ತಿನ್ನಲು ಕಲಿಯಿರಿ, ಊಟದ ಪಾಠಗಳು

ಡಾ.ನಾ ಸೋಮೇಶ್ವರ ಬರೆದಿರುವ, ಸಾವಣ್ಣ ಪ್ರಕಾಶನ ಪ್ರಕಟಿಸಿರುವ 'ಏನನ್ನು ತಿನ್ನಬೇಕು', 'ಏನನ್ನು ತಿನ್ನಬಾರದು' ಎಂಬ ಕೃತಿ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಆಹಾರ ವಿಜ್ಞಾನ ಕುರಿತ ಈ ಕೃತಿಯ ಒಂದು ಅಧ್ಯಾಯ ಇಲ್ಲಿದೆ.

Lesson about how to eat article by Dr.Na Someshwara Vin

-ಡಾ.ನಾ.ಸೋಮೇಶ್ವರ

ನಾವು ದಿನಕ್ಕೆ ಎಷ್ಟು ಸಲ ತಿನ್ನಬೇಕು, ಎಷ್ಟು ಹೊತ್ತಿಗೆ ತಿನ್ನಬೇಕು, ಹೇಗೆ ತಿನ್ನಬೇಕು ಈ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕಂಡುಕೊಂಡು, ಅವನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವುದರಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿದೆ. ನಾವು ದಿನಕ್ಕೆ ಎಷ್ಟು ಸಲ ತಿನ್ನಬೇಕು ಎನ್ನುವ ಪ್ರಶ್ನೆಗೆ ವಿವಿಧ ಉತ್ತರಗಳು ದೊರೆಯುತ್ತವೆ. ದಿನಕ್ಕೆ ಮೂರು ಸಲ, ಅಂದರೆ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಮಾಡುವವರು ನಮ್ಮಲ್ಲಿ ಹೆಚ್ಚು. ದಿನಕ್ಕೆ ಎರಡು ಸಲ ಊಟವನ್ನು ಮಾಡುವವರು ಹಾಗೂ ೬೦ ವರ್ಷಗಳನ್ನು ಮೀರಿದ ಕೆಲವು ಹಿರಿಯರು ದಿನಕ್ಕೆ ಒಂದೇ ಸಲ ಊಟ ಮಾಡುವುದನ್ನು ನಾವು ನೋಡಬಹುದು. 

ನಾವು ದಿನಕ್ಕೆ ಎಷ್ಟು ಸಲ ಊಟ ಮಾಡಬೇಕೆನ್ನುವುದನ್ನು ನಮ್ಮ ದೇಹದಲ್ಲಿರುವ ಜೈವಿಕ ಗಡಿಯಾರಗಳು ನಿರ್ಧರಿಸುತ್ತವೆ. ಏನಿದು ಜೈವಿಕ ಗಡಿಯಾರ? ನಾವು ಕತ್ತಲು ಕೋಣೆಯಲ್ಲಿ ಗಡದ್ದು ನಿದ್ರೆಯನ್ನ ಮಾಡುತ್ತಿದ್ದರೂ ಸಹ, ಸೂರ್ಯೋದಯವಾಗುತ್ತಿರುವಂತೆಯೇ ನಮಗೆ ಎಚ್ಚರವಾಗುತ್ತದೆ. ಇದಕ್ಕೆ ಕಾರಣ, ನಮ್ಮ ದೇಹದಲ್ಲಿಯೇ ಅಡಗಿರುವ, ನಮ್ಮ ಗಮನಕ್ಕೆ ಬರದಿರುವ ‘ಗಡಿಯಾರ’ಗಳು.

