Asianet Suvarna News Asianet Suvarna News

ಭಾರತ ಫುಟ್ಬಾಲ್‌ ಕೋಚ್‌ ಇಗೊರ್‌ ಸ್ಟಿಮಾಕ್ ತಲೆದಂಡ!

2019ರಲ್ಲಿ ಪ್ರಧಾನ ಕೋಚ್‌ ಆಗಿ ಸ್ಟಿಮಾಕ್‌ ನೇಮಕಗೊಂಡಿದ್ದರು. ಕಳೆದ ವರ್ಷ ಅವರ ಗುತ್ತಿಗೆ ಅವಧಿಯನ್ನು ಒಂದು ವರ್ಷ ಸಮಯಕ್ಕೆ ವಿಸ್ತರಿಸಲಾಗಿತ್ತು. ಭಾರತ ಇತ್ತೀಚೆಗೆ ಕತಾರ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಸೋತು, ವಿಶ್ವಕಪ್‌ ಅರ್ಹತಾ ಟೂರ್ನಿಯ 3ನೇ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು.

AIFF sacks Igor Stimac as India head coach after disappointing campaign in FIFA World Cup 2026 qualifiers kvn
Author
First Published Jun 18, 2024, 11:04 AM IST

ನವದೆಹಲಿ: 2026ರ ಫಿಫಾ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿದ್ದರ ಪರಿಣಾಮ, ತಂಡದ ಪ್ರಧಾನ ಕೋಚ್‌ ಇಗೊರ್‌ ಸ್ಟಿಮಾಕ್‌ರ ತಲೆದಂಡವಾಗಿದೆ. ಸೋಮವಾರ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌ (ಎಐಎಫ್‌ಎಫ್) ಈ ಸಂಬಂಧ ಮಾಧ್ಯಮ ಪ್ರಕಟಣೆ ನೀಡಿದ್ದು, ತಕ್ಷಣದಿಂದಲೇ ಸ್ಟಿಮಾಕ್‌ರ ಸೇವೆ ರದ್ದುಗೊಳಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

2019ರಲ್ಲಿ ಪ್ರಧಾನ ಕೋಚ್‌ ಆಗಿ ಸ್ಟಿಮಾಕ್‌ ನೇಮಕಗೊಂಡಿದ್ದರು. ಕಳೆದ ವರ್ಷ ಅವರ ಗುತ್ತಿಗೆ ಅವಧಿಯನ್ನು ಒಂದು ವರ್ಷ ಸಮಯಕ್ಕೆ ವಿಸ್ತರಿಸಲಾಗಿತ್ತು. ಭಾರತ ಇತ್ತೀಚೆಗೆ ಕತಾರ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಸೋತು, ವಿಶ್ವಕಪ್‌ ಅರ್ಹತಾ ಟೂರ್ನಿಯ 3ನೇ ಸುತ್ತಿಗೆ ಪ್ರವೇಶಿಸಲು ವಿಫಲವಾಗಿತ್ತು. ಸ್ಟಿಮಾಕ್‌ರ ಮಾರ್ಗದರ್ಶನದಲ್ಲಿ ಭಾರತ ಎರಡು ಸ್ಯಾಫ್‌ ಚಾಂಪಿಯನ್‌ಶಿಪ್‌, ಒಂದು ಇಂಟರ್‌ ಕಾಂಟಿನೆಂಟಲ್‌ ಕಪ್‌ ಹಾಗೂ ಒಂದು ತ್ರಿಕೋನ ಸರಣಿಯನ್ನು ಜಯಿಸಿದೆ.

ಇಂದು ಫಿನ್‌ಲ್ಯಾಂಡ್‌ ಅಥ್ಲೆಟಿಕ್ಸ್‌ ಕೂಟದಲ್ಲಿ ನೀರಜ್‌ ಚೋಪ್ರಾ ಕಣಕ್ಕೆ

ಟುರ್ಕು(ಫಿನ್‌ಲ್ಯಾಂಡ್‌): ಭಾರತದ ತಾರಾ ಜಾವೆಲಿನ್‌ ಪಟು, ಹಾಲಿ ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಸಣ್ಣ ಪ್ರಮಾಣದ ಗಾಯದಿಂದ ಚೇತರಿಸಿಕೊಂಡಿದ್ದು ಮಂಗಳವಾರ ಇಲ್ಲಿ ನಡೆಯಲಿರುವ ಪಾವೋ ನುರ್ಮಿ ಗೇಮ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಕಾರಣ, ನೀರಜ್‌ ಲಯ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ನೀರಜ್‌ಗೆ ಜರ್ಮನಿಯ ಮ್ಯಾಕ್ಸ್‌ ದೆಹ್ನಿಂಗ್‌, ಫಿನ್‌ಲ್ಯಾಂಡ್‌ನ ಓಲಿವರ್‌ ಹೆಲಾಂಡರ್‌, ಗ್ರೆನಾಡಾದ ಆ್ಯಂಡರ್‌ಸನ್‌ ಪೀಟರ್ಸ್‌ರಿಂದ ಕಠಿಣ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.

ಟೆನಿಸ್‌ ವಿಶ್ವ ರ್‍ಯಾಂಕಿಂಗ್‌ : 71ನೇ ಸ್ಥಾನಕ್ಕೆ ಜಿಗಿದ ಸುಮಿತ್‌ ನಗಾಲ್‌

ನವದೆಹಲಿ: ಇಟಲಿಯ ಪೆರುಗಿಯಾ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ರನ್ನರ್‌-ಅಪ್‌ ಸ್ಥಾನ ಪಡೆದ ಭಾರತದ ಸುಮಿತ್‌ ನಗಾಲ್‌, ಎಟಿವಿ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 71ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಭಾನುವಾರ ರಾತ್ರಿ ನಡೆದ ಫೈನಲ್‌ನಲ್ಲಿ ನಗಾಲ್‌, ಸ್ಥಳೀಯ ಆಟಗಾರ ಲೂಸಿಯಾನೋ ವಿರುದ್ಧ 1-6, 2-6 ನೇರ ಸೆಟ್‌ಗಳಲ್ಲಿ ಸೋಲುಂಡರು.

ಕಳೆದ ವಾರ 77ನೇ ಸ್ಥಾನದಲ್ಲಿದ್ದ ನಗಾಲ್‌ ಮುಂಬರುವ ವಿಂಬಲ್ಡನ್‌ನ ಪ್ರಧಾನ ಸುತ್ತಿಗೆ ನೇರ ಪ್ರವೇಶ ಪಡೆದಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ನ ಸಿಂಗಲ್ಸ್‌ ಸ್ಪರ್ಧೆಗೆ ಪ್ರವೇಶ ಪಡೆದಿರುವ ಭಾರತದ ಏಕೈಕ ಟೆನಿಸಿಗ ಎನಿಸಿದ್ದಾರೆ.

ಕಿರಿಯರ ಅಥ್ಲೆಟಿಕ್ಸ್‌: ರಾಜ್ಯದ ಇಶಾಗೆ ಕಂಚು

ಬಿಲಾಸ್‌ಪುರ್‌: ಛತ್ತೀಸ್‌ಗಢದ ಬಿಲಾಸ್‌ಪುರ್‌ನಲ್ಲಿ ನಡೆದ 19ನೇ ರಾಷ್ಟ್ರೀಯ ಕಿರಿಯರ ಅಥ್ಲೆಟಿಕ್ಸ್‌ ಕೂಟವನ್ನು ಕರ್ನಾಟಕ 3 ಪದಕಗಳೊಂದಿಗೆ ಮುಕ್ತಾಯಗೊಳಿಸಿದೆ. ಕೂಟದ ಕೊನೆಯ ದಿನವಾದ ಸೋಮವಾರ ಅಂಡರ್‌-18 ಬಾಲಕಿಯರ 100 ಮೀ. ಹರ್ಡಲ್ಸ್‌ ಓಟದಲ್ಲಿ ಇಶಾ ರೆಂಜಿತ್‌ ಕಂಚಿನ ಪದಕ ಪಡೆದರು. 15.01 ಸೆಕೆಂಡ್‌ಗಳಲ್ಲಿ ಇಶಾ ಓಟ ಪೂರ್ತಿಗೊಳಿಸಿದರು. ಜಾರ್ಖಂಡ್‌ನ ಸುಜನಾ, ತಮಿಳುನಾಡಿನ ಭಾವನಾ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗಳಿಸಿದರು. ಕೂಟದ 2ನೇ ದಿನ ಕರ್ನಾಟಕಕ್ಕೆ ಒಂದು ಬೆಳ್ಳಿ, ಒಂದು ಕಂಚು ದೊರೆತಿತ್ತು.
 

Latest Videos
Follow Us:
Download App:
  • android
  • ios