ಅಭಿವೃದ್ಧಿಯಲ್ಲಿ ದೇಶಕ್ಕೇ ಮಾದರಿ ಗುಜರಾತ್, ಕೊರೋನಾ ತಡೆಯುವಲ್ಲಿ ಹಿಂದೆ...
ಭಾರತದಲ್ಲಿ ಸೋಂಕಿತರ ಸಂಖ್ಯೆ 20 ಸಾವಿರ ದಾಟಿದರೂ, ಗುಣವಾಗುತ್ತಿರುವವರ ಸಂಖ್ಯೆ 4000 ದಾಟಿದೆ. ಅಂದರೆ ಸರಾಸರಿ ಸುಮಾರು ಶೇ.19 ಸೋಂಕಿತರು ಇದುವರೆಗೆ ಗುಣಮುಖರಾಗಿದ್ದಾರೆ ಎನ್ನುವುದು ಸಮಾಧಾನ ನೀಡುವ ಸಂಗತಿ. ಆದರೆ, ಗುಜರಾತಿನಲ್ಲಿ ಮಾತ್ರ ಈ ಗುಣಮುಖವಾಗುತ್ತಿರುವವರ ಸಂಖ್ಯೆ ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕಡಿಮೆ ಇದೆ. ಇದುವರೆಗೆ 2272 ಪಾಸಿಟಿವ್ ಪ್ರಕರಣಗಳು ಈ ರಾಜ್ಯದಲ್ಲಿ ದಾಖಲಾಗಿದ್ದು, ಕೇವಲ 144 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಕೇರಳ, ಕರ್ನಾಟಕಕ್ಕೆ ಹೋಲಿಸಿದಲ್ಲಿ ಇದು ಬಹಳ ಕಡಿಮೆ. ಕೈಗಾರಿಕೋದ್ಯೋಮದಲ್ಲಿ ಇಷ್ಟು ಸಾಧನೆ ತೋರಿದ ರಾಜ್ಯ, ವೈದ್ಯಕೀಯ ಕ್ಷೇತ್ರದಲ್ಲೇಕೆ ಹಿಂದೆ ಉಳಿದಿದೆ. ಅಷ್ಟಕ್ಕೂ ಅಲ್ಲಿ ಸೋಂಕಿತರ ಸಂಖ್ಯೆ ಹೇಗಿದೆ?
ಭಾರತದಲ್ಲಿ ಮೊದಲ ಕೋವಿಡ್-19 ಪ್ರಕರಣ ದಾಖಲಾಗಿದ್ದು ಕೇರಳದಲ್ಲಿ. ಇಲ್ಲಿ ಸೋಂಕಿತರ ಸಂಖ್ಯೆಯೂ ಮೊದಲಿಗೆ ಹೆಚ್ಚಿತ್ತು. ಆದರೀಗ ಶೇ.75 ರೋಗಿಗಳು ಗುಣಮುಖರಾಗಿ, ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ದೇವರ ನಾಡು ಎಂದೇ ಖ್ಯಾತವಾದ ಕೇರಳದಲ್ಲಿ ಇದುವರೆಗೆ 427 ಪ್ರಕರಣಗಳು ದಾಖಲಾಗಿದ್ದು, 307 ಮಂದಿ ಆಗಲೇ ಗುಣಮುಖರಾಗಿದ್ದಾರೆ. ಸತ್ತವರು 3 ಮಂದಿ.
ದೇಶದಲ್ಲಿಯೇ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ 5,221 ಪ್ರಕರಣಗಳು ದಾಖಲಾಗಿದ್ದು, ಶೇ.13ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಆಗಲೇ 722 ರೋಗಿಗಳಲ್ಲಿ ಕೊರೋನಾ ವೈರಸ್ ನೆಗಟಿವ್ ಬಂದಿದೆ.
ಭಾರತದ ಪೂರ್ವ ಭಾಗದಲ್ಲಿರುವ ಗೋವಾದಲ್ಲಿ ಕೇವಲ 7 ಪ್ರಕರಣಗಳು ಕಂಡು ಬಂದಿದ್ದು, ಶೇ.100ರಷ್ಟು ಗುಣಮುಖರಾಗಿದ್ದು, ಸೋಂಕು ಮುಕ್ತ ರಾಜ್ಯವಾಗಿ ಹೊರಹೊಮ್ಮಿದೆ.
ಆದರೆ, ಇಡೀ ದೇಶಕ್ಕೆ ಮಾದರಿ ರಾಜ್ಯ ಎನಿಸಿರುವ ಪ್ರಧಾನಿ ಮೋದಿ ತವರು ರಾಜ್ಯ ಗುಜರಾತಿನಲ್ಲಿ ಮಾತ್ರ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಗುಣಮುಖರಾಗುತ್ತಿರುವ ಸಂಖ್ಯೆ ಕೇವಲ ಶೇ.6.3ರಷ್ಟಿದೆ.
ತಬ್ಲೀಘಿ ಜಮಾತ್ ನಂಟಿನಿಂದ ದಿಲ್ಲಿಯಲ್ಲಿ ಸೋಂಕಿತರ ಸಂಖ್ಯೆ 2,272ರಿದ್ದರೂ, ಆಗಲೇ 611 ಮಂದಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದು, ರಿಕವರಿ ರೇಟ್ ಶೇ.28ರಷ್ಟಿದೆ. ದಿಲ್ಲಿಯನ್ನು ಮೀರಿ, ಗುಜರಾತ್ ಮುಂದೆ ಹೋಗಿದೆ ಈಗ.
