Major Dhyan Chand Khel Ratna ಪ್ರಶಸ್ತಿಗೆ ನೀರಜ್, ಮಿಥಾಲಿ ಸೇರಿ 11 ಕ್ರೀಡಾಪಟುಗಳ ಹೆಸರು ಶಿಫಾರಸು..!
ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಪದಕ ವಿಜೇತರ ಹೆಸರನ್ನು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಈ ಮೊದಲು ಖೇಲ್ ರತ್ನ ಪ್ರಶಸ್ತಿಯನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕರೆಯಲಾಗುತ್ತಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬರೋಬ್ಬರಿ 41 ವರ್ಷಗಳ ಬಳಿಕ ಭಾರತ ಹಾಕಿ ತಂಡವು ಕಂಚಿನ ಪದಕ ಜಯಿಸುತ್ತಿದ್ದಂತೆಯೇ, ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥ, ಖೇಲ್ ರತ್ನ ಪ್ರಶಸ್ತಿಯ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಹೆಸರು ಬದಲಿಸಿದ್ದಾರೆ. ಇನ್ನು 35 ಅಥ್ಲೀಟ್‌ಗಳ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
Neeraj Chopra
1. ನೀರಜ್ ಚೋಪ್ರಾ
ಬಂಗಾರದ ಹುಡುಗ ನೀರಜ್ ಚೋಪ್ರಾ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದರು.
2. ರವಿಕುಮಾರ್ ದಹಿಯಾ
ಸೋನೆಪತ್ ಮೂಲದ ಕುಸ್ತಿಪಟು ರವಿಕುಮಾರ್ ದಹಿಯಾ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ 57 ಕೆ.ಜಿ ವಿಭಾಗದ ಪ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಸುಶೀಲ್ ಕುಮಾರ್ ಬಳಿಕ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಎರಡನೇ ಭಾರತೀಯ ಕುಸ್ತಿಪಟು ಎನ್ನುವ ಕೀರ್ತಿ ರವಿ ಅವರದ್ದು.
PR Sreejesh
3. ಪಿ.ಆರ್. ಶ್ರೀಜೇಶ್
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಬಳಿಕ ಹೆಚ್ಚು ಗಮನ ಸೆಳೆದ ಕ್ರೀಡಾಪಟುವೆಂದರೆ ಅದು ಶ್ರೀಜೇಶ್. ಭಾರತ ಹಾಕಿ ತಂಡದ ಗೋಲ್ ಕೀಪರ್ ಶ್ರೀಜೇಶ್, 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಪದಕ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
4. ಲವ್ಲಿನಾ ಬೊರ್ಗೊಹೈನ್
ಭಾರತದ ಭವಿಷ್ಯದ ಬಾಕ್ಸಿಂಗ್ ತಾರೆ ಬೊರ್ಗೊಹೈನ್ ಟೋಕಿಯೋ ಒಲಿಂಪಿಕ್ಸ್‌ನ ಮಹಿಳೆಯರ ವಾಲ್ಟರ್‌ವೇಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಮೂರನೇ ಬಾಕ್ಸರ್ ಎನಿಸಿದ್ದರು.
5. ಸುನಿಲ್ ಚೆಟ್ರಿ
ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ, ಹಲವಾರು ಸ್ಮರಣೀಯ ದಾಖಲೆಗಳನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಜತೆ ಜಂಟಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಭಾರತದ ಫುಟ್ಬಾಲ್ ಕ್ರೇಜ್ ಹೆಚ್ಚಿಸುವಲ್ಲಿ ಚೆಟ್ರಿ ಪಾತ್ರ ಮಹತ್ವದ್ದಾಗಿದೆ.
Mithali Raj
6. ಮಿಥಾಲಿ ರಾಜ್:
ಭಾರತದ ಮಹಿಳಾ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್, ಭಾರತದ ಮಹಿಳಾ ಯುವ ಸಮುದಾಯ ಕ್ರಿಕೆಟ್‌ನತ್ತ ಒಲವು ತೋರಲು ರೋಲ್ ಮಾಡೆಲ್ ಆಗಿದ್ದಾರೆ. 2 ದಶಕಗಳಿಂದ ದೇಶವನ್ನು ಪ್ರತಿನಿಧಿಸುತ್ತಿರುವ ಮಿಥಾಲಿ, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಕೂಡಾ ಹೌದು.
7. ಪ್ರಮೋದ್ ಭಗತ್
ಬಿಹಾರದ ವೈಶಾಲಿ ಜಿಲ್ಲೆಯ ಪ್ರಮೋದ್ ಭಗತ್ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ SL3 ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.
8. ಸುಮಿತ್ ಆಂಟಿಲ್
ಸೋನೆಪತ್ ಮೂಲದ ಜಾವೆಲಿನ್ ಥ್ರೋ ಪಟು ಸುಮಿತ್ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ F64 ವಿಭಾಗದಲ್ಲಿ 68.55 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
9. ಅವನಿ ಲೇಖಾರ:
ಜೈಪುರ ಮೂಲದ ಶೂಟರ್ ಅವನಿ, ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಚಿನ್ನ ಹಾಗೂ 50 ಮೀಟರ್ ರೈಫಲ್ 3 ಪೊಸಿಷನ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಶೂಟ್ ಮಾಡಿದ್ದರು.
10. ಕೃಷ್ಣ ನಗರ್
ಭಾರತದ ತಾರಾ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಗರ್, ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಹೆಚ್ಚಿಸಿದ್ದರು.
11. ಮನೀಶ್ ನರ್ವಾಲ್
ಭಾರತದ ಪ್ಯಾರಾ ಶೂಟರ್ ಮನೀಶ್ ನರ್ವಾಲ್ ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಿಶ್ರ 50 ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನೀಶ್ ಚಿನ್ನದ ಪದಕ ಜಯಿಸಿದ್ದರು. 2020ರಲ್ಲಿ ಮನೀಶ್ ನರ್ವಾಲ್ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.