ಮನಮೋಹನ್ ಸಿಂಗ್ ಎಷ್ಟು ಸಿಂಪಲ್ ಗೊತ್ತಾ? BMW ಬದಲಾಗಿ ಈ ಕಾರ್ ಕೇಳಿದ್ರು
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಸರಳತೆ ಮತ್ತು ದೇಶಭಕ್ತಿಯನ್ನು ಈ ಲೇಖನವು ಬಿಂಬಿಸುತ್ತದೆ. ಬಿಎಂಡಬ್ಲ್ಯು ಕಾರನ್ನು ತಿರಸ್ಕರಿಸಿದ್ದರು. ಶಸ್ತ್ರಚಿಕಿತ್ಸೆಯ ನಂತರ ದೇಶದ ಬಗ್ಗೆ ಕೇಳಿದ ಪ್ರಶ್ನೆಗಳು ಅವರ ದೇಶಪ್ರೇಮವನ್ನು ಎತ್ತಿ ತೋರಿಸುತ್ತವೆ. ಅನುಪಮ್ ಖೇರ್ ಅವರ ಸಂತಾಪ ಸಂದೇಶವನ್ನೂ ಒಳಗೊಂಡಿದೆ.
ಪ್ರಧಾನಿ ಹುದ್ದೆಯನ್ನೇರಿದರೂ ಮಧ್ಯಮ ವರ್ಗದವರಾಗಿದ್ದುಕೊಂಡು ಸಾಮಾನ್ಯರಿಗಾಗಿ ಕೆಲಸ ಮಾಡಬೇಕು ಎಂದು ಬಯಸಿದ್ದ ಮನಮೋಹನ ಸಿಂಗ್ ಅವರು ಐಷಾರಾಮಿ ಬಿಎಂಡಬ್ಲು ಕಾರ್ ತಿರಸ್ಕರಿಸಿ ಮಾರುತಿ 800 ಪ್ರತಿ ಒಲವು ಹೊಂದಿದ್ದರು.
ಈ ಕುರಿತು ಪ್ರಧಾನಿ ಸಿಂಗ್ ಅವರ ಅಂಗರಕ್ಷಕರಾಗಿ 3 ವರ್ಷ ಸೇವೆ ಸಲ್ಲಿಸಿರುವ ಅಸೀಮ್ ಅರುಣ್ ಮಾತನಾಡಿ, ‘ಸದಾ ಪ್ರಧಾನಿಯವರ ನೆರಳಿನಂತೆ ಅವರೊಂದಿಗೆ ಇರುವುದೇ ನನ್ನ ಕರ್ತವ್ಯವಾಗಿತ್ತು. ಆಗ ಸಿಂಗ್‌ರ ಬಳಿ ಭದ್ರತೆಯುಳ್ಳ ಹಲವು ವಾಹನಗಳಿದ್ದರೂ ಅವರು ಸಾಧಾರಣ ಕಾರಿನತ್ತ ಒಲವು ಹೊಂದಿದ್ದರು ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
ಭದ್ರತಾ ದೃಷ್ಟಿಯಿಂದ ಬಿಎಂಡಬ್ಲು ಉತ್ತಮ ಎಂದು ಎಷ್ಟೇ ಮನವರಿಕೆ ಮಾಡಿಸಿದರೂ, ನನ್ನ ಕಾರ್ ಮಾರುತಿ 800’.. ಎನ್ನುತ್ತಿದ್ದರು. ಮಾರ್ಗದಲ್ಲೆಲ್ಲಾದರೂ ಮಾರುತಿ ಕಾರ್ ಕಂಡರೆ ಅವರ ಕಣ್ಣು ಅದನ್ನೇ ಹಿಂಬಾಲಿಸುತ್ತಿತ್ತು. ಇದು ಅವರ ಸರಳತೆಯ ದ್ಯೋತಕ’ ಎಂದರು.
ಅನುಪಮ್ ಖೇರ್ ಸಂತಾಪ
‘ದ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದಲ್ಲಿ ಡಾ. ಮನಮೋಹನ ಸಿಂಗ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಅನುಪಮ್ ಖೇರ್ ಅವರು ಸೀಂಗ್‌ರ ಸಾವಿಗೆ ಸಂತಾಪ ಸೂಚಿಸಿದ್ದು, ಅವರ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಖೇರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಸುದೀರ್ಘ ವಿಡಿಯೋದಲ್ಲಿ, ‘ರಾಜಕೀಯ ಸೇರಿದಂತೆ ಹಲವು ಕಾರಣಗಳಿಂದಾಗಿ ಮೊದಲು ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೆ. ಆದರೆ ನಂತರ ಈ ಪಾತ್ರದಲ್ಲಿ ಮನಃಪೂರ್ವಕವಾಗಿ ಅಭಿನಯಿಸಿದೆ. ಈ ವೇಳೆ ಅವರ ಕೆಲ ಗುಣಗಳನ್ನೂ ಅಳವಡಿಸಿಕೊಂಡೆ. ಆ ಚಿತ್ರ ವಿವಾದಾತ್ಮಕವಾಗಿರಬಹುದು, ಆದರೆ ನೀಲಿ ಪೇಟದಲ್ಲಿ ಕಂಗೊಳಿಸಿದ ಆ ವ್ಯಕ್ತಿಯಲ್ಲ’ ಎಂದಿದ್ದಾರೆ.
ಸರ್ಜರಿ ವೇಳೆ ‘ದೇಶ ಹೇಗಿದೆ? ಕಾಶ್ಮೀರ ಹೇಗಿದೆ?’ ಎಂದಿದ್ದ ಸಿಂಗ್
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ಶಸ್ತ್ರಚಿಕಿಸ್ತೆಗೆ ಒಳಗಾಗಿದ್ದಾಗಲೂ ಅವರಿಗೆ ಇದ್ದದ್ದು ದೇಶದ ಚಿಂತೆ ಎಂದು ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಹೇಳಿದ್ದಾರೆ. ಈ ಕುರಿತು ಮಾತನಾಡಿದ ಡಾ.ರಮಾಕಾಂತ್ ಪಾಂಡಾ, 2009ರಲ್ಲಿ ಸಿಂಗ್ ಅವರು ದೆಹಲಿಯ ಏಮ್ಸ್‌ನಲ್ಲಿ ಸತತ 10 ಗಂಟೆಗಳ ಕಾಲ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಅವರು ಕೇಳಿದ ಮೊದಲ ಪ್ರಶ್ನೆಯೆಂದರೆ, ನನ್ನ ದೇಶ ಹೇಗಿದೆ? ಕಾಶ್ಮೀರ ಹೇಗಿದೆ?. ನನಗೆ ಚಿಕಿತ್ಸೆಯದ್ದಲ್ಲ, ದೇಶದ ಚಿಂತೆಯಿದೆ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ಸಿಂಗ್‌ರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಪಾಂಡಾ, ‘ಅವರು ಆಸ್ಪತ್ರೆಗೆ ಬರುತ್ತಿದ್ದಾಗ ನಾವು ಗೇಟಿನ ಬಳಿ ಹೋಗುವುದನ್ನು ನಯವಾಗಿ ನಿರಾಕರಿಸುತ್ತಿದ್ದರು. ಅವರು ಮಾನಸಿಕವಾಗಿ ಧೃಡವಾಗಿದ್ದರು’ ಎಂದು ಪ್ರಶಂಸಿಸಿದ್ದಾರೆ.