India@75: ರೈತರೇ ಸೈನಿಕರಾದ ಅಮರ ಸುಳ್ಯ ಸ್ವಾತಂತ್ರ್ಯ ಸಮರ
- ರೈತರೇ ಸೈನಿಕರಾದ ಅಮರ ಸುಳ್ಯ ಸ್ವಾತಂತ್ರ್ಯ ಸಮರ
-ಬೆಳ್ಳಾರೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನೇ ಜಪ್ತಿ ಮಾಡಿದ್ದ ರೈತರು
- ರೋಚಕ ಹೋರಾಟದ ಕುರುಹಾಗಿ ಉಳಿದಿರುವ ಬಂಗ್ಲೆಗುಡ್ಡೆ ಪರಿಸರ
ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವ ಮೊದಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರೇ ಬ್ರಿಟಿಷರ ವಿರುದ್ಧ ಶಸ್ತ್ರಸಜ್ಜಿತರಾಗಿ ಕಾದಾಡಿದ್ದರು. 1837ರಲ್ಲಿ ಬ್ರಿಟಿಷರ ಎದೆನಡುಗಿಸಿದ ಈ ಹೋರಾಟ ಇತಿಹಾಸದಲ್ಲಿ ಅಮರ ಸುಳ್ಯದ ಸ್ವಾತಂತ್ರ್ಯ ಸಮರ ಎಂದೇ ದಾಖಲಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿರುವ ಖಜಾನೆ ಮತ್ತು ಬಂಗ್ಲೆಗುಡ್ಡೆಗಳು ಈ ಹೋರಾಟದ ಕುರುಹುಗಳಾಗಿ ಉಳಿದಿವೆ.
ದಕ್ಷಿಣ ಕನ್ನಡದ ಸುಳ್ಯ ಮತ್ತು ಪುತ್ತೂರು ಕೆನರಾ ಪ್ರಾಂತ್ಯವಾಗುವವರೆಗೆ ರಾಜನಿಗೆ ವಸ್ತುಗಳ ರೂಪದಲ್ಲಿ ಕಂದಾಯ ಕಟ್ಟುವ ಪದ್ಧತಿ ಇತ್ತು. ಇದನ್ನು ಬದಿಗೊತ್ತಿ ಬ್ರಿಟಿಷರು ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಹಣದ ರೂಪದಲ್ಲಿ ಕಂದಾಯ ಕಟ್ಟುವಂತೆ ಕಟ್ಟಳೆ ಹೇರಿದ್ದು ಜನರನ್ನು ಹೈರಾಣು ಮಾಡಿತ್ತು. ಇದು ಆಡಳಿತದ ವಿರುದ್ಧ ದಂಗೆ ಏಳಲು ಪ್ರೇರಣೆಯಾಗಿತ್ತು.
ರೈತರೇ ಸೈನಿಕರಾದರು:
1837ರ ಎ.5ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧ ಸಾರುವ ಬಗ್ಗೆ ಪ್ರಭಾವಿ ಮುಖಂಡ ಕೆದಂಬಾಡಿ ರಾಮಯ್ಯ ಗೌಡ ತನ್ನ ವಿಶ್ವಾಸಾರ್ಹ ನಾಯಕರೊಂದಿಗೆ ಸಮಾಲೋಚಿಸಿ ನಿರ್ಧಾರಕ್ಕೆ ಬಂದಿದ್ದರು. ಬಲಿಷ್ಠ ವೈರಿಯನ್ನು ಎದುರಿಸಲು ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಗೆರಿಲ್ಲಾ ರೀತಿಯ ತಂತ್ರಗಾರಿಕೆ ರೂಪಿಸಿದ್ದರು. ಇದಕ್ಕಾಗಿ ದುರ್ಗಮವಾದ ಪೂಮಲೆ ಬೆಟ್ಟವನ್ನು ಸೂಕ್ತವಾಗಿ ಬಳಸಿಕೊಂಡು ಸಾಧಾರಣ ರೈತಾಪಿ ಜನರನ್ನು ಸೈನಿಕರನ್ನಾಗಿ ತರಬೇತುಗೊಳಿಸುತ್ತಿದ್ದರು.
ಒಂದು ಅಂದಾಜಿನ ಪ್ರಕಾರ ಸುಮಾರು ಎರಡು ಸಾವಿರದಷ್ಟುಸೈನಿಕರು ಸುಳ್ಯ ಸಮೀಪದ ಉಬರಡ್ಕ ಮಿತ್ತೂರಿನ ಮದುವೆಗದ್ದೆ ಎಂಬಲ್ಲಿ ಮಾ.3ರಂದು ಸೇರಿದ್ದರು.
ಮಾ.30ರಂದು ಕೆದಂಬಾಡಿ ರಾಮಯ್ಯ ಗೌಡರ ಮುಂದಾಳತ್ವದಲ್ಲಿ ಬೆಳ್ಳಾರೆಯಲ್ಲಿ 2000 ಸಶಸ್ತ್ರ ರೈತರು ಖಜಾನೆಯನ್ನು ವಶಪಡಿಸಿಕೊಳ್ಳುತ್ತಾರೆ. ಅದೇ ದಿನ ಒಂದು ತಂಡ ಕಾಸರಗೋಡು ಕಡೆಗೆ, ಮತ್ತೊಂದು ತಂಡ ಪುತ್ತೂರು ಕಡೆಗೆ, ಮಗದೊಂದು ತಂಡ ಮಡಿಕೇರಿ ಕಡೆಗೆ ಮುಂದುವರಿಯುತ್ತದೆ. ದಾರಿಯಲ್ಲಿ ಸಿಕ್ಕಿದ ಎಲ್ಲ ಸರ್ಕಾರಿ ಕಚೇರಿಗಳನ್ನು, ಖಜಾನೆಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತಾ, ವಿರೋಧಿಸಿದವರನ್ನು ಸೆರೆ ಹಿಡಿಯುತ್ತಾ ತಮ್ಮ ಕಡೆಯ ಅಧಿಕಾರಿಗಳನ್ನು ನೇಮಿಸುತ್ತಾ ಮುಂದುವರಿಯುತ್ತಾರೆ.
ಕಾಸರಗೋಡು, ಕುಂಬ್ಳೆ, ಮಂಜೇಶ್ವರದ ಮೂಲಕ ತೆರಳಿದ್ದ ರೈತರು ಕೊನೆಯದಾಗಿ ಮಂಗಳೂರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ಸುಮಾರು 2 ವಾರಗಳ ಕಾಲ ಅವಿಭಜಿತ ಜಿಲ್ಲೆಯನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಅವಮಾನಕ್ಕೊಳಗಾದ ಬ್ರಿಟಿಷರು ಮುಂಬೈನಿಂದ ದೊಡ್ಡ ಸೈನ್ಯ ತರಿಸಿ ರೈತರನ್ನು ಸೋಲಿಸುತ್ತಾರೆ.
ಅಮರ ಕ್ರಾಂತಿ ಹೋರಾಟದ ಕುರುಹಾಗಿ ಖಜಾನೆ ಮತ್ತು ಬಂಗಲೆ ಈಗಲೂ ಬೆಳ್ಳಾರೆಯಲ್ಲಿದೆ. ಇಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯುತ್ತಿದೆ. ಇಲ್ಲಿ ಅಮರ ಸ್ಮಾರಕ ಸೌಧ ಮಾಡುವುದಾಗಿ ಸಚಿವರು ಈಗಾಗಲೇ ಘೋಷಿಸಿದ್ದು, ಈ ದಿಕ್ಕಿನಲ್ಲಿ ಪ್ರಯತ್ನಗಳು ನಡೆಯುತ್ತಿದೆ.
ತಲಪುವುದು ಹೇಗೆ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಕ್ಕೆ ಬೆಂಗಳೂರು, ಮೈಸೂರು, ಮಂಗಳೂರುಗಳಿಂದ ಬಸ್ ಸೌಕರ್ಯ ಇದೆ. ಸುಳ್ಯದಿಂದಬೆಳ್ಳಾರೆ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಹೋಗುವಾಗ ಈ ಬಂಗ್ಲೆಗುಡ್ಡೆ ಪರಿಸರ ಸಿಗುತ್ತದೆ. ಈ ಸ್ಥಳ ಸುಳ್ಯದಿಂದ 12 ಕಿ.ಮೀ. ದೂರವಿದೆ.
- ದುರ್ಗಾಕುಮಾರ್ ನಾಯರ್‌ಕೆರೆ