Asianet Suvarna News Asianet Suvarna News

ಸಾಸಿವೆ- ಉಪ್ಪಿನ ಮದ್ದೇ ಸಾಕು ಹೊಳೆಯುವ ಹಲ್ಲು ನಿಮ್ಮದಾಗೋಕೆ..!

ನಕ್ಕಾಗ ಹಲ್ಲುಗಳು ಫಳ್‌ ಅಂತ ಮಿಂಚಿದ್ರೆ ಅದೊಂದು ಮ್ಯಾಜಿಕ್‌. ಆದರೆ ಎಷ್ಟೋ ಜನರಿಗೆ ಹಲ್ಲಿನದೇ ಪ್ಲಾಬ್ಲೆಂ. ನಕ್ಕರೆ ಎಲ್ಲಿ ಹಲ್ಲು ಕಂಡು ಶೇಮ್‌ ಆಗುತ್ತೋ ಅಂದುಕೊಂಡು ಕೆಲವರು ನಗೋದನ್ನೂ ಮರೆಯುತ್ತಾರೆ. ಮಂಕಾದ ಹಲ್ಲುಗಳನ್ನು ಹೊಳೆಯುವಂತೆ ಮಾಡುವ ಟಿಫ್ಸ್‌ ಇಲ್ಲಿವೆ.
 

Make your tooth glitter by these simple tricks
Author
Bangalore, First Published Jan 7, 2020, 3:54 PM IST

ವಯಸ್ಸಾಗುತ್ತಾ ಹೋದ ಹಾಗೆ ನಮ್ಮ ದಂತ ಕವಚ ಕ್ಷಮತೆ ಕಳೆದುಕೊಳ್ಳುತ್ತದೆ. ವಯಸ್ಸಾಗೋದಷ್ಟೇ ಇದಕ್ಕೆ ಕಾರಣ ಅಂದುಕೊಂಡರೆ ತಪ್ಪು. ಹಲ್ಲುಗಳ ಆರೋಗ್ಯದ ಬಗೆಗೆ ಕೇರ್‌ ತಗೊಳ್ಳದಿದ್ದದ್ದರ ಪರಿಣಾಮವಿದು. ನಿತ್ಯವೂ ಎರಡು ಹೊತ್ತು ಬ್ರೆಶ್‌ ಮಾಡೋದು ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಬಹಳ ಮಹತ್ವದ್ದು. ಬೆಳಗ್ಗೆ ಏನೋ ಬ್ರೆಶ್‌ ಮಾಡೋದು ತಪ್ಪಿಸೋದಿಲ್ಲ. ಆದರೆ ರಾತ್ರಿ ಬ್ರೆಶ್‌ ಮಾಡೋದು ಎಷ್ಟೋ ಸಲ ಮಿಸ್‌ ಆಗ್ತಾನೇ ಇರುತ್ತೆ.

ಜೊತೆಗೆ ಆಹಾರ ತಿಂದ ಕೂಡಲೇ ಬಾಯಿ ಮುಕ್ಕಳಿಸದ ಪರಿಣಾಮ ತಿಂದ ಆಹಾರದ ತುಣುಕು ಹಲ್ಲಿನಲ್ಲೇ ಸೇರಿಕೊಂಡಿರುತ್ತೆ. ಇದರಿಂದ ಹಲ್ಲಿನ ಆರೋಗ್ಯ ಕ್ಷೀಣಿಸುತ್ತೆ. ಜೊತೆಗೆ ನಿಮ್ಮ ಬಾಯಿಯ ಸ್ವಚ್ಛತೆಯನ್ನು ಕರೆಕ್ಟಾಗಿ ಮೈಂಟೇನ್‌ ಮಾಡದೇ ಇದ್ದರೆ ಬರೀ ಹಲ್ಲು ಹುಳುಕಾಗೋದಷ್ಟೇ ಅಲ್ಲ, ಬಾಯಿಯಿಂದ ದುರ್ವಾಸನೆ ಬರೋದಕ್ಕೂ ಶುರುವಾಗುತ್ತೆ. ಹಲ್ಲಿನ ಹೊಳಪಿನ ಜೊತೆಗೆ ಹಲ್ಲುಗಳು ಸ್ವಚ್ಛತೆಗಾಗಿ ಏನೇನು ಮಾಡ್ಬೇಕು ಅನ್ನೋ ವಿವರ ಇಲ್ಲಿದೆ.

