ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ: ಫೈನಲ್‌ಗೆ ಲಗ್ಗೆಯಿಟ್ಟ ಭಾರತ ಹಾಕಿ ತಂಡ
ಹಾಲಿ ಚಾಂಪಿಯನ್ ಭಾರತ ಪುರುಷರ ಹಾಕಿ ತಂಡವು ಏಷ್ಯಾ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ಕೊರಿಯಾವನ್ನು ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟಿದೆ. ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪಡೆ ಪ್ರಶಸ್ತಿಗಾಗಿ ಚೀನಾ ಎದುರು ಕಾದಾಡಲಿದೆ
ಹುಲುನ್‌ಬ್ಯುರ್(ಚೀನಾ): ಹಾಲಿ ಚಾಂಪಿಯನ್ ಭಾರತ ಏಷ್ಯಾ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿದೆ. ಸೋಮವಾರ ನಡೆದ ಸೆಮಿಫೈನಲ್‌ನಲ್ಲಿ 2021ರ ಚಾಂಪಿಯನ್ ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳ ಅಧಿಕಾರಯುತ ಗೆಲುವು ಸಾಧಿಸಿತು. ಟೂರ್ನಿಯಲ್ಲಿ ಸತತ 6 ಗೆಲುವುಗಳನ್ನು ಸಾಧಿಸಿರುವ ಭಾರತ, ಇನ್ನೊಂದು ಗೆಲುವಿನೊಂದಿಗೆ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಎದುರು ನೋಡುತ್ತಿದೆ.
ನಿರೀಕ್ಷೆಯಂತೆಯೇ ಭಾರತ, ಕೊರಿಯಾ ವಿರುದ್ಧ ಮೇಲುಗೈ ಸಾಧಿಸಿತು. 13ನೇ ನಿಮಿಷದಲ್ಲೇ ಉತ್ತಮ್ ಸಿಂಗ್ ಆಕರ್ಷಕ ಫೀಲ್ಡ್ ಗೋಲು ಬಾರಿಸುವ ಮೂಲಕ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ನಾಯಕ ಹರ್ಮನ್‌ಪ್ರೀತ್ ಸಿಂಗ್ 19ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು.
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಇಂದು ಭಾರತ vs ದಕ್ಷಿಣ ಕೊರಿಯಾ ಸೆಮೀಸ್
ಮೊದಲಾರ್ಧವನ್ನು ಉತ್ತಮವಾಗಿ ಮುಗಿಸಿದ ಭಾರತ, ದ್ವಿತೀಯಾರ್ಧದ ಆರಂಭದಲ್ಲೇ ತನ್ನ 3ನೇ ಗೋಲು ದಾಖಲಿಸಿತು. ಜರ್ಮನ್‌ಪ್ರೀತ್ ಸಿಂಗ್‌ರ ಮನಮೋಹಕ ಗೋಲು, ತಂಡದ ಮುನ್ನಡೆಯನ್ನು 3-0ಗೆ ಹೆಚ್ಚಿಸಿದ್ದಲ್ಲದೇ, ಭಾರತದ ಗೆಲುವನ್ನೂ ಬಹುತೇಕ ಖಚಿತಪಡಿಸಿತು.
Team India storms into the final with a convincing 4-1 victory over Korea powered by some sharp finishing from Harmanpreet, Jarmanpreet, and Uttam Singh.
— Hockey India (@TheHockeyIndia) September 16, 2024
Up next, we face hosts China 🇨🇳 in the grand final tomorrow in the Mens Asian Champions Trophy 2024
Lets win this one🏆💪🏻… pic.twitter.com/blZ8BxNYX7
ಮೊದಲಾರ್ಧದಲ್ಲಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಪರದಾಡಿದ್ದ ದಕ್ಷಿಣ ಕೊರಿಯಾ, ದ್ವಿತೀಯಾರ್ಧದಲ್ಲಿ ತಕ್ಕಮಟ್ಟಿಗೆ ಪ್ರತಿರೋಧ ತೋರಲು ಯಶಸ್ವಿಯಾಯಿತು. ಇದರ ಫಲವಾಗಿ, 33ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಯಾಂಗ್ ಜಿಹುನ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.
ಒಂದು ಗೋಲು ಬಿಟ್ಟುಕೊಟ್ಟರೂ, ಭಾರತ ಏನು ವಿಚಲಿತಗೊಳ್ಳಲಿಲ್ಲ. 45ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಂದು ಗೋಲು ಬಾರಿಸಿದರು. ಭಾರತ ನಿರಾಯಾಸವಾಗಿ ಜಯಭೇರಿ ಬಾರಿಸಿತು.
ಈತನೇ ಟೀಂ ಇಂಡಿಯಾ ನಿಜವಾದ ಆಸ್ತಿ ಎಂದು ಬಣ್ಣಿಸಿದ ಅಶ್ವಿನ್! ಆದ್ರೆ ಅದು ರೋಹಿತ್, ಕೊಹ್ಲಿ ಅಲ್ಲ!
ಪಾಕಿಸ್ತಾನವನ್ನು ಮಣಿಸಿ ಚೊಚ್ಚಲ ಫೈನಲ್‌ಗೆ ಚೀನಾ
ಸೋಮವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಶೂಟೌಟ್‌ನಲ್ಲಿ ಸೋಲಿಸಿದ ಆತಿಥೇಯ ಚೀನಾ, ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿತು. 60 ನಿಮಿಷಗಳ ಮುಕ್ತಾಯಕ್ಕೆ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿದ್ದವು. ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ಶೂಟೌಟ್‌ನಲ್ಲಿ ಚೀನಾ 2 ಗೋಲು ಬಾರಿಸಿದರೆ, ಪಾಕಿಸ್ತಾನ ಒಂದೂ ಗೋಲು ಗಳಿಸಲಿಲ್ಲ.
ಮಂಗಳವಾರ ಫೈನಲ್‌ನಲ್ಲಿ ಭಾರತಕ್ಕೆ ಚೀನಾ ಸವಾಲು ಎದುರಾಗಲಿದ್ದು, 3ನೇ ಸ್ಥಾನಕ್ಕಾಗಿ ಪಾಕಿಸ್ತಾನ ಹಾಗೂ ದ.ಕೊರಿಯಾ ಮುಖಾಮುಖಿಯಾಗಲಿವೆ.
ಒಲಿಂಪಿಕ್ಸ್ ಕಂಚಿನ ಬಳಿಕ ಭಾರತಕ್ಕೆ ಮತ್ತೊಂದು ಪ್ರಶಸ್ತಿ ಗೆಲ್ಲುವ ಗುರಿ
ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ, ಈ ವರ್ಷ ಮತ್ತೊಂದು ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. 6ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರವೇಶಿಸಿರುವ ಭಾರತ, 5ನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಕಾತರಿಸುತ್ತಿದೆ. 2011ರಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಭಾರತ, 2012ರಲ್ಲಿ ರನ್ನರ್-ಅಪ್ ಆಗಿತ್ತು. ಬಳಿಕ 2016, 2018ರಲ್ಲಿ ಟ್ರೋಫಿ ಜಯಿಸಿದ್ದ ಭಾರತ ತಂಡ, 2023ರಲ್ಲಿ ಚೆನ್ನೈನಲ್ಲಿ ನಡೆದ ಟೂರ್ನಿಯನ್ನು ಗೆದ್ದು ಪ್ರಶಸ್ತಿ ಎತ್ತಿಹಿಡಿದಿತ್ತು.