ನಮ್ಮ ಮಿದುಳಿನಲ್ಲಿ ‘ಸುಪ್ರಾಕಯಾಸ್ಮಿಟಿಕ್ ನ್ಯೂಕ್ಲಿಯಸ್’ ಎನ್ನುವ ಒಂದು ಕೇಂದ್ರವಿದೆ. ಇದು ನಮ್ಮ ಜೈವಿಕ ಗಡಿಯಾರಗಳ ಕೆಲಸಗಳನ್ನು
ನಿರ್ಧರಿಸುತ್ತದೆ. ಈ ಕೇಂದ್ರವು ನಮ್ಮ ನರಮಂಡಲ ಹಾಗೂ ಹಾರ್ಮೋನುಗಳ ಜೊತೆಯಲ್ಲಿ ನಿಕಟ ಸಂಪರ್ಕದಲ್ಲಿರುತ್ತದೆ. ಹೊರ ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮಾಹಿತಿಯನ್ನು ಸ್ವೀಕರಿಸಿ, ಅದಕ್ಕೆ ಅನುಗುಣವಾಗಿ ದೇಹದ ಒಳ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರುತ್ತದೆ. ನಮಗೆ ಎಚ್ಚರವಾಗುತ್ತದೆ. ನಮ್ಮ ನಾಡಿಮಿಡಿತ ಮತ್ತು ರಕ್ತದೊತ್ತಡ ಏರುತ್ತದೆ. ಕಾರ್ಟಿಸಾಲ್ ಎನ್ನುವ ಹಾರ್ಮೋನು ಬಿಡುಗಡೆಯಾಗಿ ಇಡೀ ದೇಹದಲ್ಲಿರುವ ಎಲ್ಲ ಅಂಗವ್ಯವಸ್ಥೆಗಳ ಕಾರ್ಯ ಚಟುವಟಿಕೆಗಳು ಜಾಗೃತವಾಗುತ್ತವೆ. ನಮ್ಮ ದೇಹದ ಪ್ರತಿಯೊಂದು ಜೀವಕೋಶವು ಸಶಕ್ತವಾಗಿ ಕೆಲಸವನ್ನು ಮಾಡಲು ಅಗತ್ಯವಾದ ಶಕ್ತಿಯನ್ನು ಉತ್ಪಾದಿಸುವ ಕ್ರಿಯೆ ಹಾಗೂ ಅದನ್ನು ವಿತರಿಸುವ ಕ್ರಿಯೆಯೆ ತ್ವರಿತವಾಗಿ ಆರಂಭವಾಗುತ್ತವೆ.

ಜೈವಿಕ ಗಡಿಯಾರಗಳು ದಿನದ ಆರಂಭದಲ್ಲಿ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಹಾಗಾಗಿ ನಮ್ಮ ದೇಹವು ಬೆಳಗಿನ ಹೊತ್ತು, ಅಂದರೆ ಮಧ್ಯಾಹ್ನ ೧.೦೦ ಗಂಟೆಯವರಿಗೂ ಗರಿಷ್ಠ ಪ್ರಮಾಣದಲ್ಲಿ ಜಾಗೃತವಾಗಿರುತ್ತದೆ, ಚುರುಕಾಗಿರುತ್ತದೆ, ಉತ್ಸಾಹ ತುಂಬಿರುತ್ತದೆ - ಹಾಗಾಗಿ ಈ ಎಲ್ಲ ಕೆಲಸ
ಕಾರ್ಯಗಳಿಗೆ ಅಗತ್ಯವಾದ ಶಕ್ತಿಯನ್ನು ಪೂರೈಸುವುದು ನಮ್ಮ ಹೊಣೆಯಾಗಿರುತ್ತದೆ. ಮಧ್ಯಾಹ್ನದ ಊಟದ ನಂತರ, ದೇಹದ ಎಲ್ಲ ಚಟುವಟಿಕೆಗಳು ಇಳಿಮುಖವಾಗುತ್ತವೆ. ಕತ್ತಲು ಸಮೀಪಿಸುತ್ತಿರುವಂತೆಯೇ ಜೈವಿಕ ಗಡಿಯಾರಗಳು ವಿಶ್ರಾಂತಿಯನ್ನು ತೆಗೆದುಕೊಳ್ಳುವ ಸಮಯ ಬಂದಿತೆಂದು ದೇಹದ ಎಲ್ಲ ಅಂಗವ್ಯವಸ್ಥೆಗಳಿಗೆ ಮಾಹಿತಿಯನ್ನು ರವಾನಿಸುತ್ತವೆ. ಆಗ, ಎಲ್ಲ ಜೈವಿಕ ಕ್ರಿಯೆಗಳು ಮಂದವಾಗುತ್ತಾ ನಡೆಯುತ್ತವೆ.

ಆ ಅವಧಿಯಲ್ಲಿ ಅವು ಹೆಚ್ಚಿನ ಶಕ್ತಿಯನ್ನು ಬಯಸುವುದಿಲ್ಲ. ಹಾಗಾಗಿ ನಾವು ಸ್ವಲ್ಪ ಕಡಿಮೆ ತಿಂದರೂ ತೊಂದರೆಯಿಲ್ಲ. ಇಡೀ ರಾತ್ರಿ ಜೀವವನ್ನು ಹಿಡಿದಿಡಲು ಅಗತ್ಯವಾದ ಮೂಲಶಕ್ತಿ ಸರಬರಾಜಾಗುತ್ತಿದ್ದರೆ ಸಾಕಾಗುತ್ತದೆ. ಮತ್ತೆ ಬೆಳಗಾಗುತ್ತಿರುವಂತೆಯೆ... ಗಡಿಯಾರದ ಚಲನೆಯು ಪುನರಾವರ್ತನೆಯಾಗುತ್ತದೆ.