ಉದಾಸೀನ ಬಿಟ್ಟು ಬ್ರಷ್ ಮಾಡಿ, ಇಲ್ಲವಾದರೆ ಹೃದಯಕ್ಕೆ ಹಾನಿಯಾದೀತು ಎಚ್ಚರ!

1. ಸಾಸಿವೆ ಎಣ್ಣೆ ಮತ್ತು ಉಪ್ಪು

ಸಾಸಿವೆ ಎಣ್ಣೆಯ ಬಳಕೆ ಉತ್ತರ ಭಾರತದಲ್ಲಿ ಸರ್ವೇ ಸಾಮಾನ್ಯ. ಆದರೆ ನಮ್ಮಲ್ಲಿ ಬಳಕೆಯೇ ಇಲ್ಲ. ಸಾಸಿವೆ ಎಣ್ಣೆ ಮತ್ತು ಉಪ್ಪಿನ ಕಾಂಬಿನೇಶನ್‌ ವಸಡನ್ನು ಕ್ಲೀನ್‌ ಮಾಡುತ್ತೆ. ಹಲ್ಲಿನ ನಡುವೆ ಸಿಕ್ಕಿ ಹಾಕಿಕೊಂಡಿರುವ ಆಹಾರ ತುಣಕನ್ನು ಕ್ಲಿಯರ್‌ ಮಾಡುತ್ತೆ. ಉಪ್ಪು ಸಹಜ ಪ್ಲೋರೈಡ್‌. ಹಲ್ಲಿನ ಆರೋಗ್ಯಕ್ಕೆ ಅತ್ಯುತ್ತಮ. ಇದು ಹಲ್ಲಿನಲ್ಲಿರುವ ಕಲೆಗಳನ್ನು ತೆಗೆಯೋದರ ಜೊತೆಗೆ ಹಲ್ಲಿಗೆ ಹೆಚ್ಚು ಹೊಳಪು ಬರೋ ಹಾಗೆ ಮಾಡುತ್ತೆ. ಈ ಸಾಸಿವೆ ಎಣ್ಣೆ ವಸಡಿಗೆ ಶಕ್ತಿ ತುಂಬುತ್ತೆ ಅಂತಾರೆ ತಜ್ಞರು. ಕೆಲವೊಮ್ಮೆ ಹಲ್ಲಿನ ಮಾಂಸಲ ಭಾಗದಲ್ಲಿ ಬ್ಯಾಕ್ಟೀರಿಯಾಗಳಿದ್ದರೆ ಅವುಗಳನ್ನು ತೆಗೆಯಲೂ ಈ ಸಾಸಿವೆ ಎಣ್ಣೆ ಬಹಳ ಉಪಯುಕ್ತ. ಕೆಲವೊಮ್ಮೆ ವಸಡು ಊದಿಕೊಳ್ಳೋದು, ವಸಡಿನಿಂದ ರಕ್ತ ಬರೋದು ಇತ್ಯಾದಿ ಸಮಸ್ಯೆಗಳೂ ಆಗಲ್ಲ.