ರಾಜಸ್ಥಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ತಮಿಳು ನಾಡು ಮತ್ತು ತೆಲಂಗಾಣ ಕ್ರಮವಾಗಿ ಶೇ.12, ಶೇ.9.3, ಶೇ.11, ಶೇ.14, ಶೇ.39 ಮತ್ತು ಶೇ.20ರಷ್ಟಿದೆ.
ಇಂಥ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸ್ಥಳೀಯ ಆಡಳಿತದ ಪಾತ್ರ ಬಹಳ ಮುಖ್ಯವಾಗಿದ್ದು, ಜನಸಾಂದ್ರತೆ ಪ್ರದೇಶ ಅಪಾಯದಿಂದ ಪಾರಾಗುವಂತೆ ನೋಡಿಕೊಳ್ಳಬೇಕಾಗಿದೆ.
ಗುಜರಾತ್‌ನ ಪ್ರಮುಖ ನಗರಗಳಾದ ಅಹ್ಮದಾಬಾದ್, ಸೂರತ್ ಮತ್ತು ವಡೋದರಾಗಳಲ್ಲಿ ಇದವರೆಗೂ 1,434, 364 ಮತ್ತು 297 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಗುಜರಾತ್ ರಾಜ್ಯ ಸರಕಾರದ ಅಧಿಕೃತ ವೆಬ್‌ಸೈಟ್ ಮಾಹಿತಿಯಂತೆ ಸೂರತ್ ಹಾಗೂ ವಡೋದರಾದಲ್ಲಿ ಗುಣಮುಖವಾಗುತ್ತಿರುವವರ ಸಂಖ್ಯೆ ಶೇ.3 ಹಾಗೂ ಶೇ.3.8ರಷ್ಟು ಮಾತ್ರ. ಅಹ್ಮದಾಬಾದಿನಲ್ಲಿ 56 ಸೋಂಕಿತರು ಗುಣಮುಖರಾಗಿದ್ದಾರೆ.
ದೇಶದಲ್ಲಿ ರಿಕವರಿ ಆಗುತ್ತಿರುವ ಸಂಖ್ಯೆಗೆ ಹೋಲಿಸಿದರೆ, ಗುಜರಾತಿನಲ್ಲಿ ಕನಿಷ್ಟ 280 ರೋಗಿಗಳು ಇದುವರೆಗೆ ರೋಗ ಮುಕ್ತರಾಗಿರಬೇಕಿತ್ತು. ಹಾಗಾಗಿದ್ದರೆ ಆಸ್ಪತ್ರೆಗಳ ಮೇಲಿನ ಒತ್ತಡ ತಕ್ಕಮಟ್ಟಿಗೆ ಇಳಿಯುತ್ತಿತ್ತು.
ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು ಮಾರ್ಚ್ 19ಕ್ಕೆ. ಇನ್ನು ರಿಕವರಿ ಆಗುವ ರೋಗಿಗಳ ಸಂಖ್ಯೆ ಹೆಚ್ಚುತ್ತೆ ಎನ್ನುತ್ತಾರೆ ಆರೋಗ್ಯ ಇಲಾಖೆ ಮುಖ್ಯ ಕಾರ್ಯದರ್ಶಿ ಜಯಂತಿ ರವಿ.
ಮೃತಪಟ್ಟವರು ಸಂಖ್ಯೆಯೂ ಗುಜರಾತ್‌ನಲ್ಲಿ ಅಧಿಕವಾಗಿದ್ದು, ಇದುವರೆಗೆ ಸುಮಾರು 95 ರೋಗಿಗಳು ಅಸು ನೀಗಿದ್ದಾರೆ. ದೇಶದ ಸಾವಿನ ಸಂಖ್ಯೆಯ ಸರಾಸರಿಗೆ ಹೋಲಿಸಿದಲ್ಲಿ ಇದು ಶೇ.28ರಷ್ಟು ಪಟ್ಟು ಹೆಚ್ಚಾಗಿದೆ.
ಗೋವಾ, ಛತ್ತೀಸ್‌ಗಡ್, ಲಡಾಕ, ಮಣಿಪುರ, ಉತ್ತರಾಖಾಂಡ, ತ್ರಿಪುರ, ಮಿಜೋರಾಂನಲ್ಲಿ ಇನ್ನೂ ಒಂದೂ ಸಾವು ಆಗದಿರುವುದು ಸಂತೋಷದ ವಿಷಯ.
ಅದರಲ್ಲಿಯೂ ಕೇರಳ, ತಮಿಳುನಾಡು, ರಾಜಸ್ಥಾನ ಹಾಗೂ ದಿಲ್ಲಿಯಲ್ಲಿ ಮೃತಪಟ್ಟವರ ಸಂಖ್ಯೆ ಬಹಳ ಕಡಿಮೆ ಇದೆ. ಆದರೆ, ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಮೃತರ ಸಂಖ್ಯೆ ತುಸು ಅಧಿಕವಾಗಿದೆ. ಅಭಿವೃದ್ಧಿಯಲ್ಲಿ ದೇಶಕ್ಕೇ ಮಾದರಿಯಾಗಿರುವ ಗುಜರಾತ್, ವೈದ್ಯಕೀಯ ಕ್ಷೇತ್ರದೆಡೆಗೆ ಗಮನ ಕೊಡುವ ಅಗತ್ಯವಿದೆ ಎನಿಸುತ್ತದೆ ಅಲ್ಲವೇ?