ನಮ್ಮ ಬೆಳಗಿನ ಉಪಾಹಾರವನ್ನು ಬೆಳಿಗ್ಗೆ ಸರಿಸುಮಾರು ೭.೦೦ ಗಂಟೆಗೆ ಸೇವಿಸುವುದು ಒಳ್ಳೆಯದು. ದಿನದ ಸವಾಲುಗಳನ್ನು ಎದುರಿಸಲು
ಸಿದ್ಧವಾಗುತ್ತಿರುವ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಪೂರೈಸಿದಂತಾಗುತ್ತದೆ. ನಮ್ಮ ದೈನಂದಿನ ಕ್ಯಾಲರಿ ಸೇವನೆಯಲ್ಲಿ ಸರಿಸುಮಾರು ೩೫% ಕ್ಯಾಲರಿಗಳನ್ನು ಉಪಾಹಾರದ ಮೂಲಕವೇ ಸೇವಿಸುವುದು ಒಳ್ಳೆಯದು. ನಾವು ಒಂದು ಸಲ ಆಹಾರವನ್ನು ಸೇವಿಸಿ ೩-೪ ಗಂಟೆಗಳ ನಂತರ, ನಮ್ಮ ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣವು ಪೂರ್ವ ಸ್ಥಿತಿಗೆ ಮರುಳುತ್ತದೆ. ಆಗ ಸ್ವಲ್ಪ ಆಹಾರವನ್ನು ಸೇವಿಸುವುದು ಒಳ್ಳೆಯದು. 

ಸುಮಾರು ೧೧ ಗಂಟೆಯ ವೇಳೆಯಲ್ಲಿ ಒಂದು ಕಾಫಿ/ಚಹದ ಜೊತೆಯಲ್ಲಿ ಒಂದು ಸೇಬನ್ನು ತಿನ್ನಬಹುದು. ಈ ಲಘು ಪೂರ್ವಾಹ್ನ ಚಹದ ಕ್ಯಾಲರಿ ೧೦% ರಷ್ಟನ್ನು ಮೀರಬಾರದು. ಅದು ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣವನ್ನು ಕೆಳಗಿಳಿಯಲು ಬಿಡದೆ ಸರಿದೂಗಿಸುತ್ತದೆ. ಸುಮಾರು ಒಂದು ಗಂಟೆಯ ಹೊತ್ತಿಗೆ ಮಧ್ಯಾಹ್ನದ ಊಟವನ್ನು ಮಾಡಬಹುದು. ಊಟದಲ್ಲಿ ಸರಿಸುಮಾರು ನಮ್ಮ ದೈಂನಂದಿನ ಕ್ಯಾಲರಿಗಳಲ್ಲಿ ೨೫%ರಷ್ಟಿದ್ದರೆ ಸಾಕಾಗುತ್ತದೆ.

ಸಂಜೆ ೪ ಗಂಟೆಯ ಹೊತ್ತಿಗೆ ಮತ್ತೊಮ್ಮೆ ಸಂಜೆಯ ಚಹವನ್ನು ಸೇವಿಸಬಹುದು. ಜೊತೆಗೆ ಅಗತ್ಯವಾದ ತಿಂಡಿಯನ್ನೂ ತಿನ್ನಬಹುದು. ಆದರೆ ಅವುಗಳ ಕ್ಯಾಲರಿ ಮತ್ತೆ ೧೦%ರಷ್ಟನ್ನು ಮೀರಬಾರದು. ರಾತ್ರಿಯ ಊಟವನ್ನು ಸರಿಸುಮಾರು ೭.೦೦ ಗಂಟೆಗೆ ಮಾಡಿ ಮುಗಿಸುವುದು ಒಳ್ಳೆಯದು. ಇದು ಒಟ್ಟು ಕ್ಯಾಲರಿಯ ೨೦% ರಷ್ಟಿದ್ದರೆ ಸಾಕಾಗುತ್ತದೆ.

