ಹೆಣ್ಣಿನ ವಿಚಿತ್ರ ಕೂಗು ಕೇಳುವ ಈ ಭಯಾನಕ ಕಾಡಿಗೆ ಹೋದವರು ಮರಳೋಲ್ವಂತೆ!
ವಿಶ್ವದಲ್ಲಿ ಹೀಗೂ ಉಂಟೆ? ಎಂಬ ಘಟನೆಗಳು ಸಾವಿರಾರು ಇವೆ. ಯಾವುದೋ ದ್ವೀಪಕ್ಕೆ ಹೋದವರು ಮರಳಿ ಬಂದವರಿಲ್ಲ, ಇನ್ನು ಯಾವುದೋ ಸ್ಥಳಕ್ಕೆ ಹೋದವರು ಸತ್ತೇ ಹೋಗುತ್ತಾರಂತೆ...ಹೀಗೆ. ಅಂಥ ವಿಸ್ಮಯಗಳಲ್ಲಿ ಇದೂ ಒಂದಾಗಿದ್ದು ಈ ಕಾಡಿಗೆ ತೆರಳಿದವರು ವಾಪಸ್ಸು ಬರೋ ಛಾನ್ಸೇ ಇಲ್ವಂತೆ. ಈ ಭಯಾನಕ ಕಾಡೊಳಗೆ ಇರೋ ಮರಗಳೇ ಚಿತ್ರ, ವಿಚಿತ್ರವಾಗಿರುತ್ತಂತೆ. ಎಂಥವರನ್ನೂ ಭಯ ಬೀಳಿಸುವ ವಾತಾವರಣ ಇರೋ ಈ ಕಾಡು ಎಲ್ಲಿದೆ? ಏನೇನು ವಿಸ್ಮಯ ಘಟನೆಗಳು ಸಂಭವಿಸಿವೆ ಇಲ್ಲಿ. ನೋಡಿ..
ಹೋಯಾ ಬಿಜು ಎನ್ನುವ ಈ ಕಾಡು ಟ್ರಾನ್ಸಿಲ್ವೇನಿಯಾದ ರೋಮಾನಿಯಾದಲ್ಲಿದೆ. ದೆವ್ವಗಳ ರಾಜ ಡ್ರ್ಯಾಕುಲಾಗೆ ಸೇರಿದ ಜಾಗವಂತೆ ಇದು. ಇಲ್ಲಿ ನಡೆಯುವ ಚಿತ್ರ, ವಿಚಿತ್ರ ಘಟನೆಗಳು ಯಾರ ತರ್ಕಕ್ಕೂ ಸಿಗುವುದಿಲ್ಲ.ರೋಮಾನಿಯಾದ ಬರ್ಮುಡಾ ಟ್ರಯಾಂಗಲ್ ಎಂದೂ ಈ ಪ್ರದೇಶವನ್ನು ಕರೆಯುತ್ತಾರೆ.
ಸ್ಥಳೀಯರಿಗೆ ಈ ಪ್ರದೇಶವೊಂದು ದುಃಸ್ವಪ್ನ. ಸುಮಾರು 50 ವರ್ಷಗಳ ಹಿಂದೆ ಇಡೀ ವಿಶ್ವಕ್ಕೆ ಈ ಪ್ರದೇಶದ ಅಸ್ತಿತ್ವ ಅರಿವಿಗೆ ಬಂದಿದೆ. ಆಗಸ್ಟ್ 18, 1968ರಲ್ಲಿ ಮಿಲಿಟರಿ ಟೆಕ್ನಿಷಿಯನ್ ಎಮಿಲ್ ಬರ್ನಿಯಾ ಎಂಬ ವ್ಯಕ್ತಿ ಈ ಪ್ರದೇಶದ ಫೋಟೋ ತೆಗೆದಿದ್ದು, ಅದರಿಂದ ಈ ಕಾಡು ವಿಶ್ವದಲ್ಲಿಯೇ ಪ್ರಸಿದ್ಧಿಯಾಯಿತು.
ಈ ಕಾಡಿನಲ್ಲಿ ರಾತ್ರಿ ಹೊತ್ತು ಪ್ರಕಾಶಮಾನವಾದ ಬೆಳಕು ಕಾಣುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಅಷ್ಟೇ ಅಲ್ಲ ಹೆಂಗಳೆಯರು ವಿಚಿತ್ರ ಕೂಗುವ ಸದ್ದು ಈ ಪ್ರದೇಶದಲ್ಲಿ ಕೇಳಿ ಬರುತ್ತದೆ ಎಂಬುವುದು ಅಲ್ಲಿಯವರು ಅಂಬೋಣ. ಆ ಕಾಡಿನಲ್ಲಿ ಚಿತ್ರ ವಿಚಿತ್ರ ಪ್ರಾಣಿಗಳೆಂದರೆ ದೊಡ್ಡ ದೊಡ್ಡ ತೋಳಗಳು, ಹಲವು ತಲೆ ಇರುವ ಮನುಷ್ಯರು, ಆಕಾಶದೆತ್ತರದ ಮರಗಳು...ಮುಂತಾದ ಕೇವಲ ಹಾರರ್ ಚಿತ್ರಗಳಲ್ಲಿ ಮಾತ್ರ ಕಾಣಬಹುದಾದ ಜೀವಿಗಳನ್ನು ನೋಡಬಹುದಂತೆ.
