Asianet Suvarna News Asianet Suvarna News

ಮಂಕಿಪಾಕ್ಸ್ ಸೋಂಕು ತಡೆ, ಮುಂಜಾಗ್ರತಾ ಕ್ರಮಕ್ಕೆ ಬಿಬಿಎಂಪಿ, ಜಿಲ್ಲಾಡಳಿತಗಳಿಗೆ ಸೂಚನೆ

ಮಂಕಿಪಾಕ್ಸ್ ಸೋಂಕು ಹರಡುವಿಕೆ ತಡೆಗಾಗಿ  ಮುಂಜಾಗ್ರತಾ ಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಎಲ್ಲಾ ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Monkepox Virus, BBMP Instructs Administration For Alert Vin
Author
Bengaluru, First Published Aug 2, 2022, 2:37 PM IST

ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಿದೆ. ಮಂಕಿಪಾಕ್ಸ್ ಸೋಂಕು ಹರಡುವಿಕೆ ತಡೆಗಾಗಿ  ಮುಂಜಾಗ್ರತಾ ಕ್ರಮ ಕೈಗೊಳ್ಳಲು ಬಿಬಿಎಂಪಿ ಹಾಗೂ ಎಲ್ಲಾ ಜಿಲ್ಲಾಡಳಿತಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಹೆಚ್ಚಿನ ಕಣ್ಗಾವಲು, ಸಾಂಸ್ಥಿಕ ಐಸೋಲೇಶನ್ ಗಾಗಿ ಸೂಕ್ತ ಸ್ಥಳ ಗೊತ್ತುಪಡಿಸುವಿಕೆ, ಕಡ್ಡಾಯ ಸಂಪರ್ಕ ಪತ್ತೆ ಮತ್ತು ಸ್ಯಾಂಪಲ್ ಗಳ ಪರೀಕ್ಷೆ ಕುರಿತಂತೆ ಹೊರಡಿಸಲಾಗಿರುವ ಸುತ್ತೋಲೆಯನ್ನು  ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಮಂಕಿಪಾಕ್ಸ್ ನ ಪ್ರತಿಯೊಂದು ಪ್ರಕರಣವನ್ನು ವರದಿ ಮಾಡುವುದು, ವಿವರವಾದ ತನಿಖೆ, ಮಾದರಿ ಸಂಗ್ರಹ ಮತ್ತು ಐಹೆಚ್ ಐಪಿ ಪೋರ್ಟಲ್ ನಲ್ಲಿ ವರದಿ ಮಾಡಿದ ನಂತರ ರಾಜ್ಯಕ್ಕೆ ವರದಿ ಮಾಡತಕ್ಕದ್ದು, ಶಂಕಿತ ಹಾಗೂ ಖಚಿತ ಪ್ರಕರಣಗಳಿಗಾಗಿ ನಿರ್ದಿಷ್ಠ ಸಾಂಸ್ಥಿಕ  ಪ್ರತ್ಯೇಕತೆ ಸೌಲಭ್ಯ ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಕಡ್ಡಾಯವಾಗಿ ಎಲ್ಲಾ ಶಂಕಿತ ಪ್ರಕರಣಗಳ ಸಂಪರ್ಕಿತರನ್ನು ಪತ್ತೆ ಮಾಡಿ, ಮಂಕಿಪಾಕ್ಸ್ ಲಕ್ಷಣ ಕಂಡುಬಂದರೆ, ಕೂಡಲೇ ಪರೀಕ್ಷೆಗೊಳಪಡಿಸುವುದು ಹಾಗೂ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗ ಶಾಲೆಗಳಿಗೆ ಕಳುಹಿಸಿಕೊಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಂಕಿಪಾಕ್ಸ್‌ ಸೋಂಕಿನ ಬಗ್ಗೆ ನೀವಂದುಕೊಂಡಿರೋ ಈ ವಿಚಾರವೆಲ್ಲಾ ನಿಜವಲ್ಲ !