ಸಾರಾಂಶ: ನಾವು ದಿನಕ್ಕೆ ಐದು ಸಲ ತಿನ್ನಬೇಕು
ಬೆಳಗಿನ ಉಪಾಹಾರವು ಚಕ್ರವರ್ತಿಯ ಭೋಜನದಂತೆ
ಪುಷ್ಕಲವಾಗಿರಬೇಕು (೩೫%)
ಹನ್ನೊಂದು ಗಂಟೆಗೆ ಒಂದು ಪಾನೀಯ ಮತ್ತು
ಒಂದಷ್ಟು ಫಲಾಹಾರ (೧೦%)
ಒಂದು ಗಂಟೆಗೆ ರಾಜನ ಊಟದಂತೆ ಹಿತ-ಮಿತ
ಪ್ರಮಾಣದಲ್ಲಿರಬೇಕು (೨೫%)
ಸಂಜೆಯ ನಾಲ್ಕು ಗಂಟೆಗೆ ಒಂದು
ಚಹ ಮತ್ತು ತಿಂಡಿ (೧೦%)
ಏಳು ಗಂಟೆಯ ಊಟವು ಶ್ರೀಸಾಮಾನ್ಯನ ಊಟದಂತೆ
ಸರಳವಾಗಿರಬೇಕು (೨೦%).

ನಾವು ಆಹಾರವನ್ನು ಹೇಗೆ ತಿನ್ನಬೇಕು ಎನ್ನುವುದು ಬಹುಪಾಲು ಜನರಿಗೆ ತಿಳಿದಿಲ್ಲ ಎನ್ನುವುದು ವಾಸ್ತವಿಕ ಸತ್ಯ. ಈ ಬಗ್ಗೆ ತಿಳಿದುಕೊಳ್ಳೋಣ.


