ಒಂದಾದ್ಮೇಲೆ ಒಂದು ಸಿಗರೇಟ್ ಸೇದುತ್ತೀರಾ? ಹೀಗ್ ಬಿಡಬಹುದು
ಟೆನ್ಷನ್ ಜಾಸ್ತಿಯಿದೆ,ಕೆಲಸ ಹೆಚ್ಚಾಯ್ತು ಹೀಗೆ ಇಲ್ಲದ ಕಾರಣವನ್ನು ಸೃಷ್ಟಿಮಾಡಿಕೊಂಡು ಅನೇಕರು ದಿನಕ್ಕೆ ನಾಲ್ಕೈದು ಸಿಗರೇಟ್ ಸೇದುತ್ತಾರೆ. ಒಮ್ಮೆ ಅಂಟಿಕೊಂಡ ಚಟ ಬಿಡೋದು ಸುಲಭವಲ್ಲವಾದ್ರೂ ಕೆಲ ಮಾರ್ಗಗಳು ನೀವು ಈ ಬಲೆಯಿಂದ ಹೊರಬರಲು ನೆರವಾಗುತ್ತವೆ.
ಧೂಮಪಾನ (Smoking) ಆರೋಗ್ಯ(Health)ಕ್ಕೆ ಹಾನಿಕರ. ಇದು ಎಲ್ಲ ಸಿಗರೇಟ್ ಪ್ಯಾಕ್ (Cigarettes Pack )ಮೇಲೆ ಬರೆದಿರುತ್ತದೆ. ಜೊತೆಗೆ ಧೂಮಪಾನದಿಂದ ಏನೆಲ್ಲ ಅನಾರೋಗ್ಯ ಕಾಡುತ್ತದೆ ಎಂಬ ವಿವರವೂ ಇರುತ್ತದೆ. ಇದು ಬೇರೆಯವರಿಗೆ ಬರುವ ಖಾಯಿಲೆ,ನನಗಲ್ಲ ಎಂಬ ದೃಢ ನಂಬಿಕೆಯಲ್ಲಿಯೇ ಜನ ಧೂಮಪಾನ ಮಾಡ್ತಾರೆ. ಆರಂಭದಲ್ಲಿ ಒಂದರಿಂದ ಶುರುವಾಗುವ ಈ ದುಶ್ಚಟ, ದಿನಕ್ಕೆ ಒಂದು ಪ್ಯಾಕ್,ಎರಡು ಪ್ಯಾಕ್ ಗೆ ಬಂದು ನಿಲ್ಲುತ್ತದೆ. ಗೊತ್ತಿಲ್ಲದೆ ಕೆಮ್ಮು ಶುರುವಾಗಿರುತ್ತದೆ. ಬಾಯಿ ರುಚಿ ಕಳೆದುಕೊಂಡಿರುತ್ತದೆ. ತೂಕ ಇಳಿಯಲು ಶುರುವಾಗಿರುತ್ತದೆ. ವೈದ್ಯರ ಬಳಿ ಹೋದ್ರೆ ಸಿಗರೇಟ್ ಬಿಡಿ ಎಂಬ ಸಲಹೆ ನೀಡ್ತಾರೆ. ಆರಂಭದಲ್ಲಿ ಹವ್ಯಾಸವಾಗಿದ್ದು ಈಗ ಚಟವಾಗಿದೆ. ಅದನ್ನು ಬಿಡುವುದು ಸುಲಭವಲ್ಲ. ಕೆಲವರು ಎಲ್ಲವನ್ನೂ ತಿಳಿದಿದ್ದೂ ಧೂಮಪಾನ ಬಿಡುವ ಪ್ರಯತ್ನ ಮಾಡುವುದಿಲ್ಲ. ಅದಿಲ್ಲದೆ ನಾನಿಲ್ಲ,ಸತ್ತರೆ ಸಾಯ್ತೇನೆಂಬ ಮೊಂಟು ಹಠ ಮಾಡ್ತಾರೆ. ಅವರ ಈ ಚಟ ಕುಟುಂಬಸ್ಥರನ್ನು ನೋವಿನಲ್ಲಿ ಕೈ ತೊಳೆಯುವಂತೆ ಮಾಡುತ್ತದೆ. ಧೂಮಪಾನ ಮಾಡುವವರಿಗೆ ಮಾತ್ರವಲ್ಲ ಧೂಮಪಾನ ಮಾಡುವವರ ಪಕ್ಕದಲ್ಲಿ ನಿಂತುಕೊಂಡ್ರೂ ಖಾಯಿಲೆ ಬರುತ್ತದೆ. ಕೆಲವರು ಆರಂಭದಲ್ಲಿಯೇ ಎಚ್ಚೆತ್ತು ಈ ಚಟ ಕೈಬಿಡ್ತಾರೆ.