ಮಂಕಿಪಾಕ್ಸ್ ಪ್ರಕರಣದಲ್ಲಿ ದೇಶದಲ್ಲಿ ಮೊದಲ ಸಾವು
ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿಯಾಗಿದೆ. ಕೇರಳದ 22ರ ಹರೆಯದ ಯುವಕ ತ್ರಿಶೂರು ಜಿಲ್ಲೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯುಎಇನಲ್ಲಿ ಉದ್ಯೋಗದಲ್ಲಿದ್ದ ಯುವಕ ಜ್ವರ ಹಾಗೂ ಮಂಕಿಪಾಕ್ಸ್ ರೋಗಲಕ್ಷಣಗಳಿಂದ ಯುಎಐ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ್ದ. ಈತನ ವರದಿ ಪಾಸಿಟೀವ್ ಆಗಿತ್ತು. ಬಳಿಕ ದುಬೈನಿಂದ ಕೇರಳಕ್ಕೆ ಆಗಮಿಸಿದ ಯುವಕ (Youth) ತೀವ್ರ ಆಸ್ವಸ್ಥಗೊಂಡಿದ್ದ. ಹೀಗಾಗಿ ತ್ರಿಶೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 21ಕ್ಕೆ ಆಸ್ಪತ್ರೆ ದಾಖಲಾಗಿದ್ದ ಯುವಕ ಇಂದು(ಜು.31) ಮೃತಪಟ್ಟಿದ್ದಾನೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕೇರಳದ ತ್ರಿಶೂರ್‌ನಲ್ಲಿನ ಮಂಕಿಪಾಕ್ಸ್ ಪ್ರಕರಣ ಕುರಿತು ಮಾಹಿತಿ ನೀಡಿದ್ದಾರೆ. ತ್ರಿಶೂರು ಯುವಕ ಅರಬ್ ರಾಷ್ಟ್ರದಲ್ಲಿ ಮಂಕಿಪಾಕ್ಸ್ ಸೋಂಕು (Virus) ತಗುಲಿದೆ. ಈ ಕುರಿತು ಪರೀಕ್ಷೆಯಲ್ಲಿ ಪಾಸಿಟೀವ್ ಪತ್ತೆಯಾಗಿದೆ. ಯುಎಇನಿಂದ ಭಾರತಕ್ಕೆ ಮರಳಿದ ಯುವಕ ಆಸ್ಪತ್ರೆ ದಾಖಲಾಗಿದ್ದಾನೆ. ಈತನಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳು ಇರಲಿಲ್ಲ. ಇಷ್ಟೇ ಅಲ್ಲ ಯುವಕ ಹಾಗೂ ಆತನ ಕುಟುಂಬಸ್ಥರು ಮಂಕಿಪಾಕ್ಸ್ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಯುವಕನ ಮಾದರಿ ಸಂಗ್ರಹಿಸಿ ವಿರೋಲಜಿ ಕೇಂದ್ರಕ್ಕೆ ಕಳುಹಿಸಲಾಗಿದೆ. 22ರ ಹರೆಯದ ಯುವಕನಲ್ಲಿ ಇತರ ಯಾವುದೇ ಆರೋಗ್ಯ ಸಮಸ್ಯೆಗಳು (Health problem) ಇರಲಿಲ್ಲ. ಹೀಗಾಗಿ ಈ ಪ್ರಕರಣ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

ದೇಶದ ಮೊದಲ ಮಂಕಿಪಾಕ್ಸ್‌ ಸೋಂಕಿತ ಗುಣಮುಖ

ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ವೈರಸ್ ಆರ್ಥೋಪಾಕ್ಸ್ ವೈರಸ್ ಕುಟುಂಬಕ್ಕೆ ಸೇರಿದೆ, ಇದರಲ್ಲಿ ಸಿಡುಬು ರೋಗಕ್ಕೆ ಕಾರಣವಾಗುವ ವೆರಿಯೊಲಾ ವೈರಸ್ ಮತ್ತು ಸಿಡುಬು ಲಸಿಕೆಯಲ್ಲಿ ಬಳಸಲಾದ ವ್ಯಾಕ್ಸಿನಿಯಾ ವೈರಸ್ ಸೇರಿವೆ. ಮಂಕಿಪಾಕ್ಸ್ ಸಿಡುಬು ರೋಗದ ಲಕ್ಷಣಗಳನ್ನೇ ಹೊಂದಿದ್ದು, ಅದರ ತೀವ್ರತೆ ಕಡಿಮೆ. ವ್ಯಾಕ್ಸಿನೇಷನ್ ನಿಂದಾಗಿ 1980ರಲ್ಲಿ ಪ್ರಪಂಚದಾದ್ಯಂತ ಸಿಡುಬು ನಿರ್ಮೂಲನೆಯಾಯಿತು, ಮಂಕಿಪಾಕ್ಸ್ ಇನ್ನೂ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಹಲವಾರು ರಾಷ್ಟ್ರಗಳಲ್ಲಿ ಮತ್ತು ಇತರೆಡೆಗಳಲ್ಲಿ ಅಸ್ತಿತ್ವದಲ್ಲಿದೆ.

ಮಂಕಿಪಾಕ್ಸ್ ರೋಗಲಕ್ಷಣಗಳು
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ರೋಗದ ಆರಂಭಿಕ ಲಕ್ಷಣಗಳು (symptoms) ಜ್ವರ, ತಲೆನೋವು, ಬೆನ್ನು ಮತ್ತು ಕುತ್ತಿಗೆ ನೋವು ಮುಂತಾದ ಲಕ್ಷಣಗಳನ್ನು ಒಳಗೊಂಡಿರುತ್ತದೆ. ನಡುಕ ಮತ್ತು ಆಯಾಸವೂ ಇರಬಹುದು. ದೇಹದ ಮೇಲೆ ಸಣ್ಣ ಕಲೆಗಳು ಕಾಣಿಸಿಕೊಳ್ಳುತ್ತವೆ. ದಡಾರ, ಸ್ಕರ್ವಿ ಮತ್ತು ಸಿಫಿಲಿನ್​ ಕೆಲವು ರೋಗಲಕ್ಷಣಗಳಿಗೆ ಸ್ವಲ್ಪಮಟ್ಟಿಗೆ ಹೋಲುತ್ತವೆ. ಈ ರೋಗದ ಆರಂಭಿಕ ಲಕ್ಷಣಗಳನ್ನು ಗುರುತಿಸುವಲ್ಲಿ ಅನೇಕ ಜನರು ತಪ್ಪು ಮಾಡುತ್ತಾರೆ.

Follow Us:
Download App:
  • android
  • ios