ಲೈಂಗಿಕ ಕ್ರಿಯೆ ನಡೆಸದೇ ಸಂತಾನೋತ್ಪತಿ ಮಾಡುವ ಪ್ರಾಣಿಗಳಿವು
ಪ್ರಾಣಿಗಳ ಲೋಕವೇ ಒಂದು ಅದ್ಭುತ ಪ್ರಪಂಚ. ಅದು ನಮ್ಮನ್ನು ಮತ್ತೆ ಮತ್ತೆ ಅಚ್ಚರಿಗೆ ತಳ್ಳುತ್ತಲೇ ಇರುತ್ತದೆ. ಪ್ರಾಣಿ ಪ್ರಪಂಚದ ಕೆಲ ಪ್ರಾಣಿಗಳು ಗಂಡು ಹೆಣ್ಣು ಪರಸ್ಪರ ಸೇರದೆಯೇ ಸಂತಾನೋತ್ಪತಿ ಮಾಡುತ್ತವೆ ಎಂಬ ವಿಚಾರ ನಿಮಗೆ ಗೊತ್ತಾ? ಈ ಅದ್ಭುತ ವಿದ್ಯಮಾನಕ್ಕೆ ಪಾರ್ಥೆನೋಜೆನೆಸಿಸ್ ಎಂದು ಕರೆಯಲಾಗುತ್ತದೆ. ಈ ಪ್ರಕಿಯೆಯಲ್ಲಿ ಹೆಣ್ಣು ಫಲವತ್ತಾಗಿರದ ಮೊಟ್ಟೆಯೊಂದರಿಂದ ಭ್ರೂಣವೊಂದನ್ನು ಸೃಷ್ಟಿ ಮಾಡುತ್ತದೆ. ಇದರ ಪರಿಣಾಮ ಒಂದೋ ಎಲ್ಲಾ ಗಂಡು ಅಥವಾ ಎಲ್ಲಾ ಹೆಣ್ಣು ಸಂತಾನದ ಮರುಸೃಷ್ಟಿಯಾಗುತ್ತದೆ. ಈ ವಿಧಾನವು ಕೆಲ ಪ್ರಾಣಿಗಳ ಸಂತಾನೋತ್ಪತ್ತಿಯ ಏಕೈಕ ವಿಧಾನವಾಗಿದ್ದಾಗ, ಅದನ್ನು ಕಡ್ಡಾಯ ಪಾರ್ಥೆನೋಜೆನೆಸಿಸ್ ಎಂದು ಕರೆಯಲಾಗುತ್ತದೆ. ಹೀಗೆ ಗಂಡನ್ನು ಸೇರದೇ ಸಂತಾನೋತ್ಪತಿ ಮಾಡುವ ಕೆಲ ಪ್ರಾಣಿಗಳ ಡಿಟೇಲ್ ಇಲ್ಲಿದೆ ನೋಡಿ.
ಪ್ರಂಪಂಚದ ಅತ್ಯಂತ ಭಯಾನಕ ಪ್ರಾಣಿ ಎನಿಸಿರುವ ಕೊಮೊಡೊ ಡ್ರ್ಯಾಗನ್ ಪರಸ್ಪರ ಸಂಯೋಗವಾಗದೇ ತನ್ನ ಸಂತಾನವನ್ನು ಉತ್ಪಾದಿಸುವ ತಾಕತ್ತನ್ನು ಹೊಂದಿದೆ ಎಂಬ ವಿಚಾರವನ್ನು 2006ರಲ್ಲಿ ವಿಜ್ಞಾನಿಗಳು ಪತ್ತೆ ಮಾಡಿದರು. ಯುಕೆಯ ಚೆಸ್ಟರ್ (Chester Zoo)ನಲ್ಲಿ ಇದ್ದ ಕೊಮೊಡೊ ಡ್ರ್ಯಾಗನ್ವೊಂದು ಗಂಡಿನ ಸಹವಾಸ ಮಾಡದೇ 25 ಮೊಟ್ಟೆಗಳನ್ನು ಇಟ್ಟಿತ್ತು. ಹೀಗಾಗಿ ಈ ವಿಚಾರ ಬೆಳಕಿಗೆ ಬಂದಿತು. ಅಲ್ಲದೇ ಆ ಸಮಯದಲ್ಲಿ ಇದನ್ನು ಪವಾಡ ಎಂಬಂತೆ ಭಾವಿಸಲಾಗಿತ್ತು.
