ದುಡೀಬೇಕು ದುಡೀಬೇಕು ಅಷ್ಟೇ. ಎಷ್ಟು ದುಡೀಬೇಕಂದ್ರೆ ಹೊಸದಾಗಿ ಬಂದ ಐ ಫೋನ್, ಅತಿ ಗ್ರ್ಯಾಂಡ್ ಆದ ಕಾರ್, ಆ ಕಾರನ್ನು ನಿಲ್ಲಿಸಲು ಲಕ್ಷುರಿಯಾದ ವಿಲ್ಲಾ ಎಲ್ಲವನ್ನೂ ದುಸ್ರಾ ಯೋಚನೆಯೇ ಇಲ್ಲದೆ ಖರೀದಿಸುವಷ್ಟು. ಜೀವನದಲ್ಲಿ ಲಕ್ಷುರಿ ಅನ್ನೋದು ಕಾಲು ಮುರಿದುಕೊಂಡು ನಮ್ಮ ಬಳಿ ಬಂದು ಬೀಳ್ಬೇಕು. ಸಾಮಾನ್ಯನೂ ಇಂತ ಅಸಾಮಾನ್ಯ ಕನಸನ್ನು ಕಾಣುತ್ತಿರುವ ಈ ರೇಸ್‌ನಲ್ಲಿ ನೀವೂ ಭಾಗವಹಿಸುತ್ತಿದ್ದೀರಾ?
ಅದಕ್ಕಾಗಿ ಹಗಲಿರುಳೆನ್ನದೆ ಕೆಲಸ ಕೆಲಸ ಅಂಥ ಒದ್ದಾಡ್ತಾ ಇದೀರಾ? 

ಜೀವನಕ್ಕಿಂತ ದೊಡ್ಡ ಕನಸುಗಳನ್ನು ಬೆನ್ನಟ್ಟುವ, ತನಗೆ ನಿಜವಾಗಿ ಬೇಕಾದುದೇನು ಎಂದೂ ಯೋಚಿಸಲೂ ಪುರುಸೊತ್ತಿಲ್ಲದಂತೆ ಹಣದ ಹಿಂದೆ ಓಡುತ್ತಿರುವ ಈ ಜಮಾನಾದಲ್ಲಿ ಬಹುತೇಕರು ತಮ್ಮ ಜೀವನಶೈಲಿಯನ್ನೇ ಇದಕ್ಕಾಗಿ ಪಣಕ್ಕಿಟ್ಟಿದ್ದಾರೆ. ಆಫೀಸಿಗೆ ಓಡುವ ಭರದಲ್ಲಿ ಬ್ರೇಕ್‌ಫಾಸ್ಟ್ ಬಿಟ್ಹಾಕಿ, ಮುಖ್ಯವಾದ ಪ್ರೆಸೆಂಟೇಶನ್‌ಗೋಸ್ಕರ ಮಧ್ಯಾನ್ಹದ ಹಸಿವನ್ನು ಕಟ್ಟಿಕೊಂಡು, ಕಡೆಗೆಲ್ಲೋ ಗ್ಯಾಪಲ್ಲಿ ಚೀಸ್ ಸ್ಯಾಂಡ್‌ವಿಚ್, ಪಿಜ್ಜಾವನ್ನು ಮನಸೋ ಇಚ್ಛೆ ಹೊಟ್ಟೆಗಿಳಿಸಿ ಸಮಾಧಾನ ಪಟ್ಟುಕೊಂಡು, ಇಡೀ ದಿನದ ಒತ್ತಡ ಕಳೆಯಲು ಪಬ್‌ನತ್ತ ಹೋಗಿ ಕುಡಿದು ಕುಣಿದು ಕುಪ್ಪಳಿಸಿ ಮನೆಗೆ ಬಂದರೆ, ಮಲಗಲು ಸಿಗೋದು ಮೂರು ಮತ್ತೊಂದು ಗಂಟೆ. ಅದರಲ್ಲೂ ನಿದ್ದೆ ಹತ್ತಿರ ಸುಳಿಯದೆ ಸತಾಯಿಸಿ ಕಿರಿಕಿರಿ ಮಾಡಿಸುತ್ತದೆ. ಪಬ್ ಯೋಚನೆ ಬಿಟ್ಟು ನಿದ್ದೆಯ ಕನಸಲ್ಲೇ ಮನೆಗೆ ಬೇಗ ಧಾವಿಸಿದರೆ ಅಂದೇ ಮಿಡ್‌ನೈಟಲ್ಲೊಂದು ಮೀಟಿಂಗ್ ಕಾಲ್ ಆರೇಂಜ್ ಆಗಿರುತ್ತದೆ. 

ಪಿರಿಯಡ್ಸ್ ನೋವು ಕಡಿಮೆಯಾಗಲು ಸೆಲೆಬ್ರಿಟಿ ಡಯಟೀಶಿಯನ್ ನೀಡಿದ ಟಿಪ್ಸ್!...

