ಕಲ್ಲಣಬೆ ಸಾಂಬರಿನಲ್ಲಿ ನೀರುದೋಸೆ ತಿನ್ನೋ ಮಜಾನೆ ಬೇರೆ, ಉಡುಪಿ ಕಡೆ ಬಂದ್ರೆ ಮರೀಬೇಡಿ...!
ಒಂದೊಂದು ಊರು ಕಡೆ ಹೋದ್ರೆ ಒಂದೊಂದು ಸ್ಪೆಷಲ್ ಊಟ, ತಿಂಡಿ ಸಿಗುತ್ತೆ, ಅದರಂತೆ ಉಡುಪಿ ಕಡೆ ಬಂದ್ರೆ ಕಲ್ಲಣಬೆ ತಿನ್ನೋದನ್ನ ಮರೀಬೇಡಿ..
ಕರಾವಳಿಯಲ್ಲಿ ಮುಂಗಾರು ಭರ್ಜರಿಯಾಗಿ ಆರಂಭವಾಗಿದೆ. ಗುಡುಗು ಸಿಡಿಲಿನೊಂದಿದೆ ಸಿಕ್ಕಾಪಟ್ಟೆ ಮಳೆಯಾಗುತ್ತಿದೆ. ಸಿಡಿಲಿಗೆ ಭೂಮಿ ನಡುಗಿದ್ದೇ ತಡ ನೆಲಡದಿಯಿಂದ ಕಲ್ಲಣಬೆ ಮೇಲೇಳುತ್ತಿದೆ. ಕಲ್ಲಣಬೆ ಸಾಂಬರ್ ನಲ್ಲಿ ನೀರುದೋಸೆ ತಿನ್ನೋ ಮಜಾನೆ ಬೇರೆ.
ಉಡುಪಿಯಲ್ಲಿ ಮುಂಗಾರು ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಕೃಷಿ ಚಟುವಟಿಕೆಗಳು ಆರಂಭ ಕೂಡಾ ಆಗಿದೆ. ಹಳ್ಳಿ ಮನೆಗಳ ಸುತ್ತ ಸುಮ್ನೆ ಒಂದು ರೌಂಡ್ ಹೊಡೆದ್ರೆ ಸಾಕು ಸ್ಪೆಷಲ್ ಫುಡ್ಗಳ ಪರಿಮಳ ಮೂಗಿಗೆ ಬಡಿಯುತ್ತದೆ. ನಾಟಿಕೋಳಿ- ಫ್ರೆಶ್ ಮೀನಿಗೆ ಮಾರುಹೋಗುವ ಜನ ಈಗ ಕಲ್ಲಣಬೆ ಹಿಂದೆಬಿದ್ದಿದ್ದಾರೆ.
ಎಲ್ಲೆಲ್ಲಾ ಬೋವು ಎಂಬ ಜಾತಿಯ ಮರ ಇರುತ್ತೋ ಅಲ್ಲೆಲ್ಲಾ ಕಲ್ಲಣಬೆ ಸಿಗುತ್ತದೆ. ಭೂಮಿಯ ಮೇಲ್ಪದರದ ಒಳಗೆ ಹುಟ್ಟುವ ಅಣಬೆ.., ಮೂರ್ನಾಲ್ಕು ದಿನದೊಳಗೆ ಕೊಳೆತು ಹೋಗುತ್ತದೆ. ಈ ನಡುವೆ ಅಣಬೆಯನ್ನು ಕೋಲಿನಿಂದ ಎಬ್ಬಿಸಬೇಕು. ಅಣಬೆಗೆ ಘಾಸಿಯಾಗದಂತೆ ನಾಜೂಕಾಗಿ ಭೂಮಿಯಿಂದ ಮೇಲಕ್ಕೆತ್ತಿ ನಂತರ ಶುಚಿಗೊಳಿಸಿ ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ.
ಅಕಾಲಿಕ ಮಳೆಗೆ ಕಲ್ಲಣಬೆ ಮಾರುಕಟ್ಟೆಗೆ, ಕೆಜಿಗೆ 600..!
