Health Tips : ಬೇಸಿಗೆಯಲ್ಲಿ ಹೆಚ್ಚು ಕಾಡುವ ಫುಡ್ ಪಾಯಿಸನ್ ನಿಂದ ರಕ್ಷಣೆ ಹೇಗೆ?
ಅನೇಕ ಬಾರಿ ನಾವು ತಿನ್ನುವ ಆಹಾರ ರುಚಿಯಾಗಿಯೇ ಇರುತ್ತದೆ. ಆದ್ರೆ ಹೊಟ್ಟೆಗೆ ಹೋದ್ಮೇಲೆ ಅದರ ಪ್ರಭಾವ ತೋರಿಸುತ್ತದೆ. ಇದಕ್ಕೆ ಕಾರಣ ಹಾಳಾದ ಅಥವಾ ತುಂಬಾ ದಿನದ ಹಿಂದೆ ತಯಾರಿಸಿದ ಆಹಾರ ಸೇವನೆ. ಹೊಟ್ಟೆ ಕೆಡಬಾರದು, ಫುಡ್ ಪಾಯಿಸನ್ ಸಮಸ್ಯೆಯಾಗಬಾರದು ಅಂದ್ರೆ ಕೆಲ ಟಿಪ್ಸ್ ಅನುಸರಿಸಬೇಕು.
ಫುಡ್ ಪಾಯಿಸನ್ (Food Poison) ಬೇಸಿಗೆಯಲ್ಲಿ ಕಾಡುವ ದೊಡ್ಡ ಸಮಸ್ಯೆಗಳಲ್ಲಿ ಒಂದು. ಆಹಾರ ಕಲುಷಿತವಾಗಿ ಅನೇಕ ಅನಾರೋಗ್ಯ (Illness ) ಸಮಸ್ಯೆ ಎದುರಿಸಬೇಕಾಗುತ್ತದೆ. ಕೇರಳ (Kerala) ದಲ್ಲಿ ಕೆಲ ದಿನಗಳ ಹಿಂದೆ ಫುಡ್ ಪಾಯಿಸನ್ ಗೆ 16 ಮಕ್ಕಳು ಸಾವನ್ನಪ್ಪಿದ್ದಾರೆ. ಬೇಸಿಗೆಯಲ್ಲಿ ಅತಿ ಹೆಚ್ಚು ಕಾಡುವ ಫುಡ್ ಪಾಯಿಸನ್ ಅಂದ್ರೇನು? ಅದ್ರ ಲಕ್ಷಣವೇನು ಎಂಬುದನ್ನೆಲ್ಲ ನಾವಿಂದು ತಿಳಿದುಕೊಳ್ಳೋಣ.
ಫುಡ್ ಪಾಯಿಸನ್ ಎಂದರೇನು ? : ಹಾಳಾದ ಆಹಾರದಿಂದ ಉಂಟಾಗುವ ಕಾಯಿಲೆಗೆ ಫುಡ್ ಪಾಯಿಸನ್ ಎನ್ನುತ್ತೇವೆ. ಹಳಸಿದ, ಕಲುಷಿತ, ಹಾಳಾದ ಅಥವಾ ಕೊಳೆತ ಆಹಾರವನ್ನು ಸೇವಿಸುವುದರಿಂದ ಫುಡ್ ಪಾಯಿಸನ್ ಉಂಟಾಗುತ್ತದೆ. ಬ್ಯಾಕ್ಟೀರಿಯಾದ ಸೋಂಕಿನಿಂದಲೂ ಫುಡ್ ಪಾಯಿಸನ್ ಉಂಟಾಗುತ್ತದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ಫುಡ್ ಪಾಯಿಸನ್ ಸಮಸ್ಯೆ ಹೆಚ್ಚಾಗುತ್ತದೆ. ಏಕೆಂದರೆ ಬೇಸಿಗೆಯಲ್ಲಿ ಬ್ಯಾಕ್ಟೀರಿಯಾಕ್ಕೆ ಒಡ್ಡಿಕೊಳ್ಳುವುದರಿಂದ ಆಹಾರವು ಬೇಗನೆ ಹಾಳಾಗುತ್ತದೆ ಮತ್ತು ಇದರಿಂದಾಗಿ ಫುಡ್ ಪಾಯಿಸನ್ ಅಪಾಯವೂ ಹೆಚ್ಚಾಗುತ್ತದೆ. ಫುಡ್ ಪಾಯಿಸನ್ ಅಪಾಯವು ಸಾಮಾನ್ಯವಾಗಿ ಚಿಕ್ಕ ಮಕ್ಕಳು ಮತ್ತು ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ.
ವಿಪರೀತ ಬಿಸಿಲಿನ ಮಧ್ಯೆ ಕಣ್ಣುಗಳನ್ನು ಹೀಗೆ ಜೋಪಾನ ಮಾಡಿ
ಫುಡ್ ಪಾಯಿಸನ್ ಲಕ್ಷಣಗಳು : ಆಹಾರ ಸೇವನೆ ಮಾಡಿದ ನಂತ್ರ ತೀವ್ರ, ಹೊಟ್ಟೆ ನೋವು ಮತ್ತು ಹೊಟ್ಟೆ ಸೆಳೆತ ಕಾಣಿಸಿಕೊಳ್ಳುತ್ತದೆ. ಅತಿಸಾರ ಮತ್ತು ವಾಂತಿ ಕಾಣಿಸಿಕೊಳ್ಳುವುದಿದೆ. ಸುಸ್ತು ಹಾಗೂ ಕೆಲವರಿಗೆ ಜ್ವರ ಹಾಗೂ ತಲೆ ತಿರುಗುವು ಸಮಸ್ಯೆ ಎದುರಾಗುತ್ತದೆ.
ಫುಡ್ ಪಾಯಿಸನ್ ತಪ್ಪಿಸುವುದು ಹೇಗೆ? :
• ಯಾವಾಗಲೂ ಬಿಸಿ, ತಾಜಾ, ಶುದ್ಧ ಮತ್ತು ಮನೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಬೇಕು. ಬೇಸಿಗೆಯಲ್ಲಿ ಸಾಧ್ಯವಾದಷ್ಟು ಮನೆ ಆಹಾರವನ್ನು ಸೇವನೆ ಮಾಡಿ. ಹಾಗೆಯೇ ನಿನ್ನೆ, ಮೊನ್ನೆ ತಯಾರಿಸಿದ ಆಹಾರದಿಂದ ದೂರವಿರಿ.
• ಬೇಯಿಸಿದ ಆಹಾರವನ್ನು ಪದೇ ಪದೇ ಬಿಸಿ ಮಾಡಿ ತಿನ್ನುವ ಅಭ್ಯಾಸ ಅನೇಕರಿಗಿರುತ್ತದೆ. ಪದೇ ಪದೇ ಬೇಯಿಸಿದ್ರೆ ಸೋಂಕು ಹೆಚ್ಚಾಗುತ್ತದೆ. ಹಾಗೆ ಫುಡ್ ಪಾಯಿಸನ್ ಅಪಾಯವನ್ನುಹೆಚ್ಚಿಸುತ್ತದೆ. ಆದ್ದರಿಂದ, ಬಹಳ ಹಿಂದೆಯೇ ತಯಾರಿಸಿದ ಆಹಾರವನ್ನು ಸೇವಿಸಬೇಡಿ. ತಯಾರಿಸಿದ ಆಹಾರವನ್ನು ಆಗಾಗ ಬಿಸಿ ಮಾಡಬೇಡಿ.
• ಮನೆಯಲ್ಲಿರುವ ಸಾಕು ಪ್ರಾಣಿಗಳನ್ನು ಅಡುಗೆ ಮನೆಗೆ ಕರೆತರಬೇಡಿ. ಹಾಗೆಯೇ ಅಡುಗೆ, ಆಹಾರದಿಂದ ಸಾಕುಪ್ರಾಣಿಗಳು ದೂರವಿರುವಂತೆ ನೋಡಿಕೊಳ್ಳಿ. ನೀವು ಆಹಾರ ಸೇವನೆ ಮಾಡುವಾಗ ಕೂಡ, ಪ್ರಾಣಿಗಳನ್ನು ದೂರವಿಡಿ.
• ಹಳಸಿದ ಆಹಾರವನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ.