ನಿದ್ರೆಗಿಲ್ಲ ಸಪ್ಲಿಮೆಂಟ್
ಇದು ನಮ್ಮ ಅತ್ಯಾಧುನಿಕ ಜೀವನಶೈಲಿ. ಬುಡಕ್ಕೆ ಬೆಂಕಿ ಹಚ್ಚಿಕೊಂಡು ಕರಿಯರ್ ಎಂಬ ಮರದ ರೆಂಬೆಕೊಂಬೆಗಳು ಅಗಲಾಗಲಿ ಎಂದು ಕನವರಿಸುವ ನಾವು ನೀವು. ಹೌದು, ದೇಹ, ಮನಸ್ಸಿಗೆ ವಿಶ್ರಾಂತಿಯನ್ನೇ ನೀಡದೆ, ದುಡಿ ದುಡಿ ಎಂದು ಅತ್ಯುತ್ತಮವಾದುದನ್ನು ನೀಡಲು ಒದ್ದಾಡುವ ನಾವು ನೀವು. ವಿಟಮಿನ್ಸ್, ಮಿನರಲ್ಸ್ ಕೊರತೆಯನ್ನು ಮಾತ್ರೆ ತೆಗೆದುಕೊಂಡು ನೀಗಿಸಿಕೊಳ್ಳಬಹುದು. ಆದರೆ, ನಿದ್ರೆಯ ಕೊರತೆ ನೀಗಿಸಲು ಯಾವ ಸಪ್ಲಿಮೆಂಟ್ ಸಿಗುತ್ತದೆ? ನಿದ್ರೆಗೆ ಸಮಯವಲ್ಲದೆ ಇನ್ಯಾವ ಸಪ್ಲಿಮೆಂಟ್ ಕೂಡಾ ಕೆಲಸ ಮಾಡದು. 

ಕರಿಯರ್ ಕೆಡಿಸೋ ನಿದ್ರಾಹೀನತೆ
ಒಂದೋ ಎರಡೋ ದಿನ ನಿದ್ದೆಗೆಟ್ಟು ಪ್ರಾಜೆಕ್ಟ್ ಸಿದ್ಧಪಡಿಸಿ, ಕ್ಲೈಂಟ್‌ಗೆ ಉತ್ತಮ ಬಿಸ್ನೆಸ್ ಸ್ಟ್ರಾಟಜಿ ನೀಡಿ ಆಫೀಸ್ ತುಂಬಾ ಹೊಗಳಿಕೆಗಳನ್ನು ಗಿಟ್ಟಿಸಿಕೊಂಡಿರಬಹುದು. ಆದರೆ, ಇದೇ ನಿರಂತರವಾದಲ್ಲಿ ನಿಮ್ಮ ಕರಿಯರ್ ಕತೆ ಮುಗಿಯಿತೆಂದೇ ತಿಳಿದುಕೊಳ್ಳಿ. ಹೌದು, ಸುಮ್ಮನೆ ಹೆದರಿಸುತ್ತಿಲ್ಲ, ಪ್ರತಿದಿನ ಸರಿಯಾಗಿ ನಿದ್ರೆಯಿಲ್ಲದೆ ಗುಣಮಟ್ಟದ ಕೆಲಸ, ಚಿಂತನೆಗಳು ಅಸಾಧ್ಯ. 

ಕೊರೋನಾ ಆತಂಕ ನಿವಾರಣೆಗೆ ಯೋಗ, ಧ್ಯಾನ, ಪ್ರಾಣಾಯಾಮ ಮದ್ದು!...

ಉತ್ತಮ ಫಲಿತಾಂಶಕ್ಕಾಗಿ ಉತ್ತಮ ನಿದ್ರೆ ಏಕೆ ಬೇಕು?
ನಿದ್ರೆಯಿಂದ ದೇಹ ರಿಚಾರ್ಜ್ ಆಗುತ್ತದೆ ಎಂದು ಹೇಳಿದರೆ ಉತ್ತರ ಕ್ಲೀಶೆ ಎನಿಸಬಹುದು. ಹಾಗಾಗಿ, ನಿದ್ರೆಯ ಹಿಂದಿನ ವಿಜ್ಞಾನ ಏನನ್ನುತ್ತದೆ ನೋಡೋಣ. ರೊಚೆಸ್ಟರ್ ವಿಶ್ವವಿದ್ಯಾಲಯದ ಅಧ್ಯಯನಗಳು ಹಾಗೂ ಸಂಶೋಧನೆಯ ಪ್ರಕಾರ, ನಿದ್ರೆಯು ದೇಹಕ್ಕೆ ಕ್ಲೆನ್ಸರ್ ರೀತಿ ಕೆಲಸ ಮಾಡುತ್ತದೆ. ನಾವು ನಿದ್ರಿಸಿದಾಗ ನಮ್ಮ ಮೆದುಳು ನ್ಯೂರಾನ್‌ಗಳಲ್ಲಿ ಸೇರಿಕೊಂಡ ವಿಷಕಾರಿ ಪ್ರೋಟೀನ್‌ಗಳನ್ನು ತೆಗೆದು ಹಾಕುತ್ತದೆ. ಈ ವಿಷಕಾರಿ ಪ್ರೋಟೀನ್‌ಗಳು ನಾವು ಎಚ್ಚರ ಸ್ಥಿತಿಯಲ್ಲಿದ್ದಾಗ ನಡೆಸಿದ ನ್ಯೂರಲ್ ಚಟುವಟಿಕೆಗಳ ಬೈ ಪ್ರಾಡಕ್ಟ್ಸ್. ನಾವು ನಿದ್ರಿಸುವಾಗ, ಬಹುತೇಕ ನರಗಳು ರೆಸ್ಟ್ ಮಾಡುತ್ತಿರುವ ಸಂದರ್ಭದಲ್ಲಿ ಮಾತ್ರ ಮೆದುಳಿಗೆ ಈ ಕ್ಲೆನ್ಸಿಂಗ್ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತದೆ. ನಿದ್ರೆಯ ಕೊರತೆಯಾದಾಗ ಈ ಪ್ರಮುಖ ಚಟುವಟಿಕೆ ಸಾಧ್ಯವಾಗದೆ ಇರುವುದರಿಂದ ನಿಧಾನವಾಗಿ ನಮ್ಮ ಯೋಚನಾ ಶಕ್ತಿ, ಮೆದುಳಿನ ಮೂಲಕ ಮಾಡಬಹುದಾದ ಎಲ್ಲ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ. 

