ರಾಜ್ಯಾದ್ಯಂತ ಡೆಂಘೀ ಹಾವಳಿ, ಆಘಾತಕಾರಿ ರೀತಿಯಲ್ಲಿ ಸೋಂಕು ಏರಿಕೆ!
ಕರ್ನಾಟಕದಲ್ಲಿ ಡೆಂಘೀ ವಿಪರೀತವಾಗುತ್ತಿದೆ. ತೀವ್ರಗತಿಯಲ್ಲಿ ಸೋಂಕು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಂಕಿತರಿಗೆ ಬೆಡ್ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಡೆಂಘೀ ಜ್ವರ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ಸಲ ಮಳೆಗಾಲ ಆರಂಭವಾದಾಗಿನಿಂದ ಮಳೆಯ ಕಣ್ಣಾಮುಚ್ಚಾಲೆ ಹಾಗೂ ಬಿಸಿಲು ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗದೆ ವಾತಾವರಣದಲ್ಲಿ ವ್ಯತ್ಯಯವಾಗಿರುವುದು, ಅದರ ಜೊತೆಗೆ ಸೊಳ್ಳೆಗಳ ಹಾವಳಿಯೂ ಹೆಚ್ಚಿರುವುದರಿಂದ ಡೆಂಘೀ ಜ್ವರದ ಸೋಂಕು ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಬೆಂಗಳೂರಿನಲ್ಲಿ ಡೆಂಘೀ ಹೆಚ್ಚುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಸಭೆ ನಡೆಸಿ ಕ್ರಮ ಹಾಗೂ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿದ್ದಾರೆ. ಅದರಂತೆ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಸೋಂಕು ಬೆಂಗಳೂರಿಗೆ ಸೀಮಿತವಾಗಿಲ್ಲ. ರಾಜ್ಯದ ಬಹುತೇಕ ಕಡೆ ಡೆಂಘೀ ಈ ಬಾರಿ ವ್ಯಾಪಕವಾಗಿ ಹರಡುತ್ತಿದೆ. ತಾಲೂಕುಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಡೆಂಘೀ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ. ಬಹುಶಃ ಆರೋಗ್ಯ ಇಲಾಖೆ ಈ ಬಗ್ಗೆ ಸಮಗ್ರ ಅಂಕಿಅಂಶಗಳನ್ನೇ ತರಿಸಿಕೊಂಡಂತಿಲ್ಲ. ಏಕೆಂದರೆ ಬೆಂಗಳೂರಿನ ಹೊರಗೆ ಡೆಂಘೀ ಸೋಂಕು ಹರಡುತ್ತಿರುವ ಬಗ್ಗೆ ಆರೋಗ್ಯಾಧಿಕಾರಿಗಳು ಮಾತನಾಡುತ್ತಿಲ್ಲ. ಆದರೆ, ಹಳ್ಳಿಹಳ್ಳಿಗಳಲ್ಲೂ ಡೆಂಘೀ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ವರದಿಗಳಂತೂ ಬರುತ್ತಿವೆ.
ಇದು ಪ್ರತಿ ವರ್ಷ ಡೆಂಘೀ ಹರಡುವ ಸಮಯ ಹೌದು ಎಂಬುದು ನಿಜ. ಆದರೆ ಈ ವರ್ಷ ಸೋಂಕು ಹರಡುವಿಕೆ ತೀವ್ರವಾಗಿದೆ ಮತ್ತು ಅದಕ್ಕೆ ತಕ್ಕಂತೆ ಆಡಳಿತ ವ್ಯವಸ್ಥೆಯಿಂದ ಸ್ಪಂದನೆ ಕಾಣಿಸುತ್ತಿಲ್ಲ. ಇದು ಸೊಳ್ಳೆಗಳಿಂದಲೇ ಹರಡುವ ವೈರಸ್. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಡೆಂಘೀ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಔಷಧಗಳು ಸಿಗುವಂತೆ ನೋಡಿಕೊಳ್ಳುವುದು, ಪ್ಲೇಟ್‌ಲೆಟ್ಸ್ ಪೂರೈಕೆ, ಸೊಳ್ಳೆಗಳ ನಾಶಕ್ಕೆ ಫಾಗಿಂಗ್ ಮುಂತಾದ ಕ್ರಮಗಳು ಹೀಗೆ ಸರ್ಕಾರ ಮತ್ತು ಸ್ಥಳೀಯಾಡಳಿತಗಳು ಮಾಡಬೇಕಾದ ಕೆಲಸ ಸಾಕಷ್ಟಿದೆ. ಡೆಂಘೀ ಬೆನ್ನಲ್ಲೇ ಇನ್ನು ಚಿಕೂನ್ ಗುನ್ಯಾ ಕೂಡ ಕಾಣಿಸಿಕೊಳ್ಳಬಹುದು. ಅದಕ್ಕೂ ಔಷಧ ಮತ್ತು ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ.
ಬೆಂಗಳೂರಲ್ಲಿ ಹೆಚ್ಚುತ್ತಿದೆ ಡೆಂಘೀ; ನಿಮ್ಮ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳೋದು ಹೇಗೆ?
ಡೆಂಘೀ ಜ್ವರ ಸಾಮಾನ್ಯ ಜ್ವರದಂತಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೇ ಹಾನಿ ಮಾಡಬಹುದು. ಬಡವರು, ಅನಕ್ಷರಸ್ಥರು ಹಾಗೂ ಆರೋಗ್ಯದ ವಿಷಯದಲ್ಲಿ ಸಾಕಷ್ಟು ಮಾಹಿತಿ ಇಲ್ಲದವರು ಇರುವ ಕಡೆ ಸ್ಥಳೀಯಾಡಳಿತಗಳು ಹೆಚ್ಚಿನ ಮುತುವರ್ಜಿ ವಹಿಸಿ ಈ ಸೋಂಕನ್ನು ಎದುರಿಸಲು ಜನರನ್ನು ಸಜ್ಜುಗೊಳಿಸುವ ಅಗತ್ಯವಿದೆ. ಎಲ್ಲಕ್ಕಿಂತ ಮೊದಲು ಜಿಲ್ಲೆಗಳಿಂದ ಡೆಂಘೀ ಕುರಿತ ಅಂಕಿಅಂಶಗಳನ್ನು ತರಿಸಿಕೊಂಡು ಆರೋಗ್ಯ ಇಲಾಖೆ ತಕ್ಷಣವೇ ಮುಂದಿನ ಕ್ರಮ ಕೈಗೊಳ್ಳಬೇಕಿದೆ.