• ನಾವು ತಿನ್ನುವ ಸ್ಥಳದಲ್ಲಿ ಪ್ರಶಾಂತ ವಾತಾವರಣವಿರಬೇಕು. ಟಿವಿ ಚಾಲೂ ಇರಬಾರದು. ಮೊಬೈಲನ್ನು ಸೈಲೆಂಟ್- ಮೋಡ್- ಅಥವ ಸ್ವಿಚ್- ಆಫ್- ಮಾಡಿದರೆ ಒಳ್ಳೆಯದು.
• ಊಟ ಮಾಡುವ ವೇಳೆಯಲ್ಲಿ ಸಂಸಾರದ ತಾಪತ್ರಯಗಳನ್ನು,ಮಕ್ಕಳ ಮಾರ್ಕ್ಸ್ ಕಾರ್ಡನ್ನು, ಪಕ್ಕದ ಮನೆಯವರ ಕಥೆಯನ್ನು ಚರ್ಚಿಸಲು ಹೋಗಬಾರದು.
• ಊಟ ಮಾಡುವ ಸ್ಥಳವು ಸ್ವಚ್ಛವಾಗಿರಬೇಕು. ಅಗತ್ಯವಸ್ತುಗಳು ಸ್ವಸ್ಥಾನದಲ್ಲಿರಬೇಕು.
• ಆಹಾರ ಪದಾರ್ಥಗಳನ್ನು ಹಸನ್ಮುಖರಾಗಿ, ಪ್ರೀತಿಯಿಂದ ಬಡಿಸಬೇಕು. ಮಾತು ಎಷ್ಟು ಕಡಿಮೆಯಿದ್ದರೆ ಅಷ್ಟೂ ಒಳ್ಳೆಯದು.
• ಊಟ ಮಾಡುವಾಗ ಮಾತನಾಡದಿರುವುದು ಒಳ್ಳೆಯದು.
• ಅನ್ನದ ಉಂಡೆಗಳನ್ನು ಬಾಯಿಗೆ ಹಾಕಿಕೊಂಡು ಜಗಿಯಬೇಕು. ಜಗಿಯುವಾಗ ತುಟಿಗಳನ್ನು ಮುಚ್ಚಿರಬೇಕು. ಜಗಿಯುತ್ತ ಆಹಾರದ
ಸ್ವಾದವನ್ನು ಆಸ್ವಾದಿಸಬೇಕು.
• ಆಹಾರ ಜೀರ್ಣಕ್ರಿಯೆಯು ಬಾಯಿಯಲ್ಲಿಯೇ ಆರಂಭವಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಡಬೇಕು.
• ಒಂದು ತುತ್ತನ್ನು ೨೫-೩೫ರವರೆಗೆ ಜಗಿಯಬೇಕು. ಹೀಗೆ ಜಗಿದಾಗ, ಹಲ್ಲುಗಳು ಅನ್ನದ ತುತ್ತನ್ನು ನುಣ್ಣಗೆ ಅರೆಯುತ್ತದೆ. ಹಾಗೆ ಅರೆದಾಗ,
ನಾಲಿಗೆಯ ಮೇಲಿರುವ ರುಚಿ ಅಂಕುರಗಳ ಎಲ್ಲ ಷಡ್ರಸಗಳನ್ನು ಆಸ್ವಾದಿಸಲು ಅವಕಾಶವನ್ನು ಮಾಡಿಕೊಡುತ್ತದೆ.
• ಜೊಲ್ಲಿನಲ್ಲಿ ಸಲೈವರಿ ಅಮೈಲೇಸ್-, ಸಲೈವರಿ ಕಲ್ಲಿಕ್ರೀನ್ ಮತ್ತು ಲಿಂಗ್ವಲ್- ಲೈಪೇಸ್- ಎಂಬ ಕಿಣ್ವಗಳು ಹಾಗೂ ಸಲೈವರಿ ಲೈಸೋಜೈಮ್
ಎಂಬ ರಕ್ಷಣಾ ಪಡೆಯಿರುತ್ತದೆ.
• ಸಲೈವರಿ ಲೈಸೋಜೈಮ್, ನಮ್ಮ ಅನ್ನದ ತುತ್ತಿನಲ್ಲಿರಬಹುದಾದ ರೋಗಜನಕಗಳನ್ನು ನಾಶಪಡಿಸುತ್ತದೆ. ಹಾಗಾಗಿ ತುತ್ತನ್ನು ೨೫-೩೫ರವರೆಗೆ ಜಗಿಯುವ ಅವಧಿಯಲ್ಲಿ, ಲೈಸೋಜೈಮ್- ತನ್ನ ಕೆಲಸವನ್ನು
ಸಮರ್ಪಕವಾಗಿ ಮಾಡಿಮುಗಿಸಿರುತ್ತದೆ.
• ಅನ್ನದ ತುತ್ತನ್ನು ಜಗಿಯುವಾಗ, ಜೊಲ್ಲಿನಲ್ಲಿರುವ ಸಲೆವರಿ ಅಮೈಲೇಸ್, ತುತ್ತಿನಲ್ಲಿರುವ ಕಾರ್ಬೋಹೆಡ್ರೇಟನ್ನು ಜೀರ್ಣಿಸಿ,
ಮಾಲ್ಟೋಸನ್ನು ಉತ್ಪಾದಿಸುತ್ತದೆ. ಮಾಲ್ಟೋಸ್- ಎನ್ನುವುದು ಒಂದು ಸಕ್ಕರೆ. ಇದು ಎರಡು ಗ್ಲೂಕೋಸ್ ಅಣುಗಳಿಂದಾದ ರಚನೆ.
• ಅನ್ನದ ತುತ್ತನ್ನು ೨೫-೩೫ರವರೆಗೆ ಜಗಿದಾಗ ಉತ್ಪಾದನೆಯಾಗುವ ಹೆಚ್ಚುವರಿ ಸಲೈವರಿ ಅಮೈಲೇಸ್, ಹಲ್ಲಿಗೆ ಅಂಟಿಕೊಂಡಿರಬಹುದಾದ