• ನಿಮ್ಮ ಆಹಾರವನ್ನು ಯಾವಾಗಲೂ ಮುಚ್ಚಿಡಿ. ಬೇಸಿಗೆಯಲ್ಲಿ, ಅಡುಗೆ ಮಾಡಿದ ನಂತರ ಆಹಾರವನ್ನು ತಣ್ಣಗಾಗಿಸಿ ಮತ್ತು ನಂತರ ಅದನ್ನು ಫ್ರಿಜ್ ನಲ್ಲಿ ಇರಿಸಿ. ಇದರಿಂದ ಆಹಾರ ಹಾಳಾಗುವ ಸಾಧ್ಯತೆ ಕಡಿಮೆಯಿರುತ್ತದೆ.
• ತರಕಾರಿಗಳು, ಹಸಿ ಮಸಾಲೆಗಳು, ಒಣ ಮಸಾಲೆಗಳು, ಎಣ್ಣೆ ಮತ್ತು ಉಪ್ಪು ಮುಂತಾದ ಕಚ್ಚಾ ಆಹಾರವನ್ನು ಸುರಕ್ಷಿತವಾಗಿಡಲು ಅಗತ್ಯ ಪ್ರಯತ್ನಗಳನ್ನು ಮಾಡಿ. ಹುಳ ಹಿಡಿದ ಮಸಾಲೆಗಳನ್ನು ಬಳಸಬೇಡಿ.
Bad for Brain: ಮಿದುಳನ್ನು ಕುಗ್ಗಿಸುವ ಕೆಲವು ಅಭ್ಯಾಸಗಳಿಗೆ ಬೈ ಹೇಳಿ
• ಬಿಸ್ಕತ್ತುಗಳು, ಕುಕೀಸ್ ಮತ್ತು ಉಪ್ಪು ಅಥವಾ ಒಣ ತಿಂಡಿಗಳನ್ನು ತೆರೆದಿಡುವ ಬದಲು ಗಾಳಿಯಾಡದ ಡಬ್ಬದಲ್ಲಿ ಮುಚ್ಚಿಡಿ.
• ಪ್ಯಾಕೇಜ್ ಮಾಡಿದ ಆಹಾರಗಳ ಮುಕ್ತಾಯ ದಿನಾಂಕವನ್ನು ಪರಿಶೀಲಿಸಿ ಮತ್ತು ಮುಕ್ತಾಯ ದಿನಾಂಕದ ನಂತರ ಎಂದಿಗೂ ತಿನ್ನಬೇಡಿ.
• ರೊಟ್ಟಿ ಹಿಟ್ಟು ಅಥವಾ ದೋಸೆ ಹಿಟ್ಟನ್ನು ಫ್ರಿಜ್ ನಲ್ಲಿ ಇರಿಸಿದ್ದರೆ ಅದನ್ನು ಮೂರ್ನಾಲ್ಕು ದಿನ ಬಳಸಬೇಡಿ. ಒಂದೇ ದಿನಕ್ಕೆ ಆಗುವಷ್ಟು ಮಾತ್ರ ಹಿಟ್ಟು ತಯಾರಿಸಿಕೊಳ್ಳಿ.
• ರೊಟ್ಟಿ ಮಾಡುವಾಗ ಉಳಿದ ಒಣ ಹಿಟ್ಟನ್ನು ಎಸೆಯುವುದು ಒಳ್ಳೆಯದು.
• ಆಹಾರ ಸೇವನೆ ಮಾಡಿದ ನಂತ್ರ ಉಳಿದ ಆಹಾರವನ್ನು ನಾವು ಫ್ರಿಜ್ ನಲ್ಲಿ ಇಡ್ತೇವೆ. ಹಣ್ಣುಗಳನ್ನು ಕೂಡ ನಾವು ಫ್ರಿಜ್ ನಲ್ಲಿ ಇಡ್ತೇವೆ. ಆದ್ರೆ ಮತ್ತೆ ಅದನ್ನು ಸೇವನೆ ಮಾಡುವಾಗ ಅದು ಸರಿಯಾಗಿದೆಯೇ ಎಂದು ಪರೀಕ್ಷಿಸುವುದಿಲ್ಲ. ಆಹಾರ ಹಾಗೂ ಹಣ್ಣನ್ನು ಸೇವನೆ ಮಾಡುವ ಮೊದಲು ಅದರ ಬಣ್ಣವನ್ನು ಪರಿಶೀಲನೆ ಮಾಡಿ. ವಾಸನೆ ಬರ್ತಿದ್ದರೆ ಅಥವಾ ಬಣ್ಣ ಬದಲಾಗಿದ್ದರೆ ಅದನ್ನು ತಿನ್ನಬೇಡಿ.