ತಾತ್ಕಾಲಿಕ ಶೆಡ್‌ನಲ್ಲಿ ವರ್ಷ ಕಳೆದ ಸಂತ್ರಸ್ತರು: ಮದುವೆ, ಹೆರಿಗೆ, ಕಾಯಿಲೆ ಬಿದ್ದರೆ ಶುಶ್ರೂಷೆ ಎಲ್ಲವೂ ಇಲ್ಲೇ..!
ಮಯೂರ ಹೆಗಡೆ
ಹುಬ್ಬಳ್ಳಿ(ಆ.28): ತಾತ್ಕಾಲಿಕವಾಗಿ ಉಳಿದುಕೊಳ್ಳಲೆಂದು ಕಟ್ಟಿಕೊಟ್ಟ ತಗಡಿನ ಶೆಡ್‌ನಲ್ಲಿ ಮದುವೆಯೂ ನಡೆಯುತ್ತಿದೆ, ಹೆರಿಗೆಯೂ ಆಗುತ್ತಿದೆ. ಮಹಿಳೆಯರು ನಿತ್ಯ ಕರ್ಮಕ್ಕಾಗಿ ಪ್ರತಿನಿತ್ಯ ಅವಮಾನ ಎದುರಿಸುತ್ತಿದ್ದಾರೆ. ವೃದ್ಧರು, ಚಿಕ್ಕಮಕ್ಕಳು ಕಾಯಿಲೆ ಬಿದ್ದರೆ ಶುಶ್ರೂಷೆ ನಡೆಯುವುದೂ ಇಲ್ಲೆ. ಅತ್ತ 10 ತಿಂಗಳಲ್ಲಿ ನಿರ್ಮಾಣವಾಗಬೇಕಿದ್ದ ಮನೆ ಇನ್ನೂ ಪೂರ್ಣಗೊಂಡಿಲ್ಲ, ನಿರ್ಮಾಣ ಹಂತದಲ್ಲಿರುವ ಮನೆ ಬಳಿಯೆ ಮತ್ತೆ ಮಲೆಪ್ರಭೆ ಉಕ್ಕೇರಿ ಆತಂಕ ಹುಟ್ಟು ಹಾಕಿದ್ದಾಳೆ.
ಮಳೆಯಿಂದಾಗಿ ಗದಗ ಜಿಲ್ಲೆ ನರಗುಂದದ ಕೊಣ್ಣೂರು ಗ್ರಾಮದಲ್ಲಿ ಮನೆ ಕಳೆದುಕೊಂಡು ಎಪಿಎಂಸಿ ಪ್ರಾಂಗಣದಲ್ಲಿ ಶೆಡ್‌ನಲ್ಲಿರುವವರ ಒಂದು ವರ್ಷದಿಂದ ಅನುಭವಿಸುತ್ತಿರುವ ಪಡಿಪಾಟಲು. 2019ರ ಆಗಸ್ಟ್ ಮೊದಲ ವಾರದಲ್ಲಿ ಮಲಪ್ರಭೆ ಉಕ್ಕೇರಿದ ಪರಿಣಾಮ ಗ್ರಾಮದಲ್ಲಿ 1200ಕ್ಕೂ ಹೆಚ್ಚು ಮನೆಗಳು ಧರೆಗುರುಳಿದ್ದವು. ಅದರಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ 120ಕ್ಕೂ ಹೆಚ್ಚು ಕುಟುಂಬಗಳಿಗೆ ತಾತ್ಕಾಲಿಕವಾಗಿ ಸನಿಹದ ಎಪಿಎಂಸಿ ಪ್ರಾಂಗಣದಲ್ಲಿ ತಗಡಿನ ಶೆಡ್‌ನ ಆಸರೆ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೂ 600-700 ಜನರು ಇಲ್ಲೇ ನೆಲೆಸಿದ್ದಾರೆ. ಕುಡಿವ ನೀರು, ವಿದ್ಯುತ್ ಸೌಕರ್ಯ ಬಿಟ್ಟರೆ ಉಳಿದಂತೆ ಇವರೆಲ್ಲ ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ದಿನ ದೂಡುತ್ತಿದ್ದಾರೆ.
