Asianet Suvarna News Asianet Suvarna News

Cholesterol Level: ರಕ್ತದಲ್ಲಿ ಏಕಾಏಕಿ ಕೊಬ್ಬು ಹೆಚ್ಚೋಕೆ ಏನ್ ಕಾರಣ ಗೊತ್ತಾ?

ದೇಹಾರೋಗ್ಯಕ್ಕೆ ಉತ್ತಮ ಕೊಬ್ಬಿನ ಪ್ರಮಾಣ ಎಷ್ಟು ಅಗತ್ಯವೋ ಅಷ್ಟೇ ಅನಗತ್ಯ ಕೆಟ್ಟ ಕೊಬ್ಬಿನ ಪ್ರಮಾಣ. ಆದರೆ, ನಮ್ಮ ಆಹಾರ, ಒತ್ತಡ ಮುಂತಾದ ಕಾರಣಗಳಿಂದ ಕೆಟ್ಟ ಕೊಬ್ಬಿನ ಪ್ರಮಾಣವೇ ಹೆಚ್ಚುತ್ತ ಸಾಗುತ್ತದೆ. ಹಾಗೆಯೇ ರಕ್ತದಲ್ಲಿ ಏಕಾಏಕಿ ಕೊಬ್ಬು ಹೆಚ್ಚಾಗಲು ಕೆಲವು ಆಹಾರ, ಚಟಗಳೂ ಕಾರಣವಾಗಬಲ್ಲವು.
 

Blood cholesterol suddenly increases by these foods
Author
Bangalore, First Published Aug 17, 2022, 6:37 PM IST

ನಮ್ಮ ದೇಹದಲ್ಲಿ ಜಿಡ್ಡಿನಂತೆ ಇರುವ ಪದಾರ್ಥವೇ ಕೊಬ್ಬು. ದೇಹಕ್ಕೆ ಒಳ್ಳೆಯ ಕೊಬ್ಬಿನ ಅಗತ್ಯ ಇದ್ದೇ ಇದೆ. ಕೋಶಗಳು ವಿಟಮಿನ್ ಡಿ ಉತ್ಪಾದನೆ ಮಾಡಲು ಕೊಬ್ಬಿನ ಕೊಡುಗೆ ಮಹತ್ವದ್ದು. ದೇಹಕ್ಕೆ ಅಗತ್ಯವಾಗಿರುವಷ್ಟು ಕೊಬ್ಬನ್ನು ನಮ್ಮ ಯಕೃತ್ತು ಅಂದರೆ ಲಿವರ್ ಉತ್ಪಾದನೆ ಮಾಡುತ್ತದೆ. ದೇಹದಲ್ಲಿ ನಡೆಯುವ ಅದೆಷ್ಟೋ ಪ್ರಕ್ರಿಯೆಗಳ ಫಲವಾಗಿ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತ ಹೋಗುತ್ತದೆ. ಇದು ಆರೋಗ್ಯಕ್ಕೆ ಉತ್ತಮವಲ್ಲ. ಇದರಿಂದ ಹೃದಯರೋಗಗಳು ಮತ್ತು ಪಾರ್ಶ್ವವಾಯುವಿಗೆ ಆಹ್ವಾನ ನೀಡಿದಂತಾಗುತ್ತದೆ. ಕೊಬ್ಬಿನ ಪ್ರಮಾಣ ಹೆಚ್ಚಲು ಅನೇಕ ಕಾರಣಗಳಿರುತ್ತವೆ. ನಾವು ಸೇವಿಸುವ ಆಹಾರದಿಂದ ಹಿಡಿದು ನಾವು ಅನುಭವಿಸುವ ಒತ್ತಡವೂ ಕೊಬ್ಬು ಹೆಚ್ಚಲು ಕಾರಣವಾಗುತ್ತದೆ. ಕೆಲವು ಆಹಾರಗಳಿಂದ ರಕ್ತದಲ್ಲಿ ಕೊಬ್ಬಿನ ಮಟ್ಟ ಏಕಾಏಕಿ ಹೆಚ್ಚುತ್ತದೆ. ಅನಿಯಂತ್ರಿತ ಆಹಾರ, ಅಪೌಷ್ಟಿಕ ಆಹಾರ, ದೈಹಿಕ ಚಟುವಟಿಕೆ ಇಲ್ಲದಿರುವುದೂ ಪ್ರಮುಖ ಕಾರಣವಾಗಿವೆ. ಹಲವು ಜನರಲ್ಲಿ ಜೆನೆಟಿಕ್ ಕಾರಣಗಳಿಂದ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ಇದನ್ನು ಫ್ಯಾಮಿಲಿ ಹೈಪರ್ ಕೊಲೆಸ್ಟ್ರೋಲೆಮಿಯಾ ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ವೈದ್ಯರು ಆಹಾರದಲ್ಲಿ ಬದಲಾವಣೆ, ದಿನವೂ ವಾಕಿಂಗ್ ಮತ್ತು ವ್ಯಾಯಾಮ ಮಾಡಲು ಸಲಹೆ ನೀಡಬಹುದು. ಕೆಲವು ಆಹಾರಗಳಿಂದಲೂ ಕೊಬ್ಬಿನ ಪ್ರಮಾಣ ಏಕಾಏಕಿ ಹೆಚ್ಚುವುದು ಕಂಡುಬರುತ್ತದೆ. 