ಶಾರ್ಕ್: ಸಮುದ್ರದಾಳದಲ್ಲಿರುವ ಶಾರ್ಕ್ ಕೂಡ ಪಾರ್ಥೆನೋಜೆನೆಸಿಸ್ ಪ್ರಕ್ರಿಯೆಯ ಮೂಲಕ ತನ್ನ ಸಂತಾನವನ್ನು ಬೆಳೆಸುತ್ತದೆ. ಬೊನೆಹ್ಟೆಡ್ ಶಾರ್ಕ್ (Bonnethead sharks) ಎಂದು ಕರೆಯಲ್ಪಡುವ ಈ ಶಾರ್ಕ್ವೊಂದು ಒಮಹಾದ ಹೆನ್ರಿ ಡೂರ್ಲಿ (Henry Doorly Zoo)ಝೂನ ಅಕ್ವೇರಿಯಂನಲ್ಲಿತ್ತು. ಇದು ಗಂಡಿನ ಸಂಪರ್ಕವಿಲ್ಲದೆ ಮರಿಯೊಂದಕ್ಕೆ ಜನ್ಮ ನೀಡಿತ್ತು. ಇದರಿಂದ ಮೃಗಾಲಯದ ಸಿಬ್ಬಂದಿ ಅಚ್ಚರಿಗೊಳಗಾಗಿದ್ದರು.
ಕ್ಯಾಲಿಫೋರ್ನಿಯಾ ಕಾಂಡೋರ್ಸ್
ಕ್ಯಾಲಿಫೋರ್ನಿಯಾ ಕಾಂಡೋರ್ಸ್ ಎಂದು ಕರೆಯಲ್ಪಡುವ ರಣಹದ್ದುಗಳು ಉತ್ತರ ಅಮೆರಿಕಾದಲ್ಲಿರುವ ಅತ್ಯಂತ ದೊಡ್ಡ ಪಕ್ಷಿಗಳಾಗಿದ್ದು, ಇವುಗಳು ಕೂಡ ಗಂಡಿನ ಉಪಸ್ಥಿತಿ ಇದ್ದರೂ ಕೂಡ ಅದರ ಜೊತೆ ಸಂಯೋಗಗೊಳ್ಳದೇ ತಮ್ಮ ಮರಿಗಳಿಗೆ ಜನ್ಮ ನೀಡುತ್ತವೆ. ವಂಶವಾಹಿಯ ಪರೀಕ್ಷೆಯಲ್ಲಿ ಇದು ಸಾಬೀತಾಗಿದೆ. ಹೀಗೆ ಹುಟ್ಟಿದ ಮರಿಗಳನ್ನು ಪರೀಕ್ಷೆ ಮಾಡಿದಾಗ ಅವುಗಳಲ್ಲಿ ತಾಯಿ ವಂಶವಾಹಿ ಮಾತ್ರ ಇತ್ತು.
ಸ್ಟೀಕ್ ಇನ್ಸೆಕ್ಟ್
ಸ್ಟೀಕ್ ಇನ್ಸೆಕ್ಟ್ ಅಥವಾ ಕಡ್ಡಿ ಕೀಟ, ಅಥವಾ ಮಿಡತೆ ಎಂದು ಕರೆಯಲ್ಪಡುವ ಈ ಕೀಟವೂ ಕೂಡ ಗಂಡಿನ ಸಹವಾಸವಿಲ್ಲದೇ ತನ್ನ ಮರಿಗಳಿಗೆ ಜನ್ಮ ನೀಡುತ್ತದೆ. ಆಯಾಯ ಪ್ರದೇಶಗಳಿಗೆ ತಕ್ಕಂತೆ ಜನ ಇದನ್ನು ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಲೈಂಗಿಕ ಕ್ರಿಯೆ ನಡೆಸದೇ ಸಂತಾನೋತ್ಪತಿ ಮಾಡುವುದು ಇವುಗಳಲ್ಲಿ ಸಾಮಾನ್ಯ ಎನಿಸಿದೆ.
ಬ್ಲೈಂಡ್ ಸ್ನೇಕ್
ಕುರುಡು ಹಾವು ಅಥವಾ ಬ್ರಾಹ್ಮಿಣಿ ಕುರುಡು ಹಾವು (brahminy blind snake) ಎಂದು ಕರೆಯಲ್ಪಡುವ ಈ ಸರೀಸೃಪವೂ ಕೂಡ ಲೈಂಗಿಕ ಕ್ರಿಯೆ ನಡೆಸದೆಯೇ ಸಂತಾನೋತ್ಪತಿ ಮಾಡುವಲ್ಲಿ ಯಶಸ್ವಿಯೆನಿಸಿದೆ.
ಟಾರ್ಡಿಗ್ರೇಡ್ಸ್
ಟಾರ್ಡಿಗ್ರೇಡ್ಸ್ ಎಂದು ಕರೆಯಲ್ಪಡುವ ಈ ಕೀಟ ಮಾತ್ರ ಕೂಡ ಎರಡು ರೀತಿಯಲ್ಲಿ ಸಂತಾನೋತ್ಪತಿಯನ್ನು ನಡೆಸುತ್ತದೆ. ಇವು ನೀರಿನಲ್ಲಿ ವಾಸ ಮಾಡುವ ಸೂಕ್ಷ್ಮಜೀವಿಗಳಾಗಿವೆ. ಆದರೂ ಇವುಗಳಲ್ಲಿ ಪಾರ್ಥೆನೋಜೆನೆಸಿಸ್ ಸಾಮಾನ್ಯ ಎನಿಸಿದೆ.
ಮೊಸಳೆಗಳು ಕೂಡ ಗಂಡಿನ ಸಂಪರ್ಕವಿಲ್ಲದೇ ಸಂತಾನೋತ್ಪತಿ ಮಾಡುತ್ತವೆ. ಇವುಗಳು ಫಲವತ್ತತೆ ಹೊಂದಿರದ ಮೊಟ್ಟೆಗಳಿಂದ ಭ್ರೂಣವೊಂದನ್ನು ಸೃಷ್ಟಿಸಿ ಅದರಿಂದಲೇ ಗಂಡಿನ ಸಹಾಯವಿಲ್ಲದೇ ಮರಿಗಳನ್ನು ಪಡೆಯುತ್ತವೆ. ಆದರೂ ಈ ಪ್ರಕ್ರಿಯೆ ಮೊಸಳೆಗಳಲ್ಲಿ ತೀರಾ ಅಪರೂಪವಾಗಿದ್ದು, ಇತ್ತೀಚೆಗಷ್ಟೇ ಈ ಪ್ರಕ್ರಿಯೆ ದಾಖಲೀಕರಣಗೊಂಡಿತ್ತು
ಮೊಲ್ಲಿಫಿಶ್ (Mollyfish)
ಮೊಲ್ಲಿಫಿಶ್ಗಳು ವೀರ್ಯವನ್ನು ಅವಲಂಬಿತವಾಗಿರುವ ಪಾರ್ಥೆನೋಜೆನೆಸಿಸ್ಗಳು ಎಂದು ಕರೆಯಲ್ಪಡುತ್ತವೆ. ಈ ಎಲ್ಲಾ ಹೆಣ್ಣು ಮೀನುಗಳು ಮೊಟ್ಟೆ ರಚನೆಯನ್ನು ಪ್ರಚೋದಿಸಲು ಸಂಬಂಧಿತ ಜಾತಿಯ ಗಂಡಿನ ವೀರ್ಯವನ್ನು ಬಳಸುತ್ತವೆ. ಆದರೂ ವೀರ್ಯವು ಆನುವಂಶಿಕ ಅಂಶಗಳನ್ನು ಈ ಮೊಟ್ಟೆಗೆ ಕೊಡುಗೆ ನೀಡುವುದಿಲ್ಲ.