ನೆಚ್ಚಿನ ನಟನಿಗಾಗಿ ಗಂಡಸರ ಧ್ವನಿಯಲ್ಲಿ ಹಾಡಿದ್ರು ಎಸ್. ಜಾನಕಿ: ಹಾಡಾಗಿತ್ತು ಸೂಪರ್ ಹಿಟ್
ಒಮ್ಮೆ ನಿನ್ನನ್ನು ಕಣ್ತುಂಬಾ..., ಸ್ವಾತಿ ಮುತ್ತಿನ ಮಳೆ ಹನಿಯೇ..., ದೇವರ ಆಟ ಬಲ್ಲವರಾರು?, ಕೋಗಿಲೆಯೇ ಕ್ಷೇಮವೇ, ಪ್ರಕೃತಿಯೇ ಸೌಖ್ಯವೇ, ಅಮ್ಮ ನೀನು ನಕ್ಕರ, ಬಣ್ಣ ನನ್ನ ಒಲವಿನ ಬಣ್ಣ, ರವಿ ನೀನು ಆಗಸದಿಂದ, ಜೀವಾ ಹೂವಾಗಿದೆ....ಒಂದಾ, ಎರಡಾ? ಎಸ್.ಜಾನಕಿ ತಮಿಳಿನ ಗಾಯಕಿಯಾದರೂ ಕನ್ನಡದೊಂದಿಗೆ ವಿಶೇಷ ನಂಟು. ತಮ್ಮ ಕೊನೆಯ ಕಚೇರಿಯನ್ನು ಮೈಸೂರಲ್ಲೇ ಮಾಡಿ ಕನ್ನಡನಾಡಿನ ಬಗ್ಗೆ ಹೆಮ್ಮೆ ಪಟ್ಟವರು ಈ ಗಾಯಕಿ. ಬಹು ಭಾಷಾ ಗಾಯಕಿಯೂ ಆಗಿದ್ದ ಜಾನಕಿಯಮ್ಮ ಒಂದು ಹಾಡನ್ನು ಮೇಲ್ ವಾಯ್ಸಲ್ಲಿ ಹಾಡಿದ್ದರು. ಅದು ಯಾವ ಹಾಡು, ಯಾರಿಗಾಗಿ ಹೀಗೆ ಮಾಡಿದ್ರು?
ಹಿರಿಯ ಗಾಯಕಿ ಎಸ್. ಜಾನಕಿ ಕನ್ನಡ ಸಿನಿಮಾ ಮಾತ್ರವಲ್ಲದೇ ಇಡೀ ಭಾರತೀಯ ಸಂಗೀತ ಲೋಕದಲ್ಲೇ ಒಂದು ಮರೆಯಲಾಗದ ಮಾಣಿಕ್ಯ. ಸಂಗೀತ ಕ್ಷೇತ್ರದ ಲೆಜೆಂಡರಿ ಗಾಯಕಿಯಾಗಿ ಮೆರೆದಿದ್ದಕ್ಕೆ ಅವರ ಬಹು ತರದ ಧ್ವನಿ ಪ್ರತಿಭೆಯೂ ಒಂದು ಕಾರಣ. ಧ್ವನಿಯನ್ನು ಹೇಗೆ ಬೇಕಾದರೂ ಬದಲಾಯಿಸಿ ಹಾಡುವುದರಲ್ಲಿ ನಿಸ್ಸೀಮರು. 60 ವರ್ಷದ ಅಜ್ಜಿಯಿಂದ ಹಿಡಿದು 6 ವರ್ಷದ ಮಗುವಿನವರೆಗೆ ಆಯಾ ಪಾತ್ರಕ್ಕೆ ತಕ್ಕಂತೆ ಅವರು ಹಲವು ಚಿತ್ರಗಳಲ್ಲಿ ತಮ್ಮ ಧ್ವನಿ ಬದಲಾಯಿಸಿ ಹಾಡಿದ್ದಾರೆ. ಇವರು ನಟ ಸಿಂಬುವಿಗಾಗಿ ಗಂಡಸರ ಧ್ವನಿಯಲ್ಲೂ ಹಾಡಿದ್ದರು ಎಂಬುವುದು ಗೊತ್ತಾ? ಅಷ್ಟೇ ಅಲ್ಲ, ಆ ಹಾಡು ಸೂಪರ್ ಹಿಟ್ ಆಗಿತ್ತು.
ತಮಿಳು ನಟ ಟಿ. ರಾಜೇಂದರ್ ತಮ್ಮ ಮಗ ಸಿಲಂಬರಸನ್ ಅವರನ್ನು ಚಿಕ್ಕ ವಯಸ್ಸಿನಿಂದಲೇ ನಟಿಸುವಂತೆ ಮನೆಯ ಪ್ರೋತ್ಸಾಹವಿತ್ತು. ಅದರಂತೆ 1989ರಲ್ಲಿ ಬಿಡುಗಡೆಯಾದ 'ಸಂಸಾರ ಸಂಗೀತಂ' ಚಿತ್ರದಲ್ಲಿ ಟಿ. ರಾಜೇಂದರ್ ಅವರೊಂದಿಗೆ ಅವರ ಮಗ ಸಿಂಬು ಕೂಡ ನಟಿಸಿದ್ದರು. ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಟಿ. ರಾಜೇಂದರ್. ತಮ್ಮ ಮಗನಿಗಾಗಿಯೇ ಅವರು ಬಹಳ ಮುತುವರ್ಜಿಯಿಂದ ಸಂಗೀತ ಸಂಯೋಜಿಸಿದ ಹಾಡು 'ಐ ಆಮ್ ಎ ಲಿಟಲ್ ಸ್ಟಾರ್' . ಈ ಹಾಡನ್ನು ಮುದ್ದಾದ ಮಕ್ಕಳ ಧ್ವನಿಯಲ್ಲಿ ಹಾಡಲಾಗಿತ್ತು.
ಸಂಸಾರ ಸಂಗೀತಂ ಚಿತ್ರದ ಹಾಡು
ಸಿಂಬುವಿಗಾಗಿ ಆ ಹಾಡನ್ನು ಹಾಡಿದ್ದು ಯಾವ ಮಗುವೂ ಅಲ್ಲ, ಎಸ್ ಗಾಯಕಿ ಜಾನಕಿ ಅವರೇ ತಮ್ಮ ಧ್ವನಿಯನ್ನು ಬದಲಾಯಿಸಿಕೊಂಡು ಗಂಡು ಮಗುವಿನಂತೆ ಆ ಹಾಡನ್ನು ಹಾಡಿ ಅಚ್ಚರಿ ಮೂಡಿಸಿದ್ದರು. ಗಂಡಸರ ಧ್ವನಿಯಲ್ಲಿ ಅವರು ಹಾಡಿದ ಈ ಹಾಡು ಸೂಪರ್ ಹಿಟ್ ಆಯಿತು. ಸಿಂಬುವಿಗೆ ಒಂದು ಗುರುತಾಗಿ ಈ ಹಾಡು ನಿಂತಿತು. ಸಿಂಬುವಿಗೆ ಮಾತ್ರವಲ್ಲ, ಶಾಲಿನಿ ಬಾಲನಟಿಯಾಗಿ ನಟಿಸಿದ ಚಿತ್ರಗಳಿಗೂ ಎಸ್. ಜಾನಕಿ ಮಕ್ಕಳ ಧ್ವನಿಯಲ್ಲಿ ಹಾಡಿದ್ದಾರೆ.
ಇನ್ನು 1981 ರಲ್ಲಿ ಬಿಡುಗಡೆಯಾದ, ಭಾಗ್ಯರಾಜ್ ನಟನೆಯ 'ಮೌನ ಗೀತಗಳು' ಚಿತ್ರದಲ್ಲಿ 'ಡ್ಯಾಡಿ ಡ್ಯಾಡಿ ಓ ಮೈ ಡ್ಯಾಡಿ' ಎಂಬ ಹಾಡು ಸೂಪರ್ ಹಿಟ್ ಆಯಿತು. ಒಬ್ಬ ಪುಟ್ಟ ಹುಡುಗ ಹಾಡುವಂತಿದ್ದರೂ, ಈ ಹಾಡನ್ನೂ ಹಾಡಿದ್ದು ಜಾನಕಿಯಮ್ಮ. ಇದಲ್ಲದೇ 'ರಂಗ' ಚಿತ್ರದಲ್ಲಿ ರಜನಿಯೊಂದಿಗೆ ನಟಿಸಿದ ಪುಟ್ಟ ಹುಡುಗ ಹಾಡುವ 'ಪೇಸ್ಟ್ ಇರ್ಕು ಬ್ರಷ್ ಇರ್ಕು ಎಳುಂತಿರು ಮಾಮ' ಹಾಡನ್ನೂ ಜಾನಕಿ ತಮ್ಮ ಧ್ವನಿಯನ್ನು ಬದಲಾಯಿಸಿ ಹಾಡಿದ್ದಾರೆ. ಈ ರೀತಿ ಜಾನಕಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ ಚಿತ್ರಗಳು ಹಲವು. ಅದಕ್ಕಾಗಿಯೇ ಅವರ ಹಾಡುಗಳು ಕಾಲಾತೀತವಾಗಿ ಮೆಚ್ಚುಗೆ ಪಡೆಯುತ್ತಿವೆ.