ಭಾರತದಲ್ಲಿ ರಕ್ತ ಕ್ಯಾನ್ಸರ್ಗೆ ಪ್ರತಿ ವರ್ಷ 70,000 ಮಂದಿ ಬಲಿ
* ದೇಶದಲ್ಲಿ ರಕ್ತ ಕಾಂಡಕೋಶಗಳ ದಾನಿಗಳ ಕೊರತೆ
* ಸರಳ ಪ್ರಕ್ರಿಯೆ; ಜೀವ ಉಳಿಸಿದ ಸಾರ್ಥಕತೆ
* ಸೂಕ್ತ ಸಂದರ್ಭದಲ್ಲಿ ರಕ್ತ ಕಾಂಡಕೋಶ ಕಸಿ ಚಿಕಿತ್ಸೆಯಿಂದ ಶೇ.70ರಷ್ಟು ರೋಗಿಗಳು ಗುಣಮುಖ
ಬೆಂಗಳೂರು(ಮೇ.27): ಭಾರತದಲ್ಲಿ ರಕ್ತ ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಿರುವ ರಕ್ತ ಕಾಂಡಕೋಶ (ಸ್ಟೆಮ್ ಸೆಲ್) ದಾನಿಗಳ ಕೊರತೆ ಹೆಚ್ಚಿದ್ದು, ಇದರಿಂದ ವಾರ್ಷಿಕ 70 ಸಾವಿರ ಮಂದಿ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದು ನಾರಾಯಣ ಹೆಲ್ತ್ ಕ್ಯಾನ್ಸರ್ ತಜ್ಞ ಡಾ.ಸುನೀಲ್ ಭಟ್ ತಿಳಿಸಿದ್ದಾರೆ.
ರಕ್ತಕ್ಯಾನ್ಸರ್ ಜಾಗೃತಿ ಸಂಸ್ಥೆಯಾದ ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಶನ್ ‘ವಿಶ್ವ ರಕ್ತಕ್ಯಾನ್ಸರ್ ದಿನ’ದ ಅಂಗವಾಗಿ ಗುರುವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಲಿಂಫೋಮಾ, ಲ್ಯೂಕೇಮಿಯಾದಂತಹ ರಕ್ತ ಕ್ಯಾನ್ಸರ್ ಪತ್ತೆಯಾಗುತ್ತಿವೆ. ಈ ರೋಗಿಗಳಿಗೆ ರಕ್ತದಲ್ಲಿರುವ ಕ್ಯಾನ್ಸರ್ ಕಣಗಳನ್ನು ಕೀಮೋಥೆರಪಿಗಳ ಮೂಲಕ ನಾಶ ಮಾಡಿದಾಗ ಹೊಸ ರಕ್ತ ಉತ್ಪತ್ತಿಗೆ ರಕ್ತ ಕಾಂಡಕೋಶಗಳ ಕಸಿ ಅನಿವಾರ್ಯವಾಗಿರುತ್ತದೆ. ಸೂಕ್ತ ಸಂದರ್ಭದಲ್ಲಿ ರಕ್ತ ಕಾಂಡಕೋಶ ಕಸಿ ಚಿಕಿತ್ಸೆಯಿಂದ ಶೇ.70ರಷ್ಟು ರೋಗಿಗಳು ಗುಣಮುಖರಾಗುತ್ತಾರೆ. ಆದರೆ, ದೇಶದಲ್ಲಿ ರಕ್ತ ಕಾಂಡಕೋಶಗಳ ದಾನಿಗಳ ಕೊರತೆ ಇರುವುದರಿಂದ ಕಸಿ ಚಿಕಿತ್ಸೆ ಸಾಧ್ಯವಾಗದೇ ಸಾಕಷ್ಟುಮಂದಿ ಸಾವಿಗೀಡಾಗುತ್ತಿದ್ದಾರೆ ಎಂದರು.
Sex and cancer: ಬ್ಲಡ್ ಕ್ಯಾನ್ಸರ್ ಬಳಿಕ ಸೆಕ್ಸ್ ಜೀವನ ಭಯಾನಕ, ಮಹಿಳೆ ಬಿಚ್ಚಿಟ್ಟ ನೋವಿನ ಕಥೆ!
ರಕ್ತ ಕ್ಯಾನ್ಸರ್ ರೋಗಿಗಳ ಪೈಕಿ ಶೇ.30ರಷ್ಟು ಮಂದಿಗೆ ತಮ್ಮ ಕುಟುಂಬದಲ್ಲೆ ಹೊಂದಾಣಿಕೆಯಾಗುವ ದಾನಿಗಳು ಸಿಗುತ್ತಾರೆ. ಶೇ.70ರಷ್ಟುರೋಗಿಗಳು ದಾನಿಯನ್ನು ಹುಡುಕಿಕೊಳ್ಳಬೇಕಾಗುತ್ತದೆ. ಜಗತ್ತಿನಾದ್ಯಂತ 3.9 ಕೋಟಿ ದಾನಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೇವಲ ಐದು ಲಕ್ಷ ಮಂದಿ ಭಾರತೀಯರಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ದಾನಕ್ಕೆ ನೋಂದಣಿ ಮಾಡಿಸಿಕೊಳ್ಳುವ ಮೂಲಕ ರಕ್ತ ಕ್ಯಾನ್ಸರ್ ರೋಗಿಗಳ ಜೀವ ಉಳಿಸಬೇಕು ಎಂದು ಸಲಹೆ ನೀಡಿದರು.
ಸರಳ ಪ್ರಕ್ರಿಯೆ; ಜೀವ ಉಳಿಸಿದ ಸಾರ್ಥಕತೆ
‘18 ರಿಂದ 50 ವರ್ಷದೊಳಗಿನ ಆರೋಗ್ಯವಂತರು ರಕ್ತ ಕಾಂಡಕೋಶ ದಾನಕ್ಕೆ ಅರ್ಹರಾಗಿರುತ್ತಾರೆ. ಕೇವಲ 5 ನಿಮಿಷದೊಳಗೆ ಡಿಕೆಎಂಎಸ್ ಬಿಎಂಎಸ್‌ಟಿ ಫೌಂಡೇಶನ್ ವೆಬ್‌ಸೈಟ್‌ನಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ ಕ್ಯಾನ್ಸರ್ ರೋಗಿಯ ರಕ್ತವು ಹೊಂದಾಣಿಕೆಯಾದರೆ ಫೌಂಡೇಶನ್‌ನಿಂದ ಕರೆ ಮಾಡುತ್ತಾರೆ. ದಾನ ನೀಡುವ ಪ್ರಕ್ರಿಯೆ ರಕ್ತದಾನಕ್ಕಿಂತಲೂ ಸರಳವಾಗಿದ್ದು, ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾಗಿಲ್ಲ. ಜೀವ ಉಳಿಸಿದ ಸಾರ್ಥಕತೆ ಇದೆ’ಎಂದು ರಕ್ತ ಸ್ಟೆಮ್ ಸೆಲ್ ದಾನಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಇದೇ ವೇಳೆ ರಕ್ತ ಕಾಂಡಕೋಶ ಕಸಿ ಶಸ್ತ್ರಚಿಕಿತ್ಸೆಗೊಳಗಾದ ರೋಗಿಗಳು ದಾನಿಗಳಿಗೆ ಕೃತಜ್ಞತೆ ಅರ್ಪಿಸಿದರು. ನೋಂದಣಿಗೆ: www.dkms-bmst.org/register ಸಂಪರ್ಕಿಸಬಹುದು.