ಭಟ್ ಎನ್ ಭಟ್: ಗಡಿನಾಡಿನ ಈ ಅವಳಿ ಸೋದರರ ಅಡುಗೆ ಚಾನೆಲ್ಲೀಗ ಕನ್ನಡಿಗರ ಮನೆ ಮಾತು
ಕೊರೋನಾ ಸಂಕಷ್ಟದಲ್ಲಿ ಕರ್ನಾಟಕ-ಕೇರಳ ಗಡಿ ಜಿಲ್ಲೆಯ ಈ ಅವಳಿ ಸಹೋದರರು ಆರಂಭಿಸಿದ ಯೂ ಟ್ಯೂಬ್ ಚಾನೆಲ್ ಮಾಡಿರುವ ಸಾಧನೆ ಅಮೋಘ. ನಿಸರ್ಗದ ಮಧ್ಯೆ, ಸುತ್ತಮುತ್ತಲಿನ ಪರಿಸರದಲ್ಲಿಯೇ ಸಿಗುವ ಆಹಾರ ಪದಾರ್ಥಗಳಿಂದ ತಯಾರಿಸುವ ಅಡುಗೆ ಹಾಗೂ ಇವರ ನಿರೂಪಣಾ ಶೈಲಿಗೆ ಎಲ್ಲರೂ ಫುಲ್ ಫಿದಾ ಆಗಿದ್ದಾರೆ. ಎಲ್ಲಿಂದಲ್ಲೋ ಸಿದ್ಧವಾಗುತ್ತಿದ್ದ ಇಂಥ ವೀಡಿಯೋಗಳು ಇದೀಗ ಕನ್ನಡದಲ್ಲಿಯೇ ಲಭ್ಯವಾಗುತ್ತಿರುವುದಕ್ಕೆ ಅಡುಗೆ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.
- ಕೃಷ್ಣಮೋಹನ ತಲೆಂಗಳ
ಕನ್ನಡಪ್ರಭ ವಾರ್ತೆ, ಮಂಗಳೂರು (ಆ.1)
ಈ ಅವಳಿ ಸಹೋದರರು ಅಪ್ಪಟ ಹಳ್ಳಿ ಪ್ರತಿಭೆಗಳು, ಗಡಿನಾಡ ಕನ್ನಡಿಗರು. ಕೊರೋನಾ ಒಂದನೇ ಅಲೆಯಲ್ಲಿ ಇವರು ಶುರು ಮಾಡಿದ ‘ಭಟ್ ಎನ್ ಭಟ್’ ಅಡುಗೆ ವ್ಲಾಗ್ (ಯೂಟ್ಯೂಬ್ ಚಾನೆಲ್) ಈಗ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ಲಾಕ್‌ಡೌನ್ ಬಂಧನದಿಂದ ಕಂಗೆಡದೆ ಮನೆ ಪರಿಸರದಲ್ಲೇ ಸಿಗುವ ಹಣ್ಣು-ತರಕಾರಿ ಬಳಸಿ, ಮಾಡಿದ ಅಡುಗೆ ರೆಸಿಪಿಗಳು ಸದ್ಯ ಕನ್ನಡಿಗರ ಮನೆ ಮಾತಾಗಿದ್ದು, ಕೊರೋನಾ ಎರಡನೇ ಅಲೆ ಮುಗಿಯುವ ಹೊತ್ತಿಗೆ ಈ ವ್ಲಾಗ್ (ಚಾನೆಲ್) ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಸುದರ್ಶನ ಭಟ್-ಮನೋಹರ ಭಟ್ ಬೆದ್ರಡಿ ಸಹೋದರರಿಗೆ 23ರ ಹರೆಯ. ಕಾಸರಗೋಡು ಜಿಲ್ಲೆ ಬೇಳ ಗ್ರಾಮದ ಸೀತಾಂಗೋಳಿ ಸಮೀಪ ವಾಸ. ಯುವ ವಕೀಲರು, ಅಡುಗೆ ಪ್ರವೃತ್ತಿ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಎಲ್‌ಎಲ್‌ಬಿ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದಾಗ 2020 ಮಾರ್ಚ್‌ನಲ್ಲಿ ಕೊರೋನಾ ಲಾಕ್‌ಡೌನ್ ಬದುಕನ್ನು ಕಟ್ಟಿ ಹಾಕಿತು. ಏಳು ವರ್ಷಗಳಿಂದ ಸಮಾರಂಭಗಳಲ್ಲಿ ಹಾಗೂ ಅಡುಗೆ ವೃತ್ತಿಯಲ್ಲಿ ಸಹಾಯಕರಾಗಿ ಹೋಗುತ್ತಿದ್ದ ಇವರ ಆದಾಯಕ್ಕೂ ಕಲ್ಲು ಬಿತ್ತು. ಆಗ ಹೊಳೆದದ್ದು ಯೂಟ್ಯೂಬ್ ಮೂಲಕ ಅಡುಗೆ ರೆಸಿಪಿ ಹಂಚುವ ಐಡಿಯಾ.