ಸ್ಟಾರ್ಚನ್ನು ಕರಗಿಸುತ್ತದೆ. ಹಾಗಾಗಿ ಇಂತಹವರಲ್ಲಿ ಹುಳುಕು ಹಲ್ಲುಗಳು ಕಂಡುಬರುವುದು ಅಪರೂಪ.
• ಲಿಂಗ್ವಲ್ ಲೈಪೇಸ್- ಅನ್ನದ ತುತ್ತಿನಲ್ಲಿರುವ ಕೊಬ್ಬನ್ನು ಜೀರ್ಣಿಸಬಲ್ಲುದು. ಕೊಬ್ಬಿನಲ್ಲಿರುವ ಟ್ರೈಗ್ಲಿಸರೈಡ್, ಡೈಗ್ಲಿಸರೈಡ್ ಆಗಿ
ಒಡೆಯುತ್ತದೆ.
• ಜೊಲ್ಲಿನಲ್ಲಿ ಸಲೈವರಿ ಕಲ್ಲಿಕ್ರೀನ್, ಬ್ರಾಡಿಕೈನಿನ್ ಎಂಬ ರಾಸಾಯನಿಕವನ್ನು ಉತ್ಪಾದಿಸುತ್ತದೆ. ಇದು ನಾಲಿಗೆ ಕೆಳಗಿರುವ ರಕ್ತನಾಳಗಳ
ವ್ಯಾಸವನ್ನು ಹೆಚ್ಚಿಸುತ್ತದೆ. ಆಗ ಜಗಿದ ಆಹಾರದಲ್ಲಿರುವ ಪೋಷಕಾಂಶಗಳು ನೇರವಾಗಿ ರಕ್ತಪ್ರವಾಹದಲ್ಲಿ ಬೆರೆಯಲು ಸಾಧ್ಯವಿದೆ.
• ಯಾರು ಪ್ರತಿಯೊಂದು ತುತ್ತನ್ನು ೨೫-೩೫ ಸಲ ಜಗಿದು ತಿನ್ನುತ್ತಾರೋ, ಅವರು ಅಗತ್ಯಕ್ಕಿಂತ ಹೆಚ್ಚಿನ ಆಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ. ಹಾಗಾಗಿ ಇವರಲ್ಲಿ ಬೊಜ್ಜು ಅಪರೂಪ.
• ನೀರನ್ನು ಕುಡಿಯುವ ವಿಧಾನವು ಬಹಳ ಮುಖ್ಯ. ನಾವು ನೀರನ್ನು ಕುಡಿಯುವಾಗ, ಬರೀ ನೀರನ್ನೇ ಕುಡಿಯಬೇಕೆ ಹೊರತು ಗಾಳಿಯನ್ನಲ್ಲ. ಒಂದು ಸಲ ಲೋಟವನ್ನು ಕಚ್ಚಿ ಹಿಡಿದರೆ, ಲೋಟದಲ್ಲಿರುವ ನೀರನ್ನೆಲ್ಲ ಒಮ್ಮೆಲೆ ಕುಡಿದು ಮುಗಿಸಬೇಕಾಗುತ್ತದೆ. ಆಗ ನೀರು ಮಾತ್ರ ಹೊಟ್ಟೆಯನ್ನು ಸೇರುತ್ತದೆ. ಗುಟುಕು ಗುಟುಕಾಗಿ ಕುಡಿದಾಗ ಅಥವಾ ಲೋಟವನ್ನು ಮೇಲಕ್ಕೆತ್ತಿ ಕುಡಿದಾಗ, ನೀರಿನೊಡನೆ ಗಾಳಿಯೂ ಹೊಟ್ಟೆಯನ್ನು ಸೇರುತ್ತದೆ.ಆಗ ಹೊಟ್ಟೆಯು ಉಬ್ಬರಿಸಿಕೊಳ್ಳುತ್ತದೆ. ತೇಗು ಬರುತ್ತದೆ. ಜೀರ್ಣ ಶಕ್ತಿಯು
ಮಂದವಾಗುತ್ತದೆ.
• ಆಹಾರವನ್ನು ನೆಮ್ಮದಿಯಿಂದ ಸೇವಿಸುವುದು ಬಹಳ ಮುಖ್ಯ. ಆಯ್ಕೆ ನಿಮ್ಮದು: ನಾವು ದಿನಕ್ಕೆ ಐದು ಸಲ ತಿನ್ನಬೇಕು. ಒಂದೊಂದು
ತುತ್ತನ್ನು ೨೫-೩೫ ಸಲ ಜಗಿದು ತಿನ್ನಬೇಕು. ಈ ಧಾವಂತದ ಬದುಕಿನಲ್ಲಿ ಇದು ಖಂಡಿತಾ ಸಾಧ್ಯವಿಲ್ಲ  ಎನ್ನುವುದು ಬಹುಜನರ
ಅಭಿಪ್ರಾಯವಾಗಿರಬಹುದು. ನಿಮಗೆ ಆರೋಗ್ಯದ ಅಗತ್ಯವಿದೆ ಎನ್ನುವುದಾದರೆ, ಹೇಗಾದರೂ ಮಾಡಿ ಅಗತ್ಯ ಸಮಯವನ್ನು
ಹೊಂದಿಸಿಕೊಳ್ಳಬೇಕಾಗುತ್ತದೆ. ಬೇಡ, ಅನಾರೋಗ್ಯವೇ ನನಗಿರಲಿ. ಎನ್ನುವುದಾದರೆ, ಅದು ನಿಮ್ಮಿಷ್ಟ. ಆಯ್ಕೆ ನಿಮ್ಮದು.

Latest Videos
Follow Us:
Download App:
  • android
  • ios