ಆಕಾಶ ವೀಕ್ಷಕರಿಗೆ ಅಪರೂಪದ ಧೂಮಕೇತು ದರ್ಶನ, ಇಲ್ಲಿವೆ ಫೋಟೋಸ್
ಈ ವಾರ ಸಂಜೆ ಯಾಗುತ್ತಿದ್ದಂತೆ, ಪಶ್ಚಿಮ ಆಕಾಶದಲ್ಲಿ ಅಪರೂಪದ ಧೂಮಕೇತು ನಿಯೋವೈಸ್ ಬರೇ ಕಣ್ಣಿಗೆ ಕಾಣುತ್ತದೆ. ಅದೇ ಸಮಯಕ್ಕೆ ಪೂರ್ವ ಆಕಾಶದಲ್ಲಿ ವರ್ಷಕ್ಕೊಮ್ಮೆ ಭೂಮಿಗೆ ಸುಮಾರು 30 ಕೋಟಿ ಕಿಲೋ ಮೀಟರ್ ಹತ್ತಿರ ಬರುವ ಗುರುಗ್ರಹ ಹಾಗೂ ಶನಿಗ್ರಹ ಭೂಮಿಗೆ ಹತ್ತಿರ ಬಂದು ,ಬಹಳ ಚೆಂದ ಹೊಳೆಯುತ್ತಾ ಕಾಣಿಸಲಿವೆ.
ಇತ್ತೀಚಿಗೆ ಗುರುತಿಸಿದ ನಿಯೋವೈಸ್ ಧೂಮಕೇತು ಸೂರ್ಯನ ಸುತ್ತು ಮುಗಿಸಿ ಜುಲೈ 22 ರಂದು ಭೂಮಿಗೆ ಸಮೀಪದಲ್ಲಿ (ಸುಮಾರುಹತ್ತು ಕೋಟಿ ಮೊವತ್ತು ಲಕ್ಷ ಕಿಮೀ) ಹಾದು ಹೋಗಲಿದೆ. ಈ ಧೂಮಕೇತು ಸುಮಾರು ಜುಲೈ 25 ರ ವರೆಗೆ ಪಶ್ಚಿಮ ಆಕಾಶದಲ್ಲಿ ಸಂಜೆ ಯಾದೊಡನೆ ಬರೀ ಕಣ್ಣಿಗೆ ಕಾಣುತ್ತದೆ. ಧೂಮಕೇತು ನೋಡಲು ಬಲು ಚೆಂದ.
ಸೂರ್ಯನಿಂದ ಅತೀ ಹೊರವಲಯದಲ್ಲಿ ಅನಂತ ಆಕಾಶದಲ್ಲಿ, ಸೂರ್ಯನ ಸುತ್ತ ಅಲೆಯುವ (ಸುಮಾರು 15000 ಕೋಟಿ ಕೀಮೀ ಊರ್ಸ್ ಕ್ಲೌಡ್ ) ಇದು ,ಅತಿ ಶೀತಲದ ಕಲ್ಲುಂಡೆ. ಇದು ಈಗ ಸೂರ್ಯನನ್ನು ಸಮೀಪಿಸುತ್ತಿದೆ. ಸುಮಾರು 5 ಕೀಮೀ ವ್ಯಾಸದ ಈ ಧೂಮಕೇತುವಿಗೆ , ಸೂರ್ಯನನ್ನು ಸಮಿಪಿಸುತ್ತಿದ್ದಂತೆ ಲಕ್ಷ ಕೀಮೀ ಉದ್ದದ ಬಾಲ ಬೆಳೆಯುತ್ತದೆ. ಅದೇ ಧೂಮಕೇತುಗಳ ವಿಶೇಷ. ಈ ಬಾಲ ಬೇರೇನೂ ಅಲ್ಲ. ಸೂರ್ಯನ ಬಿಸಿ ಕಿರಣಗಳಿಂದ ಧೂಮಕೇತು ಕೇತುವಿನ ಮೇಲಿನ ಕರಗಿದ ತೇವಾಂಶ ಹಾಗೂ ಅನಿಲವಷ್ಟೆ.
ಸೂರ್ಯನಿಂದ ಸರಾಸರಿ 74 ಕೋಟಿ ಕೀಮೀ ದೂರದಲ್ಲಿರುವ ಗುರುಗ್ರಹ ಯಾವಾಗಲೂ ಭೂಮಿಗೆ ಒಂದೇ ದೂರದಲ್ಲಿರುವುದಿಲ್ಲ. ವರ್ಷಕ್ಕೊಮ್ಮೆ ಸುಮಾರು 59 ಕೋಟಿ ಕೀಮೀ ದೂರದಲ್ಲಿದ್ದರೆ ,ಮತ್ತೆ ಆರು ತಿಂಗಳ ನಂತರ ಸುಮಾರು 89 ಕೋಟಿ ಕೀಮೀ ದೂರದಲ್ಲಿರುತ್ತದೆ. ಹತ್ತಿರ ಬಂದಾಗ ದೊಡ್ಡದಾಗಿ ಕಂಡುಬರುತ್ತದೆ.
ಶನಿಗ್ರಹ ಸೂರ್ಯನ ಸುತ್ತು ಸುಮಾರು 140 ಕೋಟಿ ಕೀಮೀ ದೂರದಲ್ಲಿ ಸುತ್ತು ತ್ತಿದ್ದರೂ ಭೂಮಿಗೆ ಸಮೀಪ ಬಂದಾಗ ವರ್ಷ ಕ್ಕೋಮ್ಮೆ 125 ಕೋಟಿ ಕೀಮೀ ಇದ್ದು , ಅರು ತಿಂಗಳ ನಂತರ ಸುಮಾರು 165 ಕೋಟಿ ಕೀಮೀ ದೂರದಲ್ಲಿ ಇರುತ್ತದೆ. ಈ ವಾರ, ಈ ಎರಡೂ ಗ್ರಹಗಳು ಭೂಮಿಗೆ ಹತ್ತಿರ ಬರುವುದರಿಂದ , ಚೆನ್ನಾಗಿ ಪೂರ್ವ ಆಕಾಶದಲ್ಲಿ ಸಂಜೆ ವ್ರಶ್ಚಿಕ ರಾಶಿಯ ಬುಡದಲ್ಲಿ ಹೊಳೆಯುತ್ತಿವೆ.
ಅಪರೂಪದ ಧೂಮಕೇತು ನಿಯೋವೈಸ್ , ಜುಲೈ 22ರ ಹೊತ್ತಿಗೆ ಪಶ್ಚಿಮೋತ್ತರ ಆಕಾಶದಲ್ಲಿ ಸಪ್ತ ಋಷಿಮಂಡಲದ ಕ್ರತು ಫುಲಹ ನಕ್ಷತ್ರಗಳ ಸಮೀಪ ಗೋಚರಿಸುತ್ತದೆ. ಮಳೆಗಾಲದಲ್ಲಿ ಮೋಡ ಮಳೆ ಇಲ್ಲದ ರಾತ್ರಿ, ಆಕಾಶ, ಅತೀ ಸ್ವಚ್ಛ, ಸುಂದರ. ಅದೂ ಅಮಾವಾಸ್ಯೆ ಸಮೀಪದ ದಿನಗಳಲ್ಲಿ, ಆಕಾಶದಲ್ಲಿ ನಕ್ಷತ್ರಗಳು ಅದ್ಭುತವಾಗಿ ಮಿನುಗುತ್ತಿರುತ್ತವೆ. ನೋಡಿ ಆನಂದಿಸಿ.