Aids Day: ಏಡ್ಸ್ ಅಂದ್ರೆ ಸಾವು ಎಂದರ್ಥವಲ್ಲ! ಮಿಥ್ಯ ನಂಬಿಕೆ ದೂರವಿಡಿ

ವಿಶ್ವ ಏಡ್ಸ್ ದಿನವನ್ನು ಇಂದು ಆಚರಿಸಲಾಗುತ್ತಿದೆ. ಏಡ್ಸ್ ಹಾಗೂ ಎಚ್ ಐವಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಏಕೆಂದರೆ, ಸಮಾಜದಲ್ಲಿ ಇವುಗಳ ಬಗ್ಗೆ ಹಲವು ನಂಬಿಕೆಗಳು ಮನೆ ಮಾಡಿವೆ. ಮಿಥ್ಯ ನಂಬಿಕೆಗಳನ್ನು ದೂರವಿಟ್ಟು ವೈಜ್ಞಾನಿಕ ಭಾವನೆ ಮೂಡಿಸಿಕೊಳ್ಳುವುದು ಇಂದಿನ ಅಗತ್ಯ.
 

Common Myths About HIV and AIDS

ವಿಶ್ವದೆಲ್ಲೆಡೆ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. ಏಡ್ಸ್ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶ. ಅಷ್ಟಕ್ಕೂ ಏಡ್ಸ್ ಬಗ್ಗೆ ಸಮಾಜದಲ್ಲಿ ಇನ್ನೂ ಹಲವಾರು ರೀತಿಯ ತಪ್ಪು ನಂಬಿಕೆಗಳು ಮನೆ ಮಾಡಿವೆ. ಏಡ್ಸ್ ಬಂತೆಂದರೆ ಸಾಕು, ಸಾಯುವುದೊಂದೇ ಮಾರ್ಗ ಎನ್ನುವುದರಿಂದ ಹಿಡಿದು ಹಲವಾರು ಮಿಥ್ಯಗಳು ಸಮಾಜದಲ್ಲಿ ಬೇರೂರಿವೆ. ನಿರ್ದಿಷ್ಟ ಚಿಕಿತ್ಸೆಯಿಲ್ಲದ ರೋಗವೆನ್ನುವುದೇನೋ ನಿಜವಾದರೂ ಏಡ್ಸ್ ಕಂಡುಬಂದ ಮಾತ್ರಕ್ಕೆ ಸಾವು ನಿಶ್ಚಯ ಎನ್ನುವುದು ಸತ್ಯವಲ್ಲ. ಸಮಾಜವನ್ನು ಹಲವು ರೀತಿಯಲ್ಲಿ ಕಾಡಿಸುವ ಏಡ್ಸ್ ಬಗ್ಗೆ ತಿಳಿದು ನಾಲ್ಕು ದಶಕಗಳು ಸಲ್ಲುತ್ತ ಬಂದರೂ ಇಂತಹ ನಂಬಿಕೆಗಳು ನಮ್ಮಲ್ಲಿರಬಾರದು.  ಏಡ್ಸ್ ರೋಗ ಎಚ್ ಐವಿ ಎಂದರೆ ಹ್ಯೂಮನ್ ಇಮ್ಯುನೋ ಡೆಫಿಷಿಯನ್ಸಿ ವೈರಸ್ ನಿಂದಾಗಿ ಬರುತ್ತದೆ. ಈ ವೈರಸ್ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ತೀವ್ರವಾಗಿ ಹದಗೆಡಿಸಿ ಯಾವುದೇ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಕುಂದಿಸುತ್ತದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಪ್ರಕಾರ, ಕಳೆದ ಹತ್ತು ವರ್ಷಗಳಿಂದ ಭಾರತದಲ್ಲಿ 17 ಲಕ್ಷಕ್ಕೂ ಅಧಿಕ ಜನ ಅಸುರಕ್ಷಿತ ಲೈಂಗಿಕತೆಯ ಮೂಲಕ ಎಚ್ ಐವಿ ವೈರಸ್ ದಾಳಿಗೆ ಒಳಗಾಗಿದ್ದಾರೆ. ಹೀಗಾಗಿ, ಏಡ್ಸ್ ಬಗ್ಗೆ ಸರಿಯಾಗಿ ತಿಳಿಯುವುದು ಅಗತ್ಯ. ಹಾಗೆಯೇ, ಮಿಥ್ಯ ನಂಬಿಕೆಗಳನ್ನೂ ತಿಳಿದುಕೊಳ್ಳಬೇಕು.

•    ಎಚ್ ಐವಿ (HIV) ಮತ್ತು ಏಡ್ಸ್ (AIDS) ಎರಡೂ ಒಂದೇ ರೋಗ
ಇದು ಸಾಮಾನ್ಯವಾಗಿ ಎಲ್ಲರಲ್ಲೂ ಬೇರೂರಿರುವ ನಂಬಿಕೆ (Belief). ಇವು ಒಂದಕ್ಕೊಂದು ಸಂಬಂಧ ಹೊಂದಿದ್ದರೂ ಎರಡೂ ವಿಭಿನ್ನವಾಗಿವೆ. ಒಂದೊಮ್ಮೆ ವೈದ್ಯರು ಯಾರಾದರಲ್ಲಿ ಎಚ್ ಐವಿ ವೈರಸ್ (Virus) ಇದೆ ಎಂದರೆ ಅವರಲ್ಲಿ ಏಡ್ಸ್ ಇದೆ ಎಂದರ್ಥವಲ್ಲ. ಏಡ್ಸ್ (ಅಕ್ವೈರ್ಡ್ ಇಮ್ಯುನೋ ಡೆಫಿಷಿಯನ್ಸಿ ಸಿಂಡ್ರೋಮ್) ಎನ್ನುವುದು ಎಚ್ ಐವಿ ಸಾಂಕ್ರಾಮಿಕದ ಉನ್ನತ ಹಂತ. ಆದರೆ, ಇದನ್ನು ಹೊಂದಿದವರೆಲ್ಲ ಏಡ್ಸ್ ರೋಗಿಗಳಲ್ಲ. ಎಚ್ ಐವಿ ವೈರಸ್ ಕಂಡುಬಂದಾಗ ಸರಿಯಾದ ಜೀವನಶೈಲಿ ಅನುಸರಿಸಿದರೆ ಏಡ್ಸ್ ಉಂಟಾಗದಂತೆ ನೋಡಿಕೊಳ್ಳಬಹುದು.

World Aids Day: ವಿಶ್ವ ಏಡ್ಸ್‌ ದಿನ ಏಕೆ ಆಚರಿಸಲಾಗುತ್ತದೆ? ಈ ರೋಗ ಮೊದಲು ಕಂಡು ಬಂದದ್ದೆಲ್ಲಿ?

•    ಲೈಂಗಿಕತೆಯೇ (Sexual Relationship) ಕಾರಣ!
ಹಾಗೇನೂ ಇಲ್ಲ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಎಚ್ ಐವಿ ವೈರಸ್ ದಾಳಿ ಇಡುವುದು ಹೆಚ್ಚಾದರೂ ಇನ್ನಿತರ ಕಾರಣದಿಂದಲೂ ಬರಬಹುದು. ವೈರಸ್ ಬಾಧಿತ ವ್ಯಕ್ತಿ ಬಳಕೆ ಮಾಡಿದ ಇಂಜೆಕ್ಷನ್ (Injection) ಅಥವಾ ರೇಜರ್ ಸೇರಿದಂತೆ ಕೆಲವು ಇಂಜೆಕ್ಟಿವ್ ಸಲಕರಣೆಗಳಿಂದ ಬರಬಹುದು. ಹಾಗೆಯೇ, ಎಚ್ ಐವಿ ವೈರಸ್ ಹೊಂದಿರುವ ಅಮ್ಮನ ಸ್ತನ್ಯಪಾನದಿಂದ (Breastfeed) ಮಗುವಿಗೆ ಬರಬಹುದು. 

•    ಚುಂಬನದಿಂದಲೂ (Kissing) ಬರುತ್ತೆ!
ತುಟಿಗಳ ಚುಂಬನದಿಂದ ಎಚ್ ಐವಿ ವೈರಸ್ ಹರಡಬಲ್ಲದು. ಆದರೆ, ಇದು ಅತಿ ಕಡಿಮೆ ಪ್ರಮಾಣದಲ್ಲಿ ಮಾತ್ರ. ಅದು ಯಾವಾಗೆಂದರೆ, ಒಂದೊಮ್ಮೆ ಎಚ್ ಐವಿ ವ್ಯಕ್ತಿಯ ಬಾಯಲ್ಲಿ ಹುಣ್ಣು (Ulcer) ಅಥವಾ ರಕ್ತ (Blood) ಬರುತ್ತಿದ್ದರೆ ಕಿಸ್ ಮಾಡಿದ ಇನ್ನೋರ್ವ ವ್ಯಕ್ತಿಯ ಬಾಯಲ್ಲೂ ಗಾಯವಿದ್ದಾಗ ಸೋಂಕು ಹರಡುತ್ತದೆ. 

•    ಆ ವ್ಯಕ್ತಿಯ ಸನಿಹದಲ್ಲೂ ಇರಬಾರದು
ಇದು ಖಂಡಿತ ತಪ್ಪು ಭಾವನೆ. ಏಕೆಂದರೆ, ಈ ವೈರಸ್ ನೀರು (Water) ಅಥವಾ ಗಾಳಿಯಿಂದ (Air) ಹರಡುವುದಿಲ್ಲ. ರಕ್ತ, ವೀರ್ಯ (Semen), ಜನನಾಂಗದ ದ್ರವ ಹಾಗೂ ಎದೆಹಾಲಿನಲ್ಲಿ ಮಾತ್ರವೇ ವೈರಸ್ ಇರುತ್ತದೆ. ಹೀಗಾಗಿ, ಪೀಡಿತ ವ್ಯಕ್ತಿಯೊಂದಿಗೆ ಸುರಕ್ಷಿತವಾಗಿ ಜೀವನ ನಡೆಸಲು ಯಾವುದೇ ತೊಂದರೆ ಇಲ್ಲ. 

World AIDS Day: ಸೋಂಕಿನ ಲಕ್ಷಣ ನಿವಾರಿಸುತ್ತೆ ಆಯುರ್ವೇದ ಚಿಕಿತ್ಸೆ

•    ಸೊಳ್ಳೆ (Mosquito) ಕಚ್ಚುವುದರಿಂದ ಬರುತ್ತಾ?
ಇದೊಂದು ಪ್ರಶ್ನೆ ಆಗಾಗ ಏಳುತ್ತಲೇ ಇರುತ್ತದೆ. ಇದರಲ್ಲೂ ಸಹ ಸತ್ಯವಿಲ್ಲ. ಏಕೆಂದರೆ, ಇದುವರೆಗೆ ಸೊಳ್ಳೆಯಿಂದ ಹರಡಿದ ಒಂದೇ ಒಂದು ಪ್ರಕರಣವೂ ದಾಖಲಾಗಿಲ್ಲ. 

•    ಏಡ್ಸ್ ಅಂದ್ರೆ ಸಾವು (Death)
2021ರ ವರದಿಯಂತೆ ವಿಶ್ವದಲ್ಲಿ ಸುಮಾರು 3.84 ಕೋಟಿ ಜನ ಎಚ್ ಐವಿಯೊಂದಿಗೆ ಬದುಕುತ್ತಿದ್ದಾರೆ. ಇಂದಿಗೂ ವೈರಸ್ ಹರಡುತ್ತಲೇ ಇದೆ. ಆರೋಗ್ಯಕರ ಜೀವನಶೈಲಿ (Healthy Lifestyle) ಅನುಸರಿಸುವ ಮೂಲಕ ಎಚ್ ಐವಿಯೊಂದಿಗೆ ಬದುಕಬಹುದು. ವೈರಸ್ ಇರುವಿಕೆಯ ಬಗ್ಗೆ ಆರಂಭದಲ್ಲೇ ಅರಿಯುವುದು, ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯ. 
 

Latest Videos
Follow Us:
Download App:
  • android
  • ios