ಕಳದ ವರ್ಷದಾಗಿಂದ ಇಲ್ಲೆ ಬಾಳೆ ಮಾಡಕತ್ತೀವಪ್ಪ, ಇಲ್ಲಿಂದ ಹ್ಯಾಂಗರ ಮಾಡಿ ನಮಗ ಬ್ಯಾರಿ ಕಡಿ ಮನಿ ಕಟ್ಟಿಕೊಡ್ರಿ, ಮಳಿ, ಬಿಸಿಲು, ಚಳಿ ಸಹಿಸ್ಕಂಡು ಇನ್ನೆಷ್ಟು ದಿನ ಇಲ್ಲಿರದು, ತುರ್ತಾಗಿ ದವಾಖಾನೀಗ ಹೋಗಲಾರದ ಶೈನಾಜ್ ಬುರಡಿಗ ಇಲ್ಲ ಡಿಲೆವರಿ ಆಗ್ಯದ, ನಾವೀಲ್ಲೇ ಮೂರ ಮದವಿನೂ ಮಾಡೀವಿ. ಹೆಂಗಸ್ರಿಗ ಶೌಚಕ್ಕ, ಸ್ನಾನಕ್ಕ ವ್ಯವಸ್ಥ ಇಲ್ಲದ ಮರ್ಯಾದಿ ಬಿಟ್ಟಬದಕಂಗಾಗದ. ದಿನಾಲೂ ಅವಮಾನ ಆಗ್ತದ, ಹಿರಿಯಾರು, ಮಕ್ಕಳಮರೀಗ ಜ್ವರ ಬಂದ ಬಿದ್ರ ಇಲ್ಲ ಆರೈಕಿ ಮಾಡಬೇಕಾಗದ’ ಎಂದು ವರ್ಷದಿಂದ ಶೆಡ್‌ನಲ್ಲಿರುವ ಬಸಮ್ಮ ಚಲವಾದಿ, ಕಣ್ಣೀರು ಗರೆಯುತ್ತಾರೆ.
ಕೊರೋನಾ ಕಾರಣದಿಂದ ಕಳೆದ ಆರು ತಿಂಗಳಿಂದ ನಮಗೆ ದುಡಿಮೆಯೂ ಇಲ್ಲದಂತಾಗಿದೆ. ಈಗ ಕೈಯಲ್ಲಿ ರೊಕ್ಕವೆ ಇಲ್ಲ. ಮತ್ತೆ ನೆರೆ ಬಂದು ಒಂದಿಷ್ಟು ವಸ್ತುಗಳು ಹಾಳಾಗಿವೆ. ಮನೆ ನಿರ್ಮಾಣಕ್ಕೆ ತಂದಿಟ್ಟ ಮರಳು ಇತರೆ ವಸ್ತುಗಳೂ ಹೋಗಿವೆ. ನಿರ್ಮಾಣವಾಗುತ್ತಿರುವ ಒಂದಿಷ್ಟು ಮನೆಗಳ ಬಿಲ್ ಕೂಡ ಆಗಿಲ್ಲ. ಶೀಘ್ರದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದ ಭರವಸೆ ಹುಸಿಯಾಗಿದೆ ಎನ್ನುತ್ತಾರೆ ಯುವಕ ಎ.ಬಿ.ಕೊಣ್ಣೂರ.
ಕಳೆದ ಮಲಪ್ರಭೆ ಉಕ್ಕಿ ಹರಿದ ಪರಿಣಾಮ ಮತ್ತೆ ಇವರೆಲ್ಲ ಆತಂಕಿತರಾಗಿದ್ದಾರೆ. ನೆರೆ ನೀರು ಮತ್ತೆ ಇವರು ಮನೆ ಕಟ್ಟುತ್ತಿರುವ, ಕಟ್ಟಬೇಕು ಎಂದುಕೊಂಡಿರುವ ಸ್ಥಳಕ್ಕೆ ನುಗ್ಗಿದೆ. ಹೀಗಾಗಿ ಪ್ರತಿವರ್ಷ ನೆರೆಯೊಂದಿಗೆ ಬದುಕು ನಡೆಸಬೇಕೆ? ಪ್ರತಿ ವರ್ಷ ನೆರೆ ಬಂದಾಗ ಮನೆಯ ಸಾಮಾನು ಸರಂಜಾಮನ್ನು ಹೊತ್ತು, ಮಕ್ಕಳು ಮರಿಗಳನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಬರಬೇಕೆ ಎಂದು ಕಣ್ಣೀರಿಡುತ್ತಿದ್ದಾರೆ. ನಮಗೆ ಬೇರೆಡೆ ಜಾಗ ನೀಡಿ ಅಲ್ಲಿಯೆ ಮನೆ ಕಟ್ಟಿಕೊಡಿ ಎನ್ನುತ್ತಾರೆ ಬಸಮ್ಮ ಚಲವಾದಿ, ಬಿಬಿಜಾನ್ ಮೂಲಿಮನಿ.
ಈ ಕುರಿತು ಮಾತನಾಡಿದ ಕೊಣ್ಣೂರು ಪಿಡಿಒ ಸಂಕನಗೌಡ್ರ, ಮನೆ ಸಂಪೂರ್ಣವಾಗಿ ನೆಲಸಮಗೊಂಡು ’ಎ’ ವಿಭಾಗದಲ್ಲಿ ಬರುವವರಿಗೆ ಎಪಿಎಂಸಿ ಪ್ರಾಂಗಣದಲ್ಲಿ 120 ಶೆಡ್ ನಿರ್ಮಿಸಿ ಕೊಟ್ಟಿದ್ದೇವೆ. ಮನೆ ನಿರ್ಮಾಣಕ್ಕೆ ಐದು ಹಂತದಲ್ಲಿ ಹಣ ಖಾತೆಗೆ ಜಮೆ ಮಾಡಲಾಗುತ್ತಿದೆ. ಜಾಗ ನೀಡುವ ಕುರಿತು ಸರ್ಕಾರ ನಿರ್ಧರಿಸಬೇಕಿದೆ ಎಂದರು.
ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಒಂದಿಷ್ಟು ಸಂತ್ರಸ್ತರಿಗೆ ಮನೆ-ಅಂಗಡಿ ಬಿದ್ದರೂ, ವಸ್ತುಗಳು ನಾಶವಾಗಿ ನಷ್ಟವಾದರೂ ಹಣ ಬಂದಿಲ್ಲ. ಮನೆ ಬೀಳದವರಿಗೆ ಮನೆ ಕಟ್ಟಿಕೊಳ್ಳಲು ಪರಿಹಾರದ 5ಲಕ್ಷ ರು. ಮಂಜೂರಾಗಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಕೆಲವರು ಈ ಹಣವನ್ನು ಬಡ್ಡಿ ವ್ಯವಹಾರದಲ್ಲೂ ತೊಡಗಿಸಿದ್ದಾರೆ ಎಂಬ ದೂರುಗಳಿವೆ! ಇದಕ್ಕೆಲ್ಲ ಅಧಿಕಾರಿಗಳು ಸೊಪ್ಪು ಹಾಕುತ್ತಿಲ್ಲ. ನಮ್ಮ ಆರೋಪಗಳನ್ನು ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ ಎಂದು ಕೆಲ ಗ್ರಾಮಸ್ಥರು ದೂರುತ್ತಾರೆ.
ಕಳೆದ ಒಂದು ವರ್ಷದಿಂದ ಶೆಡ್‌ನಲ್ಲಿಯೆ ವಾಸಿಸುತ್ತಿದ್ದೇವೆ. ಇಲ್ಲಿಯೆ ಮೂರು ಮದುವೆ ಮಾಡಿದ್ದೇವೆ. ಹೆರಿಗೆ ಆಗಿವೆ. ಹಸುಗೂಸುಗಳು, ವೃದ್ಧರಿಗೆ ಇಲ್ಲಿರುವುದು ಕಷ್ಟವಾಗುತ್ತಿದೆ. 10 ತಿಂಗಳಲ್ಲಿ ಮನೆ ನಿರ್ಮಿಸಿಕೊಡುವ ಭರವಸೆ ಹುಸಿಯಾಗಿದೆ ಎಂದು ಶೆಡ್‌ನಲ್ಲಿರುವ ಸಂತ್ರಸ್ತರು ಸುರೇಶ ತಳವಾರ, ಬಸಮ್ಮ ಚಲವಾದಿ, ಬಿಬಿಜಾನ್ ಮೂಲಿಮನಿ ಅವರು ಹೇಳುತ್ತಾರೆ.
ತಾಂತ್ರಿಕ ಕಾರಣದಿಂದ ಹದಿನೈದು ದಿನ, ತಿಂಗಳು ಹಣ ಬಿಡುಗಡೆ ವಿಳಂಬವಾಗುತ್ತಿದೆಯಷ್ಟೆ. ಕೊಣ್ಣೂರಲ್ಲಿ ಬಿದ್ದ 1200 ಮನೆಗಳಿಗೆ ಪರಿಹಾರ ನೀಡುವ ವ್ಯವಸ್ಥೆ ಮಾಡಿದ್ದೇವೆ ಎಂದು ಕೊಣ್ಣೂರು ಗ್ರಾಮದ ಪಿಡಿಒ ಸಂಕನಗೌಡ್ರ ಅಬರು ಹೇಳಿದ್ದಾರೆ.