ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ನ್ಯೂಟ್ರಿಶನಿಸ್ಟ್ ನೀಡಿದ ಟಿಪ್ಸ್
ಕೊರೋನಾ ವೈರಸ್ ಕಾಟದಿಂದಾಗಿ ಬಹುತೇಕರು ಈಗ ವರ್ಕ್ ಫ್ರಂ ಹೋಂ ಆಯ್ಕೆ ಆಯ್ದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೇವಲ ಸೋಷ್ಯಲ್ ಡಿಸ್ಟೆನ್ಸಿಂಗ್ ಹಾಗೂ ಐಸೋಲೇಶನ್ ಸಾಲುವುದಿಲ್ಲ, ಫ್ರಿಡ್ಜ್ ಹಾಗೂ ಜಂಕ್ ಫುಡ್‌ನಿಂದಲೂ ದೂರ ಉಳಿಯಬೇಕಾದ ಅಗತ್ಯವಿದೆ.
ಬಹಳಷ್ಟು ಜನ ಕಳೆದ ಕೆಲ ತಿಂಗಳಿಂದ ವರ್ಕ್ ಫ್ರಂ ಹೋಂ ಮಾಡುತ್ತಿದ್ದೀರಿ. ಹೀಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವಾಗ ಆಗಾಗ ಏನಾದರೂ ತಿನ್ನುತ್ತಿರೋಣ ಎನಿಸುವುದು ಸಹಜ. ಹೊರಗಿನಿಂದಂತೂ ತರಿಸಿಕೊಳ್ಳುವುದು, ಹೊರ ಹೋಗಿ ತಿನ್ನುವುದು ಸಾಧ್ಯವಿಲ್ಲ. ಹಾಗಾಗಿ ಬಹಳಷ್ಟು ಮಂದಿ ನಾಲಿಗೆ ಚಪಲ ತಣಿಸಲು ಪ್ಯಾಕೇಜ್ಡ್ ಆಹಾರಗಳನ್ನು ತಂದಿಟ್ಟುಕೊಳ್ಳುತ್ತಿದ್ದಾರೆ. ಇದರಿಂದ ಜಂಕ್ ಫುಡ್ ಸೇವನೆ ಹೆಚ್ಚಾಗಿದೆ. ಜೊತೆಗೆ ದೇಹಕ್ಕೆ ವ್ಯಾಯಾಮವೂ ಇಲ್ಲ. ಎರಡೂ ಸೇರಿ ಆರೋಗ್ಯವನ್ನು ಒಳಗಿನಿಂದ ಸಾಕಷ್ಟು ಹದಗೆಡಿಸುತ್ತಿರುತ್ತದೆ.
ಕಾನನ್ಫರೆನ್ಸ್ ಕಾಲನ್ನು ಪದೇ ಪದೆ ಮನೆಯಿಂದಲೇ ತೆಗೆದುಕೊಳ್ಳುವಾಗ ಎರಡು ಸಂಗತಿಗಳು ನಡೆಯಬಹುದು- ಒಂದೇ ನೀವು ಕಿಚನ್‌ಗೆ ಹೋಗಿ ಚಿಪ್ಸ್ ಪ್ಯಾಕನ್ನು ಖಾಲಿಯಾಗುವವರೆಗೂ ಹಟಕ್ಕೆ ಬಿದ್ದವರಂತೆ ತಿಂದು ಮುಗಿಸಬಹುದು. ಇಲ್ಲವೇ, ತಿನ್ನುವ ನೆನಪೇ ಇಲ್ಲದೆ ಕೆಲಸದಲ್ಲಿ ಮುಳುಗಿರಬಹುದು. ಕಡೆಗೆೊಮ್ಮೆ ಹಸಿವು ತಾಳಲಾಗದೆ ಸಿಕ್ಕ ಸಿಕ್ಕ ಜಂಕ್ ಆಹಾರವನ್ನೆಲ್ಲ ಮುಕ್ಕಬಹುದು.
ಕಚೇರಿಗೆ ಹೋದರೆ ಪದೇ ಪದೆ ಏಳಲಾಗುವುದಿಲ್ಲ, ಪದೇ ಪದೇ ತಿನ್ನೂವುದೂ ಅಸಾಧ್ಯ. ಆದರೆ, ಮನೆಯಲ್ಲಿ ಈ ನಿರ್ಬಂಧ ಇಲ್ಲ. ಹಾಗಾಗಿ, ತಮ್ಮ ನ್ಯೂಟ್ರಿಶನ್ ಬಗ್ಗೆ ಗಮನ ತಪ್ಪಿ ಬೇಕಾಬಿಟ್ಟಿ ತಿನ್ನುವಂತಾಗುತ್ತದೆ. ಆದರೆ ಇದರಿಂದ ಕುಳಿತಲ್ಲೇ ಹೊಟ್ಟೆಯ ಗಾತ್ರ ಏರುತ್ತಾ ಹೋಗಿ ಮೆಟಾಬಾಲಿಸಂ ತಗ್ಗುತ್ತದೆ. ಅಷ್ಟೇ ಅಲ್ಲ, ಒಟ್ಟಾರೆ ಆರೋಗ್ಯವೂ ಹದಗೆಡುತ್ತದೆ.
ಬಳಸಿದ ಟೀ ಬ್ಯಾಗ್ ಎಸೆಯಬೇಡಿ, ಅವುಗಳಿಂದ ಅಂದ ಹೆಚ್ಚಿಸಿಕೊಳ್ಳಿ
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದ ಈ ಸಂದರ್ಭದಲ್ಲಿ ಅನಾರೋಗ್ಯಕಾರಿ ಆಹಾರಗಳ ಸೇವನೆ ಒಳ್ಳೆಯದಲ್ಲ. ಆದ್ದರಿಂದ ಸೆಲೆಬ್ರಿಟಿ ನ್ಯೂಟ್ರಿಶನಿಸ್ಟ್ ಪೂಜಾ ಮಖೀಜಾ ಕೊಟ್ಟ ಟಿಪ್ಸ್ ಪಾಲಿಸಿ, ಆರೋಗ್ಯವಾಗಿರಿ.
ನೀರು ನೀರು ನೀರು
ಮನೆಯಲ್ಲಿ ಕುಳಿತಾಗ, ಅದರಲ್ಲೂ ಈ ಚಳಿಗಾಲದಲ್ಲಿ ಪದೇ ಪದೆ ಕಾಫಿ, ಟೀ ಕುಡಿಯೋಣ ಎನಿಸುತ್ತದೆಯೇ ಹೊರತು ನೀರು ಕುಡಿಯುವ ನೆನಪೂ ಹೆಚ್ಚಿನವರಿಗೆ ಬರುವುದಿಲ್ಲ. ಆದರೆ, ದಿನ ಹೇಗೇ ಇರಲಿ, ಚಳಿಯೋ ಮಳೆಯೋ ದಿನಕ್ಕೆ 8ರಿಂದ 12 ಗ್ಲಾಸ್ ನೀರು ಕುಡಿಯಲೇ ಬೇಕು. ಹೀಗೆ ಚೆನ್ನಾಗಿ ನೀರು ಕುಡಿಯುವುದರಿಂದ ಪದೇ ಪದೆ ತಿನ್ನಬೇಕೆನಿಸುವುದಿಲ್ಲ. ಹೆಚ್ಚಿನ ಬಾರಿ ನಾವು ಬಾಯಾರಿಕೆಯನ್ನೇ ಹಸಿವೆಂದು ಪರಿಗಣಿಸಿ ತಿನ್ನುತ್ತಿರುತ್ತೇವೆ. ಡಿಹೈಡ್ರೇಶನ್‌ನಿಂದ ಸುಸ್ತಾಗುತ್ತದೆ. ಅದು ನಮ್ಮ ಉತ್ಪಾದಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದಕ್ಕಾಗಿ ಕೆಲಸಕ್ಕೆ ಕುಳಿತಾಗ ಪಕ್ಕದಲ್ಲೊಂದು ದೊಡ್ಡ ಜಗ್‌ನಲ್ಲಿ ನೀರಿಟ್ಟುಕೊಳ್ಳಿ. ಅದನ್ನು ದಿನದ ಇಷ್ಟು ಸಮಯದೊಳಗೆ ಮುಗಿಸುವ ಟಾಸ್ಕ್‌ನ್ನು ಸ್ವತಃ ಕೊಟ್ಟುಕೊಳ್ಳಿ.