ಭೂಮಿಯಿಂದ ಆರಿಸಿದ ಅಣಬೆಯನ್ನು ಶುಚಿಗೊಳಿಸಬೇಕು. ಮಾಮೂಲಿ ಸಾಂಬಾರ್ಗೆ ಮಾಡುವ ಒಗ್ಗರಣೆಯಲ್ಲಿ ಸಿಪ್ಪೆ ಸುಲಿದ ಅಣಬೆಯನ್ನು ಫ್ರೈ ಮಾಡಲಾಗುತ್ತದೆ. ಚಿಕನ್ ಮಸಾಲೆ ಜೊತೆ ಅಣಬೆ ಬೆಂದರೆ ಪಕ್ಕ ಮಾಂಸದೂಟದ್ದೇ ಟೆಸ್ಟ್. ಅದ್ರಲ್ಲೂ ಬೆಂಕಿಯೊಲೆಯಲ್ಲಿ ಮಣ್ಣಿನ ಪಾತ್ರೆಯಿಟ್ಟು ಅಡುಗೆ ಮಾಡಿದ್ರಂತೂ ಸಿಕ್ಕಾಪಟ್ಟೆ ಟೇಸ್ಟ್. ಊಟಕ್ಕಿಂತಲೂ ನೀರುದೋಸೆ, ಇಡ್ಲಿ ಜೊತೆ ಸೈಡ್ಡಿಷ್ ಆಗಿ ಕಲ್ಲಣಬೆ ಸಾಂಬರ್- ಅಥವಾ ಗಸಿ ತುಂಬಾ ಸೂಟ್ ಆಗುತ್ತದೆ.
ಒಂದು ಕಡೆಯಿಂದ ಜೋರ್ ಮಳೆ.., ಅಡುಗೆ ಮನೆಯಲ್ಲಿ ಕಲ್ಲಣಬೆ ಘಮಘಮ.. ಇಂತಹ ಚಾನ್ಸ್ ಮತ್ತೆಲ್ಲೂ ಸಿಗಲ್ಲ. ಮೊದಲ ಮಳೆ ಬೀಳುವಾಗ ಕರಾವಳಿ ಕಡೆ ಬಂದ್ರೆ ಕಲ್ಲಣಬೆ ಜೊತೆ ನೀರುದೋಸೆ ತಿನ್ನೋಕೆ ಮರೀಬೇಡಿ.
ಕಲ್ಲಣಬೆ.ಬಗ್ಗೆ ತಿಳಿಯಿರಿ
ಮಳೆಗಾಲ ಆರಂಭದ 15 ದಿವಸದ ಒಳಗೆ ಮಳೆ ನೀರು ಭೂಮಿಯೊಳಗೆ ಬೀಳುತ್ತಿದ್ದಂತೆ ಒಂದು ವಿಶಿಷ್ಟವಾದ ಸಸ್ಯ ಸಂಕುಲದ ಆಹಾರ ಪದಾರ್ಥ ದೊರೆಯುತ್ತದೆ. ಅದರ ಹೆಸರು ಕಲ್ಲಣಬೆ.
ನೋಡಲು ಗೋಲಿಯಾಕಾರದಲ್ಲಿ ಇರುತ್ತದೆ. ಇದನ್ನು ತುಳುವಿನಲ್ಲಿ ಕಲ್ಲಾಲಾಂಬು ಎಂದು ಕರೆಯುತ್ತಾರೆ. ವಿಶೇಷವೆಂದರೆ ಮುಂಗಾರಿನ ಪ್ರಾರಂಭದಲ್ಲಿ ಮಾತ್ರ ಈ ಅಣಬೆ ಕಾಣಸಿಗುತ್ತದೆ. ಬಹುತೇಕರಿಗೆ ಈ ಅಣಬೆಯ ವಿಶೇಷತೆ ಬಗ್ಗೆ ಗೊತ್ತಿಲ್ಲ.
ಮೊದಲ ಮಳೆ ಭೂಮಿಗೆ ಬೀಳುವಾಗ ಗುಡುಗಿನ ಆರ್ಭಟ ಜೋರಾಗಿಯೇ ಇರುತ್ತದೆ. ಈ ಸಂದರ್ಭದಲ್ಲಿ ಜೌಗುಮಣ್ಣಿನ ಭೂಮಿಯ ಮೇಲೆ ಕತ್ತಿ ಅಥವಾ ಕೋಲಿನಿಂದ ಅಗೆದರೆ ಈ ವಿಶಿಷ್ಟವಾದ ಕಲ್ಲಣಬೆ ದೊರೆಯುತ್ತದೆ. ಕಲ್ಲಣಬೆಯನ್ನು ಹುಡುಕಿಕೊಂಡು ಹೋಗಿ ಸಂಗ್ರಹ ಮಾಡುವುದು ಸುಲಭದ ಮಾತಲ್ಲ. ಏಕೆಂದರೆ ಇದರ ಇರುವಿಕೆಯೂ ಮೇಲ್ನೋಟಕ್ಕೆ ಅಷ್ಟು ಸುಲಭವಾಗಿ ಕಂಡುಬರುವುದಿಲ್ಲ. ಆದರೆ ಇದನ್ನು ತುಳುವರು ಕಂಡುಕೊಂಡಿದ್ದಾರೆ.