- -ಕೃಷ್ಣಮೋಹನ ತಲೆಂಗಳ

ಕಡ್ಲೆ ಬೇಳೆ ಹೋಳಿಗೆ (ಗೋಧಿ ಹುಡಿಯ ಕನಕ)

ಮಾಡುವ ವಿಧಾನ- ಆರಂಭದಲ್ಲಿ 1 ಕೆ.ಜಿ.ಯಷ್ಟು ಕಡಲೆ ಬೇಳೆ ಬೇಯಿಸಿಕೊಳ್ಳುವುದು. ನಂತರ ಅದಕ್ಕೆ ಸಕ್ಕರೆ ಹಾಕಿ ಮಗುಚಿ ಪಾಕ ಮಾಡುವುದು. ಇಲ್ಲಿ ಪಾಕಕ್ಕೆ ಸಕ್ಕರೆಯ ಬದಲು ಬೆಲ್ಲವನ್ನು ಬಳಸುವುದು ಭಟ್ಟರ ವಿಶೇಷ. ಬೆಲ್ಲವನ್ನು ಗುದ್ದಿ ಹುಡಿ ಮಾಡಿ,  ಪಾಕ ಮಾಡುವುದು. 1 ಕೆ.ಜಿ. ಕಡ್ಲೆ ಬೇಳೆಗೆ ಒಂದೂಕಾಲು ಕೆ.ಜಿ. ಬೆಲ್ಲ ಬೇಕು. ಸಾವಯವ ಬೆಲ್ಲ ಬಳಸಿದರೆ ರುಚಿ ಮತ್ತೂ ಉತ್ತಮವಾಗುತ್ತದೆ. ಬೇಯಿಸಿದ ಬಿಸಿ ಬಿಸಿ ಕಡ್ಲೆ ಬೇಳೆ ಪಾಕವನ್ನು ಕಡೆಯಬೇಕು. ತಣಿಯಲು ಬಿಡಬಾರದು. ರುಬ್ಬಿದ ನಂತರ ಹಿಟ್ಟು ನಯವಾಗಿ ಬರಬೇಕು. ನಂತರ ನಯವಾದ ಹೂರಣವನ್ನು ದೊಡ್ಡ ನಿಂಬೆ ಗಾತ್ರದ ಉಂಡೆ ಮಾಡಿಡಬೇಕು.

ಈ ಪಾಕ ಮಾಡುವ ಮೊದಲೇ ಕನಕ ರೆಡಿ ಮಾಡಿಡಬೇಕು. ಕನಕವನ್ನು ಮೈದಾದ ಬದಲು ಗೋಧಿ ಹುಡಿಯಲ್ಲಿ ಮಾಡುವ ಕಾರಣ ಅದು ನಾರು ಬರಲು ಕನಿಷ್ಠ ಎರಡು ಗಂಟೆ ಅವಧಿ ಬೇಕು.

ಕನಕ ಮಾಡುವ ವಿಧಾನ-ಅರ್ಧ ಕೆ.ಜಿ.ಯಷ್ಟು ಗೋಧಿ ಹುಡಿಗೆ ಸ್ವಲ್ಪ ನೀರು ಹಾಕಿ ಕಲಸುವುದು. ಹೂರಣವನ್ನು ಅದಕ್ಕೆ ತುಂಬಿಸಿ ಲಟ್ಟಿಸುವಾಗ ಮೈದಾದ ಬದಲು ಗೋಧಿ ಹುಡಿಯನ್ನೇ ಬಳಸುವುದು. ಕನಕಕ್ಕೆ ಅರ್ಧ ಕೆ.ಜಿ. ಲಟ್ಟಿಸಲು ಅರ್ಧ ಕೆ.ಜಿ.ಗೋಧಿ ಹುಡಿ ಬೇಕಾಗುತ್ತದೆ. ಈ ಒಂದು ಕೆ.ಜಿ. ಕಡ್ಲೆ ಬೇಳೆಯಲ್ಲಿ ಸಾಧಾರಣ ಗಾತ್ರದ 40-50 ಹೋಳಿಗೆ ತಯಾರಿಸಬಹುದು.