ನಿದ್ರೆ ಹೀನತೆಯಿಂದ ಮೆದುಳಿನ ಈ ಕಾರ್ಯಗಳಿಗೆ ಅಡ್ಡಿಯಾಗುತ್ತದೆ.
- ವೈಚಾರಿಕ ಚಿಂತನೆಗೆ ಅಡ್ಡಿ
- ನೆನಪಿನ ಶಕ್ತಿ ಕುಂಠಿತ
- ಸುಖಾಸುಮ್ಮನೆ ಕಿರಿಕಿರಿ
- ಹೆಚ್ಚುವ ಒತ್ತಡ
- ರೋಗ ನಿರೋಧಕ ವ್ಯವಸ್ಥೆ ಅಸ್ತವ್ಯಸ್ಥ
- ಪ್ರತಿಕ್ರಿಯೆ ನೀಡುವ ವೇಗ ಕುಗ್ಗುವಿಕೆ
- ಸ್ಫಷ್ಟ ಯೋಚನೆಗಳು ಅಸಾಧ್ಯ
- ಏಕಾಗ್ರತೆಯ ಕೊರತೆ
 ಇವಿಷ್ಟೇ ಅಲ್ಲ, ನಿದ್ರಾಹೀನತೆಯಿಂದಾಗಿ ಆತಂಕ, ಚಿಂತೆ ಹೆಚ್ಚಾಗಿ ಮಾನಸಿಕ ಅಸಮತೋಲನ ಉಂಟಾಗುತ್ತದೆ, ಭಾವನಾತ್ಮಕವಾಗಿ ವೀಕ್ ಆಗುತ್ತೇವೆ. ಇಕ್ಯೂ ಹಾಗೂ ಐಕ್ಯೂ ಎರಡೂ ಕುಗ್ಗಿ, ಕಳೆದು ಹೋದಂತೆನಿಸುತ್ತದೆ. ಇಷ್ಟೆಲ್ಲ ಆದ ಮೇಲೆ ನಮ್ಮ ಉದ್ಯೋಗಕ್ಕಾಗಲೀ, ಸಂಬಂಧಗಳಿಗಗಾಗಲೀ, ನ್ಯಾಯ ಒದಗಿಸಲು ಹೇಗೆ ತಾನೇ ಸಾಧ್ಯವಾಗುತ್ತದೆ? ಹಾಗಾಗಿ, ನಿದ್ರಾಹೀನತೆಯು ಕರಿಯರ್ ಹಾಳು ಮಾಡುತ್ತದೆ. ಇಂಥ ಸಂದರ್ಭದಲ್ಲೇ ಮನೆಯ ಟೆನ್ಷನ್ ಕಚೇರಿಗೆ ನುಗ್ಗುವುದು, ಕಚೇರಿಯ ಒತ್ತಡ ಮನೆಗೆ ಬಂದು ಸಂಬಂಧ ಹಾಳು ಮಾಡುವುದು. 

7-8 ಗಂಟೆ ನಿದ್ದೆ ಬೇಕೇ ಬೇಕು
ಹಾಗಾಗಿ, ಪ್ರತಿ ರಾತ್ರಿ 7-8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡಿದಿರಾದಲ್ಲಿ ಮಾತ್ರ ಗುಣಮಟ್ಟದ ಕೆಲಸ ನೀಡಿ, ಎಲ್ಲ ಲಕ್ಷುರಿ ಕನಸುಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗಾಗಿ, ಮೊದಲು ನಿಮ್ಮ ಆರೋಗ್ಯ, ದಿನಚರಿ, ನಿದ್ರೆಯತ್ತ ಗಮನ ಹರಿಸಿ. ಉಳಿದಿದ್ದೆಲ್ಲವೂ ತಾವಾಗಿಯೇ ಒದಗಿ ಬರುತ್ತವೆ.