ತರಕಾರಿ ಇಲ್ಲದಿರುವಾಗ ಕಡಲೆಬೀಜ ಬಳಸಿ ತಯಾರಿಸಿ ರುಚಿಕರ, ಖಾರವಾದ ಮಜ್ಜಿಗೆ ಹುಳಿ
ಕೆಲವೊಮ್ಮೆ ತರಕಾರಿ ಇಲ್ಲದೇ ಇರುವಾಗ ಏನು ಮಾಡೋದು ಅಂತ ಯೋಚಿಸುತ್ತಿದ್ದರೆ ಇಂದು ನಾವು ಹೇಳುವ ರೆಸಿಪಿಯನ್ನು ತಯಾರಿಸಬಹುದು. ಈ ರೆಸಿಪಿ ಯಾವ ಸಾಂಬರ್‌ಗೂ ಕಡಿಮೆ ಇರಲ್ಲ. ಇದು ಕೆಲವೇ ನಿಮಿಷಗಳಲ್ಲಿ ಸಿದ್ಧವಾಗುವ ರೆಸಿಪಿ ಆಗಿದೆ.
ಕೇವಲ ಐದರಿಂದ ಹತ್ತು ನಿಮಿಷಗಳಲ್ಲಿ ಈ ರೆಸಿಪಿ ಫಟಾಫಟ್ ಅಂತ ಸಿದ್ಧವಾಗುತ್ತದೆ. ಇಂದು ನಾವು ಹೇಳುತ್ತಿರುವ ರೆಸಿಪಿ ಮಜ್ಜಿಗೆ ಹುಳಿ. ಮನೆಗೆ ಅತಿಥಿಗಳು ಬಂದ ಸಂದರ್ಭದಲ್ಲಿಯೂ ಮಜ್ಜಿಗೆ ಹುಳಿ ಮಾಡಬಹುದು. ಬಿಸಿ ಬಿಸಿ ಅನ್ನಕ್ಕೆ ಮಜ್ಜಿಗೆ ಹುಳಿ ಹಾಕಿಕೊಂಡು ಸೈಡ್‌ನಲ್ಲಿ ಉಪ್ಪಿನಕಾಯಿ ನೆಚ್ಚಿಕೊಂಡು ತಿನ್ನುತ್ತಿದ್ದರೆ ಎರಡು ತುತ್ತು ಹೆಚ್ಚು ತಿನ್ನುತ್ತಾರೆ. ಸಾಮಾನ್ಯವಾಗಿ ಮಜ್ಜಿಗೆ ಹುಳಿ ಎಲ್ಲರ ಮನೆಯಲ್ಲಿ ಮಾಡಿರುತ್ತಾರೆ ಇಂದು ನಾವು ನಿಮಗೆ ಕಡಲೆಬೀಜ (ಶೇಂಗಾ) ಬಳಸಿ ಹೇಗೆ ಗಾಢವಾಗಿ ಹೇಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ಮಜ್ಜಿಗೆ ಹುಳಿ ಮಾಡಬೇಕೆಂದು ಹೇಳುತ್ತಿದ್ದೇವೆ. ಈ ಮಜ್ಜಿಗೆ ಹುಳಿಯ ರುಚಿ ನೋಡಿದವರು ಪದೇ ಪದೇ ಕೇಳುತ್ತಿರುತ್ತಾರೆ.
ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಸಾಮಾಗ್ರಿಗಳು
ಗಟ್ಟಿ ಮೊಸರು: ಒಂದು ಕಪ್, ಹಸಿಮೆಣಸಿನಕಾಯಿ: ಎರಡು, ಸಾಸವೆ-ಜೀರಿಗೆ: ಒಂದು ಟೀ ಸ್ಪೂನ್, ಅರಿಶಿಣ: ಎರಡು ಚಿಟಿಕೆ, ಬ್ಯಾಡಗಿ ಮೆಣಸಿನಕಾಯಿ: ಒಂದು, ಬೆಳ್ಳುಳ್ಳಿ: ನಾಲ್ಕರಿಂದ ಐದು ಎಸಳು, ಕರೀಬೇವು: 5 ರಿಂದ 6 ದಳ, ಕಡಲೆಬೀಜ: ಎರಡು ಟೀ ಸ್ಪೂನ್, ಎಣ್ಣೆ: ಒಂದು ಟೀ ಸ್ಪೂನ್, ಉಪ್ಪು: ರುಚಿಗೆ ತಕ್ಕಷ್ಟು, ಕೋತಂಬರಿ ಸೊಪ್ಪು (ಬೇಕಿದ್ದರೆ ಇಂಗು ಬಳಸಬಹುದು)
ಮಜ್ಜಿಗೆ ಹುಳಿ ಮಾಡುವ ವಿಧಾನ
ಮೊದಲು ಮೊಸರನ್ನು ದೊಡ್ಡ ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ಕಡಿದುಕೊಳ್ಳಿ. ನಂತರ ಸಮ ಪ್ರಮಾಣದಲ್ಲಿ ನೀರು ಸೇರಿಸಿಕೊಳ್ಳಿ. ನಂತರ ಒಲೆ ಆನ್ ಮಾಡ್ಕೊಂಡು ಕಡಲೆಬೀಜ (ಶೇಂಗಾ) ಹುರಿದುಕೊಳ್ಳಬೇಕು. ನಂತರ ಇದೇ ಕಾವಲಿ ಮೇಲೆ ಹಸಿಮೆಣಸಿನಕಾಯಿಯನ್ನು ಸಹ ಒಂದು ಹನಿ ಎಣ್ಣೆ ಹಾಕಿ ಹುರಿದುಕೊಳ್ಳಿ. ನಂತರ ಕಡಲೆಬೀಜ ತಣ್ಣಗಾದ ಮೇಲೆ ಅದರ ಮೇಲಿರುವ ಸಿಪ್ಪೆಯನ್ನು ಬಿಡಿಸಿಕೊಳ್ಳಿ. ಬಳಿಕ ಕಡಲೆಬೀಜ ಮತ್ತು ಹಸಿಮೆಣಸಿನಕಾಯಿಯನ್ನು ತರಿತರಿಯಾಗಿ ರುಬ್ಬಿಕೊಂಡು ಎತ್ತಿಟ್ಟುಕೊಳ್ಳಿ. ಹಾಗೆಯೇ ಬೆಳ್ಳುಳ್ಳಿ ಸಿಪ್ಪೆ ಬಿಡಿಸಿ ತರಿತರಿಯಾಗಿ ಜಜ್ಜಿಕೊಳ್ಳಬೇಕು.