•    ಅಧಿಕ ಕಾಫಿ (Coffee) ಸೇವನೆ
ಕಾಫಿಯಲ್ಲಿ ಕೆಫೀನ್ (Caffeine) ಅಂಶ ಅಧಿಕವಾಗಿರುತ್ತದೆ. ಈ ಕಾರಣದಿಂದ ರಕ್ತದೊತ್ತಡ (Blood Pressure) ಹೆಚ್ಚುತ್ತದೆ. ಇದರ ಹೊರತಾಗಿ ಕಾಫಿಯ ಸೇವನೆಯಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ (Cholesterol) ಅಥವಾ ಕೊಬ್ಬಿನ ಮಟ್ಟ ತೀವ್ರಗತಿಯಲ್ಲಿ ಹೆಚ್ಚುತ್ತದೆ. 2018ರಲ್ಲಿ ನಡೆಸಲಾಗಿದ್ದ ಅಧ್ಯಯನವೊಂದರ ಪ್ರಕಾರ, ದಿನವೂ ಹಲವಾರು ಬಾರಿ ಕಾಫಿ ಸೇವಿಸುವ ಅಭ್ಯಾಸವುಳ್ಳವರಲ್ಲಿ ಕೆಟ್ಟ ಕೊಬ್ಬು ಅಂದರೆ ಎಲ್ ಡಿಎಲ್ –ಲೋ ಡೆನ್ಸಿಟಿ ಲಿಪೋಪ್ರೊಟೀನ್ (LDL) ಹೆಚ್ಚುತ್ತ ಸಾಗುತ್ತದೆ.

•    ಮಾನಸಿಕ ಒತ್ತಡ (Stress)
ಒತ್ತಡ ಮತ್ತು ಕೊಬ್ಬಿನ ನಡುವೆ ಭಾರೀ ಹತ್ತಿರದ ಸಂಬಂಧವಿದೆ. ಮಾನಸಿಕ ಒತ್ತಡದಿಂದ ದೇಹದಲ್ಲಿ ಕೆಟ್ಟ ಕೊಬ್ಬಿನ ಮಟ್ಟ ಏಕಾಏಕಿ ಹೆಚ್ಚುವುದು ಅಧ್ಯಯನಗಳಿಂದ ಕಂಡುಬಂದಿದೆ. ಒತ್ತಡದಿಂದಾಗಿ ಹೆಚ್ಚು ಸ್ರವಿಕೆಯಾಗುವ ಹಾರ್ಮೋನುಗಳಿಂದ ಕೊಬ್ಬು ಸಹ ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆಯಾಗುತ್ತದೆ. 2020ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಒತ್ತಡವಾದಾಗ ಬಿಡುಗಡೆಯಾಗುವ ಕಾರ್ಟಿಸೋಲ್ ಹಾರ್ಮೋನಿನ (Cortisol) ಮಟ್ಟ ಹೆಚ್ಚಿದಂತೆ ದೇಹದಲ್ಲಿ ಕೆಟ್ಟ ಕೊಬ್ಬಿನ ಪ್ರಮಾಣವೂ ಹೆಚ್ಚುತ್ತದೆ.

•    ಧೂಮಪಾನ (Smoking)
ಧೂಮಪಾನದಿಂದಲೂ ದೇಹದಲ್ಲಿ ಕೆಟ್ಟ ಕೊಬ್ಬಿನ ಪ್ರಮಾಣ ಹೆಚ್ಚುತ್ತದೆ. ಸಿಗರೇಟು ಮತ್ತು ತಂಬಾಕಿನಲ್ಲಿರುವ ನಿಕೋಟಿನ್ (Nicotine) ಇದಕ್ಕೆ ಕಾರಣವಾಗಿದೆ. 20201ರಲ್ಲಿ ನಡೆದ ಅಧ್ಯಯನವೊಂದು, ಧೂಮಪಾನ ಮಾಡುವಾಗ ಅಧಿಕ ಮಟ್ಟದ ನಿಕೋಟಿನ್ ಶ್ವಾಸಕೋಶಗಳ ಮೂಲಕ ರಕ್ತಕ್ಕೆ ಸೇರ್ಪಡೆಯಾಗುವುದನ್ನು ಗುರುತಿಸಿದೆ. ಇದರಿಂದ ದೇಹದಲ್ಲಿ ಕೆಟಕೊಲಮೈನ್ ಬಿಡುಗಡೆಯಾಗುತ್ತದೆ. ಇದರಿಂದ ಲಿಪೊಲಿಸಿಸ್ ಪ್ರಕ್ರಿಯೆ ಚುರುಕಾಗಿ ಕೆಟ್ಟ ಕೊಬ್ಬು ಅಧಿಕ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತದೆ. ಜತೆಗೆ, ಒಳ್ಳೆಯ ಅಥವಾ ಎಚ್ ಡಿಎಲ್ (HDL) ಕೊಬ್ಬಿನ ಪ್ರಮಾಣ ಇಳಿಕೆಯಾಗುತ್ತ ಸಾಗುತ್ತದೆ. 