ಮಾವಿನ ಬೀಜದ ರುಚಿ ರುಚಿಯಾದ ರೆಸಿಪಿಗಳು ಇಲ್ಲಿವೆ
2020 ಏ.18ರಂದು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಬಾಳೆಕಾಯಿ ಚಿಪ್ಸ್ ರೆಸಿಪಿ ಹಂಚಿಕೊಂಡಲ್ಲಿಂದ ಇವರ ಸಾಹಸ ಶುರು. ಇವರ ಅಡುಗೆ ಶೈಲಿಗೆ ಮನಸೋತ ಬಂಧು ಮಿತ್ರರ ಪ್ರೋತ್ಸಾಹಕ್ಕೆ ಮಣಿದು ಬಳಿಕ ಒಂದಾದ ಮೇಲೊಂದರಂತೆ ಕಳೆದ ಒಂದೂ ಕಾಲು ವರ್ಷದಲ್ಲಿ 155ಕ್ಕೂ ಅಧಿಕ ಅಡುಗೆ ರೆಸಿಪಿಗಳನ್ನು ಜಾಲತಾಣಗಳಲ್ಲಿ ಹಂಚಿದ್ದಾರೆ. ತಮ್ಮ ಮನೆ ತೋಟದಲ್ಲಿಯೇ ಸಿಗುವ ಸೋರೆಕಾಯಿ, ಹುಣಸೆ, ಹಲಸು, ಮಾವು, ಪುನರ್ಪುಳಿ, ಕುಂಬಳ, ಕೆಸುವಿನ ಎಲೆ ಸಹಿತ ಸ್ಥಳೀಯ ಕಚ್ಛಾವಸ್ತುಗಳು, ಮನೆಯ ಪಾತ್ರೆ ಪಗಡಿ, ಅರೆಯುವ ಕಲ್ಲು ಇಷ್ಟನ್ನೇ ಬಳಸಿ ಇವರು ಶುರು ಮಾಡಿದ ಹಾಗೂ ಮುಂದುವರಿಸಿದ ಮರಗೆಣಸಿನ ಹಪ್ಪಳದ ಪೋಸ್ಟ್ ಅತ್ಯಧಿಕ ಅಂದರೆ ಫೇಸ್‌ಬುಕ್‌ನಲ್ಲಿ 4 ದಶಲಕ್ಷ, ಯೂಟ್ಯೂಬ್‌ನಲ್ಲಿ 3 ಮಿಲಿಯನ್‌ಗೂ ಅಧಿಕ ವ್ಯೂಸ್ ಗಳಿಸಿವೆ. ಇವರ ಬಹುತೇಕ ಪ್ರತಿ ಪೋಸ್ಟಿಗೂ ಸರಾಸರಿ ಎರಡೂವರೆ ಲಕ್ಷದಷ್ಟು ವ್ಯೂಸ್ ಸಿಗುತ್ತವೆ. ಫೇಸ್ಬುಕ್ ಪೇಜಿಗೆ 3 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದು, ಯೂಟ್ಯೂಬ್ ಚಾನೆಲ್‌ನ ಚಂದಾದಾರರ ಸಂಖ್ಯೆ 5 ಲಕ್ಷ ದಾಟಿದೆ!
ಅನ್ನದ ಕೇಸರಿಬಾತ್, ಮಂಗಳೂರು ಗೋಳಿಬಜೆ, ಬನ್ಸ್, ಗೋಧಿ ಮಣ್ಣಿ, ನೀರುಳ್ಳಿ ವಡೆ, ಅಮೃತಫಲ, ಚಟ್ಟಂಬಡೆ, ಕಾಶಿ ಹಲ್ವಾ, ತೊಂಡೆಕಾಯಿ ಕೊದಿಲು, ಅವಲಕ್ಕಿ ಚಟ್ನಿ, ಬೂಂದಿಲಾಡು, ಬಾಳೆ ದಿಂಡಿನ ಜ್ಯೂಸ್, ತೆಳ್ಳವು, ಸಾರಿನ ಹುಡಿ, ತಿಳಿಸಾರು, ಹಪ್ಪಳದ ಕಥೆ, ಕುದನೆ ಗೊಜ್ಜು, ಬಟಾಟೆ ಮೊಸರು ಗೊಜ್ಜು....ಹೀಗೆ ಕರಾವಳಿಯ ಜನಪ್ರಿಯ, ಅಪರೂಪದ ಖಾದ್ಯ ವೈವಿಧ್ಯಗಳು ಇಂದು ಮನೆಮಾತು.
