ಹಿಮಾಲಯದಲ್ಲಿ ಧ್ಯಾನ ಮಾಡೋದು ದೈವಿಕ ಅನುಭವ: ರಾಧಿಕಾ ನಾರಾಯಣ್
‘ಶಿವಾಜಿ ಸುರತ್ಕಲ್’ ಸಿನಿಮಾ ಪ್ರಚಾರ, ಸಕ್ಸಸ್ ಮೀಟ್ ಅಂತೆಲ್ಲ ಬ್ಯುಸಿಯಾಗಿದ್ದ ರಾಧಿಕಾ ನಾರಾಯಣ್ ಸೈಕಲ್ ಗ್ಯಾಪ್ನಲ್ಲಿ ಹಿಮಾಲಯಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಸ್ನೋ ಫಾಲ್, ಟ್ರೆಕ್ಕಿಂಗ್ ಮಾಡಿದ ಅನುಭವಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.
‘ಶಿವಾಜಿ ಸುರತ್ಕಲ್’ ಸಿನಿಮಾ ಪ್ರಚಾರ, ಸಕ್ಸಸ್ ಮೀಟ್ ಅಂತೆಲ್ಲ ಬ್ಯುಸಿಯಾಗಿದ್ದ ರಾಧಿಕಾ ನಾರಾಯಣ್ ಸೈಕಲ್ ಗ್ಯಾಪ್ನಲ್ಲಿ ಹಿಮಾಲಯಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಸ್ನೋ ಫಾಲ್, ಟ್ರೆಕ್ಕಿಂಗ್ ಮಾಡಿದ ಅನುಭವಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.
ವೆಕೇಶನ್ ತಗೊಂಡು ತುಂಬ ದಿನ ಆಗೋಗಿತ್ತು. ಈ ಸಲ ಫ್ರೆಂಡ್ಸ್ ಜೊತೆ ಹಿಮಾಚಲ ಪ್ರದೇಶದ ನಗ್ಗರ್ ಅನ್ನೋ ಜಾಗಕ್ಕೆ ಹೋಗಿದ್ವಿ. ನಗ್ಗರ್ ಹತ್ರ ಹಲ್ಲನ್ ಅಂತ ಒಂದು ಹಿಮಾಲಯದ ತಪ್ಪಲಿನ ಹಳ್ಳಿ. ಅಲ್ಲೇ ನಾವು ಉಳಿದುಕೊಂಡಿದ್ದು. ಆ ಜಾಗದಲ್ಲೇ ಒಂದು ಬೆಟ್ಟಕ್ಕೆ ಟ್ರೆಕಿಂಗ್ ಮಾಡಿದ್ವಿ.
ಇನ್ನೊಂದು ದಿನ ಜಿಸ್ಪಾ ಹತ್ತಿರ ದೀಪಕ್ ಲೇಕ್ ಅನ್ನುವ ಚೆಂದದ ಸರೋವರ ಇತ್ತು. ಅಲ್ಲಿಗೆ ಹೋದಾಗ ನಮ್ಮ ಅದೃಷ್ಟಕ್ಕೆ ಹಿಮ ಬೀಳೋಕೆ ಶುರುವಾಯ್ತು. ಅದೊಂದು ಅದ್ಭುತ ಅನುಭವ, ಮಾತಲ್ಲಿ ವರ್ಣಿಸೋದು ಕಷ್ಟ, ಅಷ್ಟುಚೆಂದ. ಒಂದು ಸಲ ರಿಫ್ರೆಶ್ ಬಟನ್ ಒತ್ತಿದಂಗಾಯ್ತು.
ಹಿಮಾಲಯದಲ್ಲಿ ಧ್ಯಾನ ಮಾಡೋದು ದೈವಿಕ ಅನುಭವ. ಅಲ್ಲೊಂದು ವೈಬ್ರೇಶನ್ ಇರುತ್ತೆ. ಇಲ್ಲಿ ಮಾಡುವ ಮೆಡಿಟೇಶನ್ ಹೆಚ್ಚು ಪರಿಣಾಮಕಾರಿ ಆಗಿರುತ್ತೆ. ಇಲ್ಲಿನ ರಸ್ತೆಗಳು ಬಹಳ ಕಿರಿದು. ಬೆಟ್ಟವನ್ನು ಸುತ್ತಿ ಬಳಸುತ್ತಾ, ಒಂಚೂರು ಆಚೀಚೆ ಆದರೆ ಎಲ್ಲಿ ಪ್ರಪಾತಕ್ಕೆ ಬೀಳ್ತೀವೋ ಅಂತ ಭಯ ಹುಟ್ಟಿಸುವ, ಅವಿಸ್ಮರಣೀಯ ಅನುಭವ ನೀಡುವ ಜರ್ನಿಯದು.
ನಾವು ದೆಹಲಿಯಿಂದ ಇಲ್ಲಿಯವರೆಗೆ ರೋಡ್ ಟ್ರಿಪ್ ಮಾಡಿದ್ವಿ. ಆ ಅನುಭವವೂ ಚೆನ್ನಾಗಿತ್ತು. ಮೂರು ದಿನಗಳ ಕಾಲ ನಾವು ಆಫ್ಬೀಟ್ ಜಾಗಗಳಲ್ಲೇ ಸುತ್ತಾಡಿದೆವು. ಕಮರ್ಷಿಯಲ್ ಜಾಗಕ್ಕೆ ಹೋಗಿಲ್ಲ. ನಾವು ಹೋದಲ್ಲಿ ಟೂರಿಸ್ಟ್ ಕಡಿಮೆ ಇದ್ರು.
ಬೆಟ್ಟದ ಮೇಲೆ ಮೇಲೆ ಹೋಗ್ತಾ ಅಲ್ಲಿಯ ಜನ ಜೀವನದ ದರ್ಶನವೂ ಆಯ್ತು. ಅಪಾರ ಪ್ರೀತಿಯ ಮಂದಿ ಇಲ್ಲಿಯವರು. ಬೆಟ್ಟದ ಮೇಲೆ ಆಹಾರ, ನೀರಿಗೆ ಸಮಸ್ಯೆ. ಹೀಗಾಗಿ ಎಲ್ಲವನ್ನೂ ಹಿತ ಮಿತವಾಗಿ ಬಳಸಬೇಕು. ಮೂಲಭೂತ ಅವಶ್ಯಕತೆಗಳಲ್ಲೇ ನೆಮ್ಮದಿಯಾಗಿ ಬದುಕೋದು ಹೇಗೆ ಅನ್ನೋ ಪಾಠವನ್ನೂ ಇಲ್ಲಿ ಕಲಿತೆ.