ಇದನ್ನೂ ಓದಿ: Health Tips: ಸರಿಯಾಗಿ ಅಗಿಯದೇ ತಿಂದ್ರೆ ತೂಕ ಹೆಚ್ಚಾಗುತ್ತೆ ಜೋಪಾನ !

•    ಕೆಲವು ಔಷಧ (Medicine)
ಕೆಲವು ಔಷಧಗಳ ಸೇವನೆಯಿಂದಲೂ ಕೊಬ್ಬಿನ ಮಟ್ಟ ಏರಿಕೆಯಾಗುತ್ತದೆ. ರಕ್ತದೊತ್ತಡ ಕಡಿಮೆಗೊಳಿಸುವ ಔಷಧಗಳು, ಬೀಟಾ ಬ್ಲಾಕರ್ಸ್, ರೆಟಿನಾಯ್ಡ್ಸ್, ಆಂಟಿವೈರಲ್, ಆಂಟಿಸೈಕೋಟಿಕ್ಸ್ ಮುಂತಾದ ಹಲವಾರು ಔಷಧಗಳು ಕೊಬ್ಬಿನ ಮಟ್ಟ ಹೆಚ್ಚಿಸಲು ಕಾರಣವಾಗುತ್ತವೆ. ಆಂಟಿಸೈಕೋಟಿಕ್ಸ್ ಔಷಧಗಳು ತೂಕ ಹೆಚ್ಚಳವಾಗಲು ಸಹ ಕಾರಣವಾಗುತ್ತವೆ. 

•    ಗರ್ಭಾವಸ್ಥೆ (Pregnancy)
ಗರ್ಭಿಣಿಯರಲ್ಲಿ ರಕ್ತದ ಕೊಬ್ಬಿನ ಪ್ರಮಾಣ ಶೇ.30-40ರಷ್ಟು ಏರಿಕೆಯಾಗುತ್ತದೆ. ಭ್ರೂಣದ ಬೆಳವಣಿಗೆ ಮತ್ತು ವಿಕಾಸಕ್ಕಾಗಿ ಕೊಬ್ಬಿನ ಅಗತ್ಯ ಇರುತ್ತದೆ. ಹೀಗಾಗಿ, ಉತ್ಪಾದನೆ ಸಹಜವಾಗಿ ಏರಿಕೆಯಾಗುತ್ತದೆ. 

ಇದನ್ನೂ ಓದಿ: ಪ್ರೋಟೀನ್ ಆಹಾರ ಸೇವನೆ ಅಥವಾ ಪ್ರೋಟೀನ್ ಶೇಕ್‌ ಕುಡಿಯೋದು, ಯಾವುದು ಒಳ್ಳೇದು ?

•    ಏಕಾಏಕಿ ತೂಕ (Weight) ಕಡಿಮೆ ಆಗುವುದು
ಏಕಾಏಕಿ ತೂಕ ಇಳಿಕೆ ಆದರೂ ರಕ್ತದಲ್ಲಿ ಕೊಬ್ಬಿನ ಮಟ್ಟ ಏರಿಕೆಯಾಗುತ್ತದೆ. ಅತಿ ಕಡಿಮೆ ಕ್ಯಾಲರಿಯುಳ್ಳ ಆಹಾರ ಸೇವಿಸಿ ತೂಕ ಇಳಿಸಿಕೊಳ್ಳುವ ಪ್ರಯತ್ನ ನಡೆಸುವವರಲ್ಲಿ ಎಲ್ ಡಿಎಲ್ ಮಟ್ಟ ಹೆಚ್ಚಳವಾಗುತ್ತದೆ. ಹೀಗಾಗಿ, ತೂಕ ಇಳಿಸಿಕೊಳ್ಳಲು ವೈದ್ಯರ ಸಲಹೆ ಅನುಸರಿಸುವುದು ಉತ್ತಮ.


 

Follow Us:
Download App:
  • android
  • ios