ಕೆಫಿನ್ ಬಗ್ಗೆ ಗಮನವಿರಲಿ
ನೀವು ಎಷ್ಟು ಕೆಫಿನ್ ಸೇವಿಸುತ್ತಿದ್ದೀರಾ ಹಾಗೂ ಯಾವ ಸಮಯದಲ್ಲಿ ಸೇವಿಸುತ್ತಿದ್ದೀರಾ ಎಂಬ ಬಗ್ಗೆ ಗಮನವಿರಲಿ. ಏಕೆಂದರೆ ಸಂಜೆಯ ನಂತರದಲ್ಲಿ ಮತ್ತೆ ಮತ್ತೆ ಸೇವಿಸುತ್ತಿದ್ದರೆ ಅದು ನಿಮ್ಮ ನಿದ್ದೆ ಹಾಳು ಮಾಡುತ್ತದೆ. ಎಲ್ಲ ಸಮಯದಲ್ಲೂ ಕಾಫಿ ಸಿಗುತ್ತದೆಂಬುದು ಖುಷಿಯಾಗಬಹುದು. ಆದರೆ, ಕೆಫಿನ್ ಅತಿಯಾದರೆ ಅಸಿಡಿಟಿ, ಗ್ಯಾಸ್, ಆತಂಕ, ತಲೆನೋವು ಎಲ್ಲ ಶುರುವಾಗುತ್ತದೆ. ದಿನಕ್ಕೆ ಗರಿಷ್ಠ 2 ಕಪ್ ಎಂದು ಫಿಕ್ಸ್ ಮಾಡಿಕೊಳ್ಳಿ. ಸಕ್ಕರೆ ಹಾಗೂ ಕ್ರೀಮರ್ಸ್ ಹೆಚ್ಚು ಸೇರಿಸಬೇಡಿ. ಸಿಹಿಯಾದ ಕಾಫಿ ಇಷ್ಟಪಡುವವರು ನೀವಾಗಿದ್ದರೆ, ಸ್ಟೀವಿಯಾ ಮೂಲದ ಕಡಿಮೆ ಕ್ಯಾಲೋರಿಯ ಸ್ವೀಟನರ್ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕ್ಯಾಲೋರಿ ಇನ್‌ಟೇಕ್ ಕಡಿಮೆಯಾಗುವ ಜೊತೆಗೆ ತೂಕವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ಊಟದ ಸಮಯ ಯೋಜಿಸಿ
ನಾವೀಗ ಮುಂಚಿನಂತೆ ನಿಗದಿತ ವೇಳಾಪಟ್ಟಿಯಲ್ಲಿ ಕೆಲಸ ಮಾಡುತ್ತಿಲ್ಲದ ಕಾರಣ ಊಟ, ತಿಂಡಿಗಲು ಸಮಯ ತಪ್ಪುವುದು ಹೆಚ್ಚಾಗುತ್ತಿದೆ. ಆದರೆ, ಯಾವುದೇ ಹೊತ್ತಿನ ಊಟ ಸ್ಕಿಪ್ ಆಗದಂತೆ ನೋಡಿಕೊಳ್ಳಿ. ಅದರಲ್ಲೂ ಬೆಳಗಿನ ಉಪಹಾರ ಬಹಳ ಮುಖ್ಯ. ಅದು ಆರೋಗ್ಯಕರವಾಗಿರುವಂತೆ ಎಚ್ಚರ ವಹಿಸಿ. ಮುಂಚೆ ಕಚೇರಿಗೆ ಹೋಗಲು ತೆಗೆದುಕೊಳ್ಳುತ್ತಿದ್ದ ಆ 30 ನಿಮಿಷಗಳನ್ನು ಈಗ ಓಟ್ಸ್, ಹಣ್ಣಿಗಳು, ತರಕಾರಿಗಳು ತುಂಬಿದ ರುಚಿಯಾದ ತಿಂಡಿ ತಯಾರಿಸಲು ಬಳಸಿಕೊಳ್ಳಿ. ಮಧ್ಯಾಹ್ನದ ಊಟ, ಸಂಜೆಯ ಸ್ನ್ಯಾಕ್ಸ್, ರಾತ್ರಿಯ ಊಟ ಎಲ್ಲಕ್ಕೂ ಸಮಯ ನಿಗದಿ ಪಡಿಸಿಕೊಳ್ಳಿ. ಆ ಸಮಯಕ್ಕೆ ಸರಿಯಾಗಿ ತಿನ್ನುವ ಅಭ್ಯಾಸವಿರಲಿ. ಹೀಗಿದ್ದಾಗ ಮಾತ್ರ ಮನಸ್ಸನ್ನು ಸರಿಯಾಗಿ ಕೆಲಸದಲ್ಲಿ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಜೊತೆಗೆ ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ತೆಗೆದುಕೊಳ್ಳದಿದ್ದರೆ, ತಪ್ಪಾದ ಸಮಯದಲ್ಲಿ ತಪ್ಪಾದ ಆಹಾರ ಸೇವಿಸುವ ಅಭ್ಯಾಸ ಶುರುವಾಗುತ್ತದೆ. ಇದು ಆರೋಗ್ಯವನ್ನು ಹಾಳು ಮಾಡುವ ಜೊತೆಗೆ ಏಕಾಗ್ರತೆಯನ್ನೂ ತಗ್ಗಿಸುತ್ತದೆ.
