ಅನಿಯಮಿತ ಋತುಸ್ರಾವಕ್ಕೆ ಈ ಮನೆಮದ್ದುಗಳೇ ಬೆಸ್ಟ್ ರೀ!
ಅನಿಯಮಿತ ಋತುಚಕ್ರ ಮಹಿಳೆಯರನ್ನು ಕಾಡುವ ದೊಡ್ಡ ಸಮಸ್ಯೆ. ಋತುಚಕ್ರ ಅನಿಯಮಿತವಾಗಿದ್ದಾಗ, ಮುನ್ಸೂಚನೆಯನ್ನು ಊಹಿಸಲಾಗದಿದ್ದಾಗ ಸಮಸ್ಯೆಯಾಗಿ ಕಾಡುವುದು. ಅಂದರೆ ಒಂದು ತಿಂಗಳು ಅಕಾಲಿಕವಾಗಿರುತ್ತದೆ ಮತ್ತು 2-3 ತಿಂಗಳು ಬರುವುದಿಲ್ಲ. ಋತುಚಕ್ರದ ಮೊದಲ ದಿನದಿಂದ ಮುಂದಿನ ಋತುಚಕ್ರದ ಮೊದಲ ದಿನದವರೆಗೆ, ಋತುಸ್ರಾವದ ನಡುವಿನ ಸಮಯವನ್ನು ಋತುಚಕ್ರ ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಇವು 28 ದಿನಗಳ ಅವಧಿಯಲ್ಲಿ ನಡೆಯುತ್ತವೆ.
ವಿವಿಧ ಮಹಿಳೆಯರಲ್ಲಿ ಪಿರಿಯಡ್ಸ್ ಆವರ್ತವು 28 ದಿನಗಳಿಗಿಂತ ಕಡಿಮೆ ಇರಬಹುದು. ಋತುಚಕ್ರಗಳು 24 ರಿಂದ 38 ದಿನಗಳ ನಡುವೆ ನಿಯಮಿತವಾಗಿ ಬರುತ್ತಿದ್ದರೆ, ಅದನ್ನು ನಿಯಮಿತ ಪೀರಿಯಡ್ ಎಂದೂ ಪರಿಗಣಿಸಲಾಗುತ್ತದೆ. ಈ ಅವಧಿ ಹೆಚ್ಚಾದರೆ ಅಥವಾ ತುಂಬಾ ಕಡಿಮೆಯಾದರೆ ಅದನ್ನು ಅನಿಯಮಿತ ಋತುಸ್ರಾವ ಎಂದು ಕರೆಯಲಾಗುತ್ತದೆ.
ಋತುಚಕ್ರ ನಿಯಂತ್ರಿಸಲು ಮಾಡಬೇಕಾದ ಕೆಲಸಗಳು
ಮಹಿಳೆಯ ಋತುಚಕ್ರ ಅನಿಯಮಿತವಾಗಿದ್ದು, ಅದು ಏಕೆ ಅನಿಯಮಿತವಾಗಿದೆ ಎಂದು ತಿಳಿದ ನಂತರವೇ ಚಿಕಿತ್ಸೆ ನೀಡಲು ಸಾಧ್ಯ. ಋತುಚಕ್ರವನ್ನು ಮತ್ತೆ ಸಾಮಾನ್ಯಗೊಳಿಸಲು ಪ್ರಯತ್ನಿಸಬಹುದಾದ ಲವು ದೇಶೀಯ ಔಷಧಗಳಿವೆ.
ಆಪಲ್ ವಿನೆಗರ್ ಋತುಚಕ್ರಗಳನ್ನು ನಿಯಂತ್ರಿಸಬಹುದು : ಆಪಲ್ ಸೈಡರ್ ವಿನೆಗರ್ ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 2013ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಪ್ರತಿದಿನ 15ml ಆಪಲ್ ವಿನೆಗರ್ ಕುಡಿಯುವುದು ಉತ್ತಮ.
ವಿನೆಗರ್ ಸೇವನೆಯಿಂದ ಪಿಸಿಒಎಸ್ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಅಂಡೋತ್ಪತ್ತಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಆಪಲ್ ವಿನೆಗರ್ ತೂಕ ಇಳಿಸಲು ಮತ್ತು ಇನ್ಸುಲಿನ್ ಮಟ್ಟವನ್ನು ನಿರ್ವಹಿಸಬಲ್ಲದು.
ಮುಟ್ಟಿನ ಸಮಸ್ಯೆ ನಿವಾರಣೆಗೆ ಅನಾನಸ್ ಹಣ್ಣು ತಿನ್ನಿ.
ಅನಾನಸ್ ಹಣ್ಣು ಮುಟ್ಟು ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಅನಾನಸ್‌ನಲ್ಲಿ ಬ್ರೊಮೆಲೈನ್ ಎಂಬ ಕಿಣ್ವವಿದ್ದು, ಇದು ಗರ್ಭಾಶಯ ಗೋಡೆಯ ಒಳ ಪದರವನ್ನು ಮೃದುವಾಗಿಸುತ್ತದೆ.
ಅನಾನಸ್ ಸೇವನೆಯಿಂದ ಋತುಚಕ್ರಗಳನ್ನು ಕ್ರಮಬದ್ಧಗೊಳಿಸಲು ನೆರವಾಗುತ್ತದೆ. ಮುಟ್ಟಿನ ಸಮಯದಲ್ಲಿ ನೋವು ಮತ್ತು ಸೆಳೆತವನ್ನು ಕಡಿಮೆ ಮಾಡಲು ಬ್ರೋಮೆಲೈನ್ ಸಹ ಸಹಾಯ ಮಾಡುತ್ತದೆ.
ದಾಲ್ಚಿನ್ನಿ
ಅಡುಗೆ ಮನೆಯಲ್ಲಿ ಸಿಗುವ ಮಸಾಲೆ ದಾಲ್ಚಿನ್ನಿ, ಅನೇಕ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುತ್ತದೆ. 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಪಿಸಿಒಎಸ್ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಚಿಕಿತ್ಸೆ ನೀಡಲು, ದಾಲ್ಚಿನ್ನಿಯು ಋತುಚಕ್ರವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಆಹಾರದಲ್ಲಿ ದಾಲ್ಚಿನ್ನಿಯನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.
ಅರಿಶಿನವು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ
ಅರಿಶಿನವು ಅನಿಯಮಿತ ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಏಕೆಂದರೆ ಅರಿಶಿನದಲ್ಲಿ ಉರಿಯೂತ ಶಮನಕಾರಿ ಗುಣ, ಕರ್ಕ್ಯುಮಿನ್ ಅಂಶವಿರುವುದರಿಂದ ಉರಿಯೂತವನ್ನು ಕಡಿಮೆ ಮಾಡುತ್ತದೆ.
ವ್ಯಾಯಾಮದ ಮೂಲಕ ತೂಕ ನಿಯಂತ್ರಿಸಿ
ತೂಕದಲ್ಲಿಯೂ ವ್ಯತ್ಯಾಸವಾದರೆ, ಅದು ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಸ್ಥೂಲಕಾಯರಾಗಿದ್ದರೆ, ತೂಕವನ್ನು ಕಡಿಮೆ ಮಾಡಿ ಋತುಚಕ್ರಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ.
ತುಂಬಾ ತೆಳ್ಳಗಿರುವ ಕಾರಣ ಅನಿಯಮಿತ ಋತುಚಕ್ರಕ್ಕೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ತೂಕವಿರುವಂತೆ ನಿಯಮಿತವಾಗಿ ವ್ಯಾಯಾಮ ಮಾಡಿ. ವ್ಯಾಯಾಮವು ಪಿಸಿಒಎಸ್‌ಎಸ್ ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಬೇಕಾದರೆ ಯೋಗ ಮಾಡಬಹುದು.