ಸಾಸಿವೆ ಉಪ್ಪಿನ ಮದ್ದಿನ ತಯಾರಿ ಹೀಗೆ

ಒಂದು ಚಿಟಿಕೆಯಷ್ಟು ಹರಳುಪ್ಪು ತೆಗೆದುಕೊಳ್ಳಿ. ಇದಕ್ಕೆ ಸಾಸಿವೆ ಎಣ್ಣೆ ಹಾಕಿ. ಒಂದು ಚಿಟಿಕೆಯಷ್ಟು ಅರಶಿನ ಪೌಡರ್‌ ಹಾಕಿ. ಇದನ್ನು ಮಿಕ್ಸ್‌ ಮಾಡಿ ತೋರು ಬೆರಳಿನಿಂದ
ಎತ್ತಿಕೊಂಡು ವಸಡಿಗೆ ಮಸಾಜ್‌ ಮಾಡಿ. ಸುಮಾರು 3 ನಿಮಿಷಗಳ ಕಾಲ ಹಲ್ಲು ಹಾಗೂ ವಸಡನ್ನು ಈ ಮಿಶ್ರಣದಿಂದ ತಿಕ್ಕುತ್ತಿರಿ. ಬಳಿಕ ಬಿಸಿ ನೀರಲ್ಲಿ ಬಾಯಿ ಮುಕ್ಕಳಿಸಿ.
ಆದರೆ ಹಲ್ಲಿಗೆ ಸಂಬಂಧಿಸಿ ಏನಾದರೂ ಸಮಸ್ಯೆಗಳಿದ್ದರೆ ದಂತ ವೈದ್ಯರನ್ನು ಸಂಪರ್ಕಿಸಿದ ಬಳಿಕವೇ ಈ ಪ್ರಯೋಗ ಮಾಡಿ.

ಸೆನ್ಸಿಟಿವ್ ಹಲ್ಲಿನ ಸಮಸ್ಯೆಯೇ? ಇಲ್ಲಿದೆ ಮನೆ ಮದ್ದು

* 1 ಸ್ಪೂನ್‌ನಷ್ಟು ಕೊಬ್ಬರಿ ಎಣ್ಣೆ ಬಾಯಲ್ಲಿ ಹಾಕಿ ಆಯಿಲ್‌ ಪುಲ್ಲಿಂಗ್‌ ಮಾಡೋದೂ ಹಲ್ಲಿನ ಆರೋಗ್ಯಕ್ಕೆ ಉತ್ತಮ.

*ನಿಮ್ಮ ಪೇಸ್ಟ್‌ನ ಜೊತೆಗೆ ಸ್ವಲ್ಪ ಬೇಕಿಂಗ್‌ ಸೋಡಾ ಹಾಕಿ ಬ್ರೆಶ್‌ ಮಾಡಿದರೆ ಹಲ್ಲು ಬೆಳ್ಳಗಾಗುತ್ತದೆ.

* ಆ್ಯಪಲ್‌ ಸಿಡಾರ್‌ ವಿನಿಗರ್‌ಅನ್ನು ಬ್ರೆಶ್‌ನಲ್ಲಿ ತೆಗೆದುಕೊಂಡು ಹಲ್ಲುಜ್ಜೋದರಿಂದ ಹಲ್ಲುಗಳು ಬೆಳ್ಳಗಾಗುತ್ತವೆ.

* ಉಪ್ಪು, ನಿಂಬೆರಸ ಮತ್ತು ಅರಿಶಿನ ಮಿಕ್ಸ್‌ ಮಾಡಿ. ಇದರಲ್ಲಿ ಹಲ್ಲುಜ್ಜೋದರಿಂದ ದಂತ ಆರೋಗ್ಯ ಚೆನ್ನಾಗಿರುತ್ತದೆ.

* ಇದರ ಜೊತೆಗೆ ಅನಾನಾಸ್‌ನಂಥ ಹಣ್ಣುಗಳು, ತರಕಾರಿ ಹಣ್ಣುಗಳನ್ನ ಚೆನ್ನಾಗಿ ತಿನ್ನುತ್ತಿದ್ದರೆ ವಸಡು, ಹಲ್ಲಿನ ಆರೋಗ್ಯ ಚೆನ್ನಾಗಿರುತ್ತೆ.

ಹಳದಿ ಹಲ್ಲಿನ ಹಿಂದಿನ ಇಂಟರೆಸ್ಟಿಂಗ್ ಫ್ಯಾಕ್ಟ್

ಇನ್ನೊಂದು ಮಾತು: ಇದನ್ನೆಲ್ಲ ಮಾಡೋದರ ಜೊತೆಗೆ ಸಕ್ಕರೆ ಸೇವನೆ ಸಾಧ್ಯವಾದಷ್ಟು ಕಡಿಮೆ ಮಾಡೋದು, ಕಾಫಿ ಟೀ ಕುಡಿಯೋದನ್ನು ನಿಯಂತ್ರಿಸೋದು ಹಲ್ಲಿನ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.
 

Follow Us:
Download App:
  • android
  • ios