ಅಪ್ಪಟ ಕಾಸರಗೋಡು ಗ್ರಾಮ್ಯ ಹವ್ಯಕ ಬ್ರಾಹ್ಮಣ ಶೈಲಿಯ ಕನ್ನಡ ನಿರೂಪಣೆ, ಇಂಗ್ಲಿಷ್ ಸಬ್‌ಟೈಟಲ್, ರುಬ್ಬುವ ಕಲ್ಲು, ಸೌದೆ ಒಲೆ, ಹೆಂಚಿನ ಮನೆ ಹಿನ್ನೆಲೆಯ ಪ್ರಸ್ತುತಿ, ಅಡುಗೆ ಟಿಪ್ಸ್ ಇವರ ಅಭಿಮಾನಿಗಳಿಗೆ ತುಂಬಾ ಇಷ್ಟ. ಅಣ್ಣ ಸುದರ್ಶನ್ ಭಟ್ ನಿರೂಪಣೆ, ತಮ್ಮ ಮನೋಹರ ಭಟ್ ಚಿತ್ರೀಕರಣ, ಎಡಿಟಿಂಗ್, ಅಪ್ಲೋಡ್ ಜವಾಬ್ದಾಾರಿ ನಿರ್ವಹಿಸುತ್ತಾರೆ. ಇತ್ತೀಚೆಗಷ್ಟೇ ಕಾನೂನು ಪದವಿ ಪಡೆದು ಜೂನಿಯರ್ ವಕೀಲರಾಗಿ ವೃತ್ತಿಗೆ ಇಳಿದಿದ್ದಾರೆ.
ಅಡುಗೆ ಅನುಭವ:
ವಿದ್ಯಾರ್ಥಿ ದೆಸೆಯಿಂದಲೇ ಏಳು ವರ್ಷಗಳಿಂದ ಸಮಾರಂಭಗಳಿಗೆ ಅಡುಗೆ ಸಹಾಯಕರಾಗಿ ತೆರಳುತ್ತಿದ್ದ ಅನುಭವ ಇವರಿಗಿದೆ. ತಂದೆ ವೆಂಕಟ್ರಮಣ ಭಟ್, ತಾಯಿ ಸುಲೋಚನಾ, ಅಕ್ಕ ಪ್ರಸನ್ನ, ಭಾವ ಮಹಾಬಲೇಶ್ವರ ಭಟ್ ಹಾಗೂ ಮಾವಂದಿರು ಇವರಿಗೆ ರೆಸಿಪಿ ಐಡಿಯಾ, ಚಿತ್ರೀಕರಣ, ಪರಿಕರ ಹೊಂದಾಣಿಕೆ ಇತ್ಯಾಾದಿಗಳಿಗೆ ನೆರವಾಗ್ತಾರೆ. ಕಷ್ಟದ ರೆಸಿಪಿಗಳನ್ನು ಪ್ರಾಯೋಗಿಕವಾಗಿ ಒಮ್ಮೆ ತಯಾರಿಸ್ತಾಾರೆ. ಪ್ರತಿ ವಿಡಿಯೋ ಸಿದ್ಧಪಡಿಸಲು ಸರಾಸರಿ 2-3 ದಿನಗಳ ಶ್ರಮ ಇದೆ.
ಟ್ರಯಲ್ ನೋಡಿ, ನೋಟ್ಸ್ ಮಾಡಿಕೊಂಡು ಮತ್ತೆ ಶೂಟಿಂಗ್, ಎಡಿಟಿಂಗ್ ನಡೆಯುತ್ತದೆ. ದೇಶ-ವಿದೇಶಗಳಿಂದಲೂ ಈ ಪ್ರತಿಭೆಗಳನ್ನು ಜನರು ಗುರುತಿಸುವಾಗ ಖುಷಿಯಾಗುತ್ತದೆ, ಸಣ್ಣ ಮಕ್ಕಳು ಸಹಿತ ನಮ್ಮ ಶೈಲಿ ಅನುಕರಣೆ ಮಾಡುವಾಗ ಹೆಮ್ಮೆ ಎನಿಸುತ್ತದೆ ಎನ್ನುತ್ತಾರೆ.
--
ಹೊಸದಾಗಿ ಯೂಟ್ಯೂಬ್ ಚಾನೆಲ್ ಮಾಡುವವರು ಇತರರರನ್ನು ಅನುಕರಣೆ ಮಾಡಬಾರದು, ಸೃಜನಶೀಲ ಐಡಿಯಾ ಪರಿಚಯಿಸಬೇಕು. ಜಾಲತಾಣಗಳನ್ನು ಕೆಟ್ಟದಾಗಿ ಬಳಸಬಾರದು. ಜನರ ಬೇಡಿಕೆ ಹಾಗೂ ಆಯಾ ಸೀಸನ್‌ಗೆ ಪೂರಕವಾಗಿ ಪೋಸ್ಟುಗಳನ್ನು ಹಾಕಬೇಕು. ಹಾಗಾದಾಗ ಜನಪ್ರಿಯತೆ ಉಳಿಸಿಕೊಳ್ಳಲು ಸಾಧ್ಯ.
-ಸುದರ್ಶನ ಹಾಗೂ ಮನೋಹರ ಭಟ್ ಬೆದ್ರಡಿ, ‘ಭಟ್ ಎನ್ ಭಟ್’ ಚಾನೆಲ್.