ಈಗ ಒಲೆ ಆನ್ ಮಾಡ್ಕೊಂಡು ಪಾತ್ರೆ ಇರಿಸಿಕೊಳ್ಳಿ. ಪಾತ್ರೆ ಬಿಸಿಯಾಗುತ್ತಿದ್ದಂತೆ ಎರಡು ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿ ಆಗುತ್ತಿದ್ದಂತೆ ಸಾಸವೆ ಹಾಕಿಕೊಳ್ಳಿ. ಸಾಸವೆ ಚಟಪಟ ಅಂತ ಸಿಡಿಯಲು ಆರಂಭಿಸುತ್ತಿದ್ದಂತೆ ಜೀರಿಗೆ ಸೇರಿಸಿ. ಆನಂತರ ಬ್ಯಾಡಗಿ ಮೆಣಸಿನಕಾಯಿಯನ್ನು ಎರಡ್ಮೂರು ತುಂಡು ಮಾಡಿ ಹಾಕಿಕೊಳ್ಳಿ. ತದನಂತರ ಬೆಳ್ಳುಳ್ಳಿ ಮತ್ತು ಕರೀಬೇವು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಈ ಒಗ್ಗರಣೆಗೆ ರುಬ್ಬಿಕೊಂಡಿರುವ ಕಡಲೆಬೀಜ ಮತ್ತು ಹಸಿಮೆಣಸಿನಕಾಯಿ ಮಿಶ್ರಣವನ್ನು ಸೇರಿಸಿ ಕಡಿಮೆ ಉರಿಯಲ್ಲಿ ಎರಡು ನಿಮಿಷ ಬೇಯಿಸಿಕೊಳ್ಳಿ. ನಂತರ ಒಗ್ಗರಣೆಗೆ ಅರ್ಧ ಕಪ್‌ನಷ್ಟು ನೀರು ಸೇರಿಸಿ ಎಲ್ಲಾ ಮಸಾಲೆಯನ್ನು ಕಡಿಮೆ ಉರಿಯಲ್ಲಿ ಮೂರರಿಂದ ನಿಮಿಷ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದೇ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನ ಸೇರಿಸಿಕೊಳ್ಳಬೇಕು.(ಬೇಕಿದ್ದರೆ ಇಂಗು ಸಹ ಸೇರಿಸಿಕೊಳ್ಳಬೇಕು)
ಒಗ್ಗರಣೆ ಮಸಾಲೆ ಚೆನ್ನಾಗಿ ಕುದಿಯುತ್ತಿರುವಾಗಲೇ ತಯಾರಿಸಿಕೊಂಡಿರುವ ಮಜ್ಜಿಗೆಯನ್ನು ಸೇರಿಸಿ ಒಲೆ ಆಫ್ ಮಾಡಬೇಕು. ಇಲ್ಲವಾದ್ರೆ ಮಜ್ಜಿಗೆ ಒಡೆದು ಹುಳಿ ಹಾಳಾಗುತ್ತದೆ. ನಂತರ ಇದಕ್ಕೆ ಸಣ್ಣದಾಗಿ ಕೊಚ್ಚಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿದ್ರೆ ರುಚಿಯಾದ ಉತ್ತರ ಕರ್ನಾಟಕ ಶೈಲಿಯ ಶೇಂಗಾಪುಡಿಯ ಮಜ್ಜಿಗೆ ಹುಳಿ ಸವಿಯಲು ಸಿದ್ಧ. ಜೋಳದ ರೊಟ್ಟಿ ಮತ್ತು ಬಿಸಿ ಬಿಸಿ ಅನ್ನ ಅಥವಾ ಪುಲಾವ್‌ಗೂ ಮಜ್ಜಿಗೆ ಹುಳಿ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.