ಅಪ್ಪಿತಪ್ಪಿ ಈ ಕಾಡೊಳಗೆ ಯಾರಾದರೂ ಕಾಲಿಟ್ಟರೋ, ಮತ್ತೆ ಮರಳುವುದು ಅಸಂಭವವಂತೆ. ಕುರಿ ಕಾಯುವ ಹೊಯಾ ಬಸ್ಯೂ ಎಂಬುವವನು ಇಲ್ಲಿಗೆ ತೆರಳಿದವರನು ಮಿಸ್ ಆದ ನಂತರವೇ ಈ ಕಾಡಿಗೆ ಅವನ ಹೆಸರನ್ನೇ ಇಡಲಾಗಿದೆ. ಮತ್ತೊಬ್ಬ ಬಾಲಕ ಈ ಕಾಡೊಳಗೆ ಹೋಗಿ ಐದು ವರ್ಷಗಳ ನಂತರ ಮರಳಿದ್ದನಂತೆ. ಆದರೆ, ಯಾವುದೂ ಅವನಿಗೆ ನೆನಪಿರಲಿಲ್ಲವಂತೆ. ಐದು ವರ್ಷದ ಧರಿಸಿದ ಬಟ್ಟೆಯೂ ಹೊಚ್ಚ ಹೊಸತರಂತೆ ಇತ್ತಂತೆ!
ಹತ್ತು ಹಲವು ಚಿತ್ರ, ವಿಚಿತ್ರ, ತರ್ಕಕ್ಕೆ ನಿಲುಕದ ನಿಗೂಢ ಘಟನೆಗಳಿಗೆ ಈ ಪ್ರದೇಶ ಹೆಸರವಾಸಿ. ಈ ಕಾಡೊಳಗೆ ಹೋದವರಿಗೆ ಬಗೆ ಬಗೆಯ ಭಯಾನಕ ಅನುಭವಗಳಾಗಿವೆಯಂತೆ. ಈ ಕಾಡೊಳಗೆ ನುಗ್ಗಿದ ಮನುಷ್ಯನಿಗೆ ವಿಚಿತ್ರ ಭಯವೊಂದು ಆವರಿಸಿಕೊಳ್ಳುತ್ತದೆಯಂತೆ. ಮತ್ತೆ ಮರಳಿದವರಿಗೆ ದೇಹವೇ ಸುಟ್ಟು ಹೋದಂತೆ ಅನುಭವವಾಗಿದೆಯಂತೆ. ಮೈ ತುರಿಕೆ, ಮೈ ಜಜ್ಜಿದ ಅನುಭವಗಳೂ ಆಗಿದವರಿದ್ದಾರೆ.
ಕಾಡಲ್ಲಿ ತೆಗೆದ ಫೋಟೋಗಳೂ ವಿಚಿತ್ರವಾಗಿರುತ್ತವಂತೆ. ಫೋಟೋ ತೆಗೆದವರ ನೆರಳೇ ಚಿತ್ರ ವಿಚಿತ್ರವಾಗಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿರುತ್ತವೆಯಂತೆ.
ಈ ಕಾಡಿನ ಫೋಟೋ ತೆಗೆದ ಜೀವಶಾಸ್ತ್ರಜ್ಞನೊಬ್ಬನಿಗೂ ವಿಚಿತ್ರ ಅನುಭವವಾಗಿದೆ. ಅವನು ಸಾಯೋ ಸ್ವಲ್ಪ ದಿನಗಳ ಮುಂದೆ ತೆಗೆದ ಫೋಟೋಗಳೆಲ್ಲವೂ ಮಾಯವಾಗಿದ್ದವಂತೆ. ಹೇಗೆ ಎಂಬುವುದಿನ್ನೂ ನಿಗೂಢ.
ಯಾವೂದೋ ನಿಗೂಢ ಜೀವಿಗಳು, ದೆವ್ವಗಳು ಈ ಪ್ರದೇಶವನ್ನು ಆಳುತ್ತಿವೆ ಎಂದೇ ನಂಬಲಾಗುತ್ತಿದೆ.
ಆದರೆ, ಸಾಹಸ ಪ್ರವೃತ್ತಿಯುಳ್ಳ ಪ್ರವಾಸಿಗರನ್ನು ಸೆಳೆಯಲು, ಇದೊಂದು ಅದ್ಭುತ ಟೆಕ್ನಿಕ್ ಎಂದೂ ಹೇಳಲಾಗುತ್ತಿದೆ.