ಅಂಟಿಕೊಂಡ ಚಟವನ್ನು ಬಿಡುವುದು ಸುಲಭವಲ್ಲ. ಟೀ ಚಟ ಬಿಡುವುದೇ ಬಹಳ ಕಷ್ಟ. ಹಾಗಿರುವಾಗ ಧೂಮಪಾನಿಗಳು ಎಷ್ಟು ಸವಾಲುಗಳನ್ನು ಎದುರಿಸಬೇಕು ಎಂಬುದನ್ನು ನಾವು ಪ್ರತ್ಯೇಕವಾಗಿ ಹೇಳ್ಬೇಕಿಲ್ಲ. ಮನಸ್ಸಿದ್ರೆ ಮಾರ್ಗ ಎಂಬ ಮಾತಿದೆ. ಅನೇಕ ವಿಧಾನಗಳ ಮೂಲಕ ಧೂಮಪಾನಕ್ಕೆ ಗುಡ್ ಬೈ ಹೇಳ್ಬಹುದು. ಇಂದು ನಾವು ಧೂಮಪಾನ ಬಿಡಲು ದೃಢಸಂಕಲ್ಪ ಮಾಡಿರುವವರು ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.
1. ಕಾರಣವನ್ನು ಹುಡುಕಿ : ಧೂಮಪಾನ ಬಿಡುವ ಪ್ರೇರಣೆ ಪಡೆಯಲು, ತ್ಯಜಿಸಲು ಪ್ರಬಲವಾದ, ವೈಯಕ್ತಿಕ ಕಾರಣದ ಅಗತ್ಯವಿದೆ. ಇದು ನಿಮ್ಮ ಕುಟುಂಬವನ್ನು ಸೆಕೆಂಡ್ ಹ್ಯಾಂಡ್ ಹೊಗೆಯಿಂದ ರಕ್ಷಿಸುವುದೂ ಇರಬಹುದು. ಅಥವಾ ಶ್ವಾಸಕೋಶದ ಕ್ಯಾನ್ಸರ್, ಹೃದ್ರೋಗ ಕಾಡದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಮುಂದಾಗಿರಬಹುದು. ಕಾರಣ ಚಿಕ್ಕದಾದ್ರೂ ಸರಿ ಅದು ನಿಮ್ಮ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರಬೇಕು. ಅಂಥಹ ಕಾರಣ ಹುಡುಕಿ,ಧೂಮಪಾನ ಬಿಡಲು ನಿರ್ಧರಿಸಿ.
2. ಹಾಲು ಕುಡಿದು ಸಿಗರೇಟ್ ಗೆ ಹೇಳಿ ಬೈ : ನೀವು ಸಿಗರೇಟ್ ಅಥವಾ ತಂಬಾಕು ತ್ಯಜಿಸಲು ನಿರ್ಧರಿಸಿದರೆ, ಪ್ರಾರಂಭದಲ್ಲಿ ಹಾಲು ಕುಡಿಯುವ ಅಭ್ಯಾಸವನ್ನು ಶುರು ಮಾಡಿ. ಹಾಲು ನಿಮ್ಮ ಕಡುಬಯಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮಗೆ ಸಿಗರೇಟ್ ಸೇದಬೇಕೆಂಬ ಚಟ ಬಂದಾಗಲೆಲ್ಲ ಒಂದು ಲೋಟ ಹಾಲು ಕುಡಿಯಿರಿ. ಕೆಲವೇ ದಿನಗಳಲ್ಲಿ ನೀವು ಪರಿಣಾಮ ನೋಡಬಹುದು.
3. ವೈದ್ಯರ ಸಲಹೆ : ಧೂಮಪಾನ ಬಿಡಬೇಕೆನ್ನುವವರು ವೈದ್ಯರ ಸಲಹೆ ಪಡೆಯಬಹುದು. ಅದಕ್ಕೆಂದೇ ವಿಶೇಷ ತರಬೇತಿ,ಚಿಕಿತ್ಸೆ ಲಭ್ಯವಿದೆ. ಅದ್ರಲ್ಲಿ ಪಾಲ್ಗೊಳ್ಳುವ ಮೂಲಕ ನೀವು ಧೂಮಪಾನ ತ್ಯಜಿಸಬಹುದು.
4. ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ : ನೀವು ಧೂಮಪಾನವನ್ನು ಒಂದೇ ದಿನ ಏಕಾಏಕಿ ನಿಲ್ಲಿಸಿದ್ರೆ ಸಮಸ್ಯೆಯಾಗುತ್ತದೆ. ನಿಕೋಟಿನ್ ಸಿಗದೆ ನಿಮಗೆ ಅನೇಕ ಅನಾರೋಗ್ಯ ಕಾಡಬಹುದು. ತಲೆನೋವು ಕಾಣಿಸಿಕೊಳ್ಳಬಹುದು. ಉತ್ಸಾಹ ಕಡಿಮೆಯಾಗುತ್ತದೆ. ಕಿರಿಕಿರಿ,ಕೋಪ ಬರುತ್ತದೆ. ಹಾಗಾಗಿ ಸಿಗರೇಟ್ ಬದಲು ನೀವು ನಿಕೋಟಿನ್ ಬದಲಿ ಚಿಕಿತ್ಸೆ ಶುರು ಮಾಡಬಹುದು. ನಿಕೋಟಿನ್ ಗಮ್ ಬಳಸಬಹುದು.
Winter Tips: ಚಳಿಗಾಲದಲ್ಲಿ ತಲೆಯನ್ನು ಮುಚ್ಕೋಳ್ಬೇಕು ಯಾಕೆ ?
5. ವಿಟಮಿನ್ ಸಿ : ವಿಟಿಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಕೂಡ ಧೂಮಪಾನದಿಂದ ದೂರವಿರಲು ನೆರವಾಗುತ್ತವೆ. ಕಿತ್ತಳೆ, ಬಾಳೆಹಣ್ಣು, ಪೇರಲ, ಕಿವಿ, ಪ್ಲಮ್, ಸ್ಟ್ರಾಬೆರಿ ಮುಂತಾದ ಹಣ್ಣುಗಳನ್ನು ಸೇವಿಸಬೇಕು.
6. ವಿರಾಮ ನೀಡಿ : ಜನರು ಧೂಮಪಾನ ಮಾಡಲು ಒಂದು ಕಾರಣವೆಂದರೆ ನಿಕೋಟಿನ್ ಅವರಿಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಒತ್ತಡ ಹೆಚ್ಚಾದಾಗ ಜನರು ಸಿಗರೇಟ್ ಸೇದುವ ಪ್ರಮಾಣ ಹೆಚ್ಚಾಗುತ್ತದೆ. ಸಿಗರೇಟ್ ತ್ಯಜಿಸಿದ ನಂತ್ರ ನೀವು ವಿಶ್ರಾಂತಿಗಾಗಿ ಬೇರೆ ವಿಧಾನವನ್ನು ಹುಡುಕಿಕೊಳ್ಳಬೇಕು. ವ್ಯಾಯಾಮ,ಸಂಗೀತ,ಮಸಾಜ್ ಹೀಗೆ ಅನೇಕ ವಿಧಾನಗಳ ಮೂಲಕ ನೀವು ಒತ್ತಡ ಕಡಿಮೆ ಮಾಡಬಹುದು.
FOOD TIPS: ಬಿರಿಯಾನಿ, ಬೇಯಿಸಿದ ಮೊಟ್ಟೆಯನ್ನು ಬಿಸಿ ಮಾಡಿ ತಿನ್ಬೋದಾ ?
7. ಮತ್ತೆ ಮತ್ತೆ ಪ್ರಯತ್ನ : ಮರಳಿ ಪ್ರಯತ್ನ ಮಾಡು ಎಂದು ದೊಡ್ಡವರು ಹೇಳಿದ್ದಾರೆ. ಒಮ್ಮೆ ಸಾಧ್ಯವಾಗ್ಲಿಲ್ಲವೆಂದು ಬಿಡಬೇಡಿ. ಬೇರೆ ಬೇರೆ ವಿಧಾನದ ಮೂಲಕ ಧೂಮಪಾನ ತ್ಯಜಿಸಲು ಪ್ರಯತ್ನಿಸಿ. ಮದ್ಯಪಾನ ಸೇರಿದಂತೆ ನಿಮ್ಮನ್ನು ಟ್ರಿಗರ್ ಮಾಡುವ ಕೆಲಸದಿಂದ ದೂರವಿರಿ. ಸಿಗರೇಟು ಸೇದುವ ಸ್ನೇಹಿತರಿಂದ ದೂರವಿದ್ದು,ಮನೆ ಕೆಲಸ ಸೇರಿದಂತೆ ನಿಮಗಿಷ್ಟವಾಗುವ ಕೆಲಸ ಮಾಡಿ.