಾಡುತ್ತಾ ಬಂದಿರುವುದಾಗಿಯೂ ತಿಳಿಸಿದ್ದಾನೆ. ಹಣದಾಸೆಗಾಗಿ ಸ್ವಂತ ಅಜ್ಜಿ, ನಾದಿನಿ, ಆಶ್ರಮವೊಂದರ ಧಾರ್ಮಿಕ ಗುರುವನ್ನೂ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.