ಯಬ್ಬೇ! ಜಗತ್ತಿನ ಭಯಾನಕ ಆಹಾರಗಳಿವು...
ಜಂಕ್ ಆಹಾರ ಇಟ್ಟುಕೊಳ್ಳಬೇಡಿ
ಚಾಕೋಲೇಟ್, ಬಿಸ್ಕೆಟ್, ಚಿಪ್ಸ್ ಮತ್ತಿತರೆ ಜಂಕ್ ಫುಡ್‌ಗಳು ಮನೆಯಲ್ಲಿಲ್ಲದಂತೆ ನೋಡಿಕೊಳ್ಳಿ. ಕಚೇರಿಯಲ್ಲಿ ಸುತ್ತ ಜನ ಇರುವಾಗ ಒಂದೇ ಬಿಸ್ಕೆಟ್ ತಿಂದು ಕುಳಿತುಕೊಳ್ಳುವುದು ಸುಲಭದ ವಿಷಯ. ಆದರೆ, ಮನೆಯಲ್ಲಿ ಹಾಗಲ್ಲ, ಬಿಸ್ಕೆಟ್ ಪ್ಯಾಕ್ ಖಾಲಿಯಾಗುವವರೆಗೂ ಸಮಾಧಾನವಿರುವುದಿಲ್ಲ. ಹಾಗಾಗಿ, ಫ್ರಿಡ್ಜ್‌ನಲ್ಲಿ ಹಣ್ಣು, ತರಕಾರಿ, ಡ್ರೈ ಫ್ರೂಟ್‌ಗಳನ್ನು ಮಾತ್ರ ಇಟ್ಟುಕೊಳ್ಳಿ. ಇದರಿಂದ ತಿನ್ನಬೇಕೆನಿಸಿದಾಗ ಆರೋಗ್ಯಕರ ಆಹಾರ ಮಾತ್ರ ಹೊಟ್ಟೆ ಸೇರುತ್ತದೆ.
ಡೆಸ್ಕ್‌ನಲ್ಲಿ ಕುಳಿತೇ ತಿನ್ನಬೇಡಿ
ಟೇಬಲ್‌ನಲ್ಲಿ ಕೆಲಸ ಮಾಡುತ್ತಲೇ ಊಟ ಮುಗಿಸಲು ಟೆಂಪ್ಟ್ ಆಗಬಹುದು. ಆದರೆ, ಯಾವುದೇ ಕಾರಣಕ್ಕೂ ಹೀಗೆ ಮಾಡಬೇಡಿ. ಇದರಿಂದ ಅತಿಯಾಗಿ ತಿನ್ನುವ ಸಾಧ್ಯತೆ ಹೆಚ್ಚು. ಜೊತೆಗೆ, ಊಟ ಮಾಡಿದ ತೃಪ್ತಿಯೂ ಸಿಗುವುದಿಲ್ಲ. ಊಟದ ಸಮಯಕ್ಕೆ ಮನೆಯವರೊಂದಿಗೆ ಕುಳಿತು ಊಟ ಮುಗಿಸಿಯೇ ಟೇಬಲ್‌ಗೆ ಮರಳಿ. ಆಗ ಬ್ಯಾಲೆನ್ಸ್ ಆದ ಆಹಾರ ದೇಹ ಸೇರುತ್ತದೆ. ಜೊತೆಗೆ ಸರಿಯಾಗಿ ಅಗಿದು ತಿನ್ನುತ್ತೀರಿ. ಊಟವೊಂದೇ ಅಲ್ಲ, ಏನನ್ನೂ ಕೆಲಸ ಮಾಡುತ್ತಲೇ ತಿನ್ನುವ ಅಭ್ಯಾಸ ಬೇಡ.