ಚಿತ್ರದುರ್ಗ: ಲಂಬಾಣಿ ಸಮುದಾಯದಲ್ಲಿ ಸಂಭ್ರಮದ ದೀಪಾವಳಿ!
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ನ.02): ಬೆಳಕಿನ ಹಬ್ಬ ದೀಪಾವಳಿ ಬಂತಂದ್ರೆ ಸಾಕು ಪ್ರತೀ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತೆ. ಆದ್ರೆ ಕೋಟೆನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಬಂಜಾರ ಸಮುದಾಯ ಆಚರಿಸುವ ದೀಪಾವಳಿ ಹಬ್ಬದ ವಿಶೇಷತೆಯೇ ಬೇರೆಯಾಗಿರುತ್ತೆ. ಆ ಕುರಿತಾದ ಒಂದು ಝಲಕ್ ಇಲ್ಲಿದೆ ನೋಡಿ.....
ದಾರಿಯುದ್ದಕ್ಕೂ ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡ್ತಿರೋ ಯುವತಿಯರ ಗುಂಪು. ಮತ್ತೊಂದೆಡೆ ಗುಡ್ಡ, ಬೆಟ್ಟಗಳಿಗೆ ತೆರಳಿ ಹೂವುಗಳನ್ನು ಬಿಡಿಸಿಕೊಂಡು ಮನೆ ಮುಂದೆ ಹಾಕ್ತಿರೋ ಯುವತಿಯರು. ಈ ದೃಶ್ಯಗಳು ಕಂಡು ಬಂದಿದ್ದು, ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಹೊಸ ಲಂಬಾಣಿಹಟ್ಟಿ ಬಳಿ.
ಹೌದು, ದೀಪಾವಳಿ ಹಬ್ಬ ಬಂತಂದ್ರೆ ಸಾಕು ಬಂಜಾರ ಸಮುದಾಯದವರಿಗೆ ಸಂಭ್ರಮ, ಸಡಗರ. ಪ್ರತೀ ಮನೆಯಲ್ಲಿ ಜನರು ದೀಪಗಳನ್ನು ಹಚ್ಚಿ ಹಬ್ಬವನ್ನು ಸಂಭ್ರಮಿಸಿದ್ರೆ, ಈ ಸಮುದಾಯದ ಜನರು ತಮ್ಮ ಸಂಸ್ಕೃತಿ ಉಳಿವಿಗಾಗಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸ್ತಾರೆ. ಅದ್ರಲ್ಲಂತೂ ಮೊದಲನೇ ದಿನ ಎಲ್ಲ ಮದುವೆ ಆಗುವಂತಹ ಯುವತಿಯರು, ಮನೆಯಿಂದ ಅಂದವಾಗಿ ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ಗುಂಪು ಗುಂಪಾಗಿ ಒಂದೆಡೆ ಸೇರಿ ನೃತ್ಯ ಮಾಡೋದೆ ವಿಶೇಷ. ಬಳಿಕ ಎಲ್ಲಾ ಹೆಣ್ಣು ಮಕ್ಕಳು ತಮಟೆ ಸದ್ದಿಗೆ ದಾರಿಯುದ್ದಕ್ಕೂ ಹೆಜ್ಜೆ ಹಾಕುತ್ತಾ ಸಾಗ್ತಾರೆ.
ಎಲ್ಲಾ ಹಬ್ಬಗಳಿಹಿಂದ ದೀಪಾವಳಿ ನಮ್ಮ ಸಮುದಾಯದಲ್ಲಿ ವಿಶೇಷ ಹಬ್ಬವಾಗಿದೆ. ಹಿಂದಿನ ಕಾಲದಲ್ಲಿ ತಿಂಗಳುಗಟ್ಟಲೇ ದೀಪಾವಳಿ ಹಬ್ಬವನ್ನು ನಮ್ಮ ಪೂರ್ವಿಕರು ಆಚರಿಸಿಕೊಂಡು ಬರ್ತಿದ್ದರು. ಕಾಲ ಕ್ರಮೇಣ ಈಗ ಕಡಿಮೆ ಆಗಿದೆ. ನಮ್ಮ ಸಮುದಾಯದ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಸಲುವಾಗಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸ್ತೀವಿ ಅಂತಾರೆ ಯುವತಿಯರು.
ಇನ್ನೂ ದೀಪಾವಳಿ ಹಬ್ಬ ವಿಶೇಷವಾಗಿ ಬಂಜಾರ ಸಮುದಾಯದಲ್ಲಿ ಯಾಕೆ ಢಿಫರೆಂಟ್ ಆಗಿ ಆಚರಿಸ್ತಾರೆ ಅಂದ್ರೆ, ಯೌವ್ವನಾವಸ್ಥೆಗೆ ಬಂದಿರುವಂತಹ ಯುವತಿಯರು ಮುಂದಿನ ವರ್ಷ ಮದುವೆ ಆಗಿ ಮನೆ ಬಿಟ್ಟು ಹೋಗ್ತಾರೆ. ಆ ನಂತರ ಸ್ವಗ್ರಾಮಕ್ಕೆ ಬಂದು ಅದ್ದೂರಿ ಹಬ್ಬ ಆಚರಣೆ ಮಾಡಲು ಆಗಲ್ಲ, ಹಾಗಾಗಿ ಇರುವಾಗಲೇ ಎಲ್ಲರೂ ಖುಷಿಯಿಂದ ಸಂಭ್ರಮ ಪಡಬೇಕು ಎಂದು ಎಲ್ಲಾ ವಯಸ್ಕ ಯುವತಿಯರು ದೀಪಾವಳಿ ಹಬ್ಬವನ್ನ ಎಂಜಾಯ್ ಮಾಡ್ತಾರೆ.
ನಮ್ಮ ಜಿಲ್ಲೆಯಲ್ಲಿ ಭರಮಸಾಗರ, ಹೊಳಲ್ಕೆರೆ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನ ಲಂಬಾಣಿ ತಾಂಡಾಗಳಲ್ಲಿ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗ್ತದೆ. ಪ್ರತೀ ಯುವತಿಯರು ಲಂಬಾಣಿ ಉಡುಗೆಯನ್ನು ತೊಟ್ಟು, ಅಮಾವಾಸೆ ರಾತ್ರಿ ದಿನ ಪ್ರತೀ ಮನೆಗೆ ಕೈಯಲ್ಲಿ ದೀಪವನ್ನು ಹಿಡಿದುಕೊಂಡು ತೆರಳಿ, ನಿಮ್ಮ ಮನೆಯಲ್ಲಿಯೂ ದೀಪ ಬೆಳಗಲಿ, ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸಿ ಬರೋದು ವಾಡಿಕೆಯಾಗಿದೆ. ಅದೇ ರೀತಿ ಎಲ್ಲಾ ಮನೆಗಳಲ್ಲಿ ತಮ್ಮ ಹಿರಿಯರಿಗೆ ಪೂಜೆ ಸಲ್ಲಿಸುವ ಮೂಲಕ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸ್ತೀವಿ ಅಂತಾರೆ. ಒಟ್ಟಾರೆಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಇಂತಹ ವಿಶೇಷ ಆಚರಣೆಗಳು ಉಳಿದುಕೊಂಡಿವೆ ಅನ್ನೋದೆ ಸಂತೋಷದ ಸಂಗತಿ. ಇದೇ ರೀತಿ ಬಂಜಾರ ಸಮುದಾಯದಲ್ಲಿ ದೀಪಾವಳಿ ವರ್ಷ ವರ್ಷ ಅದ್ದೂರಿಯಾಗಿ ನಡೆಯಲಿ, ಅವರ ಸಂಸ್ಕೃತಿ ಉಳಿಯಲಿ ಎಂಬುದು ಎಲ್ಲರ ಆಶಯ.