ಮೈದಾದಲ್ಲಿ ನಾರಿನ ಅಂಶ ಜಾಸ್ತಿ ಇರುವ ಕಾರಣ ಅದು ಕರುಳಿಗೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಭಟ್ಟರು ಗೋಧಿ ಹುಡಿ ಪ್ರಯೋಗ ಮಾಡಿದ್ದಾರೆ. ಗೋಧಿ ಮತ್ತು ಬೆಲ್ಲ ಬಳಕೆಯಿಂದ ಹೋಳಿಗೆ ಬಣ್ಣ ನಸು ಕಪ್ಪು ಥರ ಇರುತ್ತದೆ ಅನ್ನುವುದನ್ನು ಹೊರತುಪಡಿಸಿ ರುಚಿ ಮತ್ತು ಬಾಳಿಕೆಯಲ್ಲಿ ಯಾವುದೋ ಲೋಪ ಇರುವುದಿಲ್ಲ. ಒರಿಜಿನಲ್ ಹೋಳಿಗೆಯದ್ದೇ ಹಳದಿ ಬಣ್ಣ ಬೇಕಾದರೆ ಗೋಧಿ ಬದಲು ಮೈದಾ, ಬೆಲ್ಲದ ಬದಲು ಸಕ್ಕರೆ ಬಳಸಬಹುದು ಎನ್ನುತ್ತಾರೆ ಅವರು.

ವಿಶಿಷ್ವವಾದ ಹಲಸಿನ ಹಣ್ಣಿನ ಹೋಳಿಗೆ

ಮಾಡುವ ವಿಧಾನ-

ಸಾಧಾರಣ ಹಣ್ಣಾದ ಸುಮಾರು 50ರಷ್ಟು ಹಲಸಿನ ಹಣ್ಣಿನ ಸೋಳೆಯಲ್ಲಿ ರುಬ್ಬಬೇಕು. ರುಬ್ಬುವ ಮೊದಲು ಬೇಯಿಸಬಾರದು, ನೀರು ಸೇರಿಸಬಾರದು. ನಂತರ ಬಾಣಲೆಗೆ ಹಾಕಿ ಸುಮಾರು ಒಂದು ಕಪ್ ಬೆಲ್ಲದ ಹುಡಿ ಹಾಕಿ ಪಾಕ ಮಾಡಬೇಕು. ಪಾಕ ಸ್ವಲ್ಪ ಗಟ್ಟಿ ಆದ ಬಳಿಕ 2 ಚಮಚದಷ್ಟು ಗೋಧಿ ಹುಡಿ ಹಾಕುವುದು. ಗಟ್ಟಿ ಆಗುವ ತನಕ ಕಾಯಿಸಿ ಬಳಿಕ ತಣಿದ ನಂತರ ಉಂಡೆ ಮಾಡಬೇಕು.

ನಂತರ ಗೋಧಿ ಹುಡಿ ಕನಕವನ್ನು ಬಳಸಿ ಬೇಯಿಸಿದರೆ ರುಚಿ ರುಚಿಯಾದ, ಗರಿ ಗರಿಯಾದ ಹಲಸಿನ ಹಣ್ಣಿನ ಪರಿಮಳದ ಹೋಳಿಗೆ ಸಿದ್ಧ. ಆದರೆ ಇದನ್ನು ಜಾಸ್ತಿ ದಿನ ಇಡುವಂತಿಲ್ಲ. ಒಂದೇ ದಿನ ಇದರ ಆಯುಷ್ಯ.

ಮಾವಿನ ಹಣ್ಣಿನ ಹೋಳಿಗೆ...

ಮಾವಿನ ಹಣ್ಣಿನ ಕಟ್ ಮಾಡಿ ಮಿಕ್ಸಿಗೆ ಹಾಕಿ ಬೆಲ್ಲ ಹಾಕಿ ಕಾಯಿಸುವುದು. ಗಟ್ಟಿ ಆಗುವಾಗ 2 ಟೀ ಸ್ಪೂನ್ ಗೋಧಿ ಹುಡಿ ಹಾಕಿ ಕಲಸುವುದು. ಗೋಧಿ ಹುಡಿ ಬದಲಿಗೆ ಅಕ್ಕಿ ಹುಡಿಯನ್ನೂ ಹಾಕಬಹುದು. ಪಾಕ ರೆಡಿಯಾದ ಬಳಿಕ ಉಂಡೆ ಮಾಡಿ ಗೋಧಿ ಹುಡಿ ಕನಕದಲ್ಲಿ ಸೇರಿಸಿ ಬೇಯಿಸಿದರೆ ಮಾವಿನ ಹಣ್ಣಿನ ಹೋಳಿಗೆ ರೆಡಿ.

ಕ್ಯಾರೆಟ್ ಹೋಳಿಗೆ....

ಕ್ಯಾರೆಟ್ ನ್ನು ಸಣ್ಣದಾಗಿ ಹೆಚ್ಚಿ ಅಥವಾ ಮಿಕ್ಸಿಯಲ್ಲಿ ರುಬ್ಬಿ ಸೆಕೆ ಬರಿಸುವುದು. ನಂತರ ಪಾಕ ಮಾಡುವುದು 10 ಹೋಳಿಗೆಗೆ ದೊಡ್ಡ ಗಾತ್ರದ 5 ಕ್ಯಾರೆಟ್ ಬೇಕಾಗುತ್ತದೆ. ಪಾಕ ರೆಡಿ ಆದ ಮೇಲೆ ಬೆಲ್ಲ ಹಾಕಿ ಹಾಕಿ ಕಡೆಯುವುದು. ಪಾಕ ಗಟ್ಟಿಯಾಗಲು ಗೋಧಿ ಹುಡಿ ಮಿಕ್ಸ್ ಮಾಡಬೇಕು. ಪರಿಮಳಕ್ಕೆ ಏಲಕ್ಕಿ ಹುಡಿ ಹಾಕುವುದು. ನಂತರ ಗೋಧಿ ಕನಕದಲ್ಲಿ ಸೇರಿಸಿ ಬೇಯಿಸಿದರೆ ಹೋಳಿಗೆ ರೆಡಿ.

ರಾಮಚಂದ್ರ ಭಟ್ (9591755359) ಅವರು ಕಳೆದ ಒಂದು ವರ್ಷದಿಂದಲೂ ಸಕ್ಕರೆ ಬದಲಿಗೆ ಸಾವಯವ ಬೆಲ್ಲ, ಮೈದಾದ ಬದಲಿಗೆ ಗೋಧಿ ಹುಡಿ ಬಳಸಿ ಯಶಸ್ವಿಯಾಗಿದ್ದಾರೆ. ಇವರ ಪುತ್ರಿ ರಾಜೇಶ್ವರಿ ಶ್ಯಾಮ ಭಟ್ ಅವರು ಹೊಸ ಪ್ರಯೋಗಗಳ ರೆಸಿಪಿ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ ಹಾಗೂ ಫೇಸ್ ಬುಕ್ಕಿನಲ್ಲಿ ಹಂಚಿಕೊಂಡು ಸಾರ್ವಜನಿಕರಿಗೂ ರುಚಿ ಉಣಬಡಿಸುತ್ತಿದ್ದಾರೆ. (ರೆಸಿಪಿಯ ಲಿಂಕ್ ಜೊತೆಗೆ ನೀಡಲಾಗಿದೆ ಗಮನಿಸಿ....) ಸುಮಾರು 3000 ಮಂದಿ ಯೂಟ್ಯೂಬ್ ನಲ್ಲಿ ಹೊಸ ರುಚಿಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.