ನವದೆಹಲಿ(ಅ.01): 2019ರ ಸಾಲಿನಲ್ಲಿ ದೇಶಾದ್ಯಂತ ಒಟ್ಟಾರೆ 28,918 ಕೊಲೆ ಪ್ರಕರಣಗಳು ಜರುಗಿದ್ದು, ಈ ಪ್ರಕಾರ ದಿನಕ್ಕೆ ಸರಾಸರಿ 79 ಹತ್ಯೆ ಪ್ರಕರಣಗಳು ದಾಖಲಾದಂತಾಗಿದೆ ಎಂಬ ವಿಚಾರ ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ(ಎನ್‌ಸಿಆರ್‌ಬಿ) ಅಂಕಿಅಂಶಗಳಿಂದ ಬೆಳಕಿಗೆ ಬಂದಿದೆ. ಆದರೆ, ಕಳೆದ ವರ್ಷ ಅಂದರೆ 2018ಕ್ಕೆ ಹೋಲಿಸಿದರೆ ಕೊಲೆ ಪ್ರಕರಣಗಳಲ್ಲಿ ಈ ಬಾರಿ ಅತೀ ಕಡಿಮೆ ಶೇ.03ರಷ್ಟುಕುಸಿತ ದಾಖಲಾಗಿದೆ.

ಯಾವುದೋ ಕಾರಣದಿಂದ ಪ್ರಚೋದನೆ ಮತ್ತು ಉತ್ತೇಜಿತಗೊಂಡು ನಡೆದ ಕೊಲೆ ಪ್ರಕರಣಗಳ ಸಂಖ್ಯೆಯೇ ಅತಿಹೆಚ್ಚು 9516, ವೈಯಕ್ತಿಕ ದ್ವೇಷದಿಂದಾಗಿ 3833 ಹಾಗೂ ಹಣಕ್ಕಾಗಿ 2573 ಹತ್ಯೆಗಳು ನಡೆದಿವೆ ಎಂದು ವರದಿ ತಿಳಿಸಿದೆ.

ಇನ್ನು 2019ರಲ್ಲಿ 1,05,037 ಅಪಹರಣ ಪ್ರಕರಣಗಳಲ್ಲಿ 1,08,025 ಜನರನ್ನು ಅಪಹರಣ ಮಾಡಲಾಗಿದೆ. ಇದರಲ್ಲಿ ಪುರುಷರು 23,104 ಹಾಗೂ ಮಹಿಳೆಯರ ಸಂಖ್ಯೆ 84,921. ಈ ನಡುವೆ ಶೇ.66ರಷ್ಟುಮಕ್ಕಳು ಅಪಹರಣ ಪ್ರಕರಣಗಳ ಸಂತ್ರಸ್ತರು ಎಂಬ ಆತಂಕಕಾರಿ ಅಂಶ ಈ ವರದಿಯಲ್ಲಿ ಉಲ್ಲೇಖಿತವಾಗಿದೆ. ಮಾನವ ಕಳ್ಳಸಾಗಣೆಯಲ್ಲಿ ಸಿಲುಕಿದ್ದ ಮಕ್ಕಳು ಸೇರಿದಂತೆ ಒಟ್ಟು 6616 ಮಂದಿ ಪೈಕಿ 6571 ಸಂತ್ರಸ್ತರನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೆ, ಈ ಸಂಬಂಧ ದಾಖಲಾಗಿದ್ದ 2260 ಪ್ರಕರಣಗಳಲ್ಲಿ ಈ ಕಳ್ಳ ದಂಧೆಯಲ್ಲಿ ತೊಡಗಿದ್ದ 5128 ಮಂದಿಯನ್ನು ಬಂಧಿಸಲಾಗಿದೆ.