ಭಾರತ- ಪಾಕಿಸ್ತಾನ ಕ್ರಿಕೆಟ್ ನಂಟು ಪುನರ್ ಸ್ಥಾಪಿಸಿದ ಚಾಣಕ್ಯ ಮನಮೋಹನ್ ಸಿಂಗ್!
ಎಲ್ಲರಲ್ಲೂ ಪಾಕ್ ತಂಡ ಭಾರತಕ್ಕೆ ಬರಲಿದೆಯೇ ಎಂಬ ಕೌತುಕ. ಈ ವೇಳೆ ಐತಿಹಾಸಿಕ ಹೆಜ್ಜೆ ಎಂಬಂತೆ ಪ್ರಧಾನಿ ಸಿಂಗ್, ಪಾಕಿಸ್ತಾನದ ಪ್ರಧಾನಿ ಯೂಸುಫ್ ಗಿಲಾನಿಯನ್ನೇ ಭಾರತಕ್ಕೆ ಆಹ್ವಾನಿಸಿದರು.
ಆರ್ಥಿಕ ತಜ್ಞರಾಗಿ ಗುರುತಿಸಿಕೊಳ್ಳುವ ಮನಮೋಹನ್ ಸಿಂಗ್, ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧವನ್ನು ಮರುಸ್ಥಾಪಿಸಲು ಪಣತೊಟ್ಟು, ಅದರಲ್ಲಿ ಯಶಸ್ವಿಯಾದ ಚಾಣಕ್ಯ ಕೂಡಾ ಹೌದು. 2008ರಲ್ಲಿ ಮುಂಬೈ ದಾಳಿ ಬಳಿಕ ಭಾರತ-ಪಾಕ್ ಕ್ರಿಕೆಟ್ ಸಂಬಂಧ ಹಳಸಿತ್ತು. ಇದನ್ನು ಪುನರ್‌ಸ್ಥಾಪಿಸಿದ್ದು ಸಿಂಗ್.
2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಭಾರತ, ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿತ್ತು. ಪಾಕ್ ತಂಡ ಗುಂಪು ಹಂತ, ಕ್ವಾರ್ಟ‌್ರಫೈನಲ್ ಪಂದ್ಯಗಳನ್ನು ಶ್ರೀಲಂಕಾ, ಬಾಂಗ್ಲಾದಲ್ಲಿ ಆಡಿದರೂ, ಭಾರತ ವಿರುದ್ಧ ಸೆಮಿಫೈನಲ್ ಪಂದ್ಯ ಆಡಲು ಭಾರತಕ್ಕೆ ಆಗಮಿಸಬೇಕಿತ್ತು. ಅದು ಕ್ರಿಕೆಟ್ ಲೋಕವೇ ಕುತೂಹಲದ ಕಣ್ಣಿನಿಂದ ನೋಡುತ್ತಿದ್ದ ಸಮಯ.
ಎಲ್ಲರಲ್ಲೂ ಪಾಕ್ ತಂಡ ಭಾರತಕ್ಕೆ ಬರಲಿದೆಯೇ ಎಂಬ ಕೌತುಕ. ಈ ವೇಳೆ ಐತಿಹಾಸಿಕ ಹೆಜ್ಜೆ ಎಂಬಂತೆ ಪ್ರಧಾನಿ ಸಿಂಗ್, ಪಾಕಿಸ್ತಾನದ ಪ್ರಧಾನಿ ಯೂಸುಫ್ ಗಿಲಾನಿಯನ್ನೇ ಭಾರತಕ್ಕೆ ಆಹ್ವಾನಿಸಿದರು. ಆಹ್ವಾನ ಸ್ವೀಕರಿಸಿ ಯೂಸುಫ್ ಭಾರತಕ್ಕೆ ಆಗಮಿಸಿದರು. ಮೊಹಾಲಿಯಲ್ಲಿನಡೆದ ಐತಿಹಾಸಿಕ ಪಂದ್ಯವನ್ನು ಸಿಂಗ್-ಯೂಸುಫ್ ಗಿಲಾನಿ ಒಟ್ಟಿಗೇ ಕೂತು ವೀಕ್ಷಿಸಿದರು. ಬಳಿಕ 2012ರಲ್ಲಿ ಭಾರತ-ಪಾಕ್ ನಡುವೆ ಭಾರತದಲ್ಲಿ ದ್ವಿಪಕ್ಷೀಯ ಸರಣಿ ನಡೆಯಿತು. ಇತ್ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದಿದ್ದು ಅದೇ ಕೊನೆ ಬಾರಿ.
ಪಾಕ್‌ನಲ್ಲಿ ಮನಮೋಹನ್ ಸಿಂಗ್ ಹೆಸರಲ್ಲಿದೆ ಶಾಲೆ!: ಡಾ.ಮನಮೋಹನ ಸಿಂಗ್ ಅವರ ಹುಟ್ಟೂರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಾಹ್ ಗ್ರಾಮ. ಅಲ್ಲೀಗ ಮನಮೋಹನ ಸಿಂಗ್ ಹೆಸರಲ್ಲಿ ಶಾಲೆಯೂ ಇದೆ.
ಹೌದು, ಮನಮೋಹನ ಸಿಂಗ್ ಪ್ರಾಥಮಿಕ ಶಿಕ್ಷಣ ಪಡೆದದ್ದು ಇದೇ ಶಾಲೆಯಲ್ಲಿ, ಹೀಗಾಗಿ ಅವರು ಮೊದಲ ಬಾರಿಗೆ ಪ್ರಧಾನಿಯಾದಾಗ ಹುಟ್ಟೂರಲ್ಲೂ ಸಂಭ್ರಮ ಮನೆ ಮಾಡಿತ್ತು. ಅಲ್ಲಿನ ಪಂಜಾಬ್ ಪ್ರಾಂತ್ಯದ ಸರ್ಕಾರ ಕೂಡ 2007ರಲ್ಲಿ ಮನಮೋಹನ ಸಿಂಗ್ ಅವರ ಗೌರವಾರ್ಥವಾಗಿ ಗಹ್ ಗ್ರಾಮದಲ್ಲಿರುವ ಬಾಲಕರ ಶಾಲೆಯನ್ನು ಮನಮೋಹನ ಸಿಂಗ್ ಬಾಲಕರ ಶಾಲೆ ಎಂದು ಮರುನಾಮಕರಣ ಮಾಡಿತು.
ವೈದ್ಯಕೀಯ ಕೋರ್ ಬಿಟ್ಟು ಅರ್ಥಶಾಸ್ತ್ರ ನೆಚ್ಚಿದ್ದ ಸಿಂಗ್: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ತಂದೆಯ ಇಚ್ಛೆಯಂತೆ ಪೂರ್ವ ವೈದ್ಯಕೀಯ ಕೋರ್ಸ್‌ಗೆ ದಾಖಲಾಗಿದ್ದರು. ಆದರೆ ಆ ವಿಷಯದಲ್ಲಿ ಆಸಕ್ತಿ ಕಳೆದುಕೊಂಡ ಕಾರಣ ಕೆಲವೇ ತಿಂಗಳಲ್ಲಿ ಕೋರ್ಸ್ ಕೈಬಿಟ್ಟಿದ್ದರು. ಸಿಂಗ್ ಅವರನ್ನು ಅರ್ಥಶಾಸ್ತ್ರದ ವಿಷಯ ಸೆಳೆಯುತ್ತಿತ್ತು.
'ನನಗೆ ಬಡತನದ ವಿಷಯದಲ್ಲಿ ಸದಾ ಆಸಕ್ತಿಯಿತ್ತು. ಕೆಲವು ದೇಶಗಳು ಬಡವೇಕೆ, ಕೆಲವು ಶ್ರೀಮಂತವೇಕೆ? ಈ ಪ್ರಶ್ನೆಗಳನ್ನು ಕೇಳುವ ವಿಷಯವೇ ಅರ್ಥಶಾಸ್ತ್ರಎಂದು ನನಗೆ ಹೇಳಲಾಗಿತ್ತು' ಎಂದು ಸಿಂಗ್ ಅವರ ಪುತ್ರಿ